ಭಾನುವಾರ, ಏಪ್ರಿಲ್ 18, 2021
32 °C
ಸರ್ವ ಸದಸ್ಯರ ಸಹಕಾರ ಕೋರಿಕೆ

ಸ್ಪೀಕರ್ ಆಗಿ ಬಿರ್ಲಾ ಅವಿರೋಧ ಆಯ್ಕೆ| ನಿಷ್ಪಕ್ಷಪಾತವಾಗಿ ಸದನ ಮುನ್ನಡೆಸುವ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಲೋಕಸಭೆಯ ನೂತನ ಸ್ಪೀಕರ್ ಆಗಿ ಎನ್‌ಡಿಎ ಅಭ್ಯರ್ಥಿ ಓಂ ಬಿರ್ಲಾ (56) ಅವರು ಬುಧವಾರ ಅವಿರೋಧವಾಗಿ ಆಯ್ಕೆಯಾದರು. 

ರಾಜಸ್ಥಾನದ ಕೋಟಾ–ಬೂಂದಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಎರಡನೇ ಬಾರಿ ಆಯ್ಕೆಯಾಗಿರುವ ಬಿರ್ಲಾ ಅವರನ್ನು ಹೊರತುಪಡಿಸಿ ಬೇರಾವ ಸದಸ್ಯರೂ ಸ್ಪೀಕರ್ ಹುದ್ದೆಗೆ ಸ್ಪರ್ಧೆಯಲ್ಲಿ ಇರಲಿಲ್ಲ. ಸದನದಲ್ಲಿ ಪ್ರಧಾನಿ ಮೋದಿ ಅವರು ಮಂಡಿಸಿದ ಪ್ರಸ್ತಾವಕ್ಕೆ ಧ್ವನಿಮತದ ಅಂಗೀಕಾರ ನೀಡಲಾಯಿತು. ಅದಾದ ಬಳಿಕ ಮೋದಿ ಅವರು ಸ್ಪೀಕರ್ ಆಸನದತ್ತ ಬಿರ್ಲಾ ಅವರನ್ನು ಕರೆದೊಯ್ದರು. ಕಾಂಗ್ರೆಸ್, ಡಿಎಂಕೆ, ಟಿಎಂಸಿ ಸೇರಿದಂತೆ ವಿವಿಧ ಪಕ್ಷಗಳ ಸದಸ್ಯರು ಬಿರ್ಲಾ ಅವರನ್ನು ಅಭಿನಂದಿಸಿದರು. 

ಸದನವನ್ನು ಸುಗಮವಾಗಿ ನಡೆಸಲು ಸಂಪೂರ್ಣ ಸಹಕಾರ ನೀಡುವುದಾಗಿ ಪ್ರಧಾನಿ ಮೋದಿ ಹಾಗೂ ವಿರೋಧ ಪಕ್ಷಗಳ ಸದಸ್ಯರು ನೂತನ ಸ್ಪೀಕರ್‌ಗೆ ಭರವಸೆ ನೀಡಿದರು.  ಬಿರ್ಲಾ ಅವರನ್ನು ಬೆಂಬಲಿಸಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಡಿಎಂಕೆಯ ಟಿ.ಆರ್. ಬಾಲು ಹಾಗೂ ಟಿಎಂಸಿಯ ಸುದೀಪ್ ಬಂಡೋಪಾಧ್ಯಾಯ ಅವರು, ಪಕ್ಷಪಾತ ರಹಿತವಾಗಿ ಸದನವನ್ನು ಮುನ್ನಡೆಸುವಂತೆ ಮನವಿ ಮಾಡಿದರು.

ಬಿರ್ಲಾ ಅವರಿಗೆ ಶುಭಾಶಯ ಕೋರಿ ಮಾತನಾಡಿದ ಮೋದಿ, ‘ಸರ್ಕಾರದ ಪರವಾಗಿ ಬಿರ್ಲಾ ಅವರಿಗೆ ಸಂಪೂರ್ಣ ಬೆಂಬಲ ಘೋಷಿಸುತ್ತೇನೆ. ನಿಮ್ಮ ಆದೇಶಗಳನ್ನು ಪಾಲಿಸುವ ಭರವಸೆ ನೀಡುತ್ತೇನೆ’ ಎಂದರು.

‘ಜವಾಹರಲಾಲ್ ನೆಹರೂ ಅವರು ಹೇಳಿದಂತೆ ಲೋಕಸಭೆಯ ಸ್ಪೀಕರ್ ಆದವರು ದೇಶ ಹಾಗೂ ಸ್ವಾತಂತ್ರ್ಯವನ್ನು ಪ್ರತಿನಿಧಿಸುತ್ತಾರೆ’ ಎಂದು ಚೌಧರಿ ಹೇಳಿದರು. ಕೆಲವೇ ಮಸೂದೆಗಳು ಸಂಸತ್ತಿನ ಸ್ಥಾಯಿ ಸಮಿತಿಯ ಪರಿಶೀಲನೆಗೆ ಒಳಗಾಗುತ್ತಿವೆ. ಈ ಪ್ರವೃತ್ತಿ ಬದಲಾಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು. ಈ ಮಾತಿಗೆ ಬಿಜೆಡಿಯ ಪಿನಾಕಿ ಮಿಶ್ರಾ ಅವರೂ ದನಿಗೂಡಿಸಿದರು.

ವಿದ್ಯಾರ್ಥಿ ನಾಯಕನಿಂದ ಸ್ಪೀಕರ್‌ವರೆಗೂ..
ಸ್ಪೀಕರ್ ಹುದ್ದೆಗೆ ಅಚ್ಚರಿಯ ಆಯ್ಕೆ ಎನಿಸಿರುವ ಬಿರ್ಲಾ ಅವರು, ರಾಜಸ್ಥಾನದ ಕೋಟಾ–ಬೂಂದಿ ಲೋಕಸಭಾ ಕ್ಷೇತ್ರದಿಂದ ಎರಡನೇ ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಮೋದಿ ಹಾಗೂ ಅಮಿತ್ ಶಾ ಅವರ ಆಪ್ತರೆನಿಸಿರುವ ಅವರು, ಈಗ ಬಹು ದೊಡ್ಡ ಜವಾಬ್ದಾರಿಯ ಹುದ್ದೆಯನ್ನು ಅಲಂಕರಿಸಿದ್ದಾರೆ. 

ಬಿರ್ಲಾ ಅವರ ಆಯ್ಕೆ ಪ್ರಸ್ತಾವಕ್ಕೆ ಎನ್‌ಡಿಎ ಒಳಗೆ ಸೇರದ ಬಿಜು ಜನತಾದಳ, ವೈಎಸ್‌ಆರ್ ಕಾಂಗ್ರೆಸ್ ಪಕ್ಷಗಳೂ ಬೆಂಬಲ ಸೂಚಿಸಿದ್ದವು.  

ವಿದ್ಯಾರ್ಥಿ ನಾಯಕರಾಗಿ ರಾಜಕೀಯ ಪಯಣ ಆರಂಭಿಸಿದ್ದ ಬಿರ್ಲಾ, ರಾಜಸ್ಥಾನದ ವಿಧಾನಸಭೆಗೆ ಸತತ ಮೂರು ಬಾರಿ (2003, 2008, 2013) ಆಯ್ಕೆಯಾದರು. 2014ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆರಿಸಿ ಬಂದಿದ್ದ ಅವರು, 2019ರ ಚುನಾವಣೆಯಲ್ಲಿ 2.5 ಲಕ್ಷ ಮತಗಳ ಅಂತರದಿಂದ ಗೆದ್ದು, ಮರು ಆಯ್ಕೆಯಾಗಿದ್ದಾರೆ. 

ಸಕ್ರಿಯ ಸಂಸದ: 16ನೇ ಲೋಕಸಭೆಯಲ್ಲಿ ಬಿರ್ಲಾ ಅವರ ಹಾಜರಾತಿ ಶೇ 86ರಷ್ಟು ದಾಖಲಾಗಿದೆ. ಅವರು 671 ಪ್ರಶ್ನೆಗಳನ್ನು ಕೇಳಿದ್ದಾರೆ. 163 ಚರ್ಚೆಗಳಲ್ಲಿ ಭಾಗಿಯಾಗಿದ್ದು, ಆರು ಖಾಸಗಿ ಮಸೂದೆಗಳನ್ನು ಮಂಡಿಸಿದ್ದಾರೆ. 

ಬಿಜೆಪಿ ಯುವ ಘಟಕದ ರಾಜ್ಯ ಅಧ್ಯಕ್ಷರಾಗಿ, ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ವಾಣಿಜ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಬಿರ್ಲಾ, ಲೋಕಸಭೆಯ ವಿವಿಧ ಸ್ಥಾಯಿ ಸಮಿತಿಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

**
ಆಡಳಿತ ಪಕ್ಷದ ಸದಸ್ಯರು ಮಿತಿ ದಾಟಿದರೆ ಸ್ಪೀಕರ್ ನಿರ್ದಾಕ್ಷಿಣ್ಯವಾಗಿ ನಡೆದುಕೊಳ್ಳಬೇಕು.
–ನರೇಂದ್ರ ಮೋದಿ, ಪ್ರಧಾನಿ 

**
ಸಾರ್ವಜನಿಕ ಹಿತಾಸಕ್ತಿಯ ವಿಚಾರಗಳಲ್ಲಿ ವಿರೋಧ ಪಕ್ಷದ ಸದಸ್ಯರಿಗೆ ಮಾತನಾಡಲು ಸ್ಪೀಕರ್ ಹೆಚ್ಚು ಅವಕಾಶ ನೀಡಬೇಕು.
-ಅಧೀರ್ ರಂಜನ್ ಚೌಧರಿ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ

**
ಕೇಂದ್ರ ಸರ್ಕಾರವು ಇನ್ನಷ್ಟು ಜವಾಬ್ದಾರಿಯುತ ಹಾಗೂ ಸದನಕ್ಕೆ ಉತ್ತರದಾಯಿ ಆಗಿರಬೇಕು ಎಂದು ನಿರೀಕ್ಷಿಸುತ್ತೇನೆ.
-ಓಂ ಬಿರ್ಲಾ, ಲೋಕಸಭೆಯ ನೂತನ ಸ್ಪೀಕರ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು