ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲದ ಅಧಿವೇಶನ: ರಫೇಲ್, ಕಾವೇರಿ ಗದ್ದಲಕ್ಕೆ ಕಲಾಪ ಬಲಿ

ಸಂಸತ್ತಿನ ಎರಡೂ ಸದನಗಳಲ್ಲಿ ನಡೆಯದ
Last Updated 18 ಡಿಸೆಂಬರ್ 2018, 18:51 IST
ಅಕ್ಷರ ಗಾತ್ರ

ನವದೆಹಲಿ: ರಫೇಲ್‌ ಒಪ್ಪಂದದ ತನಿಖೆಗೆ ವಿರೋಧ ಪಕ್ಷಗಳು ಒತ್ತಾಯಿಸಿದ್ದರಿಂದ ಮತ್ತು ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡಿನ ಸಂಸದರು ಪ್ರತಿಭಟನೆ ನಡೆಸಿದ ಕಾರಣ ಮಂಗಳವಾರವೂ ಸಂಸತ್ತಿನ ಉಭಯ ಸದನಗಳಲ್ಲಿ ಕಲಾಪ ನಡೆಯಲಿಲ್ಲ.

ಲೋಕಸಭೆಯಲ್ಲಿ ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಪ್ರತಿಭಟನೆಗೆ ಇಳಿದರು. ಕಾಂಗ್ರೆಸ್ ಸದಸ್ಯರ ವಿರುದ್ಧ ಬಿಜೆಪಿ ಸಂಸದರು ಘೋಷಣೆ ಕೂಗಿದರು.

ಕಲಾಪ ನಡೆಯಲು ಅವಕಾಶ ಮಾಡಿಕೊಡಿ ಎಂದು ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಪದೇ–ಪದೇ ಮಾಡಿದ ಮನವಿಗೆ ಫಲ ದೊರಕಲಿಲ್ಲ.

‘ಇದು ಈ ಅವಧಿಯ ಕೊನೆಯ ಅಧಿವೇಶನ. ಎಲ್ಲಾ ಸದಸ್ಯರು ಮುಂದೆ ಚುನಾವಣೆ ಎದುರಿಸಲು ಜನರ ಮುಂದೆ ಹೋಗಬೇಕು. ಹೀಗಾಗಿ ಈಗ ಕಲಾಪ ನಡೆಯುವುದು ಬಹುಮುಖ್ಯ’ ಎಂದು ಮಹಾಜನ್ ಮನವಿ ಮಾಡಿದರು.

‘ರಫೇಲ್ ಒಪ್ಪಂದದ ತನಿಖೆಗೆ ಜಂಟಿ ಸಂಸದೀಯ ಸಮಿತಿಯನ್ನು ರಚಿಸಬೇಕು. ಆಗ ಮಾತ್ರ ಸದನದ ಕಲಾಪ ಸರಾಗವಾಗಿ ನಡೆಯಲಿದೆ’ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು.

ಖರ್ಗೆ ಅವರ ಆಗ್ರಹವನ್ನು ಸಂಸದೀಯ ವ್ಯವಹಾರಗಳ ಸಚಿವ ನರೇಂದ್ರ ಸಿಂಗ್ ತೋಮರ್ ತಿರಸ್ಕರಿಸಿದರು. ‘ರಫೇಲ್ ಸೇರಿ ಯಾವುದೇ ವಿಷಯದ ಬಗ್ಗೆಯೂ ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ. ಆದರೆ ರಫೇಲ್ ವ್ಯಾಜ್ಯವನ್ನು ಸುಪ್ರೀಂ ಕೋರ್ಟ್ ಈಗಾಗಲೇ ಇತ್ಯರ್ಥಪಡಿಸಿದೆ. ಹೀಗಾಗಿ ಜಂಟಿ ಸಂಸದೀಯ ಸಮಿತಿ ರಚಿಸುವ ಪ್ರಶ್ನೆಯೇ ಇಲ್ಲ’ ಎಂದು ತೋಮರ್ ಹೇಳಿದರು.

ಈ ಹೇಳಿಕೆಗೆ ಕಾಂಗ್ರೆಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿ, ಸ್ಪೀಕರ್ ಎದುರು ಭಿತ್ತಿ‍ಪತ್ರಗಳನ್ನು ಪ್ರದರ್ಶಿಸಿದರು. ಆಗ ಬಿಜೆಪಿಯ ಸದಸ್ಯರು ರಾಹುಲ್ ಗಾಂಧಿಯ ಕ್ಷಮೆಗೆ ಆಗ್ರಹಿಸಿದರು.

‘ಸಂಸತ್ತಿನಲ್ಲಿ ಸುಳ್ಳು ಹೇಳಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸೇನಾಪಡೆಗಳಿಗೆ ಕಳಂಕ ತಂದಿರುವ ರಾಹುಲ್ ಗಾಂಧಿ ಸದನದ ಕ್ಷಮೆ ಯಾಚಿಸಬೇಕು’ ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು.

ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದ ಕಾರಣ ಸ್ಪೀಕರ್ ಅವರು ಕಲಾಪವನ್ನು ಮುಂದೂಡಿದರು. ಮಧ್ಯಾಹ್ನ ಮತ್ತೆ ಕಲಾಪ ಆರಂಭವಾದಾಗಲೂ ಗದ್ದಲ ಮುಂದುವರೆಯಿತು. ಹೀಗಾಗಿ ಕಲಾಪವನ್ನು ಬುಧವಾರದವರೆಗೆ ಮುಂದೂಡಲಾಯಿತು.

ಮೇಕೆದಾಟು ಯೋಜನೆಗೆ ವಿರೋಧ
ಕಾವೇರಿ ನದಿಗೆ ಮೇಕೆದಾಟು ಬಳಿ ಅಣೆಕಟ್ಟೆ ನಿರ್ಮಿಸುವ ಕರ್ನಾಟಕದ ಯೋಜನೆ ವಿರುದ್ಧ ರಾಜ್ಯಸಭೆಯಲ್ಲಿ ತಮಿಳುನಾಡಿನ ಸಂಸದರು ಪ್ರತಿಭಟನೆ ನಡೆಸಿದರು.

ಎಐಎಡಿಎಂಕೆ ಮತ್ತು ಡಿಎಂಕೆಯ ಸದಸ್ಯರು ಸಭಾಪತಿಯ ಪೀಠದ ಎದುರು ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿತೆಲುಗು ದೇಶಂ ಪಕ್ಷದ ಸದಸ್ಯರೂ ಪ್ರತಿಭಟನೆಗೆ ಮುಂದಾದರು.

ಇದರ ಮಧ್ಯೆಯೇ ಕಾಂಗ್ರೆಸ್ ಸಹ ರಫೇಲ್‌ ಒಪ್ಪಂದ ವಿಷಯವಾಗಿ ಪ್ರತಿಭಟನೆಗೆ ಇಳಿಯಿತು.

‘ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಸಂಸತ್ತಿಗೆ ಮತ್ತು ಸುಪ್ರೀಂ ಕೋರ್ಟ್‌ಗೆ ತಪ್ಪು ಮಾಹಿತಿ ನೀಡಿರುವ ಸರ್ಕಾರದ ವಿರುದ್ಧ ಹಕ್ಕುಚ್ಯುತಿ ನೋಟಿಸ್ ನೀಡಲಾಗಿದೆ. ಅದನ್ನು ಚರ್ಚೆಗೆ ಎತ್ತಿಕೊಳ್ಳಿ’ ಎಂದು ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಆಗ್ರಹಿಸಿದರು.

ವಿರೋಧ ಪಕ್ಷಗಳ ಸದಸ್ಯರು ಪ್ರತಿಭಟನೆ ಮುಂದುವರಿಸಿದ ಕಾರಣ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಕಲಾಪವನ್ನು ಮುಂದೂಡಿದರು.

*
ಶಾಲಾ ಮಕ್ಕಳೇ ಸಂಸದರಿಗಿಂತ ಉತ್ತಮವಾಗಿ ವರ್ತಿಸುತ್ತಾರೆ ಎಂಬ ಸಂದೇಶ ನನ್ನ ಮೊಬೈಲ್‌ಗೆ ಯಾರೋ ಕಳುಹಿಸಿದ್ದಾರೆ. ನಾವೆಲ್ಲಾ ಅಷ್ಟು ಕೆಟ್ಟದಾಗಿ ವರ್ತಿಸುತ್ತಿದ್ದೇವೆ.
-ಸುಮಿತ್ರಾ ಮಹಾಜನ್, ಲೋಕಸಭೆ ಸ್ಪೀಕರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT