ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರತ್ವ ತಿದ್ದುಪಡಿ ಮಸೂದೆ: ಈಶಾನ್ಯ ರಾಜ್ಯಗಳಲ್ಲಿ ಹಿಗ್ಗಿದ ವಿರೋಧ

ಕಾಯ್ದೆ ಜಾರಿ ಇಲ್ಲ ಎಂದ 5 ರಾಜ್ಯಗಳು: ರಾಜ್ಯಗಳಿಗೆ ಅಧಿಕಾರ ಇಲ್ಲ ಎಂದು ಕೇಂದ್ರ ಸ್ಪಷ್ಟನೆ
Last Updated 13 ಡಿಸೆಂಬರ್ 2019, 20:31 IST
ಅಕ್ಷರ ಗಾತ್ರ

ನವದೆಹಲಿ:ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧದ ಧ್ವನಿ ಜೋರಾಗುತ್ತಲೇ ಸಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಪ್ರಕ್ಷುಬ್ಧ ಸ್ಥಿತಿ ಮುಂದುವರಿದಿದೆ. ಪ್ರತಿಭಟನೆಯು ಇನ್ನೂ ಕೆಲವು ರಾಜ್ಯಗಳಿಗೆ ವಿಸ್ತರಿಸಿದೆ. ಪಶ್ಚಿಮ ಬಂಗಾಳ, ದೆಹಲಿಯಲ್ಲಿ ಈ ಪ್ರತಿಭಟನೆ ಹಿಂಸೆಯ ರೂಪ ಪಡೆದುಕೊಂಡಿದೆ.

ಈ ಕಾಯ್ದೆಯು ‘ಅಸಾಂವಿಧಾನಿಕ’. ಹಾಗಾಗಿ ತಮ್ಮ ರಾಜ್ಯಗಳಲ್ಲಿ ಅದನ್ನು ಜಾರಿ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಪಶ್ಚಿಮ ಬಂಗಾಳ, ಪಂಜಾಬ್‌, ಕೇರಳ, ಮಧ್ಯಪ್ರದೇಶ ಮತ್ತು ಛತ್ತೀಸಗಡದ ಮುಖ್ಯಮಂತ್ರಿಗಳು ಹೇಳಿದ್ದಾರೆ.

ಆದರೆ, ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಜಾರಿ ಮಾಡುವುದಿಲ್ಲ ಎಂದು ಹೇಳಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇಲ್ಲ ಎಂದು ಕೇಂದ್ರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಂವಿಧಾನದ 7ನೇ ಪರಿಚ್ಛೇದದ ಅಡಿಯ ಕೇಂದ್ರದ ಪಟ್ಟಿಯಲ್ಲಿರುವ ವಿಚಾರದಲ್ಲಿ ಕಾಯ್ದೆ ರಚನೆಯಾಗಿದೆ. ರಾಜ್ಯಗಳು ಅದನ್ನು ಜಾರಿ ಮಾಡಲೇಬೇಕು ಎಂದು ಅವರು ಹೇಳಿದ್ದಾರೆ.

ಕೇಂದ್ರದ ಪಟ್ಟಿಯಲ್ಲಿ ಒಟ್ಟು 97 ವಿಚಾರಗಳಿವೆ. ರಕ್ಷಣೆ, ವಿದೇಶಾಂಗ ವ್ಯವಹಾರ, ರೈಲ್ವೆ, ಪೌರತ್ವ ವಿಚಾರಗಳು ಈ ಪಟ್ಟಿಯಲ್ಲಿ ಸೇರಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಪೌರತ್ವ (ತಿದ್ದುಪಡಿ) ಕಾಯ್ದೆಯು ಸಂವಿಧಾನ ವಿರೋಧಿ. ಅಂತಹ ಕಾಯ್ದೆಗೆ ನಮ್ಮ ರಾಜ್ಯದಲ್ಲಿ ಜಾಗ ಇಲ್ಲ’ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಗುರುವಾರವೇ ಹೇಳಿದ್ದರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೂ ಇದೇ ದಾಟಿಯಲ್ಲಿ ಮಾತನಾಡಿದ್ದಾರೆ. ‘ನಿಮ್ಮ (ಬಿಜೆಪಿ) ಪ್ರಣಾಳಿಕೆಯಲ್ಲಿ ಅಭಿವೃದ್ಧಿ ವಿಚಾರಗಳ ಬದಲಿಗೆ ದೇಶವನ್ನು ವಿಭಜಿಸುವ ಭರವಸೆಯನ್ನು ಕೊಟ್ಟಿದ್ದೀರಿ. ಧರ್ಮದ ಆಧಾರದಲ್ಲಿ ಯಾಕೆ ಪೌರತ್ವ ನೀಡಬೇಕು? ಇದನ್ನು ನಾನು ಒಪ್ಪುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ಕಲಬುರ್ಗಿಯಲ್ಲೂ ಆಕ್ರೋಶ

ಕಲಬುರ್ಗಿ:ಕಾಯ್ದೆ ವಿರುದ್ಧಸಿಡಿದೆದ್ದ ಮುಸ್ಲಿಂ ಸಮುದಾಯದವರು, ಶಾಸಕಿ ಖನೀಜ್‌ ಫಾತಿಮಾ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ಬೃಹತ್‌ ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೆ ಅವಕಾಶ ಕೊಡುವಂತೆ ‘ಪೀಪಲ್ಸ್‌ ಫೋರಂ– ಗುಲಬರ್ಗಾ’ ಸಂಘಟನೆ ಗುರುವಾರ ಪೊಲೀಸರಿಗೆ ಮನವಿ ಸಲ್ಲಿಸಿತ್ತು. ನಗರದಲ್ಲಿ 144ನೇ ಕಲಂ ಅನ್ವಯ
ಪೊಲೀಸ್‌ ಕಮಿಷನರ್‌ ನಿಷೇಧಾಜ್ಞೆ ಜಾರಿಗೊಳಿಸಿದರು. ಆಕ್ರೋಶಗೊಂಡ ಪ್ರಮುಖರು, ನಿಷೇಧಾಜ್ಞೆ ಹಿಂಪಡೆಯಲು ಆಗ್ರಹಿಸಿ ಪೊಲೀಸ್‌ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿದರು.

***

ನಿಮಗೆ (ಬಿಜೆಪಿ) ಸಂಖ್ಯಾಬಲವಿದೆ. ನೀವು ಸಂಸತ್ತಿನಲ್ಲಿ ಮಸೂದೆಗೆ ಅಂಗೀಕಾರ ಪಡೆಯಬಹುದು. ಆದರೆ, ದೇಶವಿಭಜನೆಗೆ ನಾವು ಅವಕಾಶ ಕೊಡುವುದಿಲ್ಲ

- ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

***

ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಭಾರತದ ಸಂವಿಧಾನದ ಬದ್ಧತೆಯನ್ನು ಈ ಕಾಯ್ದೆಯು ನಿರ್ಲಕ್ಷಿಸುತ್ತದೆ. ಇದು ತಾರತಮ್ಯ ಸ್ವರೂಪದ ಕಾಯ್ದೆ

- ಜೆರೆಮಿ ಲಾರೆನ್ಸ್‌, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ವಕ್ತಾರ

***

ಕಾಯಿದೆಗೆ ವ್ಯಾಪಕ ವಿರೋಧ

lಕಾಯ್ದೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಹಲವು ದೂರುಗಳು ದಾಖಲಾಗಿವೆ.ಕಾಂಗ್ರೆಸ್‌ ಸಂಸದ ಜೈರಾಮ್‌ ರಮೇಶ್‌ ಮತ್ತು ತೃಣಮೂಲ ಕಾಂಗ್ರೆಸ್‌ ಸಂಸದೆ ಮಹುವಾ ಮೊಯಿತ್ರಾ ಮತ್ತು ಇತರರು ಅರ್ಜಿ ಸಲ್ಲಿಸಿದ್ದಾರೆ

lಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗಮನದಲ್ಲಿ ಇರಿಸಿಕೊಂಡು ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳನ್ನು ರಕ್ಷಿಸಬೇಕು ಎಂದು ಭಾರತಕ್ಕೆ ಅಮೆರಿಕ ಹೇಳಿದೆ

lಪೌರತ್ವ ಕಾಯ್ದೆಯನ್ನು ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಯು ಶುಕ್ರವಾರ ಪಶ್ಚಿಮ ಬಂಗಾಳವನ್ನೂ ತಟ್ಟಿದೆ. ರಸ್ತೆತಡೆ, ರಸ್ತೆಗಳಲ್ಲಿ ಟೈರ್‌ ಸುಟ್ಟ ಘಟನೆಗಳು ನಡೆದಿವೆ. ರಾಜ್ಯದಲ್ಲಿ ಮೂರು ರೈಲ್ವೆ ನಿಲ್ದಾಣಗಳಿಗೆ ಪ್ರತಿಭಟನಕಾರರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ

lಗುವಾಹಟಿಯಲ್ಲಿ ಇದೇ 15ರಿಂದ 17ರವೆರೆಗೆ ನಡೆಯಬೇಕಿದ್ದ ಭಾರತ–ಜಪಾನ್ ಶೃಂಗಸಭೆ ಮುಂದೂಡಿಕೆ. ಜಪಾನ್ ಪ್ರಧಾನಿ ಶಿಂಜೊ ಅಬೆ ಶೃಂಗಸಭೆ ಸಲುವಾಗಿ ಭಾರತಕ್ಕೆ ನೀಡಬೇಕಿದ್ದ ಭೇಟಿ ರದ್ದು

lಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇದೇ ಭಾನುವಾರ ಮೇಘಾಲಯ ಮತ್ತು ಸೋಮವಾರ ಅರುಣಾಚಲ ಪ್ರದೇಶಕ್ಕೆ ನೀಡಬೇಕಿದ್ದ ಭೇಟಿ ರದ್ದು. ಭೇಟಿ ರದ್ದತಿಗೆ ಕಾರಣ ನೀಡದ ಗೃಹ ಸಚಿವಾಲಯ

lಅಸ್ಸಾಂ: ಗುವಾಹಟಿಯಲ್ಲಿ ಸಾವಿರಾರು ಜನರಿಂದ ಶಾಂತಿಯುತ ಪ್ರತಿಭಟನೆ, ಉಪವಾಸ ಸತ್ಯಾಗ್ರಹ. ದಿಬ್ರೂಗಡದಲ್ಲಿ ಕರ್ಫ್ಯೂ ಸಡಿಲಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT