ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲಸೆ ಕಾರ್ಮಿಕರಿಗೆ ನೆರವು ನೀಡಿದ ಸೋನು ಸೂದ್‌ ಬಗ್ಗೆ ಸಂಜಯ್ ರಾವುತ್ ವ್ಯಂಗ್ಯ

‘ಮಹಾತ್ಮ’ ಸೂದ್ ಎಂದು ಕುಹಕ
Last Updated 7 ಜೂನ್ 2020, 7:43 IST
ಅಕ್ಷರ ಗಾತ್ರ

ಮುಂಬೈ: ಲಾಕ್‌ಡೌನ್‌ ವೇಳೆ ಸಂಕಷ್ಟಕ್ಕೆ ಸಿಲುಕಿದ್ದ ವಲಸೆ ಕಾರ್ಮಿಕರಿಗೆ ಮನೆಗೆ ಮರಳಲು ನಟ ಸೋನು ಸೂದ್ ನೆರವಾಗಿದ್ದಕ್ಕೆ ಮಹಾರಾಷ್ಟ್ರದ ಆಡಳಿತ ಪಕ್ಷ ಶಿವಸೇನಾ ವ್ಯಂಗ್ಯವಾಡಿದೆ.

ಈ ಕುರಿತು ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಪಕ್ಷದ ನಾಯಕ ಸಂಜಯ್ ರಾವುತ್ ಉಲ್ಲೇಖಿಸಿದ್ದು, ಸೋನು ಸೂದ್ ಹೆಸರಿನ ‘ಮಹಾತ್ಮ’ ದಿಢೀರ್ ಅವತರಿಸಿದ್ದಾರೆ. ಇವರು ಮುಂಬೈನ ಸೆಲೆಬ್ರಿಟಿ ಮ್ಯಾನೇಜರ್ ಆಗುವ ಸಾಧ್ಯತೆಗಳಿವೆ ಎಂದು ಕುಹಕವಾಡಿದ್ದಾರೆ.

ಸೋನು ಸೂದ್ ಅವರು ಲಕ್ಷಾಂತರ ವಲಸೆ ಕಾರ್ಮಿಕರನ್ನು ಇತರ ರಾಜ್ಯಗಳಲ್ಲಿನ ಅವರ ಮನೆಗಳಿಗೆ ಕಳುಹಿಸಿಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ‘ಮಹಾತ್ಮ ಸೂದ್’ ಅವರ ಕೆಲಸಕ್ಕಾಗಿ ಮಹಾರಾಷ್ಟ್ರದ ರಾಜ್ಯಪಾಲರೂ ಅವರನ್ನು ಪ್ರಶಂಸಿಸಿದ್ದಾರೆ ಎಂದು ರಾವುತ್ ಉಲ್ಲೇಖಿಸಿದ್ದಾರೆ.

ಸೂದ್ ಅವರ ಈ ಕೆಲಸದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಏನೂ ಮಾಡಿಲ್ಲ ಎಂದು ಬಿಂಬಿಸಿದಂತಾಗುತ್ತದೆ ಎಂದಿರುವ ರಾವತ್, ಲಾಕ್‌ಡೌನ್‌ ವೇಳೆ ಈ ನಟನಿಗೆ ಬಸ್ಸುಗಳು ಎಲ್ಲಿಂದ ದೊರೆತವು ಎಂದೂ ಪ್ರಶ್ನಿಸಿದ್ದಾರೆ.

ಸೂದ್ ಅವರು ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಮತ್ತು ಮುಂಬೈನ ಸೆಲೆಬ್ರಿಟಿ ಮ್ಯಾನೇಜರ್ ಆಗುವ ಎಲ್ಲ ಸಾಧ್ಯತೆಗಳಿವೆ ಎಂದೂ ರಾವುತ್ ಟೀಕಿಸಿದ್ದಾರೆ.

ಮೇ 31ರಂದು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನು ಭೇಟಿಯಾಗಿದ್ದ ಸೂದ್ ಅವರು ವಲಸೆ ಕಾರ್ಮಿಕರಿಗೆ ಅವರ ರಾಜ್ಯಗಳಿಗೆ ತೆರಳಲು ನೆರವಾಗುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಚರ್ಚಿಸಿದ್ದರು. ವಲಸೆ ಕಾರ್ಮಿಕರಿಗೆ ಪ್ರಯಾಣಕ್ಕೆ ವ್ಯವಸ್ಥೆ, ಆಹಾರ ಒದಗಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದ ರಾಜ್ಯಪಾಲರು, ತಾವೂ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದರು.

ಕರ್ನಾಟಕದ ವಲಸೆ ಕಾರ್ಮಿಕರಿಗೂ ರಾಜ್ಯಕ್ಕೆ ಮರಳಲು ಸೂದ್ ನೆರವಾಗಿದ್ದಾರೆ.ಕಲಬುರ್ಗಿಯ ಕಾರ್ಮಿಕರಿಗೆ ಊರಿಗೆ ಮರಳಲು ಸೋನು ಅವರು ಇತ್ತೀಚೆಗೆ ಬಸ್ಸುಗಳ ವ್ಯವಸ್ಥೆ ಮಾಡಿದ್ದಾರೆ. ಜೊತೆಯಲ್ಲೇ, ಈ ಕಾರ್ಮಿಕರಿಗಾಗಿ ಊಟದ ಕಿಟ್‌ನ ವ್ಯವಸ್ಥೆ ಕೂಡ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT