ಅನಿಲ್‌ ಅಂಬಾನಿಗಾಗಿ ಮೋದಿ ಚೌಕಾಶಿ: ರಾಹುಲ್ ಗಾಂಧಿ ಆರೋಪ

7
ರಫೇಲ್‌ ಒಪ್ಪಂದದಲ್ಲಿ ಪ್ರಧಾನಿ ಕಾರ್ಯಾಲಯದ ಸಮಾನಾಂತರ ಮಾತುಕತೆ: ಪತ್ರಿಕಾ ವರದಿ

ಅನಿಲ್‌ ಅಂಬಾನಿಗಾಗಿ ಮೋದಿ ಚೌಕಾಶಿ: ರಾಹುಲ್ ಗಾಂಧಿ ಆರೋಪ

Published:
Updated:
Prajavani

ನವದೆಹಲಿ: ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದದ ಸಂದರ್ಭದಲ್ಲಿ ಫ್ರಾನ್ಸ್‌ ಜತೆಗೆ ಪ್ರಧಾನಿ ಕಾರ್ಯಾಲಯವು (ಪಿಎಂಒ) ನೇರವಾಗಿ ಮಾತುಕತೆ ನಡೆಸಿದ್ದಕ್ಕೆ ರಕ್ಷಣಾ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿತ್ತು ಎಂದು ‘ದ ಹಿಂದೂ’ ಪತ್ರಿಕೆ ಮಾಡಿದ ವರದಿಯು ಭಾರಿ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.

ರಫೇಲ್‌ ಒಪ್ಪಂದದ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಬಹುಕಾಲದಿಂದ ಗಂಭೀರ ಆರೋಪಗಳನ್ನು ಮಾಡುತ್ತಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ತಮ್ಮ ವಾಗ್ದಾಳಿಯನ್ನು ಇನ್ನಷ್ಟು ಮೊನಚುಗೊಳಿಸಿದ್ದಾರೆ. ಒಪ್ಪಂದದಲ್ಲಿ ಪಿಎಂಒ ನೇರವಾಗಿ ಭಾಗಿಯಾಗಿದದ್ದನ್ನು ಮತ್ತು ಈ ವಿಚಾರವನ್ನು ಸುಪ್ರೀಂ ಕೋರ್ಟ್‌ನಿಂದ ಮುಚ್ಚಿಟ್ಟಿರುವುದನ್ನು ಪತ್ರಿಕೆಯ ವರದಿಯು ಸಾಬೀತು ಮಾಡಿದೆ ಎಂದು ರಾಹುಲ್‌ ಹೇಳಿದ್ದಾರೆ. 

ತಮ್ಮ ಉದ್ಯಮಿ ಗೆಳೆಯ ಅನಿಲ್‌ ಅಂಬಾನಿ ಪರವಾಗಿ ರಫೇಲ್‌ ಒಪ್ಪಂದದ ಚೌಕಾಶಿಯನ್ನು ಮೋದಿ ಅವರು ನೇರವಾಗಿ ನಡೆಸಿದ್ದಾರೆ ಎಂದು ಮಾಧ್ಯಮಗೋಷ್ಠಿಯಲ್ಲಿ ಆರೋಪಿಸಿದರು. 

ಮಾತುಕತೆ ತಂಡದಲ್ಲಿ ಇಲ್ಲದ ವ್ಯಕ್ತಿಗಳು ಫ್ರಾನ್ಸ್‌ ಸರ್ಕಾರದ ಜತೆ ವ್ಯವಹರಿಸುವುದರಿಂದ ದೂರ ಇರಬೇಕು ಎಂದು ಈ ಮೂಲಕ ಸಲಹೆ ನೀಡುತ್ತಿದ್ದೇವೆ’ ಎಂದು ರಕ್ಷಣಾ ಸಚಿವಾಲಯ ಹೇಳಿತ್ತು ಎಂದರು. 

ಸಮಾನಾಂತರ ಮಾತುಕತೆ ನಡೆದಿತ್ತು ಎಂಬುದು ರಫೇಲ್ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನ ಮೇಲೆಯೂ ಅನುಮಾನ ಮೂಡುವಂತೆ ಮಾಡುತ್ತದೆ. ಒಂದು ವೇಳೆ ಸುಪ್ರೀಂ ಕೋರ್ಟ್‌ಗೆ ಈ ದಾಖಲೆ ಸಿಕ್ಕಿದ್ದಿದ್ದರೆ ಈ ರೀತಿಯ ತೀರ್ಪು ಬರುತ್ತಿತ್ತೇ ಎಂದು ರಾಹುಲ್‌ ಪ್ರಶ್ನಿಸಿದರು. 

ಸತ್ತ ಕುದುರೆಗೆ ಚಾಟಿ: ನಿರ್ಮಲಾ ವ್ಯಂಗ್ಯ
ರಫೇಲ್‌ ಒಪ್ಪಂದದ ವಿಚಾರದಲ್ಲಿ ವಿರೋಧ ಪಕ್ಷಗಳು ಬಹುರಾಷ್ಟ್ರೀಯ ಉದ್ಯಮಗಳ ನಡುವಣ ಸಮರಕ್ಕೆ ಬೇಕಾದಂತೆ ಕುಣಿಯುತ್ತಿವೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಸಭೆಯಲ್ಲಿ ಗಂಭೀರವಾದ ಆರೋಪ ಮಾಡಿದ್ದಾರೆ. ರಫೇಲ್‌ ವಿವಾದವನ್ನು ಜೀವಂತವಾಗಿ ಇರಿಸುವುದಕ್ಕಾಗಿ ‘ಸತ್ತ ಕುದುರೆಗೆ ಚಾಟಿ ಏಟು ಬೀಸುತ್ತಿವೆ’ ಎಂದೂ ಹಂಗಿಸಿದ್ದಾರೆ.

ರಫೇಲ್‌ ವಿವಾದದ ತನಿಖೆಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸಬೇಕು ಎಂದು ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್‌ ಮತ್ತು ಇತರ ವಿರೋಧ ಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದ್ದಕ್ಕೆ ನಿರ್ಮಲಾ ಈ ರೀತಿ ಪ್ರತಿಕ್ರಿಯೆ ನೀಡಿದರು.

‘ಪ್ರಧಾನಿ ಕಾರ್ಯಾಲಯವು ಯಾವುದೇ ಕೆಲಸದ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸುವುದನ್ನು ಹಸ್ತಕ್ಷೇಪ ಎಂದು ಹೇಳಲಾಗದು. ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಚಾರವೂ ಈಗ ಮುಗಿದ ಅಧ್ಯಾಯ’ ಎಂದು ನಿರ್ಮಲಾ ಹೇಳಿದರು.

**
ಆಗಿನ ರಕ್ಷಣಾ ಸಚಿವ ಮನೋಹರ ಪರ‍್ರೀಕರ್‌ಗೆ ಮಾತುಕತೆಯ ‍ಪ್ರಗತಿ ಬಗ್ಗೆ ಗೊತ್ತೇ ಇರಲಿಲ್ಲ. ಪ್ರಧಾನಿ ಕಾರ್ಯಾಲಯ ಮತ್ತು ಫ್ರಾನ್ಸ್‌ ಅಧ್ಯಕ್ಷರ ಕಚೇರಿಯು ಪ್ರಗತಿಯ ಮೇಲೆ ನಿಗಾ ಇಟ್ಟಂತೆ ಕಾಣಿಸುತ್ತಿದೆ ಎಂದಷ್ಟೇ ಅವರು ಹೇಳಬಲ್ಲವರಾಗಿದ್ದರು
- ಒಮರ್‌ ಅಬ್ದುಲ್ಲಾ, ನ್ಯಾಷನಲ್‌ ಕಾನ್ಫರೆನ್ಸ್‌ ಮುಖಂಡ

**

ಭಾರತ ಸರ್ಕಾರದ ಇತಿಹಾಸದಲ್ಲಿ ಎಂದೂ ಹೀಗೆ ಆಗಿಲ್ಲ. ಪ್ರಧಾನಿ ಕಾರ್ಯಾಲಯಕ್ಕೆ ಇದ್ದ ವಿಶೇಷ ಆಸಕ್ತಿ ಏನು? ಅವರಿಗೆ ರಕ್ಷಿಸಿಕೊಳ್ಳಲು ಹಿತಾಸಕ್ತಿಗಳಿದ್ದವು. ಯಾರಿಗೋ ಅನುಕೂಲ ಮಾಡಿಕೊಡುವ ಉದ್ದೇಶ ಇತ್ತು. ಇಲ್ಲೇನೋ ಕಿತಾಪತಿ ಆಗಿದೆ. ದರ ಚೌಕಾಶಿಯಲ್ಲಿ ಪ್ರಧಾನಿ ಕಾರ್ಯಾಲಯಕ್ಕೆ ಪಾತ್ರವೇ ಇಲ್ಲ
- ಎ.ಕೆ. ಆ್ಯಂಟನಿ, ಮಾಜಿ ರಕ್ಷಣಾ ಸಚಿವ

**

ರಾಹುಲ್‌ ಗಾಂಧಿ ಅವರ ಸುಳ್ಳುಗಳನ್ನು ತಯಾರಿಸುವ ಕಾರ್ಖಾನೆಯು ಕಾರ್ಯಾಚರಣೆ ಮುಂದುವರಿಸಿದೆ. ಮತ್ತೊಂದು ಸುಳ್ಳನ್ನು ಅವರು ನಮ್ಮ ಮುಂದೆ ಇಟ್ಟಿದ್ದಾರೆ. ಈ ಎಲ್ಲ ಆರೋಪಗಳನ್ನು ನಾವು ಸಂಪೂರ್ಣವಾಗಿ ಅಲ್ಲಗಳೆಯುತ್ತೇವೆ. ಸ್ಥಾಪಿತ ಹಿತಾಸಕ್ತಿಗಳು ಮತ್ತು ವಿದೇಶಿ ಶಕ್ತಿಗಳ ಜತೆ ಸೇರಿ ಅವರು ಆಟವಾಡುತ್ತಿದ್ದಾರೆ
- ಪ್ರಕಾಶ್‌ ಜಾವಡೇಕರ್‌, ಕೇಂದ್ರ ಸಚಿವ

**

ರಫೇಲ್‌ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆಸಲು ಮತ್ತು ತಮ್ಮವರಿಗೆ ನೆರವಾಗಲು ಪ್ರಧಾನಿ ನರೇಂದ್ರ ಮೋದಿ ಅವರು ವಾಯುಪಡೆ ಮತ್ತು ರಕ್ಷಣಾ ಸಚಿವಾಲಯವನ್ನು ನಿರಂತರವಾಗಿ ನಿರ್ಲಕ್ಷಿಸಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ, ರಾಷ್ಟ್ರೀಯ ಭದ್ರತೆಗೆ ಹಾನಿಯಾಗಿದೆ. ಸುಪ್ರೀಂ ಕೋರ್ಟ್‌ನಿಂದ ಈ ವಿಚಾರಗಳನ್ನು ಮುಚ್ಚಿಡಲಾಗಿತ್ತು
- ಸೀತಾರಾಂ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ

**

ಮೋದಿ ನೇತೃತ್ವದ ಸರ್ಕಾರವು ದೇಶ ವಿರೋಧಿ. ನಮಗೆ ಇನ್ನಷ್ಟು ವಿವರಣೆಗಳು ಬೇಕಿಲ್ಲ, ರಫೇಲ್‌ ವಿವಾದದ ತನಿಖೆಗೆ ಜಂಟಿ ಸಂಸದೀಯ ಸಮಿತಿ ರಚಿಸಲೇಬೇಕು
- ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !