ಶನಿವಾರ, ಸೆಪ್ಟೆಂಬರ್ 26, 2020
22 °C
ಒಂದು ಕೋಣೆಯ ಮನೆಯಿಂದ ವರ್ಜಿನಿಯಾ ವಿಶ್ವವಿದ್ಯಾಲಯದವರೆ

ಪರಿಶ್ರಮದ ಫಲ| ವಿಶ್ವದ ಅತ್ಯುನ್ನತ ವಿ.ವಿಯಲ್ಲಿ ಪಿಎಚ್‌.ಡಿಗೆ ದಾಖಲಾದ ಸ್ಲಂ ಹುಡುಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಾರಾಷ್ಟ್ರ:  ದೃಢ ಸಂಕಲ್ಪವಿದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಮುಂಬೈನ ಕೊಳಗೇರಿಯಲ್ಲಿ ಬೆಳೆದು ವಿಶ್ವದ ಅತ್ಯುನ್ನತ ವಿಶ್ವವಿದ್ಯಾಲಯದವರೆಗೆ ಸಾಗಿದ ಈ ಯುವಕ ನಿದರ್ಶನ.

ಕಡು ಬಡತನದಲ್ಲಿ ಬೆಳೆದ 24 ವರ್ಷದ ಜಯಕುಮಾರ ವೈದ್ಯ ಸಾಧಿಸಬೇಕೆನ್ನುವ ಅಚಲ  ನಿರ್ಧಾರದಿಂದ ಈಗ ಅಮೆರಿಕದ ವರ್ಜಿನಿಯಾ ವಿಶ್ವವಿದ್ಯಾಲಯದಲ್ಲಿ ಪಿಎಚ್‌.ಡಿಗೆ ಅವಕಾಶ ಪಡೆದಿದ್ದಾರೆ. 

ಮುಂಬೈನ ಕುರ್ಲ ಕೊಳಗೆರಿಯಲ್ಲಿ ಕೇವಲ 75 ಚದರ ಅಡಿಯ ಜಾಗದಲ್ಲಿ ವೈದ್ಯ ಅವರ ವಾಸ್ತವ್ಯವಿತ್ತು. ತಂದೆಯಿಂದ ವಿಚ್ಛೇದನ ಪಡೆದ ತಾಯಿ ನಳಿನಿ ಪೊಷಣೆಯಲ್ಲಿಯೇ ಅವರು ಬೆಳೆದರು. ಕ್ಲರ್ಕ್‌ ಕೆಲಸ ಮಾಡಿಕೊಂಡು ಅವರ ತಾಯಿ ಜೀವನ ಸಾಗಿಸುತ್ತಿದ್ದರು. ಅವರ ತಾಯಿಗೆ ಆರೋಗ್ಯ ಸರಿಯಿಲ್ಲದಿದ್ದರಿಂದ 2003ರಲ್ಲಿ ನಳಿಗೆ ಅವರು ಆ ಕೆಲಸವನ್ನು ಬಿಡಬೇಕಾಯಿತು. 

ಕೇವಲ ವಡಾಪಾವ್‌, ಸಮೋಸ ಮತ್ತು ಟೀ ಕುಡಿದೇ ಅವರು ತಮ್ಮ ಹಸಿವನ್ನು ನೀಗಿಸಿಕೊಂಡಿದ್ದಾರೆ. ‘ನಮಗೆ ಮಧ್ಯಾಹ್ನದ ಊಟ, ರಾತ್ರಿ ಊಟ ಎನ್ನುವುದೇ ಇರಲಿಲ್ಲ. ದಿನಪೂರ್ತಿ ಕೆಲಸ ಮುಗಿಸಿಕೊಂಡು ಮನೆಗೆ ವಾಪಾಸ್ ಆದಾಗ ಆಹಾರ ಸೇವಿಸುತ್ತಿದ್ದೆವು. ಕಷ್ಟದಲ್ಲಿದ್ದ ನಮ್ಮ ಜೀವನಕ್ಕೆ ಅಲ್ಲಿಯೇ ಇದ್ದ ದೇವಸ್ಥಾನ ಸಮಿತಿ ನೆರವಾಯಿತು’ ಎಂದು ವೈದ್ಯ ಕಷ್ಟದ ಜೀವನದ ಬಗ್ಗೆ ವಿವರಿಸಿದರು.

‘ಶಿಕ್ಷಣದಿಂದ ಮಾತ್ರ ಕಷ್ಟದ ಈ ಬದುಕನ್ನು ಹಸನು ಮಾಡಿಕೊಳ್ಳಬಹುದು ಎಂದು ಅಮ್ಮ ಸದಾ ಹೇಳುತ್ತಿದ್ದರು. ಶಾಲೆ/ಕಾಲೇಜುಗಳಿಗೆ ಶುಲ್ಕ ಕಟ್ಟುವುದಕ್ಕೂ ದುಡ್ಡು ಇರದಿದ್ದಾಗ ಅಮ್ಮ ಸಾಕಷ್ಟು ಕಷ್ಟ ಪಟ್ಟಿದ್ದಾಳೆ. ನನಗೆ ಉತ್ತಮ ಶಿಕ್ಷಣ ಕೊಡಿಸಬೇಕೆನ್ನುವುದು ಅವರ ಏಕೈಕ ಗುರಿಯಾಗಿತ್ತು. ಜೀವನ ಸಾಗಿಸಲು ಅಮ್ಮನಿಗೆ ನೆರವಾಗಬೇಕೆಂದು ವಿದ್ಯಾರ್ಥಿಯಾಗಿದ್ದಾಗ ಟಿ.ವಿ ರಿಪೇರಿ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ. ತಿಂಗಳಿಗೆ ₹4,000 ಕೊಡುತ್ತಿದ್ದರು’ ಎಂದು ಜೀವನ ಸಾಗಿಸಿದ ಬಗೆಯನ್ನು ಹಂಚಿಕೊಂಡರು.

ವೈದ್ಯ ಅವರು ಓದಿನಲ್ಲಿ ಬಹಳ ಚುರುಕಿದ್ದರಿಂದ ಎಂಜಿನಿಯರಿಂಗ್‌ ಓದುತ್ತಿದ್ದಾಗ ರೋಬೊಟಿಕ್‌ ಸ್ಪರ್ಧೆಯಲ್ಲಿ ರಾಷ್ಟ್ರೀಯ ಮಟ್ಟದ ಮೂರು ಹಾಗೂ ರಾಜ್ಯ ಮಟ್ಟದ ನಾಲ್ಕು  ಪದಕ ಗೆದ್ದಿದ್ದರು. ಎಂಜಿನಿಯರಿಂಗ್‌ ಮುಗಿಯುತ್ತಿದ್ದ ಹಾಗೆ 2016ರಲ್ಲಿ ಟಾಟಾ ಇಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನಲ್ಲಿ (ಟಿಐಎಫ್ಆರ್)  ಕೆಲಸ ಸಿಕ್ಕಿತು. ತಿಂಗಳಿಗೆ ₹30,000 ಸಂಬಳ ಬರುತ್ತಿದ್ದರಿಂದ ಅವರ ಒಂದು ನೆಲೆ ಕಂಡುಕೊಳ್ಳಲು ಸಾಧ್ಯವಾಯಿತು. ‘ಕೆಲಸ ಸಿಕ್ಕಿದ್ದರಿಂದ ಸೋರುತ್ತಿದ್ದ ನನ್ನ ಮನೆಯನ್ನು ದುರಸ್ತಿ ಮಾಡಿಸಲು ಸಾಧ್ಯವಾಯಿತು’ ಎಂದರು.

’ವರ್ಜಿನಿಯಾ ವಿಶ್ವವಿದ್ಯಾಲಯದಲ್ಲಿ ಪಿಎಚ್‌.ಡಿಗೆ ಸೇರುವ ಸಿದ್ಧತೆಯೇ ನನಗೆ ಒಂದು ಸವಾಲಾಗಿತ್ತು. ಅರ್ಜಿ ಸಲ್ಲಿಸುವುದು, ವಿಸಾ ಪ್ರಕ್ರಿಯೆ ದುಬಾರಿಯಾಗಿತ್ತು. ಇದರಿಂದ ನನ್ಗ ಉಳಿತಾಯದಲ್ಲಿದ್ದ ಎಲ್ಲಾ ಹಣ ಖರ್ಚಾಯಿತು. ಅದನ್ನು ಸರಿದೂಗಿಸಲು ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡಲು ಪ್ರಾರಂಭಿಸಿದೆ’ ಎಂದು ಅಮೆರಿಕಕ್ಕೆ ಹಾರಿದ ಬಗ್ಗೆ ವೈದ್ಯ ತಿಳಿಸಿದರು.

ಸಾಕಷ್ಟು ತೊಂದರೆಗಳ ನಡುವೆಯೂ ಓದಿನ ಮೇಲಿನ ಆಸಕ್ತಿ ಮತ್ತು ದೃಢ ಸಂಕಲ್ಪ ವೈದ್ಯ ಅವರನ್ನು ವಿಶ್ವದ ಅತ್ಯನ್ನತ ವಿಶ್ವವಿದ್ಯಾಲಯದ ಮೆಟ್ಟಿಲೇರಲು ನೆರವಾಯಿತು.

ಮಾಹಿತಿ: ವಿವಿಧ ವೆಬ್‌ಸೈಟ್‌ಗಳು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು