ಜಾರ್ಖಾಂಡ್ ವಿಧಾನಸಭೆ ಚುನಾವಣೆ| ಹಿಂಸಾಚಾರದಲ್ಲಿ ವ್ಯಕ್ತಿ ಸಾವು, ಮೂವರಿಗೆ ಗಾಯ

ರಾಂಚಿ: ಜಾರ್ಖಾಂಡ್ ವಿಧಾನಸಭೆಗೆ ಶನಿವಾರ ನಡೆದ ಎರಡನೇ ಹಂತದ ಮತದಾನದ ಸಂದರ್ಭದಲ್ಲಿ, ನಕ್ಸಲ್ ಪೀಡಿತ ಗುಮ್ಲಾ ಜಿಲ್ಲೆಯ ಸಿಸಾಯ್ ಕ್ಷೇತ್ರದಲ್ಲಿ ನಡೆದ ಹಿಂಸಾಚಾರದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.
ವಿಧಾನಸಭೆಗೆ ನಡೆದ ಎರಡನೇ ಹಂತದ ಚುನಾವಣೆಯಲ್ಲಿ ಒಟ್ಟಾರೆ 63.36% ಮತದಾನ ನಡೆದಿದೆ ಎಂದು ಪಿಟಿಐ ವರದಿ ಮಾಡಿದೆ.
63.36% polling in second phase of #JharkhandAssemblyPolls
— Press Trust of India (@PTI_News) December 7, 2019
ಸಿಸಾಯ್ ಕ್ಷೇತ್ರದ ಮತದಾನ ಕೇಂದ್ರದ ಹೊರಗೆ ಸ್ಥಳೀಯರು ಪೊಲೀಸರೊಂದಿಗೆ ಘರ್ಷಣೆಗೆ ಮುಂದಾಗಿದ್ದರು. ಆಕ್ರೋಶಗೊಂಡ ಜನರು, ಕ್ಷೀಪ್ರ ಕಾರ್ಯ ಪಡೆಯ (ಆರ್‌ಎಎಫ್) ಸಿಬ್ಬಂದಿಯ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳಲು ಮುಂದಾಗುತ್ತಿದ್ದಂತೆ ಪೊಲೀಸರು ಗುಂಡು ಹಾರಿಸಿದ್ದಾರೆ. ಈ ಘಟನೆಯಲ್ಲಿ ವ್ಯಕ್ತಿ ಮೃತಪಟ್ಟಿದ್ದು, ಪೊಲೀಸ್, ಪತ್ರಕರ್ತ ಸೇರಿ ಮೂವರು ಗಾಯಗೊಂಡಿದ್ದಾರೆ.
7 ಜಿಲ್ಲೆಯ 20 ಕ್ಷೇತ್ರಗಳಲ್ಲಿ ಮತದಾನ ನಡೆಯಿತು. ಶೇ. 63 ರಷ್ಟು ಮತದಾನ ಆಗಿದೆ. ಬಹುತೇಕ ಕಡೆ ಶಾಂತಿಯುತವಾಗಿ ಮತದಾನ ನಡೆದಿದ್ದು, 42,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಬಸ್‌ಗೆ ಬೆಂಕಿ: ಚುನಾವಣಾ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ಬಸ್‌ಗೆ, ಚಾಯಿಬಾಸಾ ಸಮೀಪ ನಕ್ಸಲರು ಬೆಂಕಿ ಹಚ್ಚಿದ್ದಾರೆ. ಯಾವುದೇ ಸಾವು–ನೋವು ಸಂಭವಿಸಿಲ್ಲ. ಸಿಬ್ಬಂದಿಯನ್ನು ಮತ್ತೊಂದು ಬಸ್ಸಿನಲ್ಲಿ ಚುನಾವಣಾ ಕರ್ತವ್ಯಕ್ಕೆ ಕಳುಹಿಸಲಾಯಿತು.
ಭದ್ರತಾ ಸಿಬ್ಬಂದಿ ಬಂಧನ: ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿ, ಹಲ್ಲೆ ಮಾಡಿದ ಆರೋಪದ ಮೇಲೆ, ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಭದ್ರತಾ ಸಿಬ್ಬಂದಿ ರಾಜೇಂದ್ರ ಸಿಂಗ್ ಮೀನಾ ಎಂಬಾತನನ್ನು ಬಂಧಿಸಿ, ಚಾಯಿಬಾಸಾ ಜೈಲಿಗೆ ಕಳುಹಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.