ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ಸಂಪುಟ: ಪ್ರಮುಖ ಖಾತೆಗೆ ಸೆಣಸಾಟ

ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಯಿಂದ ಇಂದು ಖಾತೆ ಘೋಷಣೆ ಸಾಧ್ಯತೆ
Last Updated 2 ಜನವರಿ 2020, 23:55 IST
ಅಕ್ಷರ ಗಾತ್ರ

ಮುಂಬೈ: ಸಚಿವ ಸಂಪುಟ ವಿಸ್ತರಣೆಯ ನಂತರ ಇದೀಗ ಮಹಾರಾಷ್ಟ್ರ ವಿಕಾಸ ಆಘಾಡಿಯೊಳಗೆ(ಎಂವಿಎ) ಪ್ರಮುಖ ಖಾತೆಗಳಿಗೆ
ಮುಸುಕಿನ ಗುದ್ದಾಟ ಆರಂಭವಾಗಿದೆ.

ಮಹಾರಾಷ್ಟ್ರದಲ್ಲಿ ಎಂವಿಎ ಹೆಸರಿನಲ್ಲಿ ಎನ್‌ಸಿಪಿ, ಶಿವಸೇನಾ ಹಾಗೂ ಕಾಂಗ್ರೆಸ್‌ ಈ ಮೂರು ಪಕ್ಷಗಳು ಮೈತ್ರಿ ಮಾಡಿಕೊಂಡು, ಸರ್ಕಾರ ರಚಿಸಿದೆ.

ಸೋಮವಾರ ನಡೆದಸಂಪುಟ ವಿಸ್ತರಣೆ ಬಳಿಕ ಮೂರೂ ಪಕ್ಷಗಳ ಹಿರಿಯ ಮುಖಂಡರ ನಡುವೆ ಪ್ರಮುಖ ಖಾತೆಗಳಿಗಾಗಿ ಸೆಣೆಸಾಟ ನಡೆದಿರುವುದನ್ನು ಶಿವಸೇನಾ ಒಪ್ಪಿಕೊಂಡಿದೆ.

‘ಸಚಿವಾಕಾಂಕ್ಷಿಗಳು ಹೆಚ್ಚಿದ್ದ ಕಾರಣ ಎಲ್ಲರಿಗೂ ಸಚಿವ ಸ್ಥಾನ ನೀಡಲು ಸಾಧ್ಯವಾಗಿಲ್ಲ’ ಎಂದು ಶಿವಸೇನಾ ಹೇಳಿದೆ.

ಇದು ಕಾಂಗ್ರೆಸ್‌ ಸಂಸ್ಕೃತಿಯಲ್ಲ: ಪುಣೆಯಲ್ಲಿ ಶಾಸಕ ಸಂಗ್ರಾಮ್‌ ತೋಪ್ಟೆ ಬೆಂಬಲಿಗರು ಕಾಂಗ್ರೆಸ್‌ ಕಚೇರಿಗೆ ಹಾನಿಯುಂಟು ಮಾಡಿರುವ ಘಟನೆಯನ್ನು ಉಲ್ಲೇಖಿಸಿ,ಶಿವಸೇನಾ ಮುಖವಾಣಿ ‘ಸಾಮ್ನಾ’ದಲ್ಲಿ ಸಂಪಾದಕೀಯ ಪ್ರಕಟಿಸಿದೆ.

‘ಶಿವಸೇನಾದ ಪ್ರತಿಭಟನೆಯನ್ನು ‘ಗೂಂಡಾಗಿರಿ’ ಎಂದು ಕಾಂಗ್ರೆಸ್‌ ಬಣ್ಣಿಸುತ್ತಿತ್ತು. ಇದೀಗ ತೋಪ್ಟೆ ಬೆಂಬಲಿಗರು ‘ಗೂಂಡಾಗಿರಿ’ಯನ್ನೇ ಮಾಡಿದ್ದಾರೆ. ಇದು ಕಾಂಗ್ರೆಸ್‌ ಸಂಸ್ಕೃತಿಗೆ ಸರಿಹೋಗುವುದಿಲ್ಲ’ ಎಂದು ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.

ನಿರಾಶೆಯಿತ್ತು: ‘ವಿಸ್ತರಣೆ ನಂತರ ಸಚಿವ ಸಂಪುಟದಲ್ಲಿ ಸ್ಥಾನ ದೊರೆಯದೇ ಇರುವ ಹಲವರು ನಿರಾಶೆ ವ್ಯಕ್ತಪಡಿಸಿದರು. ಆದರೆ, ಸಚಿವಾಕಾಂಕ್ಷಿಗಳ ಪಟ್ಟಿ ದೊಡ್ಡದಾಗಿತ್ತು. ಹಿಂದೆ ದೇವೇಂದ್ರ ಫಡಣವೀಸ್‌ ಸರ್ಕಾರದ ಸಂಪುಟ ವಿಸ್ತರಣೆ ಸಂದರ್ಭದಲ್ಲೂ ಇದೇ ರೀತಿ ಅಸಮಾಧಾನ ವ್ಯಕ್ತವಾಗಿತ್ತು’ ಎಂದು ಶಿವಸೇನಾ ತಿಳಿಸಿದೆ.

ಇಂದು ಖಾತೆ ಹಂಚಿಕೆ: ‘ಖಾತೆ ಹಂಚಿಕೆಯಲ್ಲಿ ಯಾವುದೇ ಭಿನ್ನಾಭಿಪ್ರಾಯ, ಅಸಮಾಧಾನಗಳಿಲ್ಲ. ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಶುಕ್ರವಾರ ಸಚಿವರ ಖಾತೆಗಳನ್ನು ಘೋಷಿಸಲಿದ್ದಾರೆ’ ಎಂದುಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಹೇಳಿದರು. ‘ಖಾತೆ ಹಂಚಿಕೆ ಅಂತಿಮವಾಗಿದ್ದು, ಯಾರಿಗೂ ಅಸಮಾಧಾನವಿಲ್ಲ’ ಎಂದರು.

‘ಮಾತು ಉಳಿಸಿಕೊಂಡಿದ್ದೇವೆ’
‘ಶಿವಸೇನಾಗೆ ಬೆಂಬಲ ನೀಡಿದ್ದ ಮೂರು ಪಕ್ಷೇತರರಿಗೆ ಸಚಿವ ಸ್ಥಾನ ನೀಡುವ ಮುಖಾಂತರ ಮಾತು ಉಳಿಸಿಕೊಂಡಿದ್ದೇವೆ’ ಎಂದು ಶಿವಸೇನಾ ತಿಳಿಸಿದೆ. ‘ಎನ್‌ಸಿಪಿ ತೊರೆದು ಶಿವಸೇನಾ ಸೇರಿದ್ದ ಶಾಸಕ ಭಾಸ್ಕರ್‌ ಜಾಧವ್‌ಗೆ ಸಚಿವ ಸ್ಥಾನದ ಭರವಸೆ ನೀಡಲಾಗಿರಲಿಲ್ಲ’ ಎಂದು ಶಿವಸೇನಾ ತಿಳಿಸಿದೆ.

ಕಂದಾಯ ಇಲಾಖೆ ಮೇಲೆ ಚವಾಣ್‌ ಕಣ್ಣು
‘ಹಿರಿಯ ಕಾಂಗ್ರೆಸ್‌ ಮುಖಂಡ, ಮಾಜಿ ಮುಖ್ಯಮಂತ್ರಿ ಅಶೋಕ್‌ ಚವಾಣ್‌ ಕಂದಾಯ ಇಲಾಖೆಗೆ ಆಗ್ರಹಿಸಿದ್ದಾರೆ. ಆದರೆ ಈ ಇಲಾಖೆ ಈಗಾಗಲೇ ಕಾಂಗ್ರೆಸ್‌ ಮುಖಂಡ ಬಾಳಾಸಾಹೆಬ್‌ ತೋರಟ್‌ ಅವರ ಬಳಿ ಇದೆ’ ಎಂದು ಸೇನಾ ತಿಳಿಸಿದೆ.

ಯುವ ಕಾಂಗ್ರೆಸ್‌ ಪ್ರತಿಭಟನೆ
ಶಾಸಕಿ ಪ್ರಣಿತಿ ಶಿಂಧೆ ಅವರಿಗೆ ಸಚಿವ ಸ್ಥಾನ ನೀಡದೇ ಇರುವುದನ್ನು ಖಂಡಿಸಿಸೋಲಾಪುರದ ಕಾಂಗ್ರೆಸ್‌ ಕಚೇರಿ ‘ಕಾಂಗ್ರೆಸ್‌ ಭವನ’ದ ಎದುರು ಗುರುವಾರ ಯುವ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇಲ್ಲಿಯವರೆಗೂ ನೂರಕ್ಕೂ ಅಧಿಕ ಸೋಲಾಪುರ ನಗರ ಘಟಕದ ಯುವ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಎನ್‌ಎಸ್‌ಯುಐ ಕಾರ್ಯಕರ್ತರು ಶಿಂಧೆ ಬೆಂಬಲಕ್ಕೆ ನಿಂತು ರಾಜೀನಾಮೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT