ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯ್ಯಪ್ಪ ಸನ್ನಿಧಿಗೆ ಮಹಿಳಾ ಹಾದಿ...

Last Updated 28 ಸೆಪ್ಟೆಂಬರ್ 2018, 20:45 IST
ಅಕ್ಷರ ಗಾತ್ರ

ದೇವಾಲಯ ಪ್ರವೇಶ ಮಹಿಳೆಯ ಹಕ್ಕು

ಆರಂಭದಲ್ಲಿ ಇಬ್ಬರು ನ್ಯಾಯಮೂರ್ತಿಗಳ ಪೀಠವು ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. 2017ರ ಅಕ್ಟೋಬರ್‌ನಲ್ಲಿ ಐವರು ಸದಸ್ಯರ ಸಾಂವಿಧಾನಿಕ ಪೀಠಕ್ಕೆ ಅರ್ಜಿಯ ವಿಚಾರಣೆ ವರ್ಗವಾಯಿತು. ವಿಚಾರಣೆಯ ವಿವಿಧ ಹಂತಗಳಲ್ಲಿ ಸಾಂವಿಧಾನಿಕ ಪೀಠದ ಅಭಿಪ್ರಾಯಗಳು ಈ ಮುಂದಿನಂತಿವೆ

*ಸಂಪ್ರದಾಯದ ಕಾರಣಕ್ಕೆ ಮಹಿಳೆಯರು ದೇವಾಲಯ ಪ್ರವೇಶಿಸುವುದನ್ನು ನಿಷೇಧಿಸುವುದು ಸರಿಯಲ್ಲ

* ದೇವಾಲಯವನ್ನು ಸ್ಥಾಪಿಸಿ, ಸಾರ್ವಜನಿಕಗೊಳಿಸಿದ ಮೇಲೆ ಮಹಿಳೆಯರಿಗೆ ಪ್ರವೇಶ ಇಲ್ಲ ಎಂದರೆ ಅದಕ್ಕೆ ಅರ್ಥವೇ ಇರುವುದಿಲ್ಲ. ಮಹಿಳೆಯರಿಗೆ ಮುಕ್ತ ಪ್ರವೇಶ ಇರಬೇಕು

* ಲಿಂಗದ ಕಾರಣಕ್ಕೆ ಮಹಿಳೆಯರಿಗೆ ಪ್ರವೇಶ ನಿರಾಕರಿಸುವುದರಿಂದ ಅವರ ಮಾನವ ಹಕ್ಕುಗಳಿಗೆ ಮತ್ತು ಧಾರ್ಮಿಕ ಹಕ್ಕುಗಳಿಗೆ ಧಕ್ಕೆಯಾಗುತ್ತದೆ. ನಿಷೇಧವನ್ನು ಒಪ್ಪಿಕೊಳ್ಳುವುದರಿಂದ ಸಮಾನತೆಯ ಹಕ್ಕನ್ನು ಅಪಾಯಕ್ಕೆ ದೂಡಿದಂತಾಗುತ್ತದೆ

* ಅರ್ಜಿದಾರರ ಮತ್ತು ದೇವಸ್ವಂ ಮಂಡಳಿಯ ವಾದಗಳನ್ನು ಸಾಂವಿಧಾನಿಕ ನೆಲೆಯಲ್ಲೇ ಪರಿಶೀಲಿಸುತ್ತೇವೆ

* ಮಹಿಳೆಯರು ಮುಟ್ಟಾಗುತ್ತಾರೆ ಎಂಬ ಒಂದು ಕಾರಣಕ್ಕೇ ಪ್ರವೇಶ ನಿರಾಕರಿಸುವುದು ಎಷ್ಟು ಸರಿ? ಮುಟ್ಟಾದ ಮಹಿಳೆಯರು ದೇವಾಲಯಕ್ಕೆ ಬರುವುದನ್ನು ತಡೆಯುವುದು ಹೇಗೆ ಎಂದು ದೇವಸ್ವಂ ಮಂಡಳಿ ತಲೆಕೆಡಿಸಿಕೊಳ್ಳಬೇಕಿಲ್ಲ. ಮುಟ್ಟಿನ ಅವಧಿಯಲ್ಲಿ ಮಹಿಳೆಯರು ಸ್ವತಃ ತಾವೇ ದೇವಾಲಯಕ್ಕೆ ಬರುವುದಿಲ್ಲ

* ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ನಿರಾಕರಿಸುವುದು ಲಿಂಗ ಅಸಮಾನತೆಯಾಗುತ್ತದೆ. ಅಲ್ಲದೆ ಇದು ಹಿಂದೂ ಮಹಿಳೆಯರ ಧಾರ್ಮಿಕ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಹೀಗಾಗಿ ನಿಷೇಧ ತೆರವಾಗಬೇಕು

**

28 ವರ್ಷಗಳ ಹಿಂದೆಯೇ ಆಕ್ಷೇಪ

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರ ಪ್ರವೇಶ ನಿಷೇಧವನ್ನು ಪ್ರಶ್ನಿಸಿ 1990ರಲ್ಲೇ ಎಸ್‌.ಮಹೇಂದ್ರನ್ ಎಂಬುವವರು ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಕೇರಳ ಹೈಕೋರ್ಟ್‌ ನಿಷೇಧವನ್ನು ಎತ್ತಿಹಿಡಿದು ತೀರ್ಪು ನೀಡಿತ್ತು. ಈ ನಿಷೇಧದ ಬಗ್ಗೆ ಆನಂತರ ಸುಮಾರು 15 ವರ್ಷಗಳವರೆಗೆ ನ್ಯಾಯಾಲಯಗಳ ಮಟ್ಟದಲ್ಲಿ ಯಾವುದೇ ಹೋರಾಟಗಳು ನಡೆಯಲಿಲ್ಲ.

**

ಎಲ್‌ಡಿಎಫ್‌, ಯುಡಿಎಫ್‌ ಸರ್ಕಾರಗಳದ್ದು ಭಿನ್ನರಾಗ

ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶ ನಿಷೇಧದ ಬಗ್ಗೆ ಎಡರಂಗದ ಎಲ್‌ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರಗಳು ಭಿನ್ನ ನಿಲುವು ತಳೆದಿದ್ದವು.

‘ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕು. ಈ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿಯನ್ನು ನಾವು ಬೆಂಬಲಿಸುತ್ತೇವೆ’ ಎಂದು 2007ರಲ್ಲಿ ಅಧಿಕಾರದಲ್ಲಿದ್ದ ಎಲ್‌ಡಿಎಫ್ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿತ್ತು.

2016ರಲ್ಲಿ ಮತ್ತೆ ವಿಚಾರಣೆ ಆರಂಭವಾದಾಗ ಕೇರಳದಲ್ಲಿ ಯುಡಿಎಫ್ ಸರ್ಕಾರ ಇತ್ತು. ರಾಜ್ಯ ಸರ್ಕಾರದ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್‌ ಕೇಳಿತ್ತು. ‘ದೇವಾಲಯಕ್ಕೆ ಮಹಿಳೆಯರ ಪ್ರವೇಶ ನಿಷೇಧ ತೆರವು ಸಾಧ್ಯವಿಲ್ಲ. ಧಾರ್ಮಿಕ ಸಂಪ್ರದಾಯಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ. ಅದಕ್ಕೆ ನಾವು ಬದ್ಧರಾಗಿದ್ದೇವೆ’ ಎಂದು ಯುಡಿಎಫ್ ತನ್ನ ನಿಲುವನ್ನು ಸ್ಪಷ್ಟಪಡಿಸಿತ್ತು.

2016ರ ನವೆಂಬರ್‌ನಲ್ಲಿ ಎಲ್‌ಡಿಎಫ್ ಮತ್ತೆ ಅಧಿಕಾರಕ್ಕೆ ಬಂದಿತ್ತು. ‘ನಾವು ಈ ಹಿಂದಿನ ನಮ್ಮ ನಿಲುವಿಗೆ ಬದ್ಧರಾಗಿರುತ್ತೇವೆ. ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕು’ ಎಂದು ಸರ್ಕಾರ ಹೇಳಿತ್ತು.

**

‘ಮುಟ್ಟಿನ ಅಸ್ಪೃಶ್ಯತೆ’ಗೆ ಕಟ್ಟುಬಿದ್ದಿದ್ದ ದೇವಸ್ವಂ ಮಂಡಳಿ

‘800 ವರ್ಷಗಳಿಂದ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ನಿಷೇಧ ಇದೆ. ಅಷ್ಟು ವರ್ಷಗಳಿಂದ ನಡೆಸಿಕೊಂಡು ಬಂದ ಪದ್ಧತಿಯನ್ನು ಈಗ ತೆರವು ಮಾಡುವುದು ಸರಿಯಲ್ಲ’ ಎಂಬುದು ಶಬರಿಮಲೆ ದೇವಾಲಯದ ನಿರ್ವಹಣೆಯ ಹೊಣೆ ಹೊತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ವಾದವಾಗಿತ್ತು. ಈ ವಾದವನ್ನು ಸುಪ್ರೀಂ ಕೋರ್ಟ್ ಅಲ್ಲಗೆಳೆದಿತ್ತು. ‘ಅಯ್ಯಪ್ಪ ಸ್ವಾಮಿ ಅಖಂಡ ಬ್ರಹ್ಮಚಾರಿ. ಹೀಗಾಗಿ ಮಹಿಳೆಯರು ಅಲ್ಲಿಗೆ ಬರಬಾರದು’ ಎಂದೂ ಟಿಡಿಪಿ ಅಧ್ಯಕ್ಷ ಪ್ರಯಾರ್ ಗೋಪಾಲ್ ಕೃಷ್ಣನ್ ತಿಳಿಸಿದ್ದರು. ಈ ವಾದದಲ್ಲೂ ಹುರುಳಿಲ್ಲ ಎಂಬುದು ನ್ಯಾಯಾಲಯದಅಭಿಪ್ರಾಯವಾಗಿತ್ತು.

‘ಶಬರಿಮಲೆ ದೇವಾಲಯಕ್ಕೆ ಬರುವ ಮುನ್ನ ಮಾಲೆ ಧರಿಸಿ, 41 ದಿನಗಳ ಕಾಲ ವ್ರತ ಆಚರಿಸಬೇಕು. 10ರಿಂದ 50 ವರ್ಷದ ಮಹಿಳೆಯರು ಮುಟ್ಟಾಗುವುದರಿಂದ 41 ದಿನ ವ್ರತ ಆಚರಿಸಲು ಸಾಧ್ಯವಿಲ್ಲ. ಹೀಗಾಗಿ ಅವರು ದೇವಾಲಯಕ್ಕೆ ಬರಬಾರದು’ ಎಂಬುದು ಟಿಡಿಬಿಯು ಸ್ಪಷ್ಟಪಡಿಸಿತು. ಈ ಪ್ರತಿಪಾದನೆಯನ್ನೂ ನ್ಯಾಯಾಲಯ ತಿರಸ್ಕರಿಸಿತ್ತು.

‘ವ್ರತ ನಡೆಯುವ ಸಮಯದಲ್ಲಿ ಲಕ್ಷಾಂತರ ಭಕ್ತರು ಶಬರಿಮಲೆಗೆ ಬರುತ್ತಾರೆ. ಆ ನೂಕುನುಗ್ಗಲಿನಲ್ಲಿ ಮಹಿಳೆಯರಿಗೆ ರಕ್ಷಣೆ ಒದಗಿಸುವುದು ಸಾಧ್ಯವಿಲ್ಲ. ಅಲ್ಲದೆ ಇದು ‘ಸೆಕ್ಸ್‌ ಟೂರಿಸಂ’ಗೂ ಅವಕಾಶ ಮಾಡಿಕೊಡಬಹುದು. ಅದು ನಮಗೆ ಇಷ್ಟವಿಲ್ಲ’ ಎಂದು ಗೋಪಾಲಕೃಷ್ಣನ್ ಹೇಳಿದ್ದರು. ಈ ಹೇಳಿಕೆಗೂ ವ್ಯಾಪಕ ಟೀಕೆ ವ್ಯಕ್ತವಾಗಿತ್ತು

**

ಹ್ಯಾಪಿ ಟು ಬ್ಲೀಡ್

‘ಮಹಿಳೆಯರು ಮುಟ್ಟಾಗಿದ್ದಾರೋ ಇಲ್ಲವೋ ಎಂಬುದನ್ನು ಪತ್ತೆ ಮಾಡುವ ಯಂತ್ರವನ್ನು ಯಾರಾದರೂ ಕಂಡುಹಿಡಿಯಲಿ. ನಂತರ ಮಹಿಳೆಯರಿಗೆ ನಾವು ಪ್ರವೇಶ ನೀಡುತ್ತೇವೆ’ ಎಂದು ಟಿಡಿಪಿ ಅಧ್ಯಕ್ಷ ಪ್ರಯಾರ್ ಗೋಪಾಲಕೃಷ್ಣನ್ ಘೋಷಿಸಿದ್ದರು. ಸಮಾಜದ ಬಹುತೇಕ ಎಲ್ಲ ವಲಯಗಳಿಂದ ಈ ಹೇಳಿಕೆ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಈ ನಿಲುವನ್ನು ‘ಮುಟ್ಟಿನ ಅಸ್ಪೃಶ್ಯತೆ’ ಎಂದು ಕರೆಯಲಾಯಿತು. ಮುಟ್ಟಿನ ಅಸ್ಪೃಶ್ಯತೆ ವಿರುದ್ಧ ಮಹಿಳಾ ಹಕ್ಕುಗಳ ಸಂಘಟನೆಗಳು, ಮಹಿಳೆಯರು ‘ಹ್ಯಾಪಿ ಟು ಬ್ಲೀಡ್’ ಸಂಘಟನೆಯ ನೇತೃತ್ವದಲ್ಲಿ ‘ಹ್ಯಾಪಿ ಟು ಬ್ಲೀಡ್’ ಎಂಬ ಅಭಿಯಾನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಆರಂಭಿಸಿದರು.

ಸಾಮಾನ್ಯ ಮಹಿಳೆಯರು, ಹೋರಾಟಗಾರರು, ನಟಿಯರು ಸ್ಯಾನಿಟರಿ ನ್ಯಾಪ್‌ಕಿನ್‌ ಮೇಲೆ ‘ಹ್ಯಾಪಿ ಟು ಬ್ಲೀಡ್’ ಎಂದು ಬರೆದು, ಅದರೊಂದಿಗೆ ತೆಗೆದುಕೊಂಡ ಸೆಲ್ಫಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡತೊಡಗಿದರು. ಈ ಅಭಿಯಾನ ದೇಶದಾದ್ಯಂತ ವ್ಯಾಪಿಸಿತು. ಇದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಯಿತು.

**

ರಂಗಕ್ಕಿಳಿದ ಯಂಗ್‌ ಇಂಡಿಯನ್ ಲಾಯರ್ಸ್...

ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನಿಡಬೇಕು ಎಂದು ಕೋರಿ ‘ಯಂಗ್ ಇಂಡಿಯನ್ ಲಾಯರ್ಸ್ ಅಸೋಸಿಯೇಷನ್’ ಸುಪ್ರೀಂ ಕೋರ್ಟ್‌ನಲ್ಲಿ 2006ರ ಆಗಸ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತು.‘ಲಿಂಗದ ಕಾರಣಕ್ಕೆ ಶಬರಿಮಲೆ ದೇವಾಲಯದಲ್ಲಿ ಮಹಿಳೆಯರಿಗೆ ಪ್ರವೇಶ ನಿರಾಕರಿಸುವುದು ಸಂವಿಧಾನಕ್ಕೆ ವಿರುದ್ಧ. ಇದು ಲಿಂಗ ತಾರತಮ್ಯವೂ ಹೌದು’ ಎಂಬುದು ಇವರ ವಾದವಾಗಿತ್ತು.

ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಒಪ್ಪಿಗೆ ಸೂಚಿಸಿತ್ತು. ಅಂತೆಯೇ ಈ ವಿಚಾರದಲ್ಲಿ ತಮ್ಮ ನಿಲುವು ಸ್ಪಷ್ಟಪಡಿಸುವಂತೆ ಕೇರಳ ಸರ್ಕಾರಕ್ಕೆ ನ್ಯಾಯಾಲಯವು ಸೂಚಿಸಿತ್ತು.

**

ಪ್ರತಿಕ್ರಿಯೆಗಳು

ಉಳಿದೆಡೆಯೂ ಅನ್ವಯವಾಗಲಿ

ದೇವಸ್ಥಾನಗಳಿಗೆ ಪ್ರವೇಶ ನಿರ್ಬಂಧಿಸುವುದು ಮಹಿಳಾ ಶೋಷಣೆಯ ಇನ್ನೊಂದು ಮುಖ. ಶ್ರದ್ಧೆಯ ಮುಖವಾಡ ಹಾಕಿರುವ ಪುರುಷ ಪ್ರಧಾನ ಮನಸ್ಥಿತಿಯ ಪ್ರತಿರೂಪ. ದೇಶದಲ್ಲಿ ಇನ್ನೂ ಸಾಕಷ್ಟು ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಪ್ರವೇಶ ಇಲ್ಲ. ಈ ತೀರ್ಪು ಅವುಗಳಿಗೂ ಅನ್ವಯ ಆಗಬೇಕು.

–ಸಂಧ್ಯಾ ಹೊನಗುಂಟಿಕರ,ಲೇಖಕಿ, ಕಲಬುರ್ಗಿ

**

ತೀರ್ಪು ಸ್ವಾಗತಾರ್ಹ

ತೀರ್ಪು ಸ್ವಾಗತಾರ್ಹ. ಭಕ್ತಿ ಇರುವ ಮಹಿಳೆ ದೇಗುಲ ಪ್ರವೇಶಿಸಲು ಇಚ್ಛಿಸಿದರೆ ಆಕೆಗೆ ಪ್ರವೇಶ ನಿರಾಕರಿಸುವುದು ಸರಿಯಲ್ಲ. ಈ ತೀರ್ಪು ದೇಶದಾದ್ಯಂತ ಜಾರಿಯಾಗಬೇಕು. ಯಾವುದೇ ಧರ್ಮದವರಾಗಿರಲಿ ಎಲ್ಲರಿಗೂ ಪ್ರವೇಶ ಕಲ್ಪಿಸಬೇಕು. ಭಕ್ತಿ, ಭಾವದಿಂದ ದೇಗುಲಕ್ಕೆ ಹೋಗುವುದರಲ್ಲಿ ತಪ್ಪೇನಿದೆ?

–ನೀಲಾ ಕೆ.,ಉಪಾಧ್ಯಕ್ಷೆ, ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕ

**

ಐತಿಹಾಸಿಕ ತೀರ್ಪು

ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರು ಹೋಗಬಹುದು ಎಂಬ ಸುಪ್ರೀಂ ಕೋರ್ಟ್ ತೀರ್ಪು ಐತಿಹಾಸಿಕವಾಗಿದೆ. ದೇಶದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣಲು ಈ ತೀರ್ಪು ಪ್ರೇರಣೆಯಾಗಲಿದೆ.ದಲಿತರಿಗೆ ಶಬರಿಮಲೆ ಸೇರಿದಂತೆ ಅನೇಕ ಕಡೆ ಪ್ರವೇಶ ಸಿಗುತ್ತಿಲ್ಲ.

–ಮಲ್ಲಿಕಾರ್ಜುನ ಖರ್ಗೆ,ಕಾಂಗ್ರೆಸ್‌ ಸಂಸದ

**

ತೀರ್ಪು ಮರುಪರಿಶೀಲನೆಯಾಗಲಿ

ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಕುರಿತಂತೆ ಸುಪ್ರೀಂ ಕೋರ್ಟ್‌ನ ತೀರ್ಪಿನ ಮರುಪರಿಶೀಲನೆ ಆಗಬೇಕು. ಕೇರಳ ಜನರ ಭಾವನೆ, ಶ್ರದ್ಧೆ, ನಂಬಿಕೆಗಳನ್ನು ಗೌರವಿಸಬೇಕು

–ಶೋಭಾ ಕರಂದ್ಲಾಜೆ,ಬಿಜೆಪಿ ಸಂಸದೆ

**

ಹೆಣ್ಣಿಗೆ ಬಿಡುಗಡೆಯ ಮಾರ್ಗ

ಎರಡೂ ತೀರ್ಪುಗಳನ್ನು ಸ್ವಾಗತಿಸುತ್ತೇನೆ. ಅಷ್ಟಕ್ಕೂ ಹೆಣ್ಣಿಗೆ ದೇವಸ್ಥಾನ ಪ್ರವೇಶಿಸಿ ಆಗಬೇಕಾದ್ದೂ ಏನೂ ಇಲ್ಲ. ಆದರೆ, ಹೆಣ್ಣು ಎನ್ನುವ ಕಾರಣಕ್ಕೆ ದೇವಾಲಯ ಪ್ರವೇಶ ನಿರಾಕರಿಸುತ್ತಿದ್ದರಲ್ಲ ಅದಕ್ಕೆ ತಡೆ ಬಿದ್ದಿರುವುದು ಒಳ್ಳೆಯದು. ದೇವಾಲಯ ಪ್ರವೇಶಿಸಿ ಪ್ರಾಣ ಕಳೆದುಕೊಳ್ಳುವ ದಲಿತರ ವಿಚಾರದಲ್ಲೂ ಸುಪ್ರೀಂ ಕೋರ್ಟ್‌ ಇದೇ ರೀತಿಯಯ ತೀರ್ಪು ಕೊಟ್ಟರೆ ಆಗ ಕೋರ್ಟಿನ ಘನತೆ ಹೆಚ್ಚುತ್ತದೆ.

–ಬಿ.ಟಿ. ಜಾಹ್ನವಿ,ಲೇಖಕಿ, ದಾವಣಗೆರೆ

**

ಪ್ರಗತಿದಾಯಕ ತೀರ್ಪು

ಲಿಂಗ ಸಮಾನತೆ ಸಾಧಿಸುವ ನಿಟ್ಟಿನಲ್ಲಿ ಇದೊಂದು ಅತ್ಯಂತ ಪ್ರಗತಿದಾಯಕ ತೀರ್ಪು. ಧಾರ್ಮಿಕ ಸಂಪ್ರದಾಯಗಳಿಗೆ ಮಹಿಳೆಯರ ಸಾಂವಿಧಾನಿಕ ಹಕ್ಕುಗಳು ಬಲಿಯಾಗಬಾರದು

–ಕಾಂಗ್ರೆಸ್‌

**

ಎಲ್ಲರನ್ನೂ ಒಳಗೊಳ್ಳುವ ಧರ್ಮ

ಸುಪ್ರೀಂ ಕೋರ್ಟ್‌ ತೀರ್ಪು ನಿಜಕ್ಕೂ ಅದ್ಭುತ. ಅದು ಹಿಂದೂ ಧರ್ಮವನ್ನು ಮತ್ತಷ್ಟು ಅಭಿವೃದ್ಧಿಶೀಲ ಮತ್ತು ಎಲ್ಲರನ್ನೂ ಒಳಗೊಳ್ಳುವ ಧರ್ಮವನ್ನಾಗಿಸುತ್ತದೆ

–ಮೇನಕಾ ಗಾಂಧಿ,ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ

**

ತಾರತಮ್ಯಕ್ಕೆ ಕಡಿವಾಣ

ದೇವಸ್ಥಾನದಲ್ಲಿ ಮಹಿಳೆಯರನ್ನು ತಾರತಮ್ಯದಿಂದ ನೋಡುವ ಸಂಪ್ರದಾಯಕ್ಕೆ ಕಡಿವಾಣ ಬೀಳಲಿದೆ. ಮಹಿಳೆಗೆ ಎಲ್ಲೆಡೆಯೂ ಮುಕ್ತ ಪ್ರವೇಶ ಸ್ವಾತಂತ್ರ್ಯ ದೊರೆತಂತಾಗಿದೆ

–ರೇಖಾ ಶರ್ಮಾ,ಅಧ್ಯಕ್ಷೆ, ರಾಷ್ಟ್ರೀಯ ಮಹಿಳಾ ಆಯೋಗ

**

ಮಹಿಳೆಯರಿಗೆ ರಕ್ಷಣೆ ಅಗತ್ಯ

ದೀರ್ಘ ಕಾನೂನು ಹೋರಾಟದ ನಂತರ ಐತಿಹಾಸಿಕ ತೀರ್ಪು ಹೊರ ಬಿದ್ದಿದೆ. ತೀರ್ಪನ್ನು ಅನುಷ್ಠಾನಗೊಳಿಸುವ ಮತ್ತು ದೇವಸ್ಥಾನಕ್ಕೆ ಭೇಟಿ ನೀಡುವ ಮಹಿಳೆಯರಿಗೆ ರಕ್ಷಣೆ ನೀಡುವ ಹೊಣೆ ತಿರುವಾಂಕೂರು ದೇವಸ್ಥಾನ ಮಂಡಳಿಯದ್ದು

ಕಡಕಂಪಲ್ಲಿ ಸುರೇಂದ್ರನ್‌,ಕೇರಳ ಧಾರ್ಮಿಕ ಮತ್ತು ದತ್ತಿ ಸಚಿವ

**

ಸುಪ್ರೀಂ ಕೋರ್ಟ್ ತೀರ್ಪು ನೋವು ತಂದಿದೆ. ಪ್ರತಿ ದೇವಾಲಯಕ್ಕೂ ಅದರದೇ ಆದ ಸಂಪ್ರದಾಯ ಮತ್ತು ಪದ್ಧತಿಗಳಿರುತ್ತವೆ. ತೀರ್ಪಿನಿಂದ ಅವನ್ನು ಬದಲಿಸಬೇಕಾಗಿದೆ

–ಶಶಿ ಕುಮಾರ್‌ ವರ್ಮಾ, ಪಂದಲಂ ರಾಜಮನೆತನದ ಸದಸ್ಯ

**

ತೀರ್ಪು ನಿರಾಶಾದಾಯಕ. ಆದರೂ, ತಂತ್ರಿ ಕುಟುಂಬ ಅದನ್ನು ಸ್ವೀಕರಿಸುತ್ತದೆ. ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವುದು ಕಷ್ಟಕರ

– ಕಂದರಾರು ರಾಜೀವರಾವ್‌, ಶಬರಿಮಲೆಯ ಮುಖ್ಯ ಅರ್ಚಕ

**

ತೀರ್ಪನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ ನಂತರ ಮುಂದಿನ ಹೆಜ್ಜೆಯನ್ನು ನಿರ್ಧರಿಸಲಾಗುವುದು. ಸದ್ಯ ತೀರ್ಪನ್ನು ಅನುಷ್ಠಾನಗೊಳಿಸದೆ ಬೇರೆ ಮಾರ್ಗವಿಲ್ಲ

– ಎ. ಪದ್ಮಕುಮಾರ್‌, ಅಧ್ಯಕ್ಷ, ತಿರುವಾಂಕೂರು ದೇವಸ್ವಂ ಮಂಡಳಿ

**

ಐತಿಹಾಸಿಕ ತೀರ್ಪು. ಪುರುಷ ಮತ್ತು ಮಹಿಳೆ ಸಮಾನರು ಎಂದು ಈ ತೀರ್ಪು ಹೇಳಿದೆ

– ಎಂ.ಕೆ. ಸ್ಟಾಲಿನ್‌, ಡಿಎಂಕೆ ಅಧ್ಯಕ್ಷ

**

ಸಂಸತ್‌ ಮತ್ತು ವಿಧಾನಸಭೆಗಳೂ ಈ ತೀರ್ಪನ್ನು ಅನುಸರಿಸಬೇಕು. ಮಹಿಳೆಯರಿಗೆ ಸಮಾನ ರಾಜಕೀಯ ಪ್ರಾತಿನಿಧ್ಯ ದೊರೆಯಬೇಕು

–ಕನಿಮೊಳಿ, ಡಿಎಂಕೆ ರಾಜ್ಯಸಭಾ ಸದಸ್ಯೆ

**

ಇದೊಂದು ಭಾರಿ ದೊಡ್ಡ ಆಘಾತ. ಶಬರಿಮಲೆಯಲ್ಲಿ ಯಥಾಸ್ಥಿತಿ ಕಾಪಾಡಲು ಸಂಸತ್‌ನಲ್ಲಿ ಮಸೂದೆ ತರಬೇಕು

– ಅರ್ಜುನ್‌ ಸಂಪತ್‌, ಮುಖ್ಯಸ್ಥ, ಹಿಂದೂ ಮಕ್ಕಳ ಕಚ್ಚಿ

**

ಪುರುಷ ಪ್ರಧಾನ ಸಮಾಜದಲ್ಲಿ ಶತಮಾನಗಳಿಂದ ಶೋಷಣೆ, ತಾರತಮ್ಯಕ್ಕೆ ಒಳಗಾದ ಮಹಿಳೆಯರಿಗೆ ನ್ಯಾಯ ಸಿಕ್ಕಿದೆ

– ಸಂತೋಷ್‌ ಹೆಗ್ಡೆ,ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT