ಶುಕ್ರವಾರ, ಸೆಪ್ಟೆಂಬರ್ 17, 2021
29 °C

ದೇಶವೊಂದರ ವಿರುದ್ಧ ಇಂಥ ಬೆದರಿಕೆ ನೋಡಿಯೇ ಇಲ್ಲ: ಟ್ರಂಪ್‌ ಹೇಳಿಕೆಗೆ ತರೂರ್‌ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮಲೇರಿಯಾ ನಿರೋಧಕ ಔಷಧ ಪೂರೈಕೆ ವಿಚಾರದಲ್ಲಿ ಭಾರತದ ವಿರುದ್ಧ ಪ್ರತೀಕಾರದ ಮಾತುಗಳನ್ನಾಡಿದ ಟ್ರಂಪ್‌ ಅವರ ವಿರುದ್ಧ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಅವರು ಕಿಡಿಕಾರಿದ್ದಾರೆ. ‘ಒಂದು ದೇಶದ ವಿರುದ್ಧ ಬೆದರಿಕೆ ಹಾಕುವುದನ್ನು ನಾನೂ ಈ ವರೆಗೆ ನೋಡಿಯೇ ಇಲ್ಲ,’ ಎಂದು ಶಶಿ ತರೂರ್‌ ಹೇಳಿದ್ದಾರೆ. 

ವಿಶ್ವಸಂಸ್ಥೆಯ ಅಧೀನ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿರುವ ಸಂಸದ ಶಶಿ ತರೂರು ಅವರು, ಟ್ರಂಪ್‌ ಹೇಳಿಕೆ ಕುರಿತು ಇಂದು ಬೆಳಗ್ಗೆ ಟ್ವೀಟ್‌ ಮಾಡಿದ್ದಾರೆ. ‘ದೇಶವೊಂದರ ಅಥವಾ ಸರ್ಕಾರವೊಂದರ ಮುಖ್ಯಸ್ಥರೊಬ್ಬರು ನೇರವಾಗಿ ಇನ್ನೊಂದು ದೇಶಕ್ಕೆ ಹೀಗೆ ಬೆದರಿಕೆ ಹಾಕುವುದನ್ನು ಜಾಗತಿಕ ವ್ಯವಹಾರಗಳ ನನ್ನ ಈ ವರೆಗಿನ ಬದುಕಿನಲ್ಲಿ ನೋಡಿಯೇ ಇಲ್ಲ.  ಹೈಡ್ರಾಕ್ಸಿಕ್ಲೋರೋಕ್ವಿನ್ ವಿಚಾರದಲ್ಲಿ ಭಾರತ ಪೂರೈಕೆ ರಾಷ್ಟ್ರ. ಅದು ನಿಮಗೆ ಪೂರೈಕೆಯಾಗುವುದು ಭಾರತ ಮಾರಾಟ ಮಾಡಿದಾಗ ಮಾತ್ರ,’ ಎಂದು ತರೂರ್‌ ತೀಕ್ಷ್ಣ ತಿರುಗೇಟು ನೀಡಿದ್ದಾರೆ. 

ವೈಟ್‌ ಹೌಸ್‌ನಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಡೊನಾಲ್ಡ್‌ ಟ್ರಂಪ್‌, ಅಮೆರಿಕದೊಂದಿಗೆ ಭಾರತದ ಸಂಬಂಧ ಉತ್ತಮವಾಗಿದೆ. ಮಲೇರಿಯಾ ನಿರೋಧಕ ಔಷಧ ಬೇಕೆಂಬ ಅಮೆರಿಕ ಕೋರಿಕೆಯ ಹೊರತಾಗಿಯೂ ಭಾರತದ ಔಷಧ ರಫ್ತುವಿನ ಮೇಲಿನ ನಿರ್ಬಂಧವನ್ನು ತೆರವು ಮಾಡದೇ ಇರುವುದಕ್ಕೆ ನನಗೆ ಕಾರಣ ತಿಳಿಯುತ್ತಿಲ್ಲ. ನಾನು ಈ ಬಗ್ಗೆ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ.  ಪೂರೈಕೆ ಸಾಧ್ಯವಿಲ್ಲ ಎಂದು ಆಗಲೇ ಹೇಳಬಹುದಿತ್ತು. ಭಾರತದ ನಡೆ ನನಗೆ ಆಶ್ಚರ್ಯ ತರಿಸಿದೆ. ಹಾಗೇನಾದರೂ ಭಾರತ ಮಲೇರಿಯಾ ನಿರೋಧಕ ಔಷಧ ಪೂರೈಸದೇ ಹೋದರೆ ಅದಕ್ಕೆ ಪ್ರತಿಯಾಗಿ ಪ್ರತೀಕಾರವಂತೂ ಇದ್ದೇ ಇರುತ್ತದೆ. ಅಂಥದ್ದೊಂದು ನಿರ್ಧಾರವನ್ನು ಅಮೆರಿಕ ಕೈಗೊಳ್ಳಬಾರದೇಕೆ?’ ಎಂದು ಟ್ರಂಪ್‌ ಪ್ರಶ್ನಿಸಿದ್ದಾರೆ. 

ದೇಶದ ಕೋವಿಡ್‌–19 ರೋಗಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಈಗಾಗಲೇ ಸಲ್ಲಿಸಿರುವ ಬೇಡಿಕೆಯಂತೆ ಹೈಡ್ರಾಕ್ಸಿಕ್ಲೊರೋಕ್ವಿನ್‌ ಮಾತ್ರೆಗಳ ರಫ್ತಿಗೆ ಸಹಕರಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶನಿವಾರ ಮನವಿ ಮಾಡಿದ್ದರು. 

‘ಪ್ರಧಾನಿ ಮೋದಿ ಅವರೊಂದಿಗೆ ಶನಿವಾರ ನಾನು ಮಾತನಾಡಿ, ಮಲೇರಿಯಾ ಚಿಕಿತ್ಸೆಗಾಗಿ ಬಳಸುವ ಈ ಮಾತ್ರೆಗಳನ್ನು ಅಮೆರಿಕಕ್ಕೆ ಕಳುಹಿಸಲು ಕ್ರಮ ಕೈಗೊಳ್ಳುವಂತೆ ಕೋರಿದ್ದೇನೆ. ಭಾರತ ದೊಡ್ಡ ಪ್ರಮಾಣದಲ್ಲಿ ಈ ಮಾತ್ರೆಯನ್ನು ಉತ್ಪಾದಿಸುತ್ತದೆ. ಹೀಗಾಗಿ ನನ್ನ ಮನವಿಯನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುತ್ತದೆ’ ಎಂದು ಟ್ರಂಪ್‌ ಶನಿವಾರ ಹೇಳಿದ್ದರು. 

ಅಮೆರಿಕದಲ್ಲಿ 3 ಲಕ್ಷಕ್ಕೂ ಅಧಿಕ ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 10 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. 

ಕೊರೊನಾ ವೈರಸ್‌ ಸೋಂಕು ನಿವಾರಣೆ ಮಾಡಲು ವಿಶ್ವದಲ್ಲಿ ಮಲೇರಿಯಾ ನಿರೋಧಕ ಮಾತ್ರೆಗಳನ್ನು ತಾತ್ಕಾಲಿಕವಾಗಿ ಬಳಲಸಾಗುತ್ತಿದೆ. ಮಲೇರಿಯಾ ನಿರೋಧಕವು ಕೊರೊನಾ ವೈರಸ್‌ ವಿರುದ್ಧ ಪರಿಣಾಮಕಾರಿ ಔಷಧವಾಗಿಯೂ ಕೆಲಸ ಮಾಡುತ್ತಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು