ಗುರುವಾರ , ಫೆಬ್ರವರಿ 27, 2020
19 °C
ಸೌಜನ್ಯದ ಭೇಟಿಯನ್ನೂ ಕಾಡಿದ ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದ

ಪರ‍್ರೀಕರ್‌–ರಾಹುಲ್‌ ಪತ್ರ ಸಮರ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ತಮ್ಮ ಪಾತ್ರವೇನೂ ಇಲ್ಲ. ಅನಿಲ್‌ ಅಂಬಾನಿಗೆ ಲಾಭ ಮಾಡಿಕೊಡಲು ಪ್ರಧಾನಿ ನರೇಂದ್ರ ಮೋದಿ ಅವರೇ ಈ ಒಪ್ಪಂದವನ್ನು ಅಂತಿಮಗೊಳಿಸಿದ್ದಾರೆ ಎಂದು ಮಾಜಿ ರಕ್ಷಣಾ ಸಚಿವ ಮನೋಹರ ಪರ‍್ರೀಕರ್‌ ತಮಗೆ ಹೇಳಿದ್ದಾರೆ ಎಂದು ರಾಹುಲ್‌ ಗಾಂಧಿ ನೀಡಿದ ಹೇಳಿಕೆ ವಿವಾದ ಸೃಷ್ಟಿಸಿದೆ.

ತಮ್ಮೊಂದಿಗಿನ ಸೌಜನ್ಯದ ಭೇಟಿಯನ್ನು ಚಿಲ್ಲರೆ ರಾಜಕೀಯ ಲಾಭಕ್ಕಾಗಿ ರಾಹುಲ್‌ ಬಳಸಿಕೊಂಡಿದ್ದಾರೆ. ರಾಹುಲ್‌ ಜತೆಗಿನ ತಮ್ಮ ಐದು ನಿಮಿಷದ ಭೇಟಿಯಲ್ಲಿ ರಫೇಲ್‌ ಒಪ್ಪಂದದ ಪ್ರಸ್ತಾಪವೇ ಆಗಿಲ್ಲ ಎಂದು ರಾಹುಲ್‌ಗೆ ಬರೆದ ಪತ್ರದಲ್ಲಿ ಪರ‍್ರೀಕರ್‌ ಹೇಳಿದ್ದಾರೆ.

ಆದರೆ, ಪರ‍್ರೀಕರ್‌ ಭೇಟಿಯಲ್ಲಿ ಚರ್ಚಿಸಲಾದ ಯಾವ ವಿಚಾರವನ್ನೂ ಬಹಿರಂಗಪಡಿಸಿಲ್ಲ ಎಂದು ರಾಹುಲ್‌ ಸ್ಪಷ್ಟಪಡಿಸಿದ್ದಾರೆ. ತಮ್ಮನ್ನು ಕಟುವಾಗಿ ಟೀಕಿಸಿ ಪತ್ರ ಬರೆಯಲು ಪರ‍್ರೀಕರ್‌ ಮೇಲಿರುವ ಒತ್ತಡವೇ ಕಾರಣ ಎಂದು ರಾಹುಲ್‌ ಹೇಳಿದ್ದಾರೆ. ಪರ‍್ರೀಕರ್ ಪತ್ರಕ್ಕೆ ಪ್ರತಿಯಾಗಿ ರಾಹುಲ್‌ ಪತ್ರ ಬರೆದಿದ್ದಾರೆ.

ರಾಹುಲ್‌ ಅವರು ಗೋವಾ ಮುಖ್ಯಮಂತ್ರಿ ಪರ‍್ರೀಕರ್‌ ಅವರನ್ನು ಪಣಜಿಯಲ್ಲಿ ಬುಧವಾರ ಭೇಟಿ ಮಾಡಿದ್ದರು. ಬಳಿಕ ಅವರು ಕೊಚ್ಚಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಅನಿಲ್‌ ಅಂಬಾನಿಗೆ ಲಾಭ ಮಾಡಲು ಮೋದಿ ಅವರೇ ರಫೇಲ್‌ ಒಪ್ಪಂದ ಅಂತಿಮಗೊಳಿಸಿದ್ದಾರೆ ಎಂದು ಪರ‍್ರೀಕರ್‌ ಹೇಳಿದ್ದಾರೆ ಎಂದಿದ್ದರು.

‘ಅನಾರೋಗ್ಯದಿಂದ ಇರುವ ವ್ಯಕ್ತಿಯನ್ನು ಭೇಟಿಯಾಗಿ ಅದನ್ನು ರಾಜಕೀಯ ಅವಕಾಶವಾಗಿ ಬಳಸಿಕೊಳ್ಳುವುದು ಸರಿಯಲ್ಲ. ಚಿಲ್ಲರೆ ರಾಜಕೀಯ ಲಾಭಕ್ಕಾಗಿ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿದಿದ್ದನ್ನು ಕಂಡು ಆ ಭೇಟಿಯ ಪ‍್ರಾಮಾಣಿಕತೆಯ ಬಗ್ಗೆಯೇ ಅನುಮಾನ ಮೂಡಿದೆ’ ಎಂದು ಪರ‍್ರೀಕರ್‌ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಹುಲ್‌, ತಮಗೆ ದೊರೆಯುವ ಮುನ್ನವೇ ಪರ‍್ರೀಕರ್‌ ಅವರ ಪತ್ರವನ್ನು ಮಾಧ್ಯಮಕ್ಕೆ ಸೋರಿಕೆ ಮಾಡಲಾಗಿದೆ. ತಮ್ಮನ್ನು ಭೇಟಿ ಮಾಡಿರುವುದು ಸಂಪೂರ್ಣ ವೈಯಕ್ತಿಕ. ತಮ್ಮ ಪರಿಸ್ಥಿತಿಯ ಬಗ್ಗೆ ಇರುವ ಸಹಾನುಭೂತಿಯೇ ಇದಕ್ಕೆ ಕಾರಣ ಎಂದಿದ್ದಾರೆ.

ರಕ್ಷಣಾ ಸಚಿವರಾಗಿದ್ದ ಪರ‍್ರೀಕರ್‌ ಅವರು 2015ರ ಏಪ್ರಿಲ್‌ನಲ್ಲಿ ಗೋವಾದಲ್ಲಿ ಮೀನು ಮಾರುಕಟ್ಟೆಯೊಂದನ್ನು ಉದ್ಘಾಟಿಸುತ್ತಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರು ರಫೇಲ್‌ ಯುದ್ಧ ವಿಮಾನ ಒಪ್ಪಂದವನ್ನು ಘೋಷಿಸಿದ್ದರು ಎಂಬುದು ಸತ್ಯ ಎಂದು ರಾಹುಲ್‌ ಪತ್ರದಲ್ಲಿ ಹೇಳಿದ್ದಾರೆ.

‘ಪ್ರಧಾನಿ ಅವರು ಅಂತಿಮಗೊಳಿಸಿದ ಒಪ್ಪಂದದ ಬಗ್ಗೆ ತಮಗೆ ಏನೂ ತಿಳಿದಿಲ್ಲ ಎಂದು ಮಾಧ್ಯಮದ ಮುಂದೆಯೇ ಹೇಳಿದ್ದೀರಿ. ಎಲ್ಲ ಮಾಧ್ಯಮಗಳಲ್ಲಿಯೂ ಅದು ವ್ಯಾಪಕವಾಗಿ ವರದಿಯೂ ಆಗಿದೆ’ ಎಂದು ಪತ್ರದಲ್ಲಿ ಪರ‍್ರೀಕರ್‌ಗೆ ರಾಹುಲ್‌ ಹೇಳಿದ್ದಾರೆ.

ಇದಲ್ಲದೆ, ‘ನಿಮ್ಮ ಜತೆಗಿನ ಭೇಟಿ ಏನೇ ಇರಲಿ, ರಫೇಲ್‌ ಒಪ್ಪಂದದಲ್ಲಿ ಅಪ್ರಾಮಾಣಿಕತೆ ಮೆರೆದಿರುವ ಭ್ರಷ್ಟ ಪ್ರಧಾನಿಯ ವಿರುದ್ಧ ಹೋರಾಟ ನಡೆಸುವ ಸಂಪೂರ್ಣ ಹಕ್ಕು ಚುನಾಯಿತ ಪ್ರತಿನಿಧಿಯಾಗಿರುವ ನನಗೆ ಇದೆ’ ಎಂದೂ ರಾಹುಲ್‌ ಹೇಳಿದ್ದಾರೆ.

**

ವಾಯುಪಡೆಯನ್ನು ಮಾರಾಟ ಮಾಡಿದ ಮೋದಿ: ರಾಹುಲ್‌

ರಫೇಲ್‌ ಯುದ್ಧ ವಿಮಾನ ಒಪ್ಪಂದದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್‌ ಗಾಂಧಿ ಅವರು ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಭಾರತೀಯ ವಾಯುಪಡೆಯನ್ನು ಅವರು ‘ಮಾರಾಟ’ ಮಾಡಿದ್ದಾರೆ. ತಮ್ಮ ‘ಗೆಳೆಯ’ ಮತ್ತು ಉದ್ಯಮಿ ಅನಿಲ್‌ ಅಂಬಾನಿಗೆ ₹30 ಸಾವಿರ ಕೋಟಿಯನ್ನು ಕೊಡುವ ಮೂಲಕ ಯುವಜನರ ಅವಕಾಶಗಳನ್ನು ಕಸಿದುಕೊಂಡಿದ್ದಾರೆ ಎಂದು ರಾಹುಲ್ ಆರೋಪಿಸಿದ್ದಾರೆ. 

ರಫೇಲ್‌ ಒಪ್ಪಂದದಲ್ಲಿ ಅವ್ಯವಹಾರ ನಡೆದಿಲ್ಲ ಎಂದು ಕೇಂದ್ರ ಸರ್ಕಾರ ಮತ್ತು ಅನಿಲ್ ಅಂಬಾನಿ ಅವರ ಸಂಸ್ಥೆ ಮೊದಲಿನಿಂದಲೂ ಹೇಳುತ್ತಾ ಬಂದಿವೆ. 

ರಫೇಲ್‌ ಒಪ್ಪಂದದ ಸತ್ಯಾಂಶಗಳನ್ನು ಮುಚ್ಚಿಡಲು ಸಾಧ್ಯವಿಲ್ಲ, ಅದು ಹೊರಗೆ ಬರಲೇಬೇಕು ಎಂದು ಪಕ್ಷದ ಜನಸಂಪರ್ಕ ಅಭಿಯಾನ ‘ಯುವ ಕ್ರಾಂತಿ ಯಾತ್ರೆ’ಯ ಸಮಾರೋಪದಲ್ಲಿ ರಾಹುಲ್‌ ಹೇಳಿದರು. 

ಪ್ರಧಾನಿ ಮೋದಿ ಅವರು ಸಂಸತ್ತಿನಲ್ಲಿ ಒಂದೂವರೆ ತಾಸು ಮಾತನಾಡಿದರು. ಆದರೆ, ರಫೇಲ್‌ ಬಗ್ಗೆ ಪ್ರಶ್ನೆಗಳನ್ನು ಕೇಳಿದಾಗ ಅವರು ಬೇರೆಲ್ಲೋ ನೋಡಿದರು, ಅವರಿಗೆ ಕಣ್ಣಲ್ಲಿ ಕಣ್ಣಿಟ್ಟು ನೋಡುವುದಕ್ಕೇ ಸಾಧ್ಯವಾಗಲಿಲ್ಲ. ಪ್ರಧಾನಿ ಸತ್ಯವನ್ನು ಮುಚ್ಚಿಡುತ್ತಿದ್ದಾರೆ ಎಂದು ರಾಹುಲ್ ಹೇಳಿದರು. 

‘ರಫೇಲ್‌ ಒಪ್ಪಂದವನ್ನು ಬದಲಾಯಿಸುವಾಗ ಪ್ರಧಾನಿ ಅವರು ರಕ್ಷಣಾ ಸಚಿವರ ಜತೆ ಸಮಾಲೋಚಿಸಿಲ್ಲ ಎಂದು ಪರ‍್ರೀಕರ್‌ ಅವರೇ ತಮಗೆ ಹೇಳಿದ್ದಾರೆ’ ಎಂದು ರಾಹುಲ್‌ ಹೇಳಿದರು. ಪರ‍್ರೀಕರ್‌ ಅವರನ್ನು ಮಂಗಳವಾರ ಭೇಟಿಯಾದ ಸಂದರ್ಭದಲ್ಲಿ ಈ ವಿಷಯ ಪ್ರಸ್ತಾಪವಾಯಿತೇ ಎಂಬುದನ್ನು ಅವರು ಸ್ಪಷ್ಟಪಡಿಸಲಿಲ್ಲ.

**

ಚೇತರಿಸಿಕೊಳ್ಳುವಂತೆ ಪ್ರತಿಸ್ಪರ್ಧಿಗೆ ಹಾರೈಸುವ ಭಾರತದ ಪರಂಪರೆಯ ಸ್ಫೂರ್ತಿಯಲ್ಲಿ ನಿಮ್ಮ ಭೇಟಿಯನ್ನು ಕಂಡಿದ್ದೆ. ಆದರೆ, ನಿಮ್ಮ ಹೇಳಿಕೆ ಬಹಳ ವೇದನೆ ತಂದಿದೆ.

-ಮನೋಹರ ಪರ‍್ರೀಕರ್‌, ಗೋವಾ ಸಿ.ಎಂ

**

ನಿಮ್ಮನ್ನು (ಪರ‍್ರೀಕರ್‌) ಭೇಟಿಯಾಗಿ ಚರ್ಚಿಸಿದ ಯಾವುದೇ ವಿಚಾರವನ್ನು ಬಹಿರಂಗಪಡಿಸಿಲ್ಲ. ಈಗಾಗಲೇ ಸಾರ್ವಜನಿಕವಾಗಿ ಲಭ್ಯವಿರುವ ವಿಚಾರಗಳನ್ನೇ ನಾನು ಹೇಳಿದ್ದೇನೆ.

-ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು