ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ಮಂದಿರಕ್ಕಾಗಿ ಭಾರಿ ಜನಾಂದೋಲನ: ಸುಳಿವು ನೀಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘ

Last Updated 3 ನವೆಂಬರ್ 2018, 3:54 IST
ಅಕ್ಷರ ಗಾತ್ರ

ಠಾಣೆ/ಮಹಾರಾಷ್ಟ್ರ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ 1992ರಲ್ಲಿ ದೇಶದಾದ್ಯಂತ ನಡೆದ ಹೋರಾಟದ ಮಾದರಿಯಲ್ಲಿಯೇ ಮತ್ತೊಂದು ಬೃಹತ್‌ ಜನಾಂದೋಲನ ನಡೆಸುವುದಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಶುಕ್ರವಾರ ಸುಳಿವು ನೀಡಿದೆ.

ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ಮನ್ನಣೆ ನೀಡಿ ಸುಪ್ರೀಂ ಕೋರ್ಟ್ ಆದಷ್ಟೂ ಬೇಗ ಅಯೋಧ್ಯೆ ವಿವಾದ ಬಗೆಹರಿಸಬೇಕು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್‌ ‘ಭಯ್ಯಾಜಿ’ ಜೋಶಿ ಒತ್ತಾಯಿಸಿದ್ದಾರೆ.

ಒಂದು ವೇಳೆ ಎಲ್ಲ ಮಾರ್ಗಗಳು ಮುಚ್ಚಿದರೆ ಸುಗ್ರೀವಾಜ್ಞೆ ಮೂಲಕವಾದರೂ ರಾಮ ಮಂದಿರ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮಹಾರಾಷ್ಟ್ರದ ಉತ್ತಾನದಲ್ಲಿ ಮುಕ್ತಾಯವಾದ ಮೂರು ದಿನಗಳ ಅಖಿಲ ಭಾರತೀಯ ಕಾರ್ಯಕಾರಿಣಿ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಅಯೋಧ್ಯೆ ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ಸರ್ಕಾರದ ಮೇಲೆ ಒತ್ತಡ ಹೇರಲಾಗದು. ಆರ್‌ಎಸ್‌ಎಸ್‌ ಈ ನೆಲದ ಕಾನೂನು ಮತ್ತು ಸಂವಿಧಾನವನ್ನು ಗೌರವಿಸುತ್ತದೆ. ಅದಕ್ಕಾಗಿಯೇ ಇಷ್ಟೊಂದು ವಿಳಂಬವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ದೀಪಾವಳಿ ಮೊದಲು ಹಿಂದೂಗಳಿಗೆ ಸುಪ್ರೀಂ ಕೋರ್ಟ್ ಸಿಹಿ ಸುದ್ದಿ ನೀಡುವ ನಿರೀಕ್ಷೆ ಇತ್ತು. ಆದರೆ, ಪ್ರಕರಣದ ವಿಚಾರಣೆಯನ್ನು ಜನವರಿಗೆ ಮುಂದೂಡುವ ಮೂಲಕ ನಿರಾಸೆ ತಂದಿದೆ ಎಂದರು.

ಹಿಂದೂಗಳಿಗೆ ಕೋರ್ಟ್ ಅವಮಾನ:ಹಿಂದೂಗಳ ನಂಬಿಕೆ ಮತ್ತು ಭಾವನೆಯ ವಿಷಯವಾದ ಅಯೋಧ್ಯೆಯ ರಾಮ ಜನ್ಮಭೂಮಿ ವಿವಾದ ಆದ್ಯತೆಯ ವಿಷಯವಲ್ಲ ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್‌ ಕೋಟ್ಯಂತರ ಹಿಂದೂಗಳನ್ನು ಅವಮಾನಿಸಿದೆ ಎಂದು ಅವರು ಆರೋಪಿಸಿದ್ದಾರೆ.

ವಿವಾದಿತ ಜಾಗದ ಒಡೆತನದ ಬಗ್ಗೆ ಸುಪ್ರೀಂ ಕೋರ್ಟ್ ಸ್ಪಷ್ಟ ಆದೇಶ ನೀಡದ ಹೊರತು ಕೇಂದ್ರ ಸರ್ಕಾರಕ್ಕೆ ನಿರ್ಧಾರ ತೆಗೆದುಕೊಳ್ಳುವುದು ಕಷ್ಟವಾಗುತ್ತದೆ ಎಂದರು.

ಶಾ–ಭಾಗವತ್‌ ಚರ್ಚೆ:ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಜತೆ ಮಾತುಕತೆ ನಡೆಸಿದರು. ರಾಮ ಮಂದಿರ ಸೇರಿದಂತೆ ಹಲವು ವಿಷಯಗಳ ಕುರಿತು ಅವರು ಚರ್ಚಿಸಿದರು. ಉಳಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಶಬರಿಮಲೆ ಹೋರಾಟಕ್ಕೆ ಬೆಂಬಲ

ಶಬರಿಮಲೆ ಅಯ್ಯಪ್ಪ ದೇವಸ್ಥಾನದೊಳಗೆ ಎಲ್ಲ ವಯಸ್ಸಿನ ಮಹಿಳೆಯರಪ್ರವೇಶಕ್ಕಿದ್ದ ನಿರ್ಬಂಧವನ್ನು ಆರ್‌ಎಸ್‌ಎಸ್‌ ಬೆಂಬಲಿಸಿದೆ.

ಎಲ್ಲ ವಯಸ್ಸಿನ ಮಹಿಳೆಯರಿಗೆ ಮುಕ್ತ ಅವಕಾಶ ಕಲ್ಪಿಸಿದ ಸುಪ್ರೀಂ ಕೋರ್ಟ್ ತೀರ್ಪು ಅನುಷ್ಠಾನ ವಿರೋಧಿಸಿ ಬಿಜೆಪಿ ಮತ್ತು ಅಯ್ಯಪ್ಪ ಭಕ್ತರು ನಡೆಸುತ್ತಿರುವ ಹೋರಾಟಕ್ಕೆ ಸಂಘ ಬೆಂಬಲ ಸೂಚಿಸಿದೆ.

ಯೋಗಿ ಜೋಳಿಗೆಯಲ್ಲಿ ಪರಿಹಾರ!

ಲಖನೌ: ಅಯೋಧ್ಯೆ ವಿವಾದಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಬಳಿ ವಿಶೇಷ ಯೋಜನೆ ಇದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮಹೇಂದ್ರನಾಥ್‌ ಪಾಂಡೆ ಸೂಚ್ಯವಾಗಿ ಹೇಳಿದ್ದಾರೆ.

ಯೋಜನೆಯನ್ನು ಬಹಿರಂಗಪಡಿಸಲು ನಿರಾಕರಿಸಿರುವ ಅವರು, ಶೀಘ್ರದಲ್ಲಿ ಯೋಗಿಯೇ ಅದನ್ನು ಪ್ರಕಟಿಸುತ್ತಾರೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT