ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು: ರಾಜೀನಾಮೆ ನೀಡಿದ ಪಿ.ಸಿ. ಚಾಕೋ

Last Updated 12 ಫೆಬ್ರುವರಿ 2020, 9:57 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದ ಬಳಿಕ ದೆಹಲಿ ಕಾಂಗ್ರೆಸ್ ಉಸ್ತುವಾರಿ ಸ್ಥಾನಕ್ಕೆ ಪಿ.ಸಿ. ಚಾಕೋ ಬುಧವಾರ ರಾಜೀನಾಮೆ ನೀಡಿದ್ದಾರೆ.

ಸುದ್ದಿಸಂಸ್ಥೆ ಎಎನ್ಐನೊಂದಿಗೆ ಮಾತನಾಡಿರುವ ಅವರು, 2013ರಲ್ಲಿ ಶೀಲಾ ದೀಕ್ಷಿತ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿಂದಲೇಕಾಂಗ್ರೆಸ್‌ನ ಪ್ರಗತಿ ಇಳಿಮುಖವಾಗುತ್ತಾ ಬಂತು.ಆಮ್ ಆದ್ಮಿ ಪಕ್ಷ ಉದಯಿಸಿದ್ದರಿಂದಾಗಿ ಕಾಂಗ್ರೆಸ್ ಜನಪ್ರಿಯತೆ ಕುಗ್ಗಲು ಕಾರಣವಾಯಿತು. ಕಾಂಗ್ರೆಸ್‌ನ ಮತಬ್ಯಾಂಕ್ ಎಎಪಿ ಕಡೆಗೆ ಹೋಗಿತ್ತು. ಆ ವೋಟ್‌ ಬ್ಯಾಂಕ್‌ ಅನ್ನು ಮತ್ತೆ ನಮ್ಮತ್ತ ಸೆಳೆಯಲು ನಾವು ವಿಫಲರಾದೆವು ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ದೆಹಲಿ ಮುಖ್ಯಸ್ಥ ಸುಭಾಷ್ ಚೋಪ್ರಾ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಸೋಲಿಗೆ ಶೀಲಾ ದೀಕ್ಷಿತ್ ಕಾರಣ ಎನ್ನುವ ಮಾತಿಗೆ ಸ್ಪಷ್ಟೀಕರಣ ಕೊಟ್ಟಿರುವ ಚಾಕೋ, ಶೀಲಾ ದೀಕ್ಷಿತ್ ಅವರ ಕಾಲದಲ್ಲಿ ಸೋತಿದ್ದೇವೆ ಎಂದು ನಾನು ಹೇಳಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾವು 2013ರಲ್ಲಿ ಸೋತೆವು. ಅದರಂತೆ 2014, 2015 ಮತ್ತು 2017ರಲ್ಲೂ ಕೂಡ ಸೋತೆವು. ಈ ಸಮಸ್ಯೆ ಸೃಷ್ಟಿಯ ಹಿಂದೆ ಯಾರಿದ್ದಾರೆ ಎನ್ನುವುದು ನನಗೆ ತಿಳಿದಿದೆ. ನನ್ನ ವಿರುದ್ಧ ಈ ರೀತಿಯ ಆರೋಪ ಮಾಡಲಾಗುತ್ತಿದೆ. ಇದೇನು ಮೊದಲಲ್ಲ ಎಂದು ಎಎನ್‌ಐನೊಂದಿಗೆ ಮಾತನಾಡಿದ್ದಾರೆ.

ಅರವಿಂದ ಕೇಜ್ರಿವಾಲ್ ನೇತೃತ್ವದ ಆಡಳಿತಾರೂಢ ಎಎಪಿಯು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ 62 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಮೂರನೇ ಬಾರಿಗೆ ದೆಹಲಿ ಗದ್ದುಗೆ ಹಿಡಿಯಲು ಸಿದ್ಧತೆ ಕೈಗೊಂಡಿದೆ. ಉಳಿದಂತೆ ಬಿಜೆಪಿ ಕೇವಲ ಎಂಟು ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ.2015ರಲ್ಲಿ ಎಎಪಿ 67 ಸ್ಥಾನಗಳಲ್ಲಿ ಜಯಗಳಿಸಿದರೆ, ಬಿಜೆಪಿಯು 3 ಸ್ಥಾನಗಳಲ್ಲಿ ಜಯಗಳಿಸಿತ್ತು.

ಕಾಂಗ್ರೆಸ್ ಸೇರಿದಂತೆ ಇನ್ನಿತರ ಪ್ರಾದೇಶಿಕ ಪಕ್ಷಗಳು ಶೂನ್ಯ ಸಾಧನೆಗಷ್ಟೇ ಸೀಮಿತವಾಗಿವೆ. 2015ರಲ್ಲಿ ಶೇ 9.7ರಷ್ಟು ಮತಗಳಿಸಿದ್ದ ಕಾಂಗ್ರೆಸ್, ಈ ಬಾರಿ ಶೇ 4.27ಕ್ಕೆ ಇಳಿಕೆಯಾಗಿದೆ. ಶೀಲಾ ದೀಕ್ಷಿತ್ ಅವರು 1998ರಿಂದ 2013ರವರೆಗೆ ದೆಹಲಿ ಮುಖ್ಯಮಂತ್ರಿಯಾಗಿದ್ದರು. 2019ರ ಜುಲೈನಲ್ಲಿ ನಿಧನ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT