ಬುಧವಾರ, ಏಪ್ರಿಲ್ 21, 2021
23 °C
ಆಹಾರ ಉತ್ಪನ್ನಗಳ ಪ್ಯಾಕಿಂಗ್‌ಗೆ ಪ್ಲಾಸ್ಟಿಕ್ ಬಳಕೆ

ತನಿಖೆಗೆ ತಜ್ಞರ ಸಮಿತಿ ರಚಿಸಿದ ಎನ್‌ಜಿಟಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಆಹಾರ ಉತ್ಪನ್ನಗಳ ಪ್ಯಾಕಿಂಗ್‌ಗೆ ಪ್ಲಾಸ್ಟಿಕ್ ಬಳಸುವುದಕ್ಕೆ ನಿರ್ಬಂಧ ಹೇರಿ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳುವ ಅಗತ್ಯ ಇದೆಯೆ ಎಂದು ತನಿಖೆ ನಡೆಸಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ತಜ್ಞರ ಸಮಿತಿ ರಚಿಸಿದೆ. 

ಎನ್‌ಜಿಟಿ ಮುಖ್ಯಸ್ಥ ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯಲ್ ನೇತೃತ್ವದ ನ್ಯಾಯಪೀಠ ರಚಿಸಿರುವ ಸಮಿತಿಯಲ್ಲಿ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಮಾಪನ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ), ಭಾರತೀಯ ಗುಣಮಟ್ಟ ಮಾಪನ ಮಂಡಳಿ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಆರೋಗ್ಯ ಸೇವೆಗಳ ಪ್ರಧಾನ ನಿರ್ದೇಶನಾಲಯದ ಪ್ರತಿನಿಧಿಗಳು ಇದ್ದಾರೆ. 

‘ಈ ಸಮಿತಿಗೆ ಎಫ್‌ಎಸ್‌ಎಸ್‌ಎಐ ನೋಡಲ್‌ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ. ಬೇರೆ ಸಂಸ್ಥೆಗಳು ಅಥವಾ ತಜ್ಞರನ್ನು ಸಮಿತಿಗೆ ಸದಸ್ಯರನ್ನಾಗಿ ನೇಮಿಸಿಕೊಳ್ಳಲು ಅಧಿಕಾರ ನೀಡಲಾಗಿದೆ. ಮೂರು ತಿಂಗಳ ಒಳಗಾಗಿ ಇ–ಮೇಲ್ ಮುಖಾಂತರ ವರದಿ ಸಲ್ಲಿಸಬೇಕು’ ಎಂದು ನ್ಯಾಯಪೀಠ ಹೇಳಿದೆ. 

ಪ್ಲಾಸ್ಟಿಕ್ ಬಾಟಲ್‌ಗಳು/ಪ್ಯಾಕಿಂಗ್‌ಗೆ ಬಳಸುವ ಬಹುಪದರಗಳ ಪ್ಲಾಸ್ಟಿಕ್ ಕವರ್‌ಗಳ ಬಳಕೆ ನಿಷೇಧ ಕೋರಿ ಹಿಮ ಜಾಗೃತಿ ಉತ್ತರಾಂಚಲ ಕ್ಷೇಮಾಭಿವೃದ್ಧಿ ಸೊಸೈಟಿ ಸಲ್ಲಿಸಿದ್ದ ಅರ್ಜಿಯನ್ನು ಎನ್‌ಜಿಟಿ ವಿಚಾರಣೆ ನಡೆಸಿತು. 

‘ಯಾವುದೇ ಪರ್ಯಾಯಗಳಿಲ್ಲದೆ ತಕ್ಷಣವೇ ಬಹುಪದರಗಳ ಪ್ಲಾಸ್ಟಿಕ್ ಕವರ್‌ಗಳ ಬಳಕೆ ನಿರ್ಬಂಧಕ್ಕೆ ನಿಯಮ ರೂಪಿಸುವುದು ಸಾಧ್ಯವಿಲ್ಲ’ ಎನ್ನುವ ಪರಿಸರ ಮತ್ತು ಅರಣ್ಯ ಸಚಿವಾಲಯದ ನಿಲುವನ್ನು ನ್ಯಾಯಮಂಡಳಿ ಉಲ್ಲೇಖಿಸಿತು. 

ಆದರೆ ಸಚಿವಾಲಯ ಕೇವಲ ಪ್ಲಾಸ್ಟಿಕ್ ಕಸಗಳ ನಿರ್ವಹಣೆ ಕುರಿತು ಗಮನವಹಿಸಿದೆ ಹೊರತು ಪ್ಯಾಕಿಂಗ್‌ಗೆ ಬಳಕೆ ಮಾಡುವ ಪ್ಲಾಸ್ಟಿಕ್‌ ಕವರ್‌ಗಳ ಬಗ್ಗೆ ನಿರ್ಬಂಧ ಹೇರಿಲ್ಲ ಎಂದು ನ್ಯಾಯಮಂಡಳಿಗೆ ಎನ್‌ಜಿಒ ತಿಳಿಸಿತು. ಮುಂದಿನ ವಿಚಾರಣೆಯನ್ನು ನ್ಯಾಯಮಂಡಳಿ ಅ.14ಕ್ಕೆ ನಿಗದಿಪಡಿಸಿದೆ.

‘ಆರೋಗ್ಯ, ಪರಿಸರಕ್ಕೆ ಪ್ರತಿಕೂಲ ಪರಿಣಾಮ’

‘ಪಾಲಿಇಥೈಲಿನ್ ಟೆರೆಫ್ತಲೇಟ್ (ಪಿಇಟಿ) ಬಾಟಲ್‌ಗಳು, ಟೆಟ್ರಾಪ್ಯಾಕ್‌ಗಳಂತಹ ಬಹುಪದರಗಳ ‍ಪ್ಲಾಸ್ಟಿಕ್ ಪ್ಯಾಕೇಜ್‌ಗಳ ಬಳಕೆಯಿಂದ ಆರೋಗ್ಯ ಮತ್ತು ಪ‍ರಿಸರದ ಮೇಲೆ ಪ್ರತಿಕೂಲ ಪರಿಣಾಮಗಳಾಗುತ್ತವೆ. ಪ‍್ಲಾಸ್ಟಿಕ್ ಕಸಗಳ ಪ್ರಮಾಣವೂ ಹೆಚ್ಚುತ್ತದೆ’ ಎಂದು ಎನ್‌ಜಿಒ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಲಾಗಿದೆ. 

‘ಪ್ಲಾಸ್ಟಿಕ್ ಕಸ ನಿರ್ವಹಣೆ ನಿಯಮಾವಳಿಗಳು ಸಮರ್ಥವಾಗಿಲ್ಲ ಎಂದು ಸಚಿವಾಲಯ ಸ್ವತಃ ಹೇಳಿದೆ. ಆಹಾರ ಸುರಕ್ಷತೆ ಮತ್ತು ಮಾನದಂಡ 2006 ಕಾಯ್ದೆ ಅಡಿಯಲ್ಲಿ, ಪ್ಯಾಕೇಜಿಂಗ್ ಆ್ಯಂಡ್ ಲೇಬಲಿಂಗ್ ನಿಯಂತ್ರಣ 2018 ನಿಯಮಾವಳಿ, ಪ್ಲಾಸ್ಟಿಕ್ ಪ್ಯಾಕೇಜಿಂಗ್ ಸಮಸ್ಯೆಯನ್ನು ನಿರ್ವಹಿಸುವಷ್ಟು ಸಮರ್ಥವಾಗಿಲ್ಲ’ ಎಂದು ಎನ್‌ಜಿಒ ಹೇಳಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು