ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವುತನಿಗೆ ಒಲಿಯದ ‘ಲಕ್ಷ್ಮಿ’

ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಕೆ ಪರಿಗಣಿಸಿದ ನ್ಯಾಯಾಲಯ
Last Updated 9 ಜನವರಿ 2020, 19:32 IST
ಅಕ್ಷರ ಗಾತ್ರ

ನವದೆಹಲಿ: ಆರೈಕೆ ಕೇಂದ್ರದಲ್ಲಿದ್ದ ಆನೆಯನ್ನು ತನಗೆ ನೀಡಬೇಕು ಎಂದು ಕೋರಿ ಮಾವುತರೊಬ್ಬರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್‌ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಪರಿಗಣಿಸಿಲ್ಲ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ದೆಹಲಿಯ ಯಮುನಾ ಪುಸ್ತಾ ಪ್ರದೇಶದಿಂದ ಆನೆ ಮತ್ತು ಮಾವುತನನ್ನು ಪೊಲೀಸರು ಬಂಧಿಸಿದ್ದರು. ಬಳಿಕ, ಆನೆಯನ್ನು ಹರಿಯಾಣದ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿತ್ತು.

ಪುನರ್ವಸತಿ ಕೇಂದ್ರದಲ್ಲಿ ಕಾನೂನುಬಾಹಿರವಾಗಿ ಆನೆಯನ್ನು ಬಂಧಿಸಿಡಲಾಗಿದೆ. ಹೀಗಾಗಿ ವಾಪಸ್‌ ದೆಹಲಿಗೆ ತಂದು ಹಾಜರುಪಡಿಸಲು ಆದೇಶಿಸಬೇಕು ಎಂದು ಕೋರಿ ಸದ್ದಾಂ ಎನ್ನುವ ಮಾವುತ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಈ ಆನೆಗೆ ’ಲಕ್ಷ್ಮಿ’ ಎಂದು ಹೆಸರಿಡಲಾಗಿತ್ತು.

2008ರಿಂದ ತನಗೆ ‘ಲಕ್ಷ್ಮಿ’ ಜತೆ ಆತ್ಮೀಯತೆ ಬೆಳೆದಿದೆ. ತಾನು ‘ಲಕ್ಷ್ಮಿ’ ಜತೆಗಿದ್ದರೆ ಮಾತ್ರ ಅದು ಆಹಾರ ಸೇವಿಸುತ್ತದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿತ್ತು.

‘ಆನೆಯನ್ನು ಮಾವುತನ ವಶಕ್ಕೆ ನೀಡಲು ಕಾನೂನು ಬದ್ಧ ದಾಖಲೆಗಳಿವೆಯೇ’ ಎಂದು ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ನೇತೃತ್ವದ ಪೀಠವು ಸದ್ದಾಂ ಪರ ವಕೀಲರ ವಿಲ್ಸ್‌ ಮ್ಯಾಥ್ಯೂ ಅವರನ್ನು ಪ್ರಶ್ನಿಸಿತು.

‘ಆನೆಯು ಹರಿಯಾಣದ ಪುನರ್ವಸತಿ ಕೇಂದ್ರದಲ್ಲಿರುವುದರಿಂದ ಮತ್ತೆ ವಾಪಸ್‌ ಪಡೆಯಲು ಮಾವುತ ದಾಖಲೆಗಳನ್ನು ಸಲ್ಲಿಸಬೇಕು’ ಎಂದು ಪೀಠವು ಸೂಚಿಸಿತು.ಆಗ ಮಾವುತ ಪರ ವಕೀಲರು ಅರ್ಜಿಯನ್ನು ವಾಪಸ್‌ ಪಡೆಯುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT