ಸಿಬಿಐಗೆ ಶುಕ್ಲಾ ಸಾರಥಿ: ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ

7

ಸಿಬಿಐಗೆ ಶುಕ್ಲಾ ಸಾರಥಿ: ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ

Published:
Updated:
Prajavani

ನವದೆಹಲಿ: ಹಿರಿಯ ಐಪಿಎಸ್‌ ಅಧಿಕಾರಿ ರಿಷಿ ಕುಮಾರ್‌ ಶುಕ್ಲಾ ಅವರನ್ನು ಕೇಂದ್ರ ಸರ್ಕಾರ ಶನಿವಾರ ಸಿಬಿಐ ಹೊಸ ನಿರ್ದೇಶಕರನ್ನಾಗಿ ನೇಮಕ ಮಾಡಿದೆ.

1983ನೇ ತಂಡದ ಮಧ್ಯಪ್ರದೇಶ ಕೇಡರ್‌ ಅಧಿಕಾರಿಯಾಗಿರುವ 59 ವರ್ಷದ ಶುಕ್ಲಾ ಅವರ ಅಧಿಕಾರ ಅವಧಿ ಎರಡು ವರ್ಷ.

ಸಿಬಿಐ ಮದ್ಯಂತರ ನಿರ್ದೇಶಕ ಎಂ. ನಾಗೇಶ್ವರ ರಾವ್‌ ಅವರಿಂದ ಶುಕ್ಲಾ ಅಧಿಕಾರ ಸ್ವೀಕರಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿಯು ಶುಕ್ಲಾ ಅವರ ಹೆಸರನ್ನು ಶಿಫಾರಸು ಮಾಡಿತ್ತು.

ಮಧ್ಯಪ್ರದೇಶದ ಪೊಲೀಸ್‌ ಮಹಾ ನಿರ್ದೇಶಕರಾಗಿದ್ದ (ಡಿಜಿಪಿ) ಶುಕ್ಲಾ ಅವರನ್ನು ಮುಖ್ಯಮಂತ್ರಿ ಕಮಲನಾಥ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮೂರು ದಿನಗಳ ಹಿಂದೆ ಪೊಲೀಸ್‌ ವಸತಿ ನಿಗಮಕ್ಕೆ ಡಿಜಿಪಿಯಾಗಿ ವರ್ಗಾಯಿಸಿತ್ತು.

ಸಿಬಿಐಗೆ ಪೂರ್ಣಾವಧಿ ನಿರ್ದೇಶಕರನ್ನು ನೇಮಕ ಮಾಡುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿತ್ತು. ಅದರ ಮರುದಿನವೇ ಸರ್ಕಾರದ ಆದೇಶ ಹೊರಬಿದ್ದಿದೆ.

ಸಿಆರ್‌ಪಿಎಫ್‌ ಮುಖ್ಯಸ್ಥ ಆರ್‌.ಆರ್‌. ಭಟ್ನಾಗರ್ ಮತ್ತು ಎನ್‌ಎಸ್‌ಜಿ ಮುಖ್ಯಸ್ಥ ಸುದೀಪ್‌ ಲಖ್‌ಟಾಕಿಯಾ ಹೆಸರು ಮುಂಚೂಣಿಯಲ್ಲಿದ್ದವು.

ಆಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣ, ಏರ್ ಇಂಡಿಯಾ ಹಗರಣ, ಚಂದಾ ಕೊಚ್ಚರ್‌ ಆರೋಪಿಯಾಗಿರುವ ಐಸಿಐಸಿಐ ಬ್ಯಾಂಕ್‌ ಸಾಲ ನೀಡಿಕೆ ಪ್ರಕರಣ, ಕಾಂಗ್ರೆಸ್‌ ಮುಖಂಡರಾದ ಪಿ.ಚಿದಂಬರಂ, ಭೂಪಿಂದರ್ ಸಿಂಗ್‌ ಹೂಡಾ ಸೇರಿದಂತೆ ಹಲವು ರಾಜಕೀಯ ಮುಖಂಡರ ವಿರುದ್ಧದ ಪ್ರಕರಣಗಳ ತನಿಖೆಗಳನ್ನು ಶುಕ್ಲಾ ನೋಡಿಕೊಳ್ಳಲಿದ್ದಾರೆ.

ಖರ್ಗೆ ಆಕ್ಷೇಪ

ಸಿಬಿಐ ನಿರ್ದೇಶಕ ಹುದ್ದೆಗೆ ರಿಷಿ ಕುಮಾರ್‌ ಶುಕ್ಲಾ ಅವರ ನೇಮಕಕ್ಕೆ ಆಕ್ಷೇಪ ವ್ಯಕ್ತಪಡಿಸಿ ಆಯ್ಕೆ ಸಮಿತಿ ಸದಸ್ಯರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ಅವರಿಗೆ ಶನಿವಾರ ಪತ್ರ ಬರೆದಿದ್ದಾರೆ.

ಭ್ರಷ್ಟಾಚಾರ ಪ್ರಕರಣಗಳನ್ನು ನಿರ್ವಹಿಸಿದ ಅನುಭವ ಶುಕ್ಲಾ ಅವರಿಗಿಲ್ಲ ಎಂದು ಅವರು ಆಕ್ಷೇಪ ಎತ್ತಿದ್ದಾರೆ.

ಶುಕ್ಲಾ ಆಯ್ಕೆಯಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಮತ್ತು ಕಾನೂನು ಉಲ್ಲಂಘನೆಯಾಗಿದೆ ಎಂದು ಎರಡು ಪುಟಗಳ ಆಕ್ಷೇಪಣಾ ಪತ್ರದಲ್ಲಿ ಖರ್ಗೆ ಆರೋಪ ಮಾಡಿದ್ದಾರೆ.

ಮೂರು ದಿನಗಳ ಹಿಂದೆ ಮಧ್ಯ ಪ್ರದೇಶ ಸರ್ಕಾರ ಶುಕ್ಲಾ ಅವರನ್ನು ಡಿಜಿಪಿ ಹುದ್ದೆಯಿಂದ ತೆಗೆದು ಹಾಕಿದೆ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !