ಸೋಮವಾರ, ಮಾರ್ಚ್ 8, 2021
25 °C
ಕೊಲಿಜಿಯಂ ಪ್ರಶ್ನಿಸಿ ಪ್ರಧಾನಿಗೆ ಪತ್ರ ಬರೆದ ನ್ಯಾಯಮೂರ್ತಿ

ಜಡ್ಜ್‌ಗಳ ನೇಮಕದಲ್ಲಿ ಸ್ವಜನಪಕ್ಷಪಾತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ: ‘ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಜಾತಿ ಮತ್ತು ಸ್ವಜನಪಕ್ಷಪಾತವೇ ಮುಖ್ಯ ಮಾನದಂಡವಾಗುತ್ತಿದೆ’ ಎಂದು ಅಲಹಾಬಾದ್‌ ಹೈಕೋರ್ಟ್‌ನ ಲಖನೌ ಪೀಠದ ನ್ಯಾಯಮೂರ್ತಿ ರಂಗನಾಥ್‌ ಪಾಂಡೆ ದೂರಿದ್ದಾರೆ.

ನ್ಯಾಯಮೂರ್ತಿಗಳ ನೇಮಕಾತಿಗೆ ರೂಪಿಸಿರುವ ಕೊಲಿಜಿಯಂ ವ್ಯವಸ್ಥೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪಾಂಡೆ ಅವರು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

‘ಸುಪ್ರೀಂ’, ಹೈಕೋರ್ಟ್‌ ನ್ಯಾಯಮೂರ್ತಿಗಳ ನೇಮಕ ಪಾರದರ್ಶಕವಾಗಿ ನಡೆಯುತ್ತಿಲ್ಲ.ಹೀಗಾಗಿ, ಕೊಲಿಜಿಯಂ ವ್ಯವಸ್ಥೆ ಬದಲಾಯಿಸಬೇಕು’ ಎಂದು ಕೋರಿದ್ದಾರೆ.

‘ನ್ಯಾಯಾಂಗ ವ್ಯವಸ್ಥೆಗೂ ಜಾತಿ ಮತ್ತು ಸ್ವಜನಪಕ್ಷಪಾತ ಅಂಟಿಕೊಂಡಿರುವುದು ದುರದೃಷ್ಟಕರ. ನ್ಯಾಯಮೂರ್ತಿಗಳ ಕುಟುಂಬದ ಸದಸ್ಯರೇ ಮುಂದಿನ ನ್ಯಾಯಮೂರ್ತಿ ನೇಮಕವನ್ನು ನಿರ್ಧರಿಸುತ್ತಾರೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಹಿರಿಯ ನ್ಯಾಯಮೂರ್ತಿಗಳ ಶಿಫಾರಸಿನ ಆಧಾರದ ಮೇಲೆ ಚಹಾ ಕೂಟಗಳಲ್ಲಿ ನ್ಯಾಯಮೂರ್ತಿಗಳ ನೇಮಕಾತಿ ನಡೆಯುತ್ತಿದೆ. ಇಡೀ ಪ್ರಕ್ರಿಯೆಯನ್ನು ರಹಸ್ಯವಾಗಿಡಲಾಗುತ್ತದೆ. ನೇಮಕಾತಿ ಪ್ರಕ್ರಿಯೆ ಮುಕ್ತಾಯವಾದ ಬಳಿಕವೇ ನ್ಯಾಯಮೂರ್ತಿಗಳ ಹೆಸರನ್ನು ಬಹಿರಂಗಪಡಿಸಲಾಗುತ್ತದೆ’ ಎಂದು ತಿಳಿಸಿದ್ದಾರೆ.

‘ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವನ್ನು ಸುಪ್ರೀಂ ಕೋರ್ಟ್‌ ಅಸಂವಿಧಾನಿಕ ಎಂದು ಹೇಳಿತ್ತು. ನ್ಯಾಯಾಲಯ ಅಧಿಕಾರದಲ್ಲಿ ಈ ಆಯೋಗ ಹಸ್ತಕ್ಷೇಪ ಮಾಡುತ್ತಿದೆ ಎನ್ನುವ ಆಕ್ಷೇಪ ವ್ಯಕ್ತಪಡಿಸಿತ್ತು’ ಎನ್ನುವುದನ್ನು ಸಹ ಪಾಂಡೆ ತಿಳಿಸಿದ್ದಾರೆ.

‘ಸುಪ್ರೀಂ ಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳು ಕಳೆದ ವರ್ಷ ನಡೆಸಿದ ಪತ್ರಿಕಾಗೋಷ್ಠಿಯು ನ್ಯಾಯಾಂಗ ವ್ಯವಸ್ಥೆಯನ್ನು ಅನುಮಾನದಿಂದ ನೋಡುವಂತೆ ಮಾಡಿದೆ’ ಎನ್ನುವುದನ್ನು ಪ್ರಸ್ತಾಪಿಸಿದ್ದಾರೆ.

‘ನಿಮ್ಮ (ಮೋದಿ) ಪ್ರಕರಣವನ್ನು ಸಹ ಮರುವಿಚಾರಣೆಗೆ ಆದೇಶ ನೀಡಿದ್ದು ಎಲ್ಲರಿಗೂ ಆಶ್ಚರ್ಯ ಮೂಡಿಸಿತ್ತು’ ಎಂದು ಹೇಳಿದ್ದಾರೆ.

‘ನ್ಯಾಯಾಂಗದ ಘನತೆ ಕಾಪಾಡಲು ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಿದೆ. ಈ ಮೂಲಕ ಅತ್ಯಂತ ಬಡತನ ಹಿನ್ನೆಲೆಯ ವ್ಯಕ್ತಿಯೊಬ್ಬರು ಸಹ ಸುಪ್ರಿಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗುತ್ತಾರೆ ಎನ್ನುವುದನ್ನು ಕೇಳಿ ನಾವು ತೃಪ್ತಿಪಡುತ್ತೇವೆ’ ಎಂದು ಹೇಳಿದ್ದಾರೆ.

2ನೇ ಬಾರಿ ಪ್ರಧಾನಿಯಾಗಿರುವುದಕ್ಕೆ ಅಭಿನಂದಿಸಿರುವ ಪಾಂಡೆ, ಜಯದಿಂದ ಭಾರತದ ರಾಜಕಾರಣದಲ್ಲಿನ ವಂಶಪರಂಪರೆ ತೊಡೆದು ಹಾಕಿದಂತಾಗಿದೆ’ ಎಂದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು