ಸೋಮವಾರ, ಜೂನ್ 21, 2021
30 °C

ಜೆಡಿಯು ನಿಲುವನ್ನು ವಿರೋಧಿಸಿದ್ದ ಪ್ರಶಾಂತ್ ಕಿಶೋರ್, ಪವನ್ ವರ್ಮಾರ ಉಚ್ಛಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿದ್ದ ಜೆಡಿಯು ನಿಲುವನ್ನು ಖಂಡಿಸಿ ಪಕ್ಷದ ವಿರುದ್ಧವೇ ತಿರುಗಿ ಬಿದ್ದಿದ್ದ ಪಕ್ಷದ ಉಪಾಧ್ಯಕ್ಷ ಮತ್ತು ಚುನಾವಣಾ ಕಾರ್ಯತಂತ್ರಜ್ಞ ಪ್ರಶಾಂತ್ ಕಿಶೋರ್ ಮತ್ತು ರೆಬೆಲ್ ನಾಯಕ ಪವನ್ ವರ್ಮಾರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. 

ಕಳೆದ ಕೆಲವು ದಿನಗಳಿಂದಲೂ ಪಕ್ಷದ ನಾಯಕ ನಿತೀಶ್ ಕುಮಾರ್ ಮತ್ತು ಪ್ರಶಾಂತ್ ಕಿಶೋರ್ ನಡುವಿನ ವಾಕ್ಸಮರ ತಾರಕಕ್ಕೇರಿತ್ತು. ಪಕ್ಷಕ್ಕೆ ಅಶಿಸ್ತು ತೋರಿದ ಆರೋಪದಲ್ಲಿ ಇಬ್ಬರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಜೆಡಿಯು, ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನವನ್ನು ನೀಡಲಾಗಿದ್ದ ಪ್ರಶಾಂತ್ ಕಿಶೋರ್ ಅವರು ತಮ್ಮ ಹುದ್ದೆಯನ್ನು ಸ್ವ-ಹಿತಾಸಕ್ತಿಗಾಗಿ ಬಳಸಿಕೊಂಡಿದ್ದಾರೆ. ಅವರ ಇಚ್ಛೆಯಂತೆಯೇ ಪಕ್ಷವನ್ನು ತೊರೆಯಲು ಅವರಿಗೆ ಆಯ್ಕೆಯನ್ನು ನೀಡಲಾಗಿತ್ತಾದರೂ ಕೂಡ ಪಕ್ಷದ ಅಧ್ಯಕ್ಷರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಲು ಬಳಸಿಕೊಂಡಿದ್ದಾರೆ. ಹೀಗಾಗಿ ಅವರನ್ನು ಪಕ್ಷದಿಂದ ಹೊರಕಳಿಸುವುದು ಮುಖ್ಯವಾಗಿತ್ತು ಎಂದು ಹೇಳಲಾಗಿದೆ.

ಪವನ್ ವರ್ಮಾ ಕುರಿತು ಹೇಳಿಕೆಯಲ್ಲಿ, ಪಕ್ಷದ ಮುಖ್ಯಸ್ಥ ನಿತೀಶ್ ಕುಮಾರ್ ಅವರಿಗೆ ಬರೆದ ಖಾಸಗಿ ಪತ್ರದಲ್ಲಿ ಇವರು ಪಕ್ಷಕ್ಕೆ ಅಗೌರವ ತೋರುವಂತೆ ನಡೆದುಕೊಂಡಿದ್ದಾರೆ ಎಂದು ದೂರಿದ್ದಾರೆ. 

ಪ್ರಶಾಂತ್ ಕಿಶೋರ್ ಮತ್ತು ಪವನ್ ವರ್ಮಾರ ನಡವಳಿಕೆಯನ್ನು ಗಮನಿಸಿದರೆ ಅವರಿಬ್ಬರು ಪಕ್ಷದ ನಿರ್ಧಾರಗಳಿಗೆ ಗೌರವ ತೋರುತ್ತಿರಲಿಲ್ಲ. ಹಾಗಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಇಬ್ಬರನ್ನು ಮುಕ್ತಗೊಳಿಸಲಾಗಿದೆ ಎಂದು ಹೇಳಿದೆ. 

ಜೆಡಿಯುನಿಂದ ಉಚ್ಛಾಟನೆಯಾಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಪ್ರಶಾಂತ್ ಕಿಶೋರ್, ಧನ್ಯವಾದಗಳು ನಿತೀಶ್ ಕುಮಾರ್, ಬಿಹಾರ ಮುಖ್ಯಮಂತ್ರಿ ಹುದ್ದೆಯನ್ನು ಉಳಿಸಿಕೊಳ್ಳಲು ನಿಮಗೆ ನನ್ನ ಶುಭಾಶಯಗಳು. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಎಂದು ಟ್ವೀಟ್ ಮಾಡಿದ್ದಾರೆ.

ಉಚ್ಛಾಟಿತ ಶಾಸಕ ಪವನ್ ವರ್ಮಾ ಮಾತನಾಡಿ, ತಮ್ಮ ದಾರಿಯಲ್ಲಿದ್ದ ಅಡೆತಡೆಗಳನ್ನು ತೆರವುಗೊಳಿಸಿದ್ದಕ್ಕಾಗಿ ನಿತೀಶ್ ಕುಮಾರ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇದೀಗ ಅವರು ತಮ್ಮ ಅಲ್ಪಾವಧಿಯ ರಾಜಕೀಯ ಗುರಿಯನ್ನು ಸಾಧಿಸಿದ್ದಾರೆ ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರವು ಜಾರಿಗೆ ತಂದ ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಸತ್ತಿನಲ್ಲಿ ಬೆಂಬಲ ಸೂಚಿಸಿದ್ದ ಜೆಡಿಯು ನಿರ್ಧಾರವನ್ನು ಉಭಯ ನಾಯಕರು ನಿರಂತರವಾಗಿ ಬಹಿರಂಗವಾಗಿಯೇ ಪ್ರಶ್ನಿಸಿದ್ದರು. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗಿನ ಮೈತ್ರಿ ಕುರಿತಾಗಿಯೂ ಪವನ್ ಪ್ರಶ್ನಿಸಿದ್ದರು. ಪ್ರಶಾಂತ್ ಕಿಶೋರ್ ಅವರು ಸಿಎಎ ಮತ್ತು ಎನ್‌ಆರ್‌ಸಿ ಕುರಿತಾದ ಪಕ್ಷದ ನಿಲುವಿಗೆ ವಿರೋಧ ವ್ಯಕ್ತಪಡಿಸಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು