ಹತ್ತು ಪಟ್ಟು ಹೆಚ್ಚು ಹೋರಾಟ: ರಾಹುಲ್‌

ಭಾನುವಾರ, ಜೂಲೈ 21, 2019
26 °C

ಹತ್ತು ಪಟ್ಟು ಹೆಚ್ಚು ಹೋರಾಟ: ರಾಹುಲ್‌

Published:
Updated:
Prajavani

ಮುಂಬೈ: ಆರ್‌ಎಸ್‌ಎಸ್‌ ಮತ್ತು ಬಿಜೆಪಿ ವಿರುದ್ಧದ ಹೋರಾಟ ಹಿಂದಿಗಿಂತ ಹತ್ತು ಪಟ್ಟು ಶಕ್ತಿಯುತವಾಗಿರಲಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ತಮ್ಮ ಮುಂದಿನ ರಾಜಕಾರಣದ ದಿಕ್ಕನ್ನು ಸ್ಪಷ್ಟಪಡಿಸಿದ್ದಾರೆ. 

ಕಾಂಗ್ರೆಸ್‌ ‍ಪಕ್ಷದ ಅಧ್ಯಕ್ಷ ಸ್ಥಾನದಿಂದ ಅಧಿಕೃತವಾಗಿ ಕೆಳಗಿಳಿದ ಮರುದಿನ ಅಂದರೆ, ಗುರುವಾರ ಅವರು ಈ ಹೇಳಿಕೆ ಕೊಟ್ಟಿದ್ದಾರೆ. 

ಆರ್‌ಎಸ್‌ಎಸ್‌ ಕಾರ್ಯಕರ್ತರೊಬ್ಬರು ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಸಂಬಂಧ ನ್ಯಾಯಾಲಯಕ್ಕೆ ಹಾಜರಾದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಅವರು ಮಾತನಾಡಿದರು. 

ಮುಂದಿನ ನಡೆ ಏನು ಎಂಬ ಪ್ರಶ್ನೆಗೆ, ಕಳೆದ ಐದು ವರ್ಷಗಳಲ್ಲಿ ನಡೆಸಿದ್ದಕ್ಕಿಂತ ಹೆಚ್ಚು ಬಲವಾದ ಹೋರಾಟವನ್ನು ಆರ್‌ಎಸ್‌ಎಸ್‌ ಮತ್ತು ಬಿಜೆಪಿ ವಿರುದ್ಧ ನಡೆಸಲಿದ್ದೇನೆ ಎಂದರು. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಂಘ ಪರಿವಾರ ಹಾಗೂ ಬಿಜೆಪಿಯ ನಾಯಕರ ವಿರುದ್ಧದ ಹೋರಾಟ ತೀವ್ರವಾಗಲಿದೆ ಎಂಬ ಸುಳಿವು ಕೊಟ್ಟರು. 

ಮಹಾರಾಷ್ಟ್ರ ಮತ್ತು ಮುಂಬೈನ ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರು ರಾಹುಲ್‌ ಅವರನ್ನು ಭೇಟಿಯಾದರು. ರಾಜೀನಾಮೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಅವರನ್ನು ಒತ್ತಾಯಿಸಿದರು. 

ರಾಜೀನಾಮೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದ್ದಾರೆ. ಏನನ್ನು ಹೇಳಬೇಕೋ ಅವೆಲ್ಲವನ್ನೂ ರಾಜೀನಾಮೆ ಜತೆಗೆ ಲಗತ್ತಿಸಿದ ಪತ್ರದಲ್ಲಿ ಹೇಳಿದ್ದೇನೆ ಎಂದರು. 

ರಾಹುಲ್‌ ಧೈರ್ಯಕ್ಕೆ ಪ್ರಿಯಾಂಕಾ ಮೆಚ್ಚುಗೆ: ಪಕ್ಷದ ಅಧ್ಯಕ್ಷ ಹುದ್ದೆಯನ್ನು ತ್ಯಾಗ ಮಾಡುವ ರಾಹುಲ್‌ ನಿರ್ಧಾರವನ್ನು ಗೌರವಿಸುತ್ತೇನೆ. ಇಂತಹ ನಿರ್ಧಾರ ಕೈಗೊಳ್ಳಲು ಅಪಾರ ಧೈರ್ಯ ಬೇಕು ಎಂದು ರಾಹುಲ್‌ ತಂಗಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. 

ರಾಜೀನಾಮೆ ಪತ್ರದ ಜತೆಗೆ ರಾಹುಲ್‌ ಬರೆದಿರುವ ನಾಲ್ಕು ಪುಟಗಳ ಪತ್ರವನ್ನು ಲಗತ್ತಿಸಿ ಪ್ರಿಯಾಂಕಾ ಟ್ವೀಟ್‌ ಮಾಡಿದ್ದಾರೆ. 

‘ನಿಮಗೆ ಇರುವಷ್ಟು ಧೈರ್ಯ ಇರುವವರು ಬಹಳ ಕಡಿಮೆ ಜನ ಇದ್ದಾರೆ. ನಿಮ್ಮ ನಿರ್ಧಾರದ ಬಗ್ಗೆ ಗಾಢವಾದ ಗೌರವ ಇದೆ’ ಎಂದು ಅವರು ಟ್ವೀಟ್‌ನಲ್ಲಿ  ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !