ಶುಕ್ರವಾರ, ನವೆಂಬರ್ 22, 2019
26 °C

‘ಉಳಿಯೋ ಭರವಸೆ ಇಲ್ಲ, ಬಂಕರ್ ರಿಪೇರಿ ಮಾಡಿಸಿ’ ಎಲ್‌ಒಸಿ ಗ್ರಾಮಸ್ಥರ ಒತ್ತಾಯ

Published:
Updated:

ಶ್ರೀನಗರ: ‘ಪಾಕಿಸ್ತಾನ ಸೇನೆ ಉಡಾಯಿಸುತ್ತಿದ್ದ ಷೆಲ್‌ಗಳು ಒಂದೇ ಸಮ ನಮ್ಮ ಊರಿನ ಮೇಲೆ ಬಂದು ಬೀಳುತ್ತಿದ್ದವು. ಉಸಿರು ಬಿಗಿಹಿಡಿದು ನಾವೆಲ್ಲರೂ ಹರಕುಮುರುಕು ಬಂಕರ್‌, ನೆಲಮಾಳಿಗೆಗಳತ್ತ ಓಡಿದೆವು. ಅಪ್ಪ–ಅಮ್ಮ–ಮಕ್ಕಳನ್ನು ತಬ್ಬಿ ಕೂತುಬಿಟ್ಟೆವು. ಬೆಳಕು ಹರಿಯುವುದನ್ನು ನೋಡಲು ನಾವು ಬದುಕಿರಲ್ಲ. ಸತ್ತರೆ ಒಟ್ಟಿಗೆ ಸಾಯೋಣ ಅಂತ ತೀರ್ಮಾನಿಸಿಕೊಂಡಿದ್ದೆವು...’

– ಪಾಕಿಸ್ತಾನ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಿಂದ ಭೀತರಾದ ತಂಗಧಾರ್ ಸೆಕ್ಟರ್‌ನ ಗುಂಡಿಶಾಟ್ ಗ್ರಾಮಸ್ಥರು ಶನಿವಾರದ ರಾತ್ರಿ ಕಳೆದ ಬಗೆಯನ್ನು ನೆನಪಿಸಿಕೊಳ್ಳುವುದು ಹೀಗೆ. ಗ್ರಾಮಸ್ಥರು ಮತ್ತು ಪೊಲೀಸ್ ಅಧಿಕಾರಿಗಳ ಹೇಳಿಕೆಗಳನ್ನು ಇದೇ ಮೊದಲ ಬಾರಿಗೆ ‘ಹಿಂದೂಸ್ತಾನ್ ಟೈಮ್ಸ್‌’ ವರದಿ ಮಾಡಿದೆ.

ಇದನ್ನೂ ಓದಿ: ಗಡಿಯಲ್ಲಿ ಸದ್ದು ಮಾಡುತ್ತಿವೆ ಫಿರಂಗಿಗಳು, ಐವರು ಪಾಕ್ ಸೈನಿಕರ ಹತ್ಯೆ

ಜಮ್ಮು ಮತ್ತು ಕಾಶ್ಮೀರದ 744 ಕಿ.ಮೀ. ಉದ್ದದ ಗಡಿ ನಿಯಂತ್ರಣ ರೇಖೆ ಮತ್ತು 198 ಕಿ.ಮೀ. ಉದ್ದದ ಅಂತರರಾಷ್ಟ್ರೀಯ ಗಡಿಯಲ್ಲಿ ಪರಸ್ಪರ ಗುಂಡಿನ ಚಕಮಕಿ ನಡೆಸುವುದಿಲ್ಲ ಎಂದು 2003ರಲ್ಲಿ ಭಾರತ ಮತ್ತು ಪಾಕ್ ಕದನ ವಿರಾಮ ಒಪ್ಪಂದ ಮಾಡಿಕೊಂಡಿದ್ದವು. ಈ ಒಪ್ಪಂದದ ನಂತರ ಇದೇ ಮೊದಲ ಬಾರಿಗೆ ಪಾಕಿಸ್ತಾನ ಇಷ್ಟೊ ದೊಡ್ಡ ಮಟ್ಟದ ಶೆಲ್ ದಾಳಿ ನಡೆಸಿದೆ.

‘ಪಾಕ್‌ ಪಡೆಗಳು ಉಡಾಯಿಸಿದ ಫಿರಂಗಿ ಗುಂಡುಗಳು ಮನೆಗಳು, ಗೋದಾಮುಗಳು ಮತ್ತು ಕೊಟ್ಟಿಗೆಗಳ ಮೇಲೆಲ್ಲಾ ಸ್ಫೋಟಿಸಿವೆ. ನಾಗರಿಕರ ವಾಸಸ್ಥಾನ ಗುರಿಯಾಗಿಸಿ ನಡೆಸಿದ ಈ ಶೆಲ್ ದಾಳಿಯಿಂದ ಸುಮಾರು ಎಂಟು ಮನೆಗಳು ಹಾಳಾಗಿವೆ, ಅಪಾರ ಪ್ರಮಾಣದ ದವಸ, ಧಾನ್ಯ ಹಾಳಾಗಿದೆ. ಕೊಟ್ಟಿಗೆಗಳ ಮೇಲೆ ಶೆಲ್‌ಗಳು ಸ್ಫೋಟಿಸಿದ ಕಾರಣ 8 ಆಕಳುಗಳು ಮತ್ತು 10 ಮೇಕೆಗಳು ಸತ್ತಿವೆ’ ಎಂದು ಪೊಲೀಸರು ಹೇಳುತ್ತಾರೆ.

2005ರಲ್ಲಿ ಸಂಭವಿಸಿದ್ದ ಭೂಕಂಪದಿಂದ ಹಲವು ಭೂಗತ ಬಂಕರ್‌ಗಳು ಹಾಳಾಗಿದ್ದವು. ಗಡಿಯಲ್ಲಿ ಶಾಂತ ಸ್ಥಿತಿ ಇದ್ದ ಕಾರಣ ಅವನ್ನು ರಿಪೇರಿ ಮಾಡಿಸಿಕೊಳ್ಳಬೇಕು ಎಂದು ಜನರಿಗೆ ಅನ್ನಿಸಲಿರಲಿಲ್ಲ. ಆದರೆ ಈಗ ಪರಿಸ್ಥಿತಿ ನೋಡಿದರೆ ಭಯವಾಗ್ತಿದೆ. ಆದಷ್ಟು ಬೇಗ ಬಂಕರ್‌ಗಳನ್ನು ರಿಪೇರಿ ಮಾಡಲು ಸರ್ಕಾರ ಗಮನ ಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.

ಗಡಿ ನಿಯಂತ್ರಣ ರೇಖೆಯ ಸಮೀಪ ಇರುವ ಗ್ರಾಮಗಳಲ್ಲಿ ಹಲವು ಜನರು ಮನೆಗಳನ್ನು ಬಿಟ್ಟು, ಭೂಗತ ಬಂಕರ್‌ಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. 


ಕಾಶ್ಮೀರದಲ್ಲಿ ಹುತಾತ್ಮರಾದ ಹವಾಲ್ದಾರ್‌ ಪದಮ್ ಬಹದ್ದೂರ್ ಶ್ರೇಷ್ಠ ಮತ್ತು ರೈಫಲ್‌ಮನ್ ಗಾಮಿಲ್ ಕುಮಾರ್ ಶ್ರೇಷ್ಠ

ಪಾಕ್‌ ಪಡೆಗಳು ಉಡಾಯಿಸಿದ ಹಲವು ಶೆಲ್‌ಗಳು ತಂಗಧಾರ್‌ನಲ್ಲಿರುವ ಸೇನಾ ಠಾಣೆಯ ಮೇಲೆ ಸ್ಫೋಟಿಸಿವೆ. ಒಂದು ಶೆಲ್ ಮಾತ್ರ ಗುಂಡಿಶಾಟ್‌ ಗ್ರಾಮದ ಸಿದ್ದಿಕ್ ಅವರ ಮನೆಯ ಬಳಿಯೇ ಸ್ಫೋಟಿಸಿ, ಅವರ ಸಾವಿಗೆ ಕಾರಣವಾಯಿತು. ‘ಗ್ರಾಮದ ಇತರ ಮೂವರಿಗೆ ಗಾಯಗಳಾಗಿವೆ. ಒಬ್ಬರ ಸ್ಥಿತಿ ಗಂಭೀರವಾಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಾಕ್‌ ಪಡೆಗಳ ದಾಳಿಗೆ ಗ್ರಾಮದ ನಿವಾಸಿ ಮೊಹಮದ್ ಸಿದಿಕ್ (50) ಮತ್ತು ಇಬ್ಬರು ಸೈನಿಕರು ಹುತಾತ್ಮರಾಗಿದ್ದರು. ಇದಾದ ನಂತರ ಭಾರತೀಯ ಸೇನೆ ಪಾಕ್‌ ಆಕ್ರಮಿಕ ಕಾಶ್ಮೀರದ ಉಗ್ರರ ಶಿಬಿರಗಳು ಮತ್ತು ಮಿಲಿಟರಿ ಠಾಣೆಗಳ ಮೇಲೆ ಭಾನುವಾರ ಫಿರಂಗಿ ದಾಳಿ ಆರಂಭಿಸಿತು.

ಆಗಸ್ಟ್‌ 5ರಂದು ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸವಲತ್ತು ನೀಡುವ ಸಂವಿಧಾನದ 370ನೇ ವಿಧಿ ರದ್ದು ಮಾಡಿತ್ತು. ಇದರ ಜೊತೆಜೊತೆಗೆ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿತ್ತು. ಈ ಬೆಳವಣಿಗೆಯ ನಂತರ ಕಾಶ್ಮೀರ ಕಣಿವೆಯಲ್ಲಿ ವಿಧ್ವಂಸ ಕೃತ್ಯ ಹೆಚ್ಚಿಸಲು ಪಾಕಿಸ್ತಾನ ಸತತ ಪ್ರಯತ್ನ ನಡೆಸುತ್ತಿದೆ.

ಪ್ರತಿಕ್ರಿಯಿಸಿ (+)