ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ ವಿಭಜನೆ ಹೇಳಿಕೆ: ಬಂಧಿಸಿದ್ದೇವೆ ಎಂದ ಪೊಲೀಸರು, ಶರಣಾಗಿದ್ದೇನೆ ಎಂದ ಇಮಾಮ್

Last Updated 28 ಜನವರಿ 2020, 12:52 IST
ಅಕ್ಷರ ಗಾತ್ರ

ಪಟ್ನಾ: ಅಸ್ಸಾಂ ವಿಭಜನೆ ಹೇಳಿಕೆ ನೀಡಿರುವ ಆರೋಪದಡಿಯಲ್ಲಿ ಜೆಎನ್‌ಯು ಮಾಜಿ ವಿದ್ಯಾರ್ಥಿ ಹಾಗೂ ಸಿಎಎ ವಿರೋಧದ ಶಹೀನ್ ಬಾಗ್ ಪ್ರತಿಭಟನೆ ಆಯೋಜಕರಲ್ಲಿ ಒಬ್ಬರಾಗಿರುವ ಶಾರ್ಜೀಲ್ ಇಮಾಮ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರೆ, ತಾನೇ ಪೊಲೀಸರಿಗೆ ಶರಣಾಗಿದ್ದೇನೆ ಎಂದು ಇಮಾಮ್ ತಿಳಿಸಿದ್ದಾರೆ.

ಶಾರ್ಜೀಲ್ ಇಮಾಮ್ ವಿರುದ್ಧ ದೇಶಾದ್ಯಂತ ಐದು ರಾಜ್ಯಗಳಲ್ಲಿ ದೇಶದ್ರೋಹ ಪ್ರಕರಣಗಳು ದಾಖಲಾಗಿವೆ. ವಿಡಿಯೊ ವೈರಲ್ ಆದ ನಾಲ್ಕೈದು ದಿನಗಳು ತಲೆ ಮರೆಸಿಕೊಂಡಿದ್ದ ಶಾರ್ಜೀಲ್ ಇಮಾಮ್‌ನನ್ನು ಇದೀಗ ದೆಹಲಿ ಪೊಲೀಸರು ಬಿಹಾರದ ಜೆಹನಾಬಾದ್‌ನಲ್ಲಿ ಬಂಧಿಸಿದ್ದಾರೆ.

ಹಲವು ಪೊಲೀಸ್ ತಂಡಗಳು ಬಿಹಾರದ ಜೆಹನಾಬಾದ್ ಮತ್ತು ಇತರೆ ಪ್ರದೇಶಗಳಲ್ಲಿ ದಾಳಿ ನಡೆಸಿದ್ದ ವೇಳೆ ತಾಕೊ ಪ್ರದೇಶದಲ್ಲಿಇಮಾಮ್‌ನನ್ನು ಬಂಧಿಸಲಾಗಿದ್ದು, ಮುಂದಿನ ವಿಚಾರಣೆಗಾಗಿ ದೆಹಲಿಗೆ ಕರೆದೊಯ್ಯಲಾಗಿದೆ.

ಶಾರ್ಜೀಲ್ ಇಮಾಮ್ ಅವರಿದ್ದ ವಿಡಿಯೊದಲ್ಲಿ ಅಖಂಡ ಭಾರತದಿಂದ ಅಸ್ಸಾಂ ಅನ್ನು ಬೇರ್ಪಡಿಸಬೇಕು. ತಿಂಗಳುಗಳ ಕಾಲವಾದರೂ ಈಶಾನ್ಯ ರಾಜ್ಯವನ್ನು ಭಾರತದಿಂದ ಬೇರ್ಪಡಿಸಬೇಕು ಎಂದು ಹೇಳಿದ್ದರು. ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಮಾತನಾಡುವ ವೇಳೆ ಹೇಳಿಕೆ ನೀಡಿದ್ದು ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ದೆಹಲಿ ಪೊಲೀಸರು ಇಮಾಮ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿಕೊಂಡಿದ್ದರು. ಅದಾದ ಬಳಿಕ ಇಮಾಮ್ ನಾಪತ್ತೆಯಾಗಿದ್ದರು.

ಕಳೆದ ಡಿಸೆಂಬರ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಜಾಮಿಯಾ ಮಿಲಿಯ ಇಸ್ಲಾಮಿಯಕ್ಯಾಂಪಸ್‌ನಲ್ಲಿ ಕೂಡ ಇಂತದ್ದೇ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಕುರಿತು ದೆಹಲಿಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ನ್ಯಾಯಾಲಯ ತೀರ್ಮಾನ ಕೈಗೊಳ್ಳಲಿದೆ

ಈ ಕುರಿತು ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಮಾತನಾಡಿ, ಜೆಎನ್‌ಯು ಮಾಜಿ ವಿದ್ಯಾರ್ಥಿ ಶಾರ್ಜೀಲ್ ಇಮಾಮ್ ಅನ್ನು ಬಿಹಾರದ ಜೆಹನಾಬಾದ್‌ನಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಯಾರೊಬ್ಬರೂ ಕೂಡದೇಶದ ಹಿತಾಸಕ್ತಿಯನ್ನು ಬದಿಗೊತ್ತುವುದು ಸರಿಯಲ್ಲ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ನ್ಯಾಯಾಲಯ ಈ ಕುರಿತು ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

ನಾನೇ ಪೊಲೀಸರಿಗೆ ಶರಣಾದೆ

ಇನ್ನೊಂದೆಡೆ ಟ್ವೀಟ್ ಮಾಡಿರುವ ಶಾರ್ಜೀಲ್ ಇಮಾಮ್, ಜನವರಿ 28, 2020ರಂದು ಮಧ್ಯಾಹ್ನ 3ಗಂಟೆಗೆ ದೆಹಲಿ ಪೊಲೀಸರಿಗೆ ನಾನು ಶರಣಾಗಿದ್ದೇನೆ. ಯಾವುದೇ ರೀತಿಯ ತನಿಖೆಗೆ ನಾನು ಸಿದ್ಧವಿದ್ದೇನೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ನನಗೆ ಸಂಪೂರ್ಣ ನಂಬಿಕೆಯಿದೆ. ನನ್ನ ರಕ್ಷಣೆ ಮತ್ತು ಭದ್ರತೆಯು ಇದೀಗ ದೆಹಲಿ ಪೊಲೀಸರ ಕೈಲಿದೆ ಎಂದು ಹೇಳಿದ್ದಾರೆ.

ಭಾರತದಿಂದ ಈಶಾನ್ಯ ಭಾರತವನ್ನು ಪ್ರತ್ಯೇಕಿಸುವಂತೆ ಕರೆ ನೀಡಿದ್ದಾರೆ ಎನ್ನುವ ಸಂಬಂಧ ದೆಹಲಿಯಲ್ಲಿ ದೇಶದ್ರೋಹ ಪ್ರಕರಣ ದಾಖಲಾಗಿತ್ತು. ಇದಲ್ಲದೆ ಅವರ ಮೇಲೆ ಅಸ್ಸಾಂ, ಮಣಿಪುರ, ಅರುಣಾಚಲ ಪ್ರದೇಶ ಮತ್ತು ಉತ್ತರ ಪ್ರದೇಶದಲ್ಲೂ ಕೂಡ ಪ್ರಕರಣಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT