ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ಸಂಚು ಬಯಲಾಯ್ತು, ವಿಮೋಚನೆಗೆ ಬಲಿದಾನ ಬೇಕಾಯ್ತು...

ಕಾರ್ಗಿಲ್ ಕಥನ
Last Updated 27 ಜುಲೈ 2019, 11:08 IST
ಅಕ್ಷರ ಗಾತ್ರ

ಅಂತಹದ್ದೊಂದು ಹಠಾತ್ ದಾಳಿಗೆ ಪಾಕಿಸ್ತಾನ ಹಲವಾರು ತಿಂಗಳುಗಳಿಂದ ಸಂಚು ರೂಪಿಸಿದ್ದಿರಲೇಬೇಕು. ದಾಳಿಗೂ ಎರಡು ತಿಂಗಳ ಮುನ್ನ ಭಾರತದ ಜತೆ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆಂದು ‘ಲಾಹೋರ್ ಒಪ್ಪಂದ’ ರೂಪಿಸಲಾಗಿತ್ತು. ಅಂದಿನ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು 1999ರ ಫೆಬ್ರುವರಿ 20ರಂದು ಸ್ವತಃ ಲಾಹೋರ್‌ಗೆ ಬಸ್‌ನಲ್ಲಿ ತೆರಳಿ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಜತೆ ಸ್ನೇಹ ಹಸ್ತ ಚಾಚಿದ್ದರು. ಆದರೆ, ಅದಕ್ಕೂ 15 ದಿನ ಮೊದಲೇ ಷರೀಫ್ ಅವರಿಗೆ ಪಾಕಿಸ್ತಾನದ ಅಂದಿನ ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ ಸೇನಾ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ್ದರಂತೆ (ಬಳಿಕ ಇದನ್ನು ಷರೀಫ್ ತಳ್ಳಿಹಾಕಿದ್ದರು). ಇಷ್ಟೊಂದು ಗೋಪ್ಯವಾಗಿ ಜಮ್ಮು ಮತ್ತು ಕಾಶ್ಮೀರದ ‘ಕಾರ್ಗಿಲ್’ ಪ್ರದೇಶವನ್ನು ಅತಿಕ್ರಮಿಸಿಕೊಳ್ಳಲು ಸಂಚು ಹೂಡಿತ್ತು ಪಾಕಿಸ್ತಾನ.

1971ರ ಭಾರತ–ಪಾಕಿಸ್ತಾನ ಯುದ್ಧದ ಬಳಿಕ ಉಭಯ ರಾಷ್ಟ್ರಗಳ ನಡುವಣ ಶೀತಲ ಸಮರ ಕೊನೆಯಾಗಿರಲಿಲ್ಲ. ಸಿಯಾಚಿನ್ ನೀರ್ಗಲ್ಲು ಪ್ರದೇಶದ ಮೇಲೆ ಹಿಡಿತ ಸಾಧಿಸಲು 1980ರಲ್ಲೊಮ್ಮೆ ಎರಡೂ ದೇಶಗಳ ಸೇನೆಗಳ ನಡುವೆ ಸಂಘರ್ಷ ನಡೆದಿತ್ತು. 1990ರ ದಶಕದಲ್ಲಿ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಚಟುವಟಿಕೆಗಳೂ ಹೆಚ್ಚಿದ್ದು, ಈ ಕೃತ್ಯಕ್ಕೆ ಪಾಕಿಸ್ತಾನವೂ ಕುಮ್ಮಕ್ಕು ನೀಡುತ್ತಿತ್ತು. ಇದು ಉಭಯ ರಾಷ್ಟ್ರಗಳ ನಡುವಣ ವೈಮನಸ್ಸು ಹೆಚ್ಚಿಸಿತ್ತು. 1998ರಲ್ಲಿ ಎರಡೂ ರಾಷ್ಟ್ರಗಳು ನಡೆಸಿದ ಅಣ್ವಸ್ತ್ರ ಪರೀಕ್ಷೆ ಉದ್ವಿಗ್ನತೆ ಹೆಚ್ಚಲು ಕಾರಣವಾಯಿತು. ಇವೆಲ್ಲವನ್ನೂ ಶಮನಗೊಳಿಸಲೆಂದು ರೂಪಿಸಿದ್ದೇ ‘ಲಾಹೋರ್ ಒಪ್ಪಂದ’. ಇದರಿಂದ ಶಾಂತಿ ಸ್ಥಾಪನೆಯಾಗುತ್ತದೆಂದು ಭಾರತ ಆಶಿಸಿದ್ದರೆ, ಪಾಕಿಸ್ತಾನ ಮಾತ್ರ ತನ್ನ ಕುತಂತ್ರದಿಂದ ಹಿಂದೆ ಸರಿಯಲಿಲ್ಲ. ಇದರ ಪರಿಣಾಮವಾಗಿ ಸಂಭವಿಸಿದ್ದೇ ಕಾರ್ಗಿಲ್ ಯುದ್ಧ.

ಎಲ್ಲಿದೆ ಕಾರ್ಗಿಲ್?:ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಿಂದ 205 ಕಿಲೋಮೀಟರ್ ದೂರದಲ್ಲಿದೆ ಕಾರ್ಗಿಲ್ ಪಟ್ಟಣ. ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಉತ್ತರ ಪ್ರದೇಶಗಳಿಗೆ ಅಭಿಮುಖವಾಗಿರುವ ಕಾರ್ಗಿಲ್ ಸಮಶೀತೋಷ್ಣ ಹವಾಗುಣ ಹೊಂದಿರುವ ಪ್ರದೇಶ. ಶ್ರೀನಗರದಿಂದ ಲಡಾಖ್‌ನ ಲೇಹ್ ಅನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ‘ಎನ್‌ಎಚ್ 1ಡಿ’ ಕಾರ್ಗಿಲ್ ಮೂಲಕ ಹಾದುಹೋಗುತ್ತದೆ. ಭಾರತದ ಹಾಗೂ ಭಾರತೀಯ ಸೇನೆಯ ಮಟ್ಟಿಗೆ ಇದು ಪ್ರಮುಖ ಸಂಪರ್ಕ ಸೇತುವೂ ಹೌದು. ಯುದ್ಧ ನಡೆದ ಪ್ರದೇಶ ಸುಮಾರು 160 ಕಿಲೋಮೀಟರ್ ಉದ್ದಕ್ಕೆ ವಿಸ್ತರಿಸಿರುವ ಪರ್ವತಶ್ರೇಣಿಯಾಗಿದೆ. ಮೇಲಿನಿಂದ ವೀಕ್ಷಿಸಿದರೆ ರಾಷ್ಟ್ರೀಯ ಹೆದ್ದಾರಿ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಪರ್ವತಶ್ರೇಣಿಗಳಲ್ಲಿ ಸೇನಾ ಶಿಬಿರಗಳಿವೆ.

ಕಾರ್ಗಿಲನ್ನೇ ಆಯ್ದುಕೊಂಡಿದ್ದೇಕೆ?:ಪಾಕಿಸ್ತಾನ ಸೇನೆ ಅತಿಕ್ರಮಣ ಮಾಡಲು ಕಾರ್ಗಿಲನ್ನೇ ಆಯ್ದುಕೊಂಡದ್ದಕ್ಕೆ ಕಾರಣವಿದೆ. ಕಾರ್ಗಿಲ್ ಪರ್ವತಶ್ರೇಣಿಗಳ ಮೇಲೆ ಅತಿಕ್ರಮಣ ನಡೆಸಿದರೆ‘ಎನ್‌ಎಚ್ 1ಡಿ’ ಮೇಲೆ ಹಿಡಿತ ಸಾಧಿಸಿ ಭಾರತೀಯ ಸೇನೆ ಲೇಹ್‌ ಜತೆ ಸಂಪರ್ಕ ಕಡಿದುಕೊಳ್ಳುವಂತೆ ಮಾಡಬಹುದು. ತನ್ಮೂಲಕ ಸಿಯಾಚಿನ್ ನೀರ್ಗಲ್ಲು ಪ್ರದೇಶದಿಂದ ಭಾರತೀಯ ಯೋಧರು ಕಾಲ್ಕೀಳುವಂತೆ ಮಾಡಬಹುದು. ಜತೆಗೆ ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಭಾರತದ ಮೇಲೆ ಒತ್ತಡ ಹೇರಬಹುದು ಎಂಬುದೇ ಅವರ ಲೆಕ್ಕಾಚಾರವಾಗಿತ್ತು. ಆದರೆ, ಇವೆಲ್ಲ ತಲೆಕೆಳಗಾಗಿದ್ದು ಈಗ ಇತಿಹಾಸ.

ಕಾರ್ಗಿಲ್ ಯುದ್ಧದ ಸಂದರ್ಭ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಯೋಧರನ್ನು ಭೇಟಿಯಾದ ಕ್ಷಣ – ಪ್ರಜಾವಾಣಿ ಸಂಗ್ರಹ ಚಿತ್ರ
ಕಾರ್ಗಿಲ್ ಯುದ್ಧದ ಸಂದರ್ಭ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಯೋಧರನ್ನು ಭೇಟಿಯಾದ ಕ್ಷಣ – ಪ್ರಜಾವಾಣಿ ಸಂಗ್ರಹ ಚಿತ್ರ

ಸದ್ದಿಲ್ಲದೆ ನುಸುಳಿದ ಪಾಕಿಗಳು, ಭಾರತಕ್ಕೆ ತಿಳಿಯದ್ದೇಕೆ?:ಸುಮಾರು 16,000 ಅಡಿಗಳಿಂದ 18,000 ಅಡಿಗಳವರೆಗೆ ಎತ್ತರದಲ್ಲಿರುವಕಾರ್ಗಿಲ್‌ ಪರ್ವತಶ್ರೇಣಿಗಳಲ್ಲಿ ಚಳಿಗಾಲದಲ್ಲಿ ಸಹಿಸಲಸಾಧ್ಯ, ಮೈ ಕೊರೆಯುವಂತಹ ಚಳಿ ಇರುತ್ತದೆ. ಕಾಶ್ಮೀರದ ಬಹುತೇಕ ಎಲ್ಲ ಪರ್ವತಶ್ರೇಣಿಗಳಲ್ಲಿಯೂ ಇದೇ ಪರಿಸ್ಥಿತಿ ಇರುತ್ತದೆ. ಹೀಗಾಗಿ ಚಳಿಗಾಲದಲ್ಲಿ ಗಡಿ ನಿಯಂತ್ರಣ ರೇಖೆಯ ಆಯಾ ಕಡೆಗಳಲ್ಲಿರುವ ಕೆಲವು ಮುಂಚೂಣಿ ಸೇನಾ ಶಿಬಿರಗಳನ್ನು ತ್ಯಜಿಸಿ ಗಸ್ತು ಚಟುವಟಿಕೆ ಕಡಿಮೆ ಮಾಡುವುದನ್ನು ಭಾರತ ಮತ್ತು ಪಾಕಿಸ್ತಾನ ಸೇನೆ ಹಿಂದಿನಿಂದಲೂ ಪಾಲಿಸುತ್ತಾ ಬಂದಿವೆ. ಚಳಿಯ ತೀವ್ರತೆ ಕಡಿಮೆಯಾದಂತೆಲ್ಲ ಆ ಮುಂಚೂಣಿ ಪ್ರದೇಶದಲ್ಲಿರುವ ಶಿಬಿರಗಳನ್ನು ಮತ್ತೆ ವಶಕ್ಕೆ ತೆಗೆದುಕೊಂಡು ಪಹರೆ ಚಟುವಟಿಕೆ ಆರಂಭಿಸಲಾಗುತ್ತದೆ. ಈ ಪರಿಸ್ಥಿತಿಯನ್ನೇ ಬಳಸಿಕೊಂಡ ಪಾಕಿಸ್ತಾನ ಸೇನೆ ‘ಆಪರೇಷನ್ ಬದರ್’ ಎಂಬ ಹೆಸರಿನಲ್ಲಿ ಕಾರ್ಯಾಚರಣೆ ಕೈಗೊಂಡಿತು. ಇದಕ್ಕಾಗಿ ಪಾಕಿಸ್ತಾನ ಸೇನೆ ಅರೆಸೇನಾ ಪಡೆ ಮತ್ತು ಕೆಲವು ಭಯೋತ್ಪಾದಕರ ನೆರವನ್ನೂ ಪಡೆಯಿತು. ಉಗ್ರಗಾಮಿಗಳಿಗೆ ತರಬೇತಿ ನೀಡಿ ಮುಂದೆ ಕಳುಹಿಸುವ ಕೆಲಸವನ್ನು ಪಾಕಿಸ್ತಾನ ಸೇನೆಯೇ ಮಾಡಿತು.

ಕಾರ್ಗಿಲ್ ಯುದ್ಧದ ಬಗ್ಗೆ ಪ್ರಜಾವಾಣಿ ವರದಿ
ಕಾರ್ಗಿಲ್ ಯುದ್ಧದ ಬಗ್ಗೆ ಪ್ರಜಾವಾಣಿ ವರದಿ

1999ರ ಫೆಬ್ರುವರಿಯಲ್ಲಿಯೇ ಗಡಿ ನಿಯಂತ್ರಣ ಪ್ರದೇಶದ ಮುಂಚೂಣಿ ಸೇನಾ ನೆಲೆಗಳನ್ನು ವಶಕ್ಕೆ ತೆಗೆದುಕೊಳ್ಳಲು ಆರಂಭಿಸಿದ ಪಾಕಿಸ್ತಾನ ಸೇನೆ ಭಾರತದ ಭೂ ಪ್ರದೇಶದಲ್ಲಿರುವ ಸೇನಾ ಶಿಬಿರಗಳ ಮೇಲೂ ಅತಿಕ್ರಮಣ ನಡೆಸಲು‍ಪಡೆಗಳನ್ನು ಕಳುಹಿಸಿತು. ಈ ಪಡೆಗಳು ಭಾರತದ ನಿಯಂತ್ರಣದಲ್ಲಿರುವ ಆಯಕಟ್ಟಿನ ಪ್ರದೇಶಗಳಲ್ಲಿ ರಹಸ್ಯವಾಗಿ ಶಿಬಿರಗಳನ್ನು ಸ್ಥಾಪಿಸಿದವು. ಮುಷೋಖ್ ಕಣಿವೆಯ ಪರ್ವತಗಳು, ಡ್ರಾಸ್‌ನ ಶಿಖರಗಳು, ಕಾರ್ಗಿಲ್ ಸಮೀಪದ ಡ್ರಾಸ್, ಕಕ್ಸಾರ್, ಟೊಲೊಲಿಂಗ್, ಬಟಾಲಿಕ್ ವಲಯಗಳಲ್ಲಿ ಪಾಕಿಸ್ತಾನ ಸೇನೆ ಅತಿಕ್ರಮಣ ನಡೆಸಿತು. ಈ ಕೃತ್ಯಕ್ಕೆ ಕಾಶ್ಮೀರಿ ಪ್ರತ್ಯೇಕತಾವಾದಿಗಳ ನೆರವು ಇತ್ತು ಎಂದೂ ಕೆಲವು ಮೂಲಗಳು ವರದಿ ಮಾಡಿದ್ದವು.

ಬಯಲಾಯ್ತು ಸಂಚು, ಶುರುವಾಯ್ತು ‘ಆಪರೇಷನ್ ವಿಜಯ್’:ಅದು 1999ರ ಮೇ 3. ಬಟಾಲಿಕ್ ವಲಯದ ಕುರುಬನೊಬ್ಬ ನೀಡಿದ ಸುಳಿವಿನ ಮೇರೆಗೆ ಗಸ್ತು ಕಾರ್ಯಾಚರಣೆ ಆರಂಭಿಸಿದ ಭಾರತೀಯ ಸೇನೆಗೆ ಆಘಾತ ಕಾದಿತ್ತು. ಮೇ 5ರಂದು ಕ್ಯಾಪ್ಟನ್ ಸೌರಭ್ ಕಾಲಿಯಾ ನೇತೃತ್ವದಲ್ಲಿ ನಡೆಸಿದ ಗಸ್ತು ಕಾರ್ಯಾಚರಣೆ ವೇಳೆ ಪಾಕಿಸ್ತಾನ ಸೇನೆ ಅತಿಕ್ರಮಣ ನಡೆಸಿರುವುದು ಸ್ಪಷ್ಟವಾಯಿತು. ಗಸ್ತು ಕಾರ್ಯಾಚರಣೆಗೆ ತೆರಳಿದ್ದ ಐವರು ಭಾರತೀಯ ಯೋಧರನ್ನು ಸೆರೆ ಹಿಡಿದ ಪಾಕಿಸ್ತಾನ ಸೇನೆ ಅಮಾನುಷವಾಗಿ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿತು. ಕೂಡಲೇ ಪಡೆಗಳನ್ನು ಸಜ್ಜುಗೊಳಿಸಿದ ಭಾರತೀಯ ಸೇನೆ ‘ಆಪರೇಷನ್ ವಿಜಯ್’ ಕಾರ್ಯಾಚರಣೆ ಆರಂಭಿಸಿತು.

ಆದರೆ, ಕಾರ್ಗಿಲ್ ಪರ್ವತಶ್ರೇಣಿಯ ಮೇಲ್ಭಾಗದ ಬಹುತೇಕ ಪ್ರದೇಶಗಳು ಪಾಕಿಸ್ತಾನ ಸೇನೆಯ ವಶದಲ್ಲಿದ್ದುದು ಭಾರತೀಯ ಸೇನೆಗೆ ತುಸು ಹಿನ್ನಡೆಯಾಯಿತು. ದುರ್ಗಮ ಪ್ರದೇಶಗಳಾದುದರಿಂದ ಯುದ್ಧವಿಮಾನ, ಹೆಲಿಕಾಪ್ಟರ್‌ಗಳ ಮೂಲಕ ಮದ್ದುಗುಂಡು ಸಾಗಿಸುವುದು ಹಾಗೂ ಬಾಂಬ್ ದಾಳಿ ನಡೆಸುವುದು ಕಷ್ಟವಾಗಿತ್ತು. ಹಾಗೆಂದು ರಸ್ತೆ ಮೂಲಕ ಶಸ್ತ್ರಾಸ್ತ್ರ, ಮದ್ದುಗುಂಡು ಸಾಗಿಸಬೇಕಿದ್ದರೆ‘ಎನ್‌ಎಚ್ 1ಡಿ’ಯನ್ನೇ ಬಳಸಬೇಕಿತ್ತು. ಕಾರ್ಗಿಲ್ ಪರ್ವತಗಳ ಮೇಲಿದ್ದ ಪಾಕಿಸ್ತಾನಿ ಸೈನಿಕರಿಗೆ ಈ ಹೆದ್ದಾರಿಯಲ್ಲಿನ ಪ್ರತಿಯೊಂದು ಚಲನವಲನವೂ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಹೀಗಾಗಿ ಪಾಕಿಸ್ತಾನಿ ಸೈನಿಕರ ದಾಳಿಗೆ ತುತ್ತಾಗಿ ಅಪಾರ ಪ್ರಮಾಣದಲ್ಲಿ ಸಾವು–ನೋವು ಸಂಭವಿಸುವ ಆತಂಕ ಭಾರತೀಯ ಸೇನೆಗಿತ್ತು. ನಂತರ, ಹಿಮಾಚಲ ಪ್ರದೇಶದ ಮೂಲಕ ಲೇಹ್ ಅನ್ನು ಸಂಪರ್ಕಿಸುವ ರಸ್ತೆಯನ್ನು ಬಳಸಿ ಶಸ್ತ್ರಾಸ್ತ್ರ ಸಾಗಾಟ ಮಾಡಲಾಯಿತು. ಈ ಎಲ್ಲ ಅಡೆತಡೆಗಳು ಭಾರತೀಯ ಸೇನೆಯ ಕಾರ್ಯಾಚರಣೆಯನ್ನು ತುಸು ನಿಧಾನಗೊಳಿಸಿದವು.

ಶ್ರೀನಗರ–ಲೇಹ್ ನಡುವಣ ಹೆದ್ದಾರಿ ಮೇಲೆ ಹೇಗಾದರೂ ಹಿಡಿತ ಸಾಧಿಸುವುದು ಭಾರತೀಯ ಸೇನೆಯ ಪ್ರಮುಖ ಗುರಿಯಾಗಿತ್ತು. ಈ ಗುರಿಯನ್ನು ಸಾಧಿಸಿದರೆ, ನಂತರ ಪಾಕಿಸ್ತಾನಿ ಪಡೆಗಳನ್ನು ಹಿಮ್ಮೆಟ್ಟಿಸುವುದು ಸುಲಭವಾಗುತ್ತಿತ್ತು. ಹೀಗಾಗಿ ಟೈಗರ್‌ ಹಿಲ್ ಮತ್ತು ಡ್ರಾಸ್‌ನ ಟೊಲೊಲಿಂಗ್ ಮರುವಶಪಡಿಸಿಕೊಳ್ಳಲು ಮೊದಲ ಆದ್ಯತೆ ನೀಡಲಾಯಿತು. ಇದರ ಬೆನ್ನಲ್ಲೇ ಬಟಾಲಿಕ್ ಮೇಲೆ ಗುರಿಯಿರಿಸಲಾಯಿತು.1999ರ ಮೇ 26ರಂದು ಭಾರತೀಯ ವಾಯುಪಡೆ ವೈಮಾನಿಕ ದಾಳಿ ನಡೆಸುವ ಮೂಲಕ ಕಾರ್ಯಾಚರಣೆಗೆ ನೆರವಾಯಿತು. ದುರದೃಷ್ಟವಶಾತ್, ಮೇ 28ರಂದು ವಾಯುಪಡೆಯ ‘ಮಿಗ್ 17’ ವಿಮಾನವನ್ನುಪಾಕಿಸ್ತಾನ ಹೊಡೆದುರುಳಿಸಿ ನಾಲ್ವರು ಯೋಧರು ಹುತಾತ್ಮರಾದರು. ಕೊನೆಗೂ 1999ರ ಜೂನ್ 9 ಮತ್ತು 13ರಂದು ಕ್ರಮವಾಗಿ ಬಟಾಲಿಕ್ ಹಾಗೂ ಟೊಲೊಲಿಂಗ್ ಪ್ರದೇಶವನ್ನು ಮರುವಶಪಡಿಸಿಕೊಳ್ಳುವಲ್ಲಿ ಭಾರತೀಯ ಸೇನೆ ಯಶಸ್ವಿಯಾಯಿತು. ನಂತರ ಹೋರಾಟ ಸಂಪೂರ್ಣವಾಗಿ ಭಾರತದ ಪರ ವಾಲತೊಡಗಿತು. ಜುಲೈ 2ರಿಂದ ಕಾರ್ಗಿಲ್ ಬಳಿ ಭಾರಿ ಪ್ರತಿದಾಳಿ ಆರಂಭಿಸಿದ ಭಾರತೀಯ ಸೇನೆ ಜುಲೈ 4ರಂದು ಟೈಗರ್‌ ಹಿಲ್‌ ಅನ್ನೂ ತೆಕ್ಕೆಗೆ ತೆಗೆದುಕೊಂಡಿತು. ಭಾರತೀಯ ಯೋಧರ ಪ್ರತಿದಾಳಿ ತಾಳಲಾರದ ಪಾಕಿಸ್ತಾನ ಸೇನೆ ಜುಲೈ 7ರ ವೇಳೆಗೆ ಡ್ರಾಸ್‌ನಿಂದಲೂ ಕಾಲ್ಕಿತ್ತಿತು. ಅಂತಿಮವಾಗಿ ಜುಲೈ 14ರಂದು ‘ಆಪರೇಷನ್ ವಿಜಯ್’ ಯಶಸ್ವಿಯಾಗಿದೆ ಎಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಘೋಷಿಸಿದರು. ಜುಲೈ 26ರಂದು ಇಡೀ ಕಾರ್ಗಿಲ್ ಪ್ರದೇಶ ಮರಳಿ ಅಧಿಕೃತವಾಗಿ ಭಾರತದ ವಶವಾಯಿತು.

ಪ್ರಜಾವಾಣಿ ವರದಿ
ಪ್ರಜಾವಾಣಿ ವರದಿ

ನೆರವಾದ ಬೋಫೋರ್ಸ್‌:ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಪ್ರಮುಖವಾಗಿ ಭಾರತೀಯ ಸೇನೆ ಬಳಸಿದ್ದುಬೋಫೋರ್ಸ್ ಫೀಲ್ಡ್ ಹೋವಿಟ್ಜರ್ ಬಂದೂಕುಗಳನ್ನು. ಕಾರ್ಗಿಲ್‌ನಂತಹ ದುರ್ಗಮ ಪ್ರದೇಶಗಳಲ್ಲಿ ದಾಳಿ ನಡೆಸಲು ಈ ಫಿರಂಗಿಗಳು ಸಹಕಾರಿಯಾಗಿದ್ದು (ಸುಮಾರು 250 ಫಿರಂಗಿಗಳನ್ನು ಬಳಸಲಾಗಿತ್ತು) ಇವುಗಳ ಮೂಲಕ ಅತಿಕ್ರಮಣಕಾರರನ್ನು ಹಿಮ್ಮೆಟ್ಟಿಸಲಾಗಿತ್ತು.

ಭಾರಿ ಸಾವುನೋವಿಗೆ ಸಾಕ್ಷಿಯಾದ ಯುದ್ಧ:ದುರ್ಗಮ ಪ್ರದೇಶಗಳಲ್ಲಿ ನಡೆದ ಕಾರ್ಗಿಲ್ ಕದನವು ಹೆಚ್ಚಿನ ಸಂಖ್ಯೆಯ ಸಾವು–ನೋವಿಗೆ ಕಾರಣವಾಯಿತು. ಭಾರತದ ಕಡೆಯಿಂದ ಅಧಿಕೃತ ದಾಖಲೆಗಳ ಪ್ರಕಾರ, 527 ಮಂದಿ ಹುತಾತ್ಮರಾದರೆ 1,363 ಯೋಧರು ಗಾಯಗೊಂಡಿದ್ದರು. ಒಂದು ಯುದ್ಧವಿಮಾನ, ಹೆಲಿಕಾಪ್ಟರ್‌ ಅನ್ನು ಪಾಕಿಸ್ತಾನಿ ಸೈನಿಕರು ಹೊಡೆದುರುಳಿಸಿದ್ದರು. ಒಂದು ಯುದ್ಧವಿಮಾನ ತಾಂತ್ರಿಕ ದೋಷದಿಂದ ಪತನಗೊಂಡಿತ್ತು. ಪಾಕಿಸ್ತಾನದ ದಾಖಲೆಗಳ ಪ್ರಕಾರ ಅಲ್ಲಿನ 453 ಸೈನಿಕರು ಮೃತಪಟ್ಟಿದ್ದರು. ಆದರೆ, ಈ ಲೆಕ್ಕಾಚಾರದ ಬಗ್ಗೆ ಹಲವು ಅನುಮಾನಗಳಿವೆ. 700ಕ್ಕೂ ಹೆಚ್ಚು ಪಾಕಿಸ್ತಾನೀಯರು ಯುದ್ಧದಲ್ಲಿ ಮೃತಪಟ್ಟಿದ್ದು 1,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಭಾರತ ಪ್ರತಿಪಾದಿಸಿದೆ.

ಪಾಕ್ ಪೈಶಾಚಿಕತೆಗೆ ಬೆಚ್ಚಿತ್ತು ಜಗತ್ತು

ಭಾರತೀಯ ಸೇನೆಯ ನಾಲ್ಕನೇ ಬೆಟಾಲಿಯನ್‌ನ ಜಾಟ್ ರೆಜಿಮೆಂಟಿನ ಕ್ಯಾಪ್ಟನ್‌ ಸೌರಭ್‌ ಕಾಲಿಯಾ ಸೇರಿ ಐವರು ಯೋಧರನ್ನು ಪಾಕಿಸ್ತಾನ ಸೇನೆ ಹತ್ಯೆ ಮಾಡಿದ ವಿಚಾರ ಇಂದಿಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಲ್ಲಿದೆ.ಯುದ್ಧ ಕೈದಿಯಾಗಿ ವಶಕ್ಕೆ ತೆಗೆದುಕೊಳ್ಳಲಾಗಿದ್ದ ಕಾಪ್ಟನ್ ಸೌರಭ್ ಕಾಲಿಯಾ ಅವರಿಗೆ ಪಾಕಿಸ್ತಾನಿ ಸೇನೆ ಚಿತ್ರಹಿಂಸೆ ನೀಡಿ, ಅಂಗಛೇದನ ಮಾಡಿತ್ತು ಎಂಬುದು ಭಾರತದ ಪ್ರತಿಪಾದನೆ. ಆದರೆ ಪಾಕಿಸ್ತಾನವು ಈ ವಿಚಾರವನ್ನು ನಿರಾಕರಿಸುತ್ತಲೇ ಬಂದಿದೆ. ಪುತ್ರನ ಹತ್ಯೆ ಪ್ರಕರಣವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ 2012ರಲ್ಲಿ ಕಾಲಿಯಾ ತಂದೆ ಎನ್‌.ಕೆ.ಕಾಲಿಯಾ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ‘ಯುದ್ಧಕೈದಿಯಾಗಿ ಸೆರೆಹಿಡಿದ ತಮ್ಮ ಪುತ್ರನನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ‘ಜಿನೀವಾ ನಿರ್ಣಯ’ದ ಉಲ್ಲಂಘನೆಯಾಗಿದೆ’ ಎಂದುಎನ್‌.ಕೆ.ಕಾಲಿಯಾ ಪ್ರತಿಪಾದಿಸಿದ್ದರು.

8 ದಿನಗಳಲ್ಲಿ ಬಿಡುಗಡೆಯಾಗಿದ್ದರು ನಚಿಕೇತ್‌

ಕಾರ್ಗಿಲ್ ಯುದ್ಧದ ವೇಳೆ 26 ವರ್ಷ ವಯಸ್ಸಿನ ಭಾರತೀಯ ಫ್ಲೈಟ್ ಲೆಫ್ಟಿನೆಂಟ್ಕಂಭಂಪಾಟಿ ನಚಿಕೇತ್ ಪಾಕಿಸ್ತಾನದ ವಶವಾಗಿದ್ದರು. ಎಂಟು ದಿನಗಳ ಕಾಲ ಅವರನ್ನುಯುದ್ಧಕೈದಿಯಾಗಿ ಇರಿಸಿಕೊಂಡಿದ್ದ ಪಾಕಿಸ್ತಾನ, ನಂತರ ಅವರನ್ನು ಇಸ್ಲಾಮಾಬಾದಿನ ಭಾರತೀಯ ದೂತಾವಾಸಕ್ಕೆ ಒಪ್ಪಿಸಿತ್ತು. ನಚಿಕೇತ್ ಅವರನ್ನು ಸದ್ಭಾವದ ಸಂಕೇತವಾಗಿ ಬಿಡುಗಡೆ ಮಾಡುವಂತೆ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಹೇಳಿರುವುದಾಗಿ ಪಾಕ್ ವಿದೇಶಾಂಗ ಮಂತ್ರಾಲಯದಿಂದ ದೂತಾವಾಸಕ್ಕೆ ಅಂದು ದೂರವಾಣಿ ಕರೆ ಬಂದಿತ್ತು. ಜಿನ್ನಾ ಸಭಾಂಗಣದಲ್ಲಿ ನಚಿಕೇತ್ ಅವರನ್ನು ಪತ್ರಕರ್ತರ ಮುಂದೆ ವಾಪಸ್ ಮಾಡುವ ಉದ್ದೇಶ ಪಾಕಿಸ್ತಾನಕ್ಕಿತ್ತು. ಆದರೆ, ಆಇರಾದೆಯನ್ನು ಭಾರತ ಸಾರಾಸಗಟಾಗಿ ತಿರಸ್ಕರಿಸಿತ್ತು. ಆ ನಂತರ ನಚಿಕೇತ್ ಅವರನ್ನು ದೂತಾವಾಸಕ್ಕೆ ತಂದು ಹಸ್ತಾಂತರ ಮಾಡಲಾಗಿತ್ತು.

ಕಾರ್ಗಿಲ್ ಹೀರೊಗಳಿವರು...

* ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್, ಪರಮವೀರ ಚಕ್ರ

* ಲೆಫ್ಟಿನೆಂಟ್ ಕರ್ನಲ್ ಮನೋಜ್ ಕುಮಾರ್ ಪಾಂಡೆ, ಮರಣೋತ್ತರ ಪರಮವೀರ ಚಕ್ರ

* ಕ್ಯಾಪ್ಟನ್ ವಿಕ್ರಂ ಬಾತ್ರಾ,ಮರಣೋತ್ತರ ಪರಮವೀರ ಚಕ್ರ

* ರೈಫಲ್‌ಮ್ಯಾನ್ ಸಂಜಯ್ ಕುಮಾರ್, ಪರಮವೀರ ಚಕ್ರ

* ಕ್ಯಾಪ್ಟನ್ ಅನುಜ್ ನಯ್ಯರ್, ಮರಣೋತ್ತರ ಮಹಾವೀರ ಚಕ್ರ

* ಮೇಜರ್ ರಾಜೇಶ್ ಸಿಂಗ್ ಅಧಿಕಾರಿ, ಮರಣೊತ್ತರ ಮಹಾವೀರ ಚಕ್ರ

* ಕ್ಯಾಪ್ಟನ್ ಹನೀಫ್ ಉದ್ದೀನ್, ಮರಣೋತ್ತರ ವೀರ ಚಕ್ರ

* ಮೇಜರ್ ಮರಿಯಪ್ಪನ್ ಶರವಣನ್, ಮರಣೋತ್ತರ ವೀರ ಚಕ್ರ

* ಸ್ಕ್ವಾಡ್ರನ್ ಲೀಡರ್ ಅಜಯ್ ಅಹುಜಾ, ಮರಣೋತ್ತರ ವೀರ ಚಕ್ರ

* ಹವಿಲ್ದಾರ್ ಚುನಿ ಲಾಲ್, ವೀರ ಚಕ್ರ ಮತ್ತು ಮರಣೋತ್ತರ ಅಶೋಕ ಚಕ್ರ

* ಕರ್ನಲ್ ಮಾಗೋಡು ಬಸಪ್ಪ ರವೀಂದ್ರನಾಥ್, ವೀರ ಚಕ್ರ

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT