ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಾಲಿನ ಮಧ್ಯೆ ಶಿವಳ್ಳಿ ಗೆಲುವಿನ ನಗೆ

ಸುಳ್ಳಾಯ್ತು ಕ್ಷೇತ್ರದ ರಾಜಕೀಯ ಪ್ರತೀತಿ; 2ನೇ ಬಾರಿ ಸೋತ ಚಿಕ್ಕನಗೌಡ್ರ
Last Updated 16 ಮೇ 2018, 6:51 IST
ಅಕ್ಷರ ಗಾತ್ರ

ಹುಬ್ಬಳ್ಳಿ: ತೀವ್ರ ಕುತೂಹಲ ಕೆರಳಿಸಿದ್ದ ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಿ.ಎಸ್. ಶಿವಳ್ಳಿ, ತೀವ್ರ ಪೈಪೋಟಿ ನೀಡಿದ ಬಿಜೆಪಿಯ ಎಸ್.ಐ. ಚಿಕ್ಕನಗೌಡ್ರ ಎದುರು ಪ್ರಯಾಸದ ಗೆಲುವು ಸಾಧಿಸಿದ್ದಾರೆ. ‘ಕುಂದಗೋಳದಲ್ಲಿ ಸತತ ಎರಡು ಬಾರಿ ಯಾರೂ ಗೆಲ್ಲುವುದಿಲ್ಲ’ ಎಂಬ ಕ್ಷೇತ್ರದ ರಾಜಕೀಯ ಪ್ರತೀತಿಯನ್ನು ಹುಸಿಗೊಳಿಸಿದ್ದಾರೆ.

ಎದುರಾಳಿ ಚಿಕ್ಕನಗೌಡ್ರ ಅವರನ್ನು ಎರಡನೇ ಬಾರಿಯೂ ಸೋಲಿಸಿದ್ದಾರೆ. ಸತತ ಎರಡನೇ ಸಲ ಗೆದ್ದಿದ್ದ ಶಿವಳ್ಳಿ, ಮೂರನೇ ಬಾರಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಶಿವಳ್ಳಿ ಅವರು 64,871 ಮತಗಳನ್ನು ಪಡೆದು, 634 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 64,237 ಮತಗಳನ್ನ ಪಡೆದ ಚಿಕ್ಕನಗೌಡ್ರ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.

ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಶಾಸಕರಾಗಿದ್ದ ಶಿವಳ್ಳಿ ಅವರಿಗೆ ಪಕ್ಷದೊಳಗಿನ ಆಂತರಿಕ ಭಿನ್ನಮತ ಹಾಗೂ ಬಿಜೆಪಿ–ಕೆಜೆಪಿ ದೋಸ್ತಿ ಸವಾಲಾಗಿ ಪರಿಣಮಿಸಿತ್ತು. ಜತೆಗೆ, ಒಂದು ಕಾಲದ ಆಪ್ತ ಹಜರತಅಲಿ ಜೋಡಮನಿ ಕೂಡ ಮುನಿಸಿಕೊಂಡು, ಜೆಡಿಯುನಿಂದ ಕಣಕ್ಕಿಳಿದು ತೊಡೆ ತಟ್ಟಿದ್ದರು. ಆದರೆ, ತಮ್ಮ ಶಾಸಕ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ಕೈ ಹಿಡಿದಿವೆ.

ಮೋಡಿ ಮಾಡದ ದೋಸ್ತಿ: 2013ರ ಚುನಾವಣೆಯಲ್ಲಿ ಬಿಜೆಪಿ, ಕೆಜೆಪಿ ಎಂದು ಕವಲೊಡೆದಿತ್ತು. ಆಗಲೂ ಕೆಜೆಪಿಯಿಂದ ಕಣಕ್ಕಿಳಿದಿದ್ದ ಚಿಕ್ಕನಗೌಡ್ರ 31,618 ಮತಗಳನ್ನಷ್ಟೇ ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಬಿಜೆಪಿ ಅಭ್ಯರ್ಥಿ ಎಂ.ಆರ್. ಪಾಟೀಲ ಮೂರನೇ ಸ್ಥಾನ ಪಡೆದಿದ್ದರು.

ಈ ಸಲ ಕೆಜೆಪಿಯು ಬಿಜೆಪಿಯೊಳಗೆ ವಿಲೀನವಾಗಿದ್ದರಿಂದ, ಬಿಜೆಪಿಯಿಂದ ಕಣಕ್ಕಿಳಿದಿದ್ದ ಚಿಕ್ಕನಗೌಡ್ರ ಗೆಲುವಿನ ಹಾದಿ ಸುಗಮ ಎಂದೇ ಲೆಕ್ಕಾಚಾರಗಳು ಆರಂಭವಾಗಿದ್ದವು. ಆದರೆ, ಕಡೆ ಗಳಿಗೆಯಲ್ಲಿ ಎಲ್ಲ ಲೆಕ್ಕಾಚಾರಗಳು ತಲೆ ಕೆಳಗಾಗಿವೆ. ಟಿಕೆಟ್ ಹಂಚಿಕೆ ಸಂಬಂಧ, ಕ್ಷೇತ್ರದಲ್ಲಿ ಕಾಣಿಸಿಕೊಂಡ ಭಿನ್ನಮತವನ್ನು ಪಕ್ಷದ ಮುಖಂಡರು ನಿಭಾಯಿಸುವಲ್ಲಿ ವಿಫಲರಾಗಿದ್ದೇ ಬಿಜೆಪಿ ಸೋಲಿಗೆ ಕಾರಣ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ.

ಶಿವಳ್ಳಿ ಹಿನ್ನೋಟ

ಪಿಯುಸಿವರೆಗೆ ಓದಿರುವ ಕುಂದಗೋಳ ತಾಲ್ಲೂಕಿನ ಯರಗುಪ್ಪಿಯ ಶಿವಳ್ಳಿ, ಡಾ. ರಾಜಕುಮಾರ್ ಅಭಿಮಾನಿಗಳ ಸಂಘ ಕಟ್ಟಿಕೊಂಡು ಸಾಮಾಜಿಕ ಬದುಕಿಗೆ ಧುಮುಕಿದರು. ಬಂಗಾರಪ್ಪ ಅವರ ಶಿಷ್ಯರಾಗಿದ್ದ ಶಿವಳ್ಳಿ, ಅವರು ಕಟ್ಟಿದ ಕ್ರಾಂತಿರಂಗದಲ್ಲಿ ಸಕ್ರಿಯರಾದರು. 1994ರಲ್ಲಿ ಬಂಗಾರಪ್ಪ ಅವರು ಸ್ಥಾಪಿಸಿದ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದು, ಎರಡನೇ ಸ್ಥಾನ ಪಡೆದುಕೊಂಡಿದ್ದರು.

1999ರಲ್ಲಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದರಿಂದ, ಪಕ್ಷೇತರರಾಗಿ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾದರು. ಬಳಿಕ, 2004ರಲ್ಲಿ ಜೆಡಿಯುನ ಎಂ.ಎಸ್. ಅಕ್ಕಿ ಮತ್ತು 2008ರಲ್ಲಿ ಬಿಜೆಪಿಯ ಎಸ್‌.ಐ. ಚಿಕ್ಕನಗೌಡ್ರ ಎದುರು ಸೋಲು ಕಂಡರು. 2013ರಲ್ಲಿ ಮತ್ತೆ ಜಯ ಸಾಧಿಸಿದ ಶಿವಳ್ಳಿ,  ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಸದೀಯ ಕಾರ್ಯದರ್ಶಿಯೂ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT