ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃದ್ಧರ ಪಾಲನೆ: ಸೊಸೆ–ಅಳಿಯನಿಗೂ ಅನ್ವಯ

ಪೋಷಕರು, ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಲ್ಯಾಣ ತಿದ್ದುಪಡಿ ಕಾಯ್ದೆ 2019ರಲ್ಲಿ ಉಲ್ಲೇಖ
Last Updated 5 ಡಿಸೆಂಬರ್ 2019, 20:20 IST
ಅಕ್ಷರ ಗಾತ್ರ

ನವದೆಹಲಿ: ವಯಸ್ಸಾದ ಮಾವ–ಅತ್ತೆಯ ಯೋಗಕ್ಷೇಮ ನೋಡಿಕೊಳ್ಳಲುಅಳಿಯ ಅಥವಾ ಸೊಸೆ ವಿಫಲರಾದಲ್ಲಿ, ಅವರಿಗೆ ಪ್ರತಿ ತಿಂಗಳು ಜೀವನ ನಿರ್ವಹಣೆ ವೆಚ್ಚ ನೀಡಬೇಕು. ‘ಪೋಷಕರು ಹಾಗೂ ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಲ್ಯಾಣ ತಿದ್ದುಪಡಿ ಮಸೂದೆ 2019’ರಲ್ಲಿ ಈ ಅಂಶವನ್ನು ಸೇರ್ಪಡೆಗೊಳಿಸಲಾಗಿದೆ

ಮಸೂದೆಗೆ ಕಾನೂನು ರೂಪ ಲಭಿಸಿದ ಬಳಿಕ, ತಮ್ಮ ಯೋಗಕ್ಷೇಮ ನೋಡಿಕೊಳ್ಳದ ಅಥವಾ ಜೀವನ ನಿರ್ವಹಣೆಯ ವೆಚ್ಚವನ್ನು ಭರಿಸದ ಮಗ ಅಥವಾ ಮಗಳು/ ಅಳಿಯ ಅಥವಾ ಸೊಸೆಯ ವಿರುದ್ಧ ಹಿರಿಯ ನಾಗರಿಕರು ನಿರ್ವಹಣಾ ಪ್ರಾಧಿಕಾರಕ್ಕೆ ದೂರು ನೀಡಿ ನ್ಯಾಯ ಕೇಳಬಹುದು.

ಈಗಾಗಲೇ ಕೇಂದ್ರ ಸಚಿವ ಸಂಪುಟದ ಅನುಮೋದನೆ ಪಡೆದಿರುವ ಮಸೂದೆಯು ಸಂಸತ್ತಿನಲ್ಲಿ ಸದ್ಯದಲ್ಲೇ ಮಂಡನೆಯಾಗಲಿದೆ. ನಿರ್ವಹಣೆ ವೆಚ್ಚಕ್ಕೆ ನಿಗದಿ ಮಾಡಿದ್ದ ಗರಿಷ್ಠ ₹10 ಸಾವಿರದ ಮಿತಿಯನ್ನು ತೆಗೆದುಹಾಕಲಾಗಿದೆ. ಆದ್ದರಿಂದ ಹೆಚ್ಚು ಗಳಿಸುವವರು ತಮ್ಮ ಪೋಷಕರಿಗೆ ಹೆಚ್ಚು ಹಣ ನೀಡಬೇಕಾಗುತ್ತದೆ. ನಿಯಮ ಉಲ್ಲಂಘಿಸಿದವರಿಗೆ ₹5 ಸಾವಿರ ದಂಡ ಅಥವಾ ಮೂರು ತಿಂಗಳು ಜೈಲು ಅಥವಾ ಎರಡನ್ನೂ ಒಟ್ಟಿಗೆ ವಿಧಿಸುವ ಅವಕಾಶವನ್ನು ನೀಡಲಾಗಿದೆ.

ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ 80 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರು ದೂರು ನೀಡಿದರೆ, ಆದ್ಯತೆಯ ಮೇರೆಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಎಲ್ಲಾ ವೃದ್ಧಾಶ್ರಮಗಳು, ಪಾಲನಾ ಕೇಂದ್ರಗಳು ಸಂಬಂಧಪಟ್ಟ ಪ್ರಾಧಿಕಾರದಿಂದ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ವೃದ್ಧರ ಸಮಸ್ಯೆಗಳನ್ನು ಆಲಿಸಲು ಎಲ್ಲಾ ಪೊಲೀಸ್ ಠಾಣೆಗಳಲ್ಲಿ ನೋಡಲ್ ಅಧಿಕಾರಿಯನ್ನು ನೇಮಿಸುವ ಪ್ರಸ್ತಾವವೂ ಈ ಕರಡು ಮಸೂದೆಯಲ್ಲಿ ಇದೆ.

‘ನಿರ್ವಹಣೆ’ ಎಂಬ ಪದದ ಅರ್ಥವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. ಹಿರಿಯ ನಾಗರಿಕರಿಗೆ ಊಟ, ಬಟ್ಟೆ, ಆಶ್ರಯ ಹಾಗೂ ಆರೋಗ್ಯ ರಕ್ಷಣೆಯ ಜತೆಗೆ ಅವರ ಸುರಕ್ಷತೆ ಮತ್ತು ಭದ್ರತೆ ವಿಚಾರವೂ ಈಗ ಸೇರ್ಪಡೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT