ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಥಿಕತೆಗೆ ಚೈತನ್ಯ | ಸ್ವಾವಲಂಬನೆಗೆ ₹20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ ಮೋದಿ

ಕೋವಿಡ್‌ ಪಿಡುಗಿನಿಂದ ತತ್ತರಿಸಿರುವ ಅರ್ಥ ವ್ಯವಸ್ಥೆಗೆ ಚೈತನ್ಯ * ರೈತರು, ಕಾರ್ಮಿಕರಿಗೂ ಪಾಲು
Last Updated 13 ಮೇ 2020, 1:15 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಪಿಡುಗಿನಿಂದ ತತ್ತರಿಸಿರುವ ಭಾರತದ ಅರ್ಥ ವ್ಯವಸ್ಥೆಗೆ ಚೈತನ್ಯ ತುಂಬುವಂತಹ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ. ಭಾರತೀಯ ರಿಸರ್ವ್‌ ಬ್ಯಾಂಕ್‌ ಈವರೆಗೆ ಪ್ರಕಟಿಸಿರುವ ಉಪಕ್ರಮಗಳು ಸೇರಿ ಸುಮಾರು ₹20 ಲಕ್ಷ ಕೋಟಿ ಮೊತ್ತದ ಆರ್ಥಿಕ ಪ್ಯಾಕೇಜ್‌ ನೀಡಲಾಗುವುದು. ಇದು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 10ರಷ್ಟಾಗುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.

ಹಿಂದೆಂದೂ ಇಲ್ಲದಂತಹ ಬಿಕ್ಕಟ್ಟನ್ನುಈಗ ಭಾರತವು ಎದುರಿಸುತ್ತಿದೆ. ಕೊರೊನಾ ವೈರಾಣು ವಿರುದ್ಧದ ಹೋರಾಟದಲ್ಲಿ ಭಾರತವು ದಣಿಯುವುದಿಲ್ಲ ಅಥವಾ ಕೈಚೆಲ್ಲುವುದಿಲ್ಲ. ನಾವು ನಮ್ಮನ್ನು ರಕ್ಷಿಸಿಕೊಳ್ಳಬೇಕು ಮಾತ್ರವಲ್ಲ ಮುಂದಕ್ಕೂ ಸಾಗಬೇಕು ಎಂದು ದೇಶವನ್ನು ಉದ್ದೇಶಿಸಿ ಮಂಗಳವಾರ ರಾತ್ರಿ ಎಂಟು ಗಂಟೆಗೆ ಮಾಡಿದ ಭಾಷಣದಲ್ಲಿ ಮೋದಿ ಹೇಳಿದ್ದಾರೆ.

ಅರ್ಥಿಕತೆಗೆ ಚೈತನ್ಯ | ಸ್ವಾವಲಂಬನೆಗೆ ₹20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ ಮೋದಿ
ಮುಂಬೈನಿಂದ ಕಲಬುರ್ಗಿ ರೈಲು ನಿಲ್ದಾಣಕ್ಕೆ ಮಂಗಳವಾರ ಬಂದ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಬಸ್‌ಗಳತ್ತ ಸಾಗಿದರು – ಪ್ರಜಾವಾಣಿ ಚಿತ್ರ

ಆರ್ಥಿಕ ಪ್ಯಾಕೇಜ್‌ನ ವಿವರಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮುಂದಿನ ದಿನಗಳಲ್ಲಿ ಪ್ರಕಟಿಸಲಿದ್ದಾರೆ ಎಂದು ಪ್ರಧಾನಿ ತಿಳಿಸಿದ್ದಾರೆ. ದೊಡ್ಡ ಮಟ್ಟದ ಆರ್ಥಿಕ ಸುಧಾರಣಾ ಕ್ರಮಗಳೂ ಜಾರಿಯಾಗಲಿವೆ ಎಂಬ ಸುಳಿವನ್ನು ಅವರು ಕೊಟ್ಟಿದ್ದಾರೆ.

ದೇಶವು ಸ್ವಾವಲಂಬಿಯಾಗಬೇಕು ಎಂಬುದು ಮೋದಿ ಅವರ ಭಾಷಣದ ತಿರುಳಾಗಿತ್ತು.

‘ಈಗಿನ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಮಾನವ ಕುಲದ ಪ್ರಗತಿಗೆ ಭಾರತವು ಬಹುದೊಡ್ಡ ಕೊಡುಗೆ ನೀಡಬೇಕು ಎಂದು ಇಡೀ ಜಗತ್ತು ಬಯಸುತ್ತಿದೆ. ಆದರೆ, ಹೇಗೆ ಎಂಬ ಪ್ರಶ್ನೆ ನಮ್ಮ ಮುಂದೆ ಇದೆ. 130 ಕೋಟಿ ಭಾರತೀಯರು ದೇಶವನ್ನು ಸ್ವಾವಲಂಬಿಯಾಗಿಸುವ ಮೂಲಕ ಇದು ಸಾಧ್ಯ. ನಮ್ಮಲ್ಲಿ ಸಂಪನ್ಮೂಲ, ಸಾಮರ್ಥ್ಯ, ಜಗತ್ತಿನ ಅತ್ಯುತ್ತಮ ಪ್ರತಿಭೆ ಎಲ್ಲವೂ ಇವೆ. ಅತ್ಯುತ್ತಮ ವಸ್ತುಗಳನ್ನು ನಾವು ತಯಾರಿಸಬೇಕು, ನಮ್ಮ ಪೂರೈಕೆ ವ್ಯವಸ್ಥೆಯನ್ನು ಆಧುನಿಕಗೊಳಿಸಿ ಸರಪಣಿಯನ್ನು ಉತ್ತಮಪಡಿಸ
ಬೇಕು. ನಮಗಿದು ಸಾಧ್ಯ, ನಾವಿದನ್ನು ಮಾಡಿಯೇ ತೀರುತ್ತೇವೆ’ ಎಂಬ ಆಶಾಭಾವವನ್ನು ಮೋದಿಯವರು
ವ್ಯಕ್ತಪಡಿಸಿದರು.

ಈಗ ನಮ್ಮ ಮುಂದೆ ಇರುವ ದುರಂತವು ಒಂದು ಸೂಚನೆಯನ್ನು, ಒಂದು ಸಂದೇಶವನ್ನು, ಒಂದು ಅವಕಾಶವನ್ನು ಕೊಟ್ಟಿದೆ. ಕೊರೊನಾ ವೈರಾಣು ಸಮಸ್ಯೆ ಆರಂಭವಾದ ಹೊತ್ತಿನಲ್ಲಿ ಭಾರತವು ವೈಯಕ್ತಿಕ ಸುರಕ್ಷತಾ ಕಿಟ್‌ಗಳನ್ನು (ಪಿ‍ಪಿಇ) ತಯಾರಿಸುತ್ತಿರಲಿಲ್ಲ. ಎನ್‌–95 ಮಾಸ್ಕ್‌ಗಳ ತಯಾರಿಕೆ ನಗಣ್ಯವಾಗಿತ್ತು. ಆದರೆ, ಈಗ ಪ್ರತಿದಿನ ಎರಡು ಲಕ್ಷ ಪಿಪಿಇ ಕಿಟ್‌ಗಳು ಮತ್ತು ಎರಡು ಲಕ್ಷ ಎನ್‌–95 ಮಾಸ್ಕ್‌ಗಳನ್ನು ತಯಾರಿಸುತ್ತಿದೆ ಎಂದು ಅವರು ವಿವರಿಸಿದರು.

ಒಂದು ವೈರಸ್‌ ಜಗತ್ತನ್ನು ವಿನಾಶದತ್ತ ತಳ್ಳಿದೆ. ಜೀವ ಉಳಿಸಿಕೊಳ್ಳುವುದಕ್ಕಾಗಿ ಇಡೀ ಜಗತ್ತು ಯುದ್ಧದಲ್ಲಿ ತೊಡಗಿದೆ. ಇಂತಹ ಸಮಸ್ಯೆಯನ್ನು ನಾವು ಹಿಂದೆಂದೂ ನೋಡಿರಲಿಲ್ಲ, ಕೇಳಿರಲಿಲ್ಲ. ಭಾರತವು ಸ್ವಾವಲಂಬಿಯಾಗಬೇಕಾದ ಮಹತ್ವವನ್ನು ಈ ಬಿಕ್ಕಟ್ಟು ತೋರಿಸಿಕೊಟ್ಟಿದೆ. ಅದೊಂದೇ ದೇಶದ ಮುಂದಿರುವ ದಾರಿ ಎಂದು ಪ್ರಧಾನಿ ವಿವರಿಸಿದರು.

ಪ್ಯಾಕೇಜ್‌ ಯಾರಿಗೆ

ಕಾರ್ಮಿಕರು, ರೈತರು, ಪ್ರಾಮಾಣಿಕ ತೆರಿಗೆ ಪಾವತಿದಾರರು, ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳು, ಗುಡಿ ಕೈಗಾರಿಕೆಗಳಲ್ಲಿ ತೊಡಗಿರುವ ಎಲ್ಲರಿಗೂ ಈ ಪ್ಯಾಕೇಜ್‌ನಲ್ಲಿ ಪಾಲು ಇದೆ ಎಂದು ಪ್ರಧಾನಿ ಹೇಳಿದ್ದಾರೆ.

ಲಾಕ್‌ಡೌನ್‌ 4.0

ದೇಶವ್ಯಾಪಿ ಹೇರಲಾಗಿರುವ ಲಾಕ್‌ಡೌನ್‌ನ ಮೂರನೇ ವಿಸ್ತರಣೆಯು ಇದೇ 17ಕ್ಕೆ ಕೊನೆಯಾಗಲಿದೆ. ಆದರೆ, ನಾಲ್ಕನೇ ಹಂತದ ದಿಗ್ಬಂಧನ ಆರಂಭವಾಗಲಿದೆ. ಈ ಹಂತದ ನಿರ್ಬಂಧಗಳು ಹಿಂದಿನ ಅವಧಿಗಳಿಗಿಂತ ಭಿನ್ನವಾಗಿರ ಲಿವೆ. ಈ ಬಗೆಗಿನ ಮಾಹಿತಿಯನ್ನು ಇದೇ 18ರೊಳಗೆ ಜನರಿಗೆ ನೀಡಲಾಗುವುದು ಎಂದು ಪ್ರಧಾನಿ ತಿಳಿಸಿದ್ದಾರೆ. ರಾಜ್ಯಗಳು ನೀಡಿದ ಸಲಹೆಗಳ ಆಧಾರದಲ್ಲಿ ನಾಲ್ಕನೇ ಹಂತದ ಲಾಕ್‌ಡೌನ್‌ನ ನಿಯಮಗಳು ರೂಪುಗೊಳ್ಳಲಿವೆ

ಕೊರೊನಾ ಜತೆಗೆ ಬದುಕು

ಕೊರೊನಾ ವೈರಾಣು ಬಹು ದೀರ್ಘ ಕಾಲದವರೆಗೆ ನಮ್ಮ ಜತೆಗೇ ಇರಲಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಆದರೆ, ನಮ್ಮ ಜೀವನವು ಕೊರೊನಾ ಸುತ್ತಲೇ ಗಿರಕಿ ಹೊಡೆಯಲು ಬಿಡಬಾರದು. ಮುಖಗವಸು ಧರಿಸೋಣ, ಅಂತರ ಕಾಯ್ದುಕೊಳ್ಳೋಣ, ಈ ಸೋಂಕು ನಮ್ಮನ್ನು ಬಾಧಿಸದಂತೆ ನೋಡಿಕೊಳ್ಳೋಣ ಎಂದು ಮೋದಿ ಕರೆ ಕೊಟ್ಟಿದ್ದಾರೆ.

ಸ್ವಾವಲಂಬನೆಯ ಐದು ಸ್ತಂಭಗಳು

1. ಅರ್ಥ ವ್ಯವಸ್ಥೆ: ಸಣ್ಣ ವೃದ್ಧಿಯಷ್ಟೇ ಅಲ್ಲ, ದೊಡ್ಡ ನೆಗೆತ ಸಾಧ್ಯವಾಗುವಂತಹ‌ ಅರ್ಥ ವ್ಯವಸ್ಥೆಯನ್ನು ಸೃಷ್ಟಿಸಬೇಕು

2. ಮೂಲಸೌಕರ್ಯ: ನಮ್ಮ ಮೂಲಸೌಕರ್ಯ ವ್ಯವಸ್ಥೆಯು ಆಧುನಿಕ ಭಾರತದ ಹೆಗ್ಗುರುತಿನಂತಿರಬೇಕು

3. ಸಮಾಜ ವ್ಯವಸ್ಥೆ: ನಮ್ಮ ಸಮಾಜವು ಹಿಂದಿನ ಶತಮಾನದ ನಿಯಮಗಳನ್ನು ಅನುಸರಿಸುವಂತಹದ್ದು ಆಗಿರಬಾರದು. ಬದಲಿಗೆ,
21ನೇ ಶತಮಾನದ ಕನಸುಗಳನ್ನು ನನಸಾಗಿಸುವಂತಿರಬೇಕು, ತಂತ್ರಜ್ಞಾನ ಆಧರಿತವಾಗಿರಬೇಕು

4. ಚಲನಶೀಲ ಜನತಂತ್ರ: ಇದು ನಮ್ಮ ಶಕ್ತಿ. ಭಾರತವನ್ನು ಸ್ವಾವಲಂಬಿಯಾಗಿಸುವ ನಮ್ಮ ಕನಸಿಗೆ ಇದು ಚೈತನ್ಯ ತುಂಬುತ್ತದೆ

5. ಬೇಡಿಕೆ: ಬೇಡಿಕೆ–ಪೂರೈಕೆ ಸರಪಣಿಯು ನಮ್ಮ ಶಕ್ತಿ. ಇದರ ಪೂರ್ಣ ಸಾಮರ್ಥ್ಯವನ್ನು ನಾವು ಬಳಸಿಕೊಳ್ಳಬೇಕು

ಲಾಕ್‌ಡೌನ್‌ ತೆರವಿಗೆ ಒತ್ತಡ

ದೇಶವ್ಯಾಪಿ ಇರುವ ಲಾಕ್‌ಡೌನ್‌ ಅನ್ನು ತೆರವು ಮಾಡಬೇಕು ಎಂದು ಕೈಗಾರಿಕಾ ವಲಯದ ಪ್ರಮುಖರು, ಕಾರ್ಮಿಕರು ಮತ್ತು ರಾಜಕೀಯ ಮುಖಂಡರು ಒತ್ತಡ ಹೇರುತ್ತಿದ್ದಾರೆ. ದಿಗ್ಬಂಧನ ಮುಂದುವರಿದರೆ ಅರ್ಥ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಆಗಲಿದೆ ಮತ್ತು ಜನರು ಜೀವನೋಪಾಯ ಕಳೆದುಕೊಳ್ಳಲಿದ್ದಾರೆ ಎಂಬುದು ಈ ಗುಂಪಿನ ವಾದ.

ಪ್ರಧಾನಿಯವರು ಮುಖ್ಯಮಂತ್ರಿಗಳ ಜತೆಗೆ ಸೋಮವಾರ ವಿಡಿಯೊ ಸಂವಾದ ನಡೆಸಿದ್ದರು. ಸುಮಾರು ಆರು ತಾಸು ಈ ಸಂವಾದ ನಡೆದಿತ್ತು. ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಲಾಕ್‌ಡೌನ್‌ ಮುಂದುವರಿಸಬೇಕು ಎಂದು ಪ್ರಧಾನಿಯನ್ನು ಕೋರಿದ್ದರು. ಆದರೆ, ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ಆರ್ಥಿಕ ಚಟುವಟಿಕೆ ಆರಂಭಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಬೇಕು ಎಂದು ಒತ್ತಾಯಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT