ಶಬರಿಮಲೆ ದೇಗುಲ ಪ್ರವೇಶಿಸಿದರೇ ಶ್ರೀಲಂಕಾ ಮಹಿಳೆ?

7
ಶಬರಿಮಲೆ ವಿವಾದ

ಶಬರಿಮಲೆ ದೇಗುಲ ಪ್ರವೇಶಿಸಿದರೇ ಶ್ರೀಲಂಕಾ ಮಹಿಳೆ?

Published:
Updated:

ಕೊಚ್ಚಿ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರಿಬ್ಬರ ಪ್ರವೇಶ ವಿರೋಧಿಸಿ ಕೇರಳದಲ್ಲಿ ಪ್ರತಿಭಟನೆ ನಡೆಯುತ್ತಿರುವ ಮಧ್ಯೆಯೇ ಶ್ರೀಲಂಕಾ ಮಹಿಳೆ ಶಶಿಕಲಾ ಎಂಬುವವರು ಗುರುವಾರ ರಾತ್ರಿ ದೇಗುಲ ಪ್ರವೇಶಿಸಿದ್ದಾರೆ ಎಂದು ವರದಿಯಾಗಿದೆ.

ಕೆಲವು ಮೂಲಗಳ ಪ್ರಕಾರ ಶಶಿಕಲಾ ದೇಗುಲ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಿ ವಾಪಸಾಗಿದ್ದಾರೆ. ಆದರೆ ಇನ್ನು ಕೆಲವು ಮೂಲಗಳು, ಶಶಿಕಲಾ 18 ಮೆಟ್ಟಿಲುಗಳನ್ನೇರಿ ದೇಗುಲ ಪ್ರವೇಶಿಸಲು ಪ್ರಯತ್ನಿಸಿದ್ದರೂ ಸಾಧ್ಯವಾಗಿಲ್ಲ ಎಂದಿವೆ.

18 ಮೆಟ್ಟಿಲುಗಳನ್ನೇರಿ ರಾತ್ರಿ 9.30ರ ವೇಳೆಗೆ ದೇಗುಲ ಪ್ರವೇಶಿಸಿರುವ ಶಶಿಕಲಾ ಪ್ರಾರ್ಥನೆ ಸಲ್ಲಿಸಿ 11.30ಕ್ಕೆ ಸುರಕ್ಷಿತವಾಗಿ ಪಂಪಾಕ್ಕೆ ಹಿಂದಿರುಗಿದ್ದಾರೆ ಎಂದು ಪೊಲೀಸರು ತಿಳಿಸಿರುವುದಾಗಿ ದಿ ಹಿಂದೂ ವರದಿ ಮಾಡಿದೆ. ಅಶೋಕ್ ಕುಮಾರನ್ ಎಂಬುವವರ ಮಗಳಾಗಿರುವ ಶಶಿಕಲಾ ಶ್ರೀಲಂಕಾ ಪಾಸ್‌ಪೋರ್ಟ್‌ ಹೊಂದಿದ್ದು, 1972ರ ಡಿಸೆಂಬರ್ 3ರಂದು ಜನಿಸಿದವರಾಗಿದ್ದಾರೆ ಎಂದು ಈ ವರದಿ ಉಲ್ಲೇಖಿಸಿದೆ.

ಶಶಿಕಲಾ ಅವರು ಸಂಬಂಧಿಕರ ಜತೆ ದೇಗುಲ ಪ್ರವೇಶಿಸಿದ್ದಾರೆ. ಅವರಿಗೆ ಯಾವುದೇ ರೀತಿಯ ಅಡಚಣೆ ಎದುರಾಗಿಲ್ಲ. ಶಶಿಕಲಾ ಅವರು ದರ್ಶನದ ಸಮಯವನ್ನು ಮುಂಗಡ ಬುಕ್ ಮಾಡಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.

ಈ ಮಧ್ಯೆ, 46 ವರ್ಷ ವಯಸ್ಸಿನ ಶ್ರೀಲಂಕಾ ಮಹಿಳೆ ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಲು ವ್ಯರ್ಥ ಪ್ರಯತ್ನ ನಡೆಸಿದ್ದಾರೆ ಎಂದು ಮನೋರಮಾಆನ್‌ಲೈನ್ ಸುದ್ದಿತಾಣದಲ್ಲಿ ವರದಿಯಾಗಿದೆ.

ಪತಿ ಮತ್ತು ಮಗುವಿನೊಂದಿಗೆ ಗುರುವಾರ ರಾತ್ರಿ ಪಂಪಾಗೆ ಬಂದ ಮಹಿಳೆಗೆ ಆರಂಭದಲ್ಲಿ ಪೊಲೀಸರು ಭದ್ರತೆ ಒದಗಿಸಿದರು. ಆದರೆ, ದೇಗುಲದ ಬಳಿ ತಲುಪಿದ ನಂತರ ಮುಂದುವರಿಯಲಾಗಲಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

‘ನಾವು ಮಫ್ತಿಯಲ್ಲಿರುವ ಪೊಲೀಸರ ಭದ್ರತೆಯೊಂದಿಗೆ ದೇಗುಲದವರೆಗೆ ತೆರಳಿದೆವು. ಆದರೆ ಶಬರಿಪೀಠದಲ್ಲಿರುವ ಮಾಧ್ಯಮದವರನ್ನು ನೋಡಿದ ನಂತರ ಪೊಲೀಸರು ಹಿಂದೆಯೇ ಉಳಿದುಬಿಟ್ಟರು. ಹೀಗಾಗಿ ನಮಗೆ ಮುಂದುವರಿಯಲಾಗಲಿಲ್ಲ’ ಎಂಬ ಶಶಿಕಲಾ ಪತಿ ಸರವಣಮಾರನ್ ಹೇಳಿಕೆಯನ್ನು ಮನೋರಮಾಆನ್‌ಲೈನ್ ವರದಿ ಉಲ್ಲೇಖಿಸಿದೆ.

ಸರವಣಮಾರನ್ ಅವರನ್ನು ನಂತರ ಪಂಪಾ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಶಶಿಕಲಾ ಅವರನ್ನು ಬಿಗಿ ಭದ್ರತೆಯೊಂದಿಗೆ ವಾಪಸ್ ಕರೆದೊಯ್ಯಲಾಗಿದೆ. ಶಶಿಕಲಾ ಅವರ ಬಳಿ ಪ್ರತಿಕ್ರಿಯೆ ಕೇಳಿದಾಗ, ‘ಪ್ರಾರ್ಥನೆ ಸಲ್ಲಿಸಲು ಪೊಲೀಸರು ಅವಕಾಶ ನೀಡಲಿಲ್ಲ’ ಎಂದು ದೂರಿದ್ದಾಗಿ ವರದಿಯಲ್ಲಿ ಹೇಳಲಾಗಿದೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !