ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್ ಭವನದಲ್ಲಿ ಪ್ಲಾಸ್ಟಿಕ್ ಬಾಟಲಿ, ವಸ್ತುಗಳಿಗೆ ನಿಷೇಧ

Last Updated 25 ಸೆಪ್ಟೆಂಬರ್ 2019, 6:34 IST
ಅಕ್ಷರ ಗಾತ್ರ

ನವದೆಹಲಿ: ಸಂಸತ್ ಭವನದ ಆವರಣದಲ್ಲಿ ಪ್ಲಾಸ್ಟಿಕ್ ಬಾಟಲಿ ಮತ್ತು ಇತರ ಪ್ಲಾಸ್ಟಿಕ್ ವಸ್ತುಗಳ ಬಳಕೆಗೆ ನಿರ್ಬಂಧ ಹೇರಲಾಗಿದೆ.ಸಂಸದರು ಬಳಸುತ್ತಿರುವ ಪ್ಲಾಸ್ಟಿಕ್‌ನಿಂದ ಭಾರೀ ಬೆಲೆ ತೆರಬೇಕಾಗಿ ಬಂದಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದ್ದರು.

ಸಂಸತ್ತಿನ ಆವರಣದಲ್ಲಿ ಪ್ರತಿದಿನ ಸುಮಾರು 2,000 ರೈಲ್ ನೀರ್ ಬಾಟಲಿಗಳನ್ನು ಖರೀದಿ ಮಾಡಲಾಗುತ್ತಿದೆ ಎಂದು ನೀರಿನ ಬಾಟಲಿ ವ್ಯವಹಾರ ಮಾಡುತ್ತಿರುವ ಇಬ್ಬರು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಸಂಸತ್ ಆವರಣದಲ್ಲಿ ಪ್ಲಾಸ್ಟಿಕ್ ಬಾಟಲಿ ಮತ್ತು ಇತರ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲಾಗಿದೆ ಎಂದು ಆಗಸ್ಟ್ 19ರಂದು ಸುತ್ತೋಲೆ ಹೊರಡಿಸಲಾಗಿತ್ತು. ಇದಾದ ನಂತರ 600000 ಬಾಟಲಿಗಳ ಬಳಕೆ ದಿಢೀರನೆ ನಿಂತಿದೆ. ಎಲ್ಲ ಸಭೆಗಳಲ್ಲಿ ಪ್ಲಾಸ್ಟಿಕ್ ಬಾಟಲಿ ಬದಲು ಗಾಜಿನ ಲೋಟದಲ್ಲಿ ನೀರು ತುಂಬಿಸಿಡಲಾಗುತ್ತಿದ್ದು, ಹೆಚ್ಚಿನ ಅಧಿಕಾರಿಗಳು ಮನೆಯಿಂದ ಬಾಟಲಿಯಲ್ಲಿ ನೀರು ತರಲು ಆರಂಭಿಸಿದ್ದಾರೆ.

ಜನರು ಸಂಸತ್ ಆವರಣದೊಳಗೆ ಪ್ಲಾಸ್ಟಿಕ್ ಬ್ಯಾಗ್ ಅಥವಾ ಇತರ ವಸ್ತುಗಳನ್ನು ತರುತ್ತಿದ್ದಾರೆಯೇ ಎಂದು ತಪಾಸಣೆ ಮಾಡಲಾಗುತ್ತದೆ. ಪ್ಲಾಸ್ಟಿಕ್ ಬಳಸದಂತೆ ಅವರಿಗೆ ಮನವಿ ಮಾಡಲಾಗುತ್ತದೆ ಎಂದು ಸಂಸತ್ತಿನ ಸುರಕ್ಷಾ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಒಂದು ಬಾರಿಬಳಸಿ ಎಸೆಯುವ ಪ್ಲಾಸ್ಟಿಕ್ ಉಪಯೋಗವನ್ನು ನಿಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಕರೆ ನೀಡಿದ್ದರು.

ಸಂಸತ್ ಭವನದ ಕಟ್ಟಡ, ಲೈಬ್ರರಿ ಮತ್ತು ಇತರ ಭಾಗಗಳಲ್ಲಿ ನೀರಿನ ಪಾತ್ರೆಗಳನ್ನು ಇರಿಸುವ ಮೂಲಕ ಜನರಿಗೆ ಸುಲಭವಾಗಿ ನೀರು ಲಭ್ಯವಾಗುವಂತೆ ಮಾಡಲಾಗುವುದು. ಇಲ್ಲಿ ಪೇಪರ್ ಕಪ್‌ಗಳನ್ನು ಇರಿಸಲಾಗುವುದು ಎಂದು ಲೋಕಸಭಾ ಸ್ಪೀಕರ್ ಕಚೇರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿಯಲ್ಲಿ ಉಲ್ಲೇಖಿಸಿದೆ.

ಸಂಸತ್‌ನಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಪ್ರಯತ್ನ ಮಾಡಿದ್ದು ಇದೇ ಮೊದಲೇನೂ ಅಲ್ಲ. 2015 ಜೂನ್ ತಿಂಗಳಲ್ಲಿ ಪ್ಲಾಸ್ಟಿಕ್ ನಿಷೇಧಿಸುವ ಬಗ್ಗೆ ಲೋಕಸಭಾ ಕಾರ್ಯಾಲಯ ಆದೇಶಿಸಿತ್ತು. ಆ ಮೇಲೆ 2017 ಮೇ, 2018 ಏಪ್ರಿಲ್‌ ತಿಂಗಳಲ್ಲಿಯೂ ಪ್ಲಾಸ್ಟಿಕ್ ನಿಷೇಧ ಬಗ್ಗೆ ಆದೇಶ ಹೊರಡಿಸಲಾಗಿತ್ತು. ಆದರೆ ಈ ಹಿಂದೆ ಹೊರಡಿಸಿದ್ದ ಯಾವುದೇ ಆದೇಶಗಳ ಪಾಲನೆ ಆಗಿರಲಿಲ್ಲ. ಪ್ಲಾಸ್ಟಿಕ್ ನಿಷೇಧಿಸಬೇಕು ಎಂದು ಹೇಳಿದರೂ ಜನರು ಅದನ್ನು ಕಡೆಗಣಿಸಿ ಪ್ಲಾಸ್ಟಿಕ್ ಬಾಟಲಿಗಳ ಬಳಕೆ ಮುಂದುವರಿಸಿದ್ದರು. ಈ ಬಾರಿ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ ಎಂದು ಜಂಟಿ ಕಾರ್ಯದರ್ಶಿ ದರ್ಜೆಯ ಅಧಿಕಾರಿ ಹೇಳಿದ್ದಾರೆ.

ಈ ಬಾರಿಯ ಆದೇಶ ಭಿನ್ನವಾಗಿದೆ. ಕಳೆದ ವಾರ ಸಂಸದೀಯ ಸಮಿತಿಯ ಸದಸ್ಯರು ಸಭೆ ಸೇರಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಸಹಮತ ವ್ಯಕ್ತ ಪಡಿಸಿದ್ದರು. ಬಾಯಾರಿಕೆಯಾದಾಗ ಸಂಸದರು ಆರ್‌ಒ ನೀರನ್ನು ಲೋಟದಲ್ಲಿಯೇ ಕುಡಿಯಬೇಕಿದೆ ಎಂದು ಸಮಿತಿ ಹೇಳಿದೆ.

ಕಾರ್ಮಿಕರ ಸ್ಥಾಯಿ ಸಮಿತಿ ಅಧ್ಯಕ್ಷ ಮತ್ತು 6 ಬಾರಿ ಸಂಸದರಾಗಿರುವ ಭತೃಹರಿಮಹತಾಬ್ ಪ್ಲಾಸ್ಟಿಕ್ ರಹಿತ ಅಭಿಯಾನವನ್ನು ಸ್ವಾಗತಿಸಿದ್ದಾರೆ. 15 ವರ್ಷಗಳ ಹಿಂದೆ ಸಂಸದರು ಸಭೆ ಸೇರುವಾಗ ಅಲ್ಲಿ ನೀರು ಅಥವಾ ತಿಂಡಿ ಪೂರೈಕೆಯಾಗುತ್ತಿರಲಿಲ್ಲ. ಸಮಿತಿ ಸಭೆಗೆ ನೀರು ಅಥವಾ ಆಹಾರವನ್ನು ಕೊಂಡೊಯ್ಯುವಂತಿರಲಿಲ್ಲ. 2004 ಮತ್ತು 2005ರಲ್ಲಿ ಕೆಲವು ಸಂಸದರು ಈ ಬಗ್ಗೆ ದನಿಯೆತ್ತಿದಾಗ ಸಭೆಗಳಿಗೆ ನೀರಿನ ಬಾಟಲಿ ಪೂರೈಸುವ ಕಾರ್ಯವನ್ನು ಕಾರ್ಯಾಲಯ ಆರಂಭಿಸಿತು. ಅಲ್ಲಿಂದ ಇಲ್ಲಿಯವರೆಗೆ ನೀರಿನ ಬಾಟಲಿ ಪೂರೈಕೆ ಮಾಡುವ ಪದ್ದತಿ ಮುಂದುವರಿಯುತ್ತಾ ಬಂದಿದೆ ಎಂದು ಮಹತಾಬ್ ಹೇಳಿದ್ದಾರೆ.

ಸದನದೊಳಗೆಯೂ ನೀರಿನ ಬಾಟಲಿ ಕೊಂಡೊಯ್ಯುವಂತಿಲ್ಲ. ದೇಶದ ಪ್ರಧಾನಿ ಅಥವಾ ಯಾವುದೇ ಸಂಸದರಿಗೆ ಬಾಯಾರಿಕೆಯಾದರೆಲೋಟದಲ್ಲಿ ನೀರು ತರುವಂತೆ ಹೇಳಬೇಕು. ಸುದೀರ್ಘವಾದ ಭಾಷಣದ ಹೊತ್ತಲ್ಲಿ ಪ್ರಧಾನಿ ಅಥವಾ ವಿತ್ತ ಸಚಿವರು ನೀರು ಕುಡಿಯುತ್ತಾರೆ. ದೇಶದ ಪ್ರಧಾನಿ ಸಂಸತ್ತಿನಲ್ಲಿರುವ ಆರ್‌ಒ ನೀರಿನ ಘಟಕದಿಂದ ನೀರು ಕುಡಿಯುವುದಾದರೆ ಇತರರೂ ಅದೇ ನೀರು ಕುಡಿಯಬಹುದಲ್ಲವೇ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸಂಸದರ ಕೊಠಡಿ ಬಳಿಯೇ ನೀರು ಪೂರೈಕೆ ಮಾಡುವ ಘಟಕ ಇದೆ. ಅಲ್ಲಿ ಬಿಸಿ ನೀರು, ತಣ್ಣೀರು ಎಲ್ಲವೂ ಸಿಗುತ್ತದೆ.

ಆದಾಗ್ಯೂ, ಸಂಸತ್ ಆವರಣದಲ್ಲಿ ಪೂರೈಕೆಯಾಗುತ್ತಿರುವ ನೀರು ಶುದ್ಧವಾಗಿದೆ ಎಂಬುದನ್ನು ಒಪ್ಪಲು ಕೆಲವರು ಸಿದ್ಧರಿಲ್ಲ. ಕೆಳಮಹಡಿಯಲ್ಲಿ ಕಾರ್ಯವೆಸಗುತ್ತಿರುವ ಅಧಿಕಾರಿಯೊಬ್ಬರು ತಾವು ಮನೆಯಿಂದಲೇ ನೀರು ತರುವುದಾಗಿ ಹೇಳಿದ್ದಾರೆ. ಅದೇ ವೇಳೆ ವಿದೇಶಿ ಪ್ರತಿನಿಧಿಗಳು ಸಂಸತ್‌ಗೆ ಬಂದಾಗ ನವದೆಹಲಿಯ ಮುನ್ಸಿಪಲ್ ಕೌನ್ಸಿಲ್ ಪೂರೈಕೆ ಮಾಡುವ ನೀರನ್ನು ಕುಡಿಯುವಂತೆ ಅವರ ಮನವೊಲಿಸುವುದು ಕಷ್ಟದ ಕೆಲಸ ಎಂದಿದ್ದಾರೆ.

ಯುಪಿಎ ಅಧಿಕಾರದಲ್ಲಿದ್ದಾಗ ಪ್ರಾಣಿಯೊಂದು ನೀರಿನ ಟ್ಯಾಂಕ್‌ಗೆ ಬಿದ್ದು ಸತ್ತಿತ್ತು. ಅದೇ ನೀರನ್ನು ಕುಡಿದು ಹಲವಾರು ಸಂಸದರು ಅಸ್ವಸ್ಥರಾಗಿದ್ದರು ಎಂದು ಅಧಿಕಾರಿಯೊಬ್ಬರು ಹಳೇ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಸಂಸತ್ ಭವನದ ಮೂರನೇ ಮಹಡಿಯಲ್ಲಿ ನೀರಿನ ಬೃಹತ್ ಟ್ಯಾಂಕ್ ಇದ್ದು, ಅಲ್ಲಿ ಯಾವುದೇ ಪ್ರಾಣಿಗಳು ಪ್ರವೇಶಿಸದಂತೆ ಸುರಕ್ಷಾ ಕ್ರಮಗಳನ್ನು ವಹಿಸಲಾಗಿದೆ. ಎನ್‌ಡಿಎಂಸಿ ಪ್ರತಿದಿನ ನೀರಿನ ಗುಣಮಟ್ಟವನ್ನು ಪರೀಕ್ಷಿಸುತ್ತದೆ. ಟ್ಯಾಂಕ್ ನೀರು ಕುಡಿಯಲು ಯೋಗ್ಯವಾದ ನೀರು ಆಗಿದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

ಅದೇ ವೇಳೆ ಈ ನಿಷೇಧ ಎಷ್ಟು ದಿನಗಳ ವರೆಗೆ ಇರುತ್ತದೆ ಎಂಬುದು ಕೆಲವರಿಗೆ ಕುತೂಹಲವಿದೆ. ತಂಪು ಪಾನೀಯಗಳಲ್ಲಿ ಹಲವಾರು ರೀತಿಯ ವಿಷ ಪದಾರ್ಥಗಳಿರುತ್ತವೆ ಎಂಬ ಕಾರಣದಿಂದ 2004ರಲ್ಲಿ ಅದನ್ನು ನಿಷೇಧಿಸಲಾಗಿತ್ತು. ಅಲ್ಲಿಂದ ಇಲ್ಲಿಯವರಿಗೆ ಸಂಸತ್ ಆವರಣದಲ್ಲಿ ಪೆಪ್ಸಿ ಅಥವಾ ಕೋಕ್‌ ತರುವುದಕ್ಕೆ ನಿಷೇಧವಿದೆ.

ಜಗತ್ತಿನಲ್ಲಿಪ್ಲಾಸ್ಟಿಕ್ ದೊಡ್ಡ ಪ್ರಮಾಣದ ಹಾನಿಯನ್ನುಂಟು ಮಾಡಿದೆ. ಭಾರತದ ಸಂಸತ್ ಸರಿಯಾದ ನಿರ್ಧಾರ ತೆಗೆದುಕೊಂಡು ಎಲ್ಲರಿಗೂ ಮಾದರಿಯಾಗಿದೆ. ಸರ್ಕಾರದ ಎಲ್ಲ ಕಚೇರಿಗಳಲ್ಲಿಯೂ ಪ್ಲಾಸ್ಟಿಕ್ ನಿಷೇಧ ಆಗಬೇಕು ಎಂದು ಸಂಸದೀಯ ವ್ಯವಹಾರಗಳ ಮಾಜಿ ಕಾರ್ಯದರ್ಶಿ ಅಫ್ಜಲ್ ಅಮಾನುಲ್ಲಾ ಅಭಿಪ್ರಾಯ ಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT