ಶುಕ್ರವಾರ, ನವೆಂಬರ್ 22, 2019
20 °C
ಪ್ರವರ್ಧಮಾನಕ್ಕೆ ಬರಲು ವೇದಿಕೆಯಾದ ಹೋರಾಟ

ಅಯೋಧ್ಯೆ ತೀರ್ಪು | ಮಂದಿರ-ಮಸೀದಿ ಹೋರಾಟದ ಮುಂಚೂಣಿಯಲ್ಲಿದ್ದವರು

Published:
Updated:

ಬಾಬರಿ ಮಸೀದಿ ಧ್ವಂಸ ಹಾಗೂ ರಾಮಮಂದಿರ ನಿರ್ಮಾಣ ಚಳವಳಿ ಮೂಲಕ ಹಿಂದುತ್ವವಾದಿಗಳು ಹಾಗೂ ಬಿಜೆಪಿಯ ಹಲವು ನಾಯಕರು ಮುನ್ನೆಲೆಗೆ ಬಂದರು. ಅಡ್ವಾಣಿ ಅವರ ಜತೆಗೆ ಉಮಾ ಭಾರತಿ, ಮುರಳಿ ಮನೋಹರ ಜೋಷಿ, ವಿನಯ್ ಕಟಿಯಾರ್ ಅಂತಹವರು ರಾಜಕೀಯವಾಗಿ ಶಕ್ತಿಯಾಗಿ ಬೆಳೆದರು

ಅಡ್ವಾಣಿ, ಜೋಷಿ

ರಾಮಮಂದಿರ ಹೋರಾಟದ ಮುಖಗಳು ಎಂದು ಒಂದೊಮ್ಮೆ ಪರಿಗಣಿತವಾಗಿದ್ದ ಎಲ್.ಕೆ. ಅಡ್ವಾಣಿ ಹಾಗೂ ಮುರಳಿ ಮನೋಹರ ಜೋಷಿ ಅವರು ಸದ್ಯ ರಾಜಕೀಯ ಸಂಧ್ಯಾಕಾಲದಲ್ಲಿದ್ದಾರೆ. ಪಕ್ಷದ ಅತ್ಯುನ್ನತ ನೀತಿ ನಿರ್ಧಾರ ತೆಗೆದುಕೊಳ್ಳುವ ಸಂಸದೀಯ ಸಮಿತಿ ಸಭೆಯಿಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇವರನ್ನು ಕೈಬಿಟ್ಟಿದ್ದಲ್ಲದೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಲಿಲ್ಲ. ಅಡ್ವಾಣಿ ಅವರಿಗೆ ರಾಷ್ಟ್ರಪತಿ ಹಾಗೂ ಜೋಷಿ ಅವರಿಗೆ ಉಪರಾಷ್ಟ್ರಪತಿ ಹುದ್ದೆಗಳನ್ನು ನಿರಾಕರಿಸಲಾಯಿತು. ಪಕ್ಷದ ಮಾರ್ಗದರ್ಶಕ ಮಂಡಳಿಗೆ ಇವರು ಸೀಮಿತಗೊಂಡಿದ್ದಾರೆ. 1996ರಲ್ಲಿ ಪಕ್ಷ ಉಚ್ಛ್ರಾಯ ಮಟ್ಟಕ್ಕೇರುವಲ್ಲಿ ಅಡ್ವಾಣಿ ಪ್ರಮುಖ ಪಾತ್ರ ವಹಿಸಿದ್ದರು. ಜೋಷಿ ಅವರು ಆಗಾಗ್ಗೆ ಸರ್ಕಾರವನ್ನು ಟೀಕಿಸುತ್ತಾರಾದರೂ, ಅಡ್ವಾಣಿ ಮುಖ್ಯವಾಹಿನಿ ರಾಜಕಾರಣದಿಂದ ದೂರವೇ ಉಳಿದಿದ್ದಾರೆ.

ಕಲ್ಯಾಣ್ ಸಿಂಗ್

1992ರ ಡಿಸೆಂಬರ್‌ನಲ್ಲಿ ಮಸೀದಿ ಒಡೆದು ಹಾಕಿದ ಸಮಯದಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಮೊದಲ ಮುಖ್ಯಮಂತ್ರಿಯಾಗಿದ್ದವರು ಕಲ್ಯಾಣ್ ಸಿಂಗ್. ಘಟನೆಯ ನೈತಿಕ ಹೊಣೆ ಹೊತ್ತು ಅವರು ರಾಜೀನಾಮೆ ನೀಡಿದ್ದರು. ಕಲ್ಯಾಣ್ ಸಿಂಗ್ ಅವರ ಹೆಸರು ಮಸೀದಿ ಧ್ವಂಸ ಪ್ರಕರಣದಲ್ಲಿ ಇದೆ. ನರೇಂದ್ರ ಮೋದಿ ಅವರು 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ನೇಮಕವಾದ ಮೊದಲ ರಾಜ್ಯಪಾಲ ಇವರು. ರಾಜಸ್ಥಾನದ ರಾಜ್ಯಪಾಲರಾಗಿದ್ದ ಅವರ ಅವಧಿ ಇತ್ತೀಚೆಗೆ ಕೊನೆಗೊಂಡಿತ್ತು. ಅವಧಿ ಮುಗಿಯುತ್ತಿದ್ದಂತೆ ಮಸೀದಿ ಧ್ವಂಸ ಪ್ರಕರಣದಲ್ಲಿ ಇವರು ವಿಚಾರಣೆ ಎದುರಿಸುತ್ತಿದ್ದಾರೆ.

ಉಮಾ ಭಾರತಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೊದಲ ಅವಧಿಯಲ್ಲಿ ಸಚಿವರಾಗಿದ್ದ ಉಮಾ ಭಾರತಿ ಅವರು ಈಗ ಬಿಜೆಪಿ ಉಪಾಧ್ಯಕ್ಷೆ.  ರಾಮಮಂದಿರ ನಿರ್ಮಾಣ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಅವರು ಬಾಬರಿ ಮಸೀದಿ ಧ್ವಂಸಗೊಂಡ ಬಳಿಕ ಎಂದೂ ಆ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಲಿಲ್ಲ. ಉಮಾ ಭಾರತಿ ಸೇರಿದಂತೆ ಹಲವು ನಾಯಕರತ್ತ ವರದಿ ಬೊಟ್ಟು ಮಾಡಿತ್ತು. ವಾಜಪೇಯಿ–ಅಡ್ವಾಣಿ ಅವರ ಕಾಲದಲ್ಲಿ ಉಮಾ ಭಾರತಿ ಅವರಿಗೆ ಪ್ರಮುಖ ಸ್ಥಾನವಿತ್ತು. 

ವಿನಯ್ ಕಟಿಯಾರ್

ಬಾಬರಿ ಮಸೀದಿ ಧ್ವಂಸಗೊಂಡ ಸಮಯದಲ್ಲಿ ಒಬಿಸಿ ನಾಯಕ ವಿನಯ್ ಕಟಿಯಾರ್ ಅವರು ಫೈಜಾಬಾದ್‌ನ ಬಿಜೆಪಿ ಸಂಸದರಾಗಿದ್ದರು. ಕರಸೇವಕರ ಇಡೀ ಯೋಜನೆ ಸಿದ್ಧವಾಗಿದ್ದು ಕಟಿಯಾರ್ ಅವರ ತವರು ಫೈಜಾಬಾದ್‌ನಲ್ಲಿ. ಅಂದಿನ ಪ್ರಧಾನಿ ನರಸಿಂಹ ರಾವ್ ಅವರಿಗೆ ಪರಿಸ್ಥಿತಿಯ ಮಾಹಿತಿ ನೀಡುತ್ತಿದ್ದರು. 1984ರಲ್ಲಿ ರಾಮಮಂದಿರ ಆಂದೋಲನ ಮುಂದುವರಿಸುವ ಸಲುವಾಗಿ ವಿಎಚ್‌ಪಿಯ ಯುವಘಟಕವಾಗಿ ಬಜರಂಗದಳ ಆರಂಬಿಸಿದ್ದು ಇವರೇ. ಮೂರು ಬಾರಿ ಸಂಸದರಾಗಿ, ಬಿಜೆಪಿಯ ರಾಜ್ಯಘಟಕದ ಅಧ್ಯಕ್ಷರಾಗಿ, ರಾಜ್ಯಸಭಾ ಸದಸ್ಯರಾಗಿ ವಿವಿಧ ಹುದ್ದೆ ನಿರ್ವಹಿಸಿದ್ದಾರೆ. 

ಗೋವಿಂದಾಚಾರ್ಯ, ಪ್ರವೀಣ್ ತೊಗಾಡಿಯಾ


ಪ್ರವೀಣ್ ತೊಗಾಡಿಯಾ

ಬಿಹಾರ ಹಾಗೂ ಉತ್ತರ ಪ್ರದೇಶದಲ್ಲಿ ಜಾತಿ ರಾಜಕೀಯದ ವಿನ್ಯಾಸಕಾರ ಎಂದೇ ಗುರುತಿಸಿಕೊಂಡಿದ್ದ ಗೋವಿಂದಾಚಾರ್ಯ ಅವರು ಕಳೆದ ಒಂದು ದಶಕದಿಂದ ರಾಜಕೀಯ ಅಜ್ಞಾತವಾಸದಲ್ಲಿದ್ದಾರೆ. ಪಕ್ಷದ ಅತ್ಯಂತ ಪ್ರಭಾವಶಾಲಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಗೋವಿಂದಾಚಾರ್ಯ ಅವರು 1996ರ ಚುನಾವಣೆ ವೇಳೆ ಅಟಲ್ ಬಿಹಾರಿ ವಾಜಪೇಯಿ ಅವರನ್ನು ‘ಬಿಜೆಪಿಯ ಜಾತ್ಯತೀತ ಮುಖವಾಡ’ ಎಂದು ಕರೆದು ವಿವಾದಕ್ಕೀಡಾದರು. 2007ರಲ್ಲಿ ರಾಜನಾಥ್ ಸಿಂಗ್ ಅವರು ಪಕ್ಷದ ಅಧ್ಯಕ್ಷರಾಗಿದ್ದಾಗ ಇವರನ್ನು ಬಿಜೆಪಿಯಿಂದ ಉಚ್ಚಾಟಿಸಲಾಯಿತು. ಇವರನ್ನು ಮರಳಿ ಪಕ್ಷಕ್ಕೆ ಸೇರಿಸಲು ಆರ್‌ಎಸ್‌ಎಸ್‌ ಯತ್ನಿಸಿತಾದರೂ, ವಿರೋಧದಿಂದಾಗಿ ಯಶಸ್ವಿಯಾಗಲಿಲ್ಲ. ‘ರಾಷ್ಟ್ರೀಯ ಸ್ವಾಭಿಮಾನ ಮಂಚ್’ ಎಂಬ ಸಾಮಾಜಿಕ ಸೇವಾ ಸಂಘಟನೆ ಕಟ್ಟಿಕೊಂಡಿದ್ದಾರೆ.


ಗೋವಿಂದಾಚಾರ್ಯ

ಪ್ರಧಾನಿ ಮೋದಿ ಅವರನ್ನು ನಿರಂತರವಾಗಿ ಟೀಕಿಸುತ್ತಿದ್ದ ಕಾರಣಕ್ಕೆ, ಅಂತರರಾಷ್ಟ್ರೀಯ ವಿಭಾಗದ ಕಾರ್ಯಾಧ್ಯಕ್ಷರಾಗಿದ್ದ ಪ್ರವೀಣ್ ತೊಗಾಡಿಯಾ ಅವರಿಂದ ವಿಎಚ್‌ಪಿ ಒತ್ತಾಯಪೂರ್ವಕವಾಗಿ ರಾಜೀನಾಮೆ ಪಡೆಯಿತು. ಬಳಿಕ ಅವರು ಅಂತರರಾಷ್ಟ್ರೀಯ ಹಿಂದೂ ಪರಿಷತ್‌ ಸಂಘಟನೆ ಕಟ್ಟಿದರು. 

ಮಸೀದಿಗಾಗಿ ಹೋರಾಡಿದವರು

ಹಾಶಿಮ್ ಅನ್ಸಾರಿ

ಹಾಶಿಮ್ ಅನ್ಸಾರಿ (95) ಅವರು ಬಾಬರಿ ಮಸೀದಿ ಪ್ರಕರಣದ ಅತಿಹಿರಿಯ ಅರ್ಜಿದಾರರು. ಜುಲೈ 20ರಂದು ಅವರು ನಿಧನರಾದರು. ಅಯೋಧ್ಯೆಯಲ್ಲಿ ಜನಿಸಿದ್ದ ಅನ್ಸಾರಿ ತಮ್ಮ ತಂದೆಯ ಟೈಲರ್ ವೃತ್ತಿಯನ್ನು ಮುಂದುವರಿಸಿದರು. ತುರ್ತು ಪರಿಸ್ಥಿತಿಯಲ್ಲಿ ಕೆಲ ತಿಂಗಳು ಜೈಲುವಾಸ ಅನುಭವಿಸಿದರು. ಬಳಿಕ ಸೈಕಲ್ ದುರಸ್ತಿ ಕೆಲಸ ಮಾಡಲಾರಂಭಿಸಿದರು. 

1949ರಿಂದಲೂ ಬಾಬರಿ ಮಸೀದಿ ಪ್ರಕರಣದ ಜತೆ ಇವರು ಗುರುತಿಸಿಕೊಂಡಿದ್ದರು. ಮಸೀದಿಯಲ್ಲಿ ವಿಗ್ರಹಗಳನ್ನು ಇರಿಸಿದ ಘಟನೆಯ ಬಳಿಕ ಶಾಂತಿ ಕದಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದರು. ವಿವಾದಿತ ಮಸೀದಿ ಜಾಗದಲ್ಲಿ ನಮಾಜ್‌ಗೆ ಕರೆ ನೀಡಿದ್ದ ಕಾರಣ 1952ರಲ್ಲಿ ಫೈಜಾಬಾದ್ ಕೋರ್ಟ್ ಇವರಿಗೆ 2 ವರ್ಷ ಶಿಕ್ಷೆ ವಿಧಿಸಿತ್ತು. 1961ರಲ್ಲಿ ಅಯೋಧ್ಯೆ ನಿವೇಶನ ವಿವಾದ ಪ್ರಕರಣದಲ್ಲಿ ಅರ್ಜಿ ಸಲ್ಲಿಸಿದ್ದ ಆರು ಜನರ ಪೈಕಿ ಇವರೂ ಒಬ್ಬರು. ಮುಸ್ಲಿಂ ಕಕ್ಷಿದಾರರ ಪೈಕಿ ಅತಿಹೆಚ್ಚು ವರ್ಷ ಬದುಕಿದ್ದವರು ಹಾಶಿಮ್‌ ಅನ್ಸಾರಿ. ಇವರ ನಿಧನಾನಂತರ ಪುತ್ರ ಇಕ್ಬಾಲ್ ಅನ್ಸಾರಿ ಅವರು ಕಕ್ಷಿದಾರರಾದರು. 

ಎಂ. ಸಿದ್ದಿಕ್
ಸಿದ್ದಿಕ್ ಅವರು ಪ್ರಕರಣದ ಮೂಲ ಅರ್ಜಿದಾರರು. ಇವರು ಉತ್ತರ ಪ್ರದೇಶದ ಜಮಿಯತ್ ಉಲೇಮಾ ಎ ಹಿಂದ್‌ನ ಪ್ರಧಾನ ಕಾರ್ಯದರ್ಶಿ. ಇವರ ನಿಧನಾನಂತರ ಮೌಲಾನಾ ಅಶದ್ ರಶೀದಿ ಅವರು ಅರ್ಜಿದಾರರಾದರು. 

ಹಾಜಿ ಫೆಂಕು


ಹಾಜಿ ಫೆಂಕು ಅವರ ಪುತ್ರ ಹಾಜಿ ಮೆಹಬೂಬ್

ಪ್ರಕರಣದ ಪ್ರಮುಖ ಕಕ್ಷಿದಾರ ಎಂದು ಗುರುತಿಸಿಕೊಂಡವರು ಹಾಜಿ ಫೆಂಕು. ಆಗಿನ ಕಾಲಕ್ಕೆ ಅಯೋಧ್ಯೆಯ ಸಿರಿವಂತರಲ್ಲಿ ಒಬ್ಬರು. ಪ್ರಕರಣವೊಂದರಲ್ಲಿ ಅಯೋಧ್ಯೆಯ ಐವರು ಸ್ಥಳೀಯ ಕಕ್ಷಿದಾರರಲ್ಲಿ ಇವರೂ ಇಬ್ಬರಾಗಿದ್ದರು. 1960ರಲ್ಲಿ ಇವರ ನಿಧನಾನಂತರ ಪುತ್ರ ಹಾಜಿ ಮೆಹಬೂಬ್ ಅಹಮದ್ ಪ್ರಕರಣವನ್ನು ಮುಂದುವರಿಸಿದರು. 

ಪ್ರತಿಕ್ರಿಯಿಸಿ (+)