ಭಾನುವಾರ, ಜನವರಿ 26, 2020
28 °C

ಸರಳವಾಯ್ತು ರೈಲ್ವೆ ಸೇವೆ: ಏನೇ ಇದ್ದರೂ ‘139‘ಗೆ ಕರೆ ಮಾಡಿ

ಎಎನ್‌ಐ Updated:

ಅಕ್ಷರ ಗಾತ್ರ : | |

ನವದೆಹಲಿ: ರೈಲ್ವೆ ಇಲಾಖೆ ತನ್ನ ಸೇವೆಗಳನ್ನು ಮತ್ತಷ್ಟು ಸರಳಗೊಳಿಸಿದೆ. ಇನ್ನು ನೆರವಿಗಾಗಿ ನೂರೆಂಟು ಸಂಖ್ಯೆಗಳನ್ನು ನೆನಪಿಟ್ಟುಕೊಳ್ಳುವ ಅಗತ್ಯವಿಲ್ಲ. ‘139’ ಸಹಾಯವಾಣಿಗೆ ಕರೆ ಮಾಡಿ ಯಾವುದೇ ಸೇವೆಯನ್ನೂ ಪಡೆದುಕೊಳ್ಳಿ

‘ರೈಲುಗಳ ಬಗ್ಗೆ ಮಾಹಿತಿ ಪಡೆಯಲು ಒಂದು ಸಂಖ್ಯೆ, ಕುಂದುಕೊರತೆಗಳ ಬಗ್ಗೆ ದೂರು ನೀಡಲು ಮತ್ತೊಂದು... ಹೀಗೆ ಒಂದೊಂದು ಸೇವೆಗೂ ಒಂದೊಂದು ಸಂಖ್ಯೆ ನೆನಪಿಟ್ಟುಕೊಳ್ಳುವ ಗೋಜಲನ್ನು ತಪ್ಪಿಸಿ, ಪ್ರಯಾಣಿಕರಿಗೆ ಸುಲಭದಲ್ಲಿ ರೈಲ್ವೆ ಸೇವೆಗಳು ದೊರೆಯಬೇಕೆನ್ನುವ ಉದ್ದೇಶದಿಂದ ಒಂದೇ ಸಹಾಯವಾಣಿಯನ್ನು ರೂಪಿಸಲಾಗಿದೆ’ ಎಂದು ರೈಲ್ವೆ ಇಲಾಖೆ ತಿಳಿಸಿದೆ. 

‘139’ಕ್ಕೆ ಎಲ್ಲಾ ಸಹಾಯವಾಣಿ ವಿಲೀನ

ರೈಲ್ವೆಯ ಒಂದೊಂದು ಸೇವೆಗೂ ಪ್ರಯಾಣಿಕರು ಒಂದೊಂದು ಸಹಾಯವಾಣಿಗೆ ಕರೆ ಮಾಡಬೇಕಿತ್ತು. ಆದರೆ, ಇನ್ನು ಮುಂದೆ ರೈಲು ಪ್ರಯಾಣಿಕರ ಸುರಕ್ಷತೆಗಾಗಿ ಇರುವ '182' ಸಹಾಯವಾಣಿ ಹೊರತುಪಡಿಸಿ ಎಲ್ಲಾ ಸಹಾಯವಾಣಿಗಳು ರದ್ದಾಗಲಿದೆ. 

ಸಹಾಯವಾಣಿ ಸಂಖ್ಯೆಗಳಾದ 138 (ಸಾಮಾನ್ಯ ದೂರು), 1072 (ಅಪಘಾತ ಮತ್ತು ಸುರಕ್ಷತೆ), 9717630982 (ಎಸ್‌ಎಂಎಸ್‌ ದೂರು), 58888/138 (ಬೋಗಿ ಸ್ವಚ್ಛಗೊಳಿಸುವುದಕ್ಕೆ), 1800111321 (ಕ್ಯಾಟರಿಂಗ್‌ ಸೇವೆಗಳಿಗಾಗಿ) ಗಳು ಇನ್ನು ಮುಂದೆ ಕಾರ್ಯನಿರ್ವಹಿಸುವುದಿಲ್ಲ.

139 ಸಹಾಯವಾಣಿ ಹನ್ನೆರಡು ಭಾಷೆಗಳಲ್ಲಿ ಲಭ್ಯವಿದೆ. ಇದು ಸ್ವಯಂಚಾಲಿತ ಧ್ವನಿ ಪ್ರತಿಕ್ರಿಯೆ ವ್ಯವಸ್ಥೆ (ಇಂಟರ್‍ಯಾಕ್ಟಿವ್ ವಾಯ್ಸ್ ರೆಸ್ಪಾನ್ಸ್‌ ಸಿಸ್ಟಂ– ಐವಿಆರ್‌ಎಸ್‌) ಹೊಂದಿದೆ. 

ಭದ್ರತೆ, ವೈದ್ಯಕೀಯ ಸಹಾಯಕ್ಕಾಗಿ 1ನ್ನು ಒತ್ತಿ

139ಕ್ಕೆ ಕರೆ ಮಾಡಿದ ನಂತರ ಅಲ್ಲಿ ವಿವಿಧ ಬಗೆಯ ಸೇವೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಭದ್ರತೆ ಮತ್ತು ವೈದ್ಯಕೀಯ ಸೇವೆಗಾಗಿ 1ನ್ನು ಒತ್ತಬೇಕು. ನಂತರ ನಿಮ್ಮ ಕರೆ ಸಂಬಂಧಪಟ್ಟ ಪ್ರತಿನಿಧಿಗೆ ವರ್ಗಾವಣೆಯಾಗುತ್ತದೆ. 

ರೈಲಿನ ವೇಳಾಪಟ್ಟಿ, ಪಿಎನ್ಆರ್‌‌ಗಾಗಿ 2ನ್ನು ಒತ್ತಿ

ರೈಲುಗಳ ವೇಳಾಪಟ್ಟಿ, ಪಿಎನ್ಆರ್ ಸ್ಟೇಟಸ್, ಟಿಕೆಟ್ ಬುಕ್ಕಿಂಗ್, ದರ ಪರಿಶೀಲನೆ, ಟಿಕೆಟ್ ಕ್ಯಾನ್ಸಲ್ ಮಾಡುವ ಬಗ್ಗೆ ಮಾಹಿತಿ ಪಡೆಯಲು 2ನ್ನು ಒತ್ತಬೇಕು. ಇದೇ ಸಂಖ್ಯೆ ಅಡಿಯಲ್ಲಿ ಅಲರಾಂ ಸೇವೆ, ಆಹಾರ ಪೂರೈಕೆ, ವ್ಹೀಲ್‌ಚೇರ್ ಬುಕ್ಕಿಂಗ್ ಕೂಡಾ ನೀಡಲಾಗುತ್ತದೆ.

ದೂರು ಸಲ್ಲಿಸಲು ಇದನ್ನು ಅನುಸರಿಸಿ

ದೂರು ನೀಡುವುದಕ್ಕೆ ಹಲವು ವಿಭಾಗಗಳನ್ನು ಮಾಡಲಾಗಿದೆ. ಆಹಾರ ಪೂರೈಕೆಯಲ್ಲಿನ ಲೋಪದ ದೂರಿಗಾಗಿ 3ನ್ನು ಒತ್ತಿ. ಸಾಮಾನ್ಯ ದೂರಿಗಾಗಿ 4, ಮುಂಜಾಗರುಕತೆ ದೂರು ಸಲ್ಲಿಸಲು 5ನ್ನು ಒತ್ತಬೇಕು. ಅಪಘಾತ ಸಂಭವಿಸಿದಾಗ ವಿಚಾರಣೆಗಾಗಿ 6ನ್ನು ಒತ್ತಿ ನೆರವು ಪಡೆದುಕೊಳ್ಳಿ. ಸಹಾಯವಾಣಿ ಪ್ರತಿನಿಧಿಯ ಜೊತೆ ಮಾತನಾಡಲು 9 ಒತ್ತಬೇಕು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು