ಸೋಮವಾರ, ಜೂನ್ 14, 2021
26 °C

ರಾಷ್ಟ್ರಪತಿ ಭೇಟಿಯಾದ ಸೋನಿಯಾ ಗಾಂಧಿ: ಅಮಿತ್‌ ಶಾ ರಾಜೀನಾಮೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರ ವಿಚಾರದಲ್ಲಿ ದೆಹಲಿ ಮತ್ತು ಕೇಂದ್ರ ಸರ್ಕಾರಗಳು 'ಮೂಕ ಪ್ರೇಕ್ಷಕ‘ರಾಗಿ ವರ್ತಿಸುತ್ತಿವೆ ಎಂದು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಲಭೆ ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದ್ದು, ಗೃಹ ಸಚಿವ ಅಮಿತ್‌ ಶಾ ಈ ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಸೋನಿಯಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ನ ಹಲವು ನಾಯಕರು ರಾಷ್ಟ್ರಪತಿ ರಾಮ್‌ ನಾಥ್ ಕೋವಿಂದ ಅವರನ್ನು ಗುರುವಾರ ಭೇಟಿ ಮಾಡಿದ್ದಾರೆ. ಆ ಮೂಲಕ ದೆಹಲಿಯಲ್ಲಿ ಶಾಂತಿ–ಸುವ್ಯವಸ್ಥೆ ಮರಳಿಸಲು ರಾಷ್ಟ್ರಪತಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ರಾಷ್ಟ್ರಪತಿಗಳ ಭೇಟಿ ನಂತರ ಮಾತನಾಡಿರುವ ಸೋನಿಯಾ ಗಾಂಧಿ, ‘ಮತಿಹೀನ ಉನ್ಮಾದ, ವ್ಯವಸ್ಥಿತ ಹಿಂಸಾಚಾರ ಮತ್ತು ಸಂಘಟಿತ ಲೂಟಿಗಳು ರಾಷ್ಟ್ರ ರಾಜಧಾನಿಯಲ್ಲಿ ವ್ಯಾಪಕವಾಗಿ ನಡೆಯುತ್ತಿವೆ. ಗಲಭೆ ಪೀಡಿತ ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕಿದ್ದ ದೆಹಲಿ ಮತ್ತು ಕೇಂದ್ರ ಸರ್ಕಾರಗಳು ಮೂಕ ಪ್ರೇಕ್ಷಕರಂತೆ ವರ್ತಿಸುತ್ತಿವೆ‘ ಎಂದು ಅವರು ಕಿಡಿ ಕಾರಿದ್ದಾರೆ.

ಇದೇ ವೇಳೆ ಮಾತನಾಡಿರುವ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ‘ದೆಹಲಿಯಲ್ಲಿ ನಡೆಯುತ್ತಿರುವುದು ರಾಷ್ಟ್ರೀಯ ಅವಮಾನ. ಈ ವಿಚಾರವನ್ನು ರಾಷ್ಟ್ರಪತಿಗಳಿಗೆ ಮನವರಿಕೆ ಮಾಡಿದ್ದೇವೆ‘ ಎಂದು ತಿಳಿಸಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು