ಮಂಗಳವಾರ, ಮೇ 18, 2021
28 °C
ಬೆಂಗಳೂರು ಮತ್ತು ರಾಜ್ಯದ ಹಲವೆಡೆ ವಾಡಿಕೆಗಿಂತ ಕಡಿಮೆ ಮಳೆ

ಹಿಂಗಾರು ಮಳೆ ಕೊರತೆ: ಕರ್ನಾಟಕ ಸೇರಿ ದಕ್ಷಿಣದ ರಾಜ್ಯಗಳಲ್ಲಿ ಬರದ ಛಾಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಿಂಗಾರು ಮಳೆ ಕೊರತೆಯ ಪರಿಣಾಮವಾಗಿ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಬರದ ಛಾಯೆ ಆವರಿಸಿದೆ.

2018ರ ಅಕ್ಟೋಬರ್–ಡಿಸೆಂಬರ್ ನಡುವಣ ಅವಧಿಯಲ್ಲಿ ದೇಶದಾದ್ಯಂತ ಮಳೆ ಪ್ರಮಾಣ ವಾಡಿಕೆಗಿಂತ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಈ ಅವಧಿಯಲ್ಲಿ; ದೀರ್ಘ ಕಾಲದ ಸರಾಸರಿಯನ್ನು ಗಣನೆಗೆ ತೆಗೆದುಕೊಂಡರೆ ಕೇವಲ ಶೇ 56ರಷ್ಟು ಮಳೆಯಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ಮಳೆ ಅಭಾವವಾಗಿರುವುದು 1901ರ ಬಳಿಕ ಇದೇ ಮೊದಲು ಎಂದು ಭಾರತೀಯ ಹವಾಮಾನ ಇಲಾಖೆಯ ಪ್ರಕಟಣೆಯಲ್ಲಿರುವ ಮಾಹಿತಿಯನ್ನು (2018ರ ಭಾರತದ ಹವಾಮಾನಕ್ಕೆ ಸಂಬಂಧಿಸಿದ ಪ್ರಕಟಣೆಯನ್ನು ಇಲಾಖೆ ಜ.16ರಂದು ಬಿಡುಗಡೆ ಮಾಡಿತ್ತು) ಉಲ್ಲೇಖಿಸಿ ದಿ ವೈರ್ ಸುದ್ದಿತಾಣ ವರದಿ ಮಾಡಿದೆ.

ಅಕ್ಟೋಬರ್–ಡಿಸೆಂಬರ್ ಅವಧಿಯಲ್ಲಿ ಕರ್ನಾಟಕ, ಆಂಧ್ರ ಕರಾವಳಿ, ರಾಯಲಸೀಮೆ, ತಮಿಳುನಾಡು, ಪುದುಚೇರಿ ಮತ್ತು ಕೇರಳದಲ್ಲಿ ವಾಡಿಕೆಗಿಂದ ಕಡಿಮೆ ಮಳೆಯಾಗಿದೆ. ಇದು ಆತಂಕಕ್ಕೆ ಕಾರಣವಾಗಿದೆ. ದೇಶದ ಇತರೆಡೆಗಳಂತಲ್ಲದೆ ದಕ್ಷಿಣದ ಭಾಗಗಳಲ್ಲಿ ನೈಋತ್ಯ ಮುಂಗಾರು (ಜೂನ್–ಸೆಪ್ಟೆಂಬರ್ ಅವಧಿ) ಮಳೆಗಿಂತಲೂ ಹಿಂಗಾರು ಮಳೆಯ ಅವಶ್ಯಕತೆಯೇ ಹೆಚ್ಚಿದೆ. ಈ ಭಾಗದ ಜನ ಕೃಷಿಗೆ ನೀರಿನ ಲಭ್ಯತೆಗಾಗಿ ಹಿಂಗಾರು ಮಳೆಯನ್ನೇ ನೆಚ್ಚಿಕೊಂಡಿದ್ದಾರೆ. ಹೀಗಾಗಿ ಈ ಪ್ರದೇಶಗಳಲ್ಲಿ ನೀರಿನ ಕೊರತೆ ಎದುರಾಗುವ ಆತಂಕ ಸೃಷ್ಟಿಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಹವಾಮಾನ ಇಲಾಖೆಯ ಬ್ಲಾಗ್‌ನಲ್ಲಿ ಉಲ್ಲೇಖಿಸಿರುವಂತೆ, ಕರ್ನಾಟಕದಲ್ಲಿ ಶೇ 48ರಷ್ಟು, ತೆಲಂಗಾಣದಲ್ಲಿ ಶೇ 65ರಷ್ಟು, ಆಂಧ್ರ ಪ್ರದೇಶದಲ್ಲಿ ಶೇ 57ರಷ್ಟು ಮತ್ತು ತಮಿಳುನಾಡಿನಲ್ಲಿ ಶೇ 24ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.

ತಮಿಳುನಾಡಿನ ಚೆನ್ನೈ, ಧರ್ಮಪುರಿಯಲ್ಲಿ ಕ್ರಮವಾಗಿ ಸರಾಸರಿ ವಾಡಿಕೆಗಿಂತ ಶೇ 55 ಮತ್ತು ಶೇ 59ರಷ್ಟು ಕಡಿಮೆ ಮಳೆಯಾಗಿದೆ. ಆಂಧ್ರ ಪ್ರದೇಶದ ವಿಶಾಖಪಟ್ಟಣ, ಗುಂಟೂರು, ಪ್ರಕಾಶಂ ಜಿಲ್ಲೆಗಳಲ್ಲಿ ಕ್ರಮವಾಗಿ ವಾಡಿಕೆಗಿಂತ ಶೇ 54, 63 ಮತ್ತು 68ರಷ್ಟು ಕಡಿಮೆ ಮಳೆಯಾಗಿದೆ.

ಬೆಂಗಳೂರಲ್ಲೂ ಕಡಿಮೆ ಮಳೆ

ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಕ್ರಮವಾಗಿ ವಾಡಿಕೆಗಿಂತ ಶೇ 54 ಮತ್ತು 36ರಷ್ಟು ಕಡಿಮೆ ಮಳೆಯಾಗಿದೆ. ತೆಲಂಗಾಣದ ನಲ್ಗೊಂಡ, ನಿಜಾಮಾಬಾದ್, ಭುವನಗಿರಿ ಜಿಲ್ಲೆಗಳಲ್ಲಿ ವಾಡಿಕೆಗಿಂತ ಅತಿ ಕಡಿಮೆ, ಅಂದರೆ ಶೇ 91ರಷ್ಟು ಕಡಿಮೆ ಮಳೆಯಾಗಿದೆ ಎಂದು ವರದಿ ಉಲ್ಲೇಖಿಸಿದೆ.

ನೀರು ಪೂರೈಕೆಯಲ್ಲಿ ಕಡಿತ

ಮಳೆ ಅಭಾವದ ಪರಿಣಾಮವಾಗಿ ರಾಜ್ಯ ಸರ್ಕಾರಗಳು ನೀರು ಪೂರೈಕೆಯಲ್ಲಿ ಕಡಿತ ಮಾಡುತ್ತಿವೆ. ಚೆನ್ನೈ ನಗರಕ್ಕೆ ನೀರು ಪೂರೈಸುವ ಮೂರು ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಚೆನ್ನೈ ನಗರ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿಯು ಕುಡಿಯುವ ನೀರಿನ ಪೂರೈಕೆಯಲ್ಲಿ ಈಗಾಗಲೇ ಅರ್ಧದಷ್ಟು ಕಡಿತ ಮಾಡಿದೆ ಎಂದು ವರದಿ ತಿಳಿಸಿದೆ.

ಪರಿಹಾರಕ್ಕಾಗಿ ಕೇಂದ್ರಕ್ಕೆ ಮೊರೆ

ಕರ್ನಾಟಕ, ಮಹಾರಾಷ್ಟ್ರ, ಜಾರ್ಖಂಡ್, ರಾಜಸ್ಥಾನ ಮತ್ತು ಗುಜರಾತ್ ಸರ್ಕಾರಗಳು ಈಗಾಗಲೇ ಬರ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿವೆ. ಬಿಹಾರ ಮತ್ತು ತೆಲಂಗಾಣ ಸಹ ಮನವಿ ಸಲ್ಲಿಸಲು ಮುಂದಾಗಿವೆ. ಆಂಧ್ರ ಪ್ರದೇಶದ 347 ಮಂಡಲಗಳನ್ನು ಬರಪೀಡಿತ ಎಂದು ಈಗಾಗಲೇ ಘೋಷಿಸಲಾಗಿದ್ದು, ಕೇಂದ್ರ ಸರ್ಕಾರದಿಂದ ₹1,401 ಕೋಟಿ ಪರಿಹಾರ ಕೋರಲಾಗಿದೆ.

ಮಳೆಯ ಅಭಾವ ಮತ್ತು ಹೆಚ್ಚಿನ ತಾಪಮಾನದಿಂದಾಗಿ ಮಣ್ಣಿನ ತೇವಾಂಶ ಕಡಿಮೆಯಾಗುತ್ತಿರುವುದು ಬರಕ್ಕೆ ಕಾರಣವಾಗಿದ್ದು, ಇದರಿಂದ ಕೃಷಿಗೆ ತೊಡಕಾಗಿದೆ ಎಂದು ಗಾಂಧಿನಗರ ಐಐಟಿಯ ಕೃಷಿ ಎಂಜಿನಿಯರ್ ವಿಮಲ್ ಮಿಶ್ರಾ ಅಭಿಪ್ರಾಯಪಟ್ಟಿರುವುದನ್ನೂ ವರದಿ ಉಲ್ಲೇಖಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು