ಮೋದಿಯಿಂದ ಡಾಸೋಗೆ ಲಾಭ: ಮಾಧ್ಯಮ ವರದಿ ಆಧರಿಸಿ ಕಾಂಗ್ರೆಸ್‌ ಆರೋಪ

7

ಮೋದಿಯಿಂದ ಡಾಸೋಗೆ ಲಾಭ: ಮಾಧ್ಯಮ ವರದಿ ಆಧರಿಸಿ ಕಾಂಗ್ರೆಸ್‌ ಆರೋಪ

Published:
Updated:
Prajavani

ನವದೆಹಲಿ: ರಫೇಲ್‌ ಯುದ್ಧ ವಿಮಾನ ಖರೀದಿಗಾಗಿ ಎನ್‌ಡಿಎ ಸರ್ಕಾರ ಮಾಡಿಕೊಂಡ ಒಪ್ಪಂದದ ಮೂಲಕ ಡಾಸೋ ಕಂಪನಿ ಭಾರಿ ಲಾಭ ಮಾಡಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಕಾರಣರಾಗಿದ್ದಾರೆ ಎಂದು ಕಾಂಗ್ರೆಸ್‌ ಆಪಾದಿಸಿದೆ. 

ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಮೋದಿ ಅವರು ರಾಜಿ ಮಾಡಿಕೊಂಡಿದ್ದಾರೆ. ಭಾರತೀಯ ವಾಯು ಪಡೆಯು ಏಳು ಸ್ಕ್ವಾಡ್ರನ್‌ ಬಹುಪಯೋಗಿ ಯುದ್ಧವಿಮಾನ
ಗಳಿಗೆ ಬೇಡಿಕೆ ಸಲ್ಲಿಸಿತ್ತು. ಆದರೆ, ಎರಡು ಸ್ಕ್ವಾಡ್ರನ್‌ ಯುದ್ಧ ವಿಮಾನಗಳನ್ನು ಮಾತ್ರ ಕೇಂದ್ರ ಸರ್ಕಾರ ಖರೀದಿಸಿದೆ ಎಂದು ಕಾಂಗ್ರೆಸ್‌ ಮುಖಂಡ ಪಿ. ಚಿದಂಬರಂ ಹೇಳಿದ್ದಾರೆ. 

ರಫೇಲ್‌ ಯುದ್ಧ ವಿಮಾನದ ದರದ ಬಗ್ಗೆ ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದನ್ನು ಮೋದಿ ಅವರು ನಿರ್ಲಕ್ಷಿಸಲು ಹೇಗೆ ಸಾಧ್ಯ ಎಂದೂ ಚಿದಂಬರಂ ಪ್ರಶ್ನಿಸಿದ್ದಾರೆ. 

ವಾಯುಪಡೆಗೆ ಬೇಕಿದ್ದ 126 ಯುದ್ಧ ವಿಮಾನಗಳ ಬದಲು 36 ಯುದ್ಧ ವಿಮಾನಗಳನ್ನಷ್ಟೇ ಖರೀದಿಸಿದ್ದರಿಂದ ಯುದ್ಧ ವಿಮಾನದ ಬೆಲೆ ಶೇ 41.42ರಷ್ಟು ಏರಿಕೆಯಾಗಿದೆ ಎಂಬ ಮಾಧ್ಯಮ ವರದಿಯ ಹಿನ್ನೆಲೆಯಲ್ಲಿ ಚಿದಂಬರಂ ಅವರು ಈ ಆರೋಪಗಳನ್ನು ಮಾಡಿದ್ದಾರೆ. 

‘ಡಾಸೋ ಕಂಪನಿಯು ಬಹಳ ಸುಲಭವಾಗಿ ಭಾರಿ ಲಾಭ ಮಾಡಿಕೊಂಡಿತು. ಸರ್ಕಾರವು ಎರಡು ರೀತಿಯಲ್ಲಿ ದೇಶವನ್ನು ದಾರಿ ತಪ್ಪಿಸಿದೆ. ವಾಯುಪಡೆಗೆ ಅತ್ಯಗತ್ಯವಾಗಿ ಬೇಕಿದ್ದ ವಿಮಾನಗಳನ್ನು ಸರ್ಕಾರ ನಿರಾಕರಿಸಿತು. ಹಾಗೆಯೇ, ಪ್ರತಿ ವಿಮಾನಕ್ಕೆ ಜನರ ₹186 ಕೋಟಿಯಷ್ಟು ಹಣವನ್ನು ಹೆಚ್ಚಾಗಿ ಪಾವತಿಸಿತು’ ಎಂದು ಅವರು ಹೇಳಿದರು. 

ಸುಪ್ರೀಂ ಕೋರ್ಟ್ ತೀರ್ಪನ್ನು ಮುಂದಿಟ್ಟುಕೊಂಡು ರಫೇಲ್‌ ಖರೀದಿ ಹಗರಣವನ್ನು ಯಾರಿಗೂ ತಿಳಿಯದಂತೆ ಮಣ್ಣು ಮಾಡಿಬಿಡಬಹುದು ಎಂದು ಮೋದಿ ಸರ್ಕಾರ ಭಾವಿಸಿತ್ತು. ಆದರೆ, ವಿವಾದ ಈಗಲೂ ಜೀವಂತವಾಗಿದೆ ಮತ್ತು ಹೊಸ ಹೊಸ ಆಯಾಮಗಳತ್ತ ತೆರೆದುಕೊಳ್ಳುತ್ತಿದೆ ಎಂದು ಪ‍್ರತಿಪಾದಿಸಿದರು. ಒಪ್ಪಂದದ ಬಗ್ಗೆ ಜಂಟಿ ಸಂಸದೀಯ ತನಿಖೆ ನಡೆಯಲೇಬೇಕು ಎಂದು ಒತ್ತಾಯಿಸಿದರು. 

ಬಿಜೆಪಿ ತಿರುಗೇಟು: ಕಾಂಗ್ರೆಸ್‌ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ. ರಫೇಲ್‌ ಒಪ್ಪಂದವನ್ನು ಮುಂದಿಟ್ಟುಕೊಂಡು ಮೋದಿ ಸರ್ಕಾರದ ವಿರುದ್ಧ ‘ದುರುದ್ದೇಶದ ಅಭಿಯಾನ’ ನಡೆಸುತ್ತಿದೆ ಎಂದಿದೆ.

ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಅಲ್ಲಿಗೆ ವಿವಾದ ಕೊನೆಯಾಗಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !