ಸಚಿವ ಸ್ಥಾನಕ್ಕೆ ಉಪೇಂದ್ರ ಕುಶ್ವಾಹ ರಾಜೀನಾಮೆ: ಎನ್‌ಡಿಎ ತೊರೆದ ಆರ್‌ಎಲ್‌ಎಸ್‌ಪಿ

7
ಬಿಹಾರದಲ್ಲಿ ಸೀಟು ಹಂಚಿಕೆ ಅಸಮಾಧಾನ

ಸಚಿವ ಸ್ಥಾನಕ್ಕೆ ಉಪೇಂದ್ರ ಕುಶ್ವಾಹ ರಾಜೀನಾಮೆ: ಎನ್‌ಡಿಎ ತೊರೆದ ಆರ್‌ಎಲ್‌ಎಸ್‌ಪಿ

Published:
Updated:

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಬಿಹಾರದಲ್ಲಿ ಸೀಟು ಹಂಚಿಕೆ ವಿಚಾರವಾಗಿ ಅಸಮಾಧಾನಗೊಂಡಿರುವ ರಾಷ್ಟ್ರೀಯ ಲೋಕಸಮತಾ ಪಕ್ಷದ (ಆರ್‌ಎಲ್‌ಎಸ್‌ಪಿ) ಮುಖ್ಯಸ್ಥ ಉಪೇಂದ್ರ ಕುಶ್ವಾಹ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ರಾಜ್ಯ ಖಾತೆ ಸಚಿವ ಸ್ಥಾನಕ್ಕೆ ಸೋಮವಾರ ಮಧ್ಯಾಹ್ನ ರಾಜೀನಾಮೆ ನೀಡಿದರು.

ಲೋಕಸಭೆ ಚುನಾವಣೆಯಲ್ಲಿ ಬಿಹಾರದಲ್ಲಿ ಎರಡಕ್ಕಿಂತ ಹೆಚ್ಚು ಸ್ಥಾನ ನೀಡಲು ಬಿಜೆಪಿ ನಿರಾಕರಿಸಿದ್ದರಿಂದ ಎನ್‌ಡಿಎ ಮಿತ್ರಕೂಟ ತೊರೆಯಲು ಆರ್‌ಎಲ್‌ಎಸ್‌ಪಿ ನಿರ್ಧರಿಸಿದೆ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿ(ಯು) ಜತೆ ಸಮಾನವಾಗಿ ಸೀಟು ಹಂಚಿಕೆ ಮಾಡಿಕೊಳ್ಳುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಈಚೆಗೆ ಘೋಷಿಸಿದ್ದರು.

ಬಿಜೆಪಿ ನಿರ್ಧಾರದಿಂದ ಆಘಾತಗೊಂಡ ಆರ್‌ಎಲ್‌ಎಸ್‌ಪಿ ಬಿಹಾರದ ವಾಲ್ಮೀಕಿ ನಗರದಲ್ಲಿ 2 ದಿನಗಳ ‘ಚಿಂತನ ಶಿಬಿರ’ ನಡೆಸಿತ್ತು. ಈ ಶಿಬಿರದಲ್ಲಿ ಎನ್‌ಡಿಎ ತೊರೆಯುವ ನಿರ್ಧಾರ ಕೈಗೊಳ್ಳಲಾಗಿತ್ತು ಎನ್ನಲಾಗಿದೆ.

ಸಂಸತ್‌ನ ಚಳಿಗಾಲದ ಅಧಿವೇಶನ ಮಂಗಳವಾರ ಆರಂಭಗೊಳ್ಳಲಿದ್ದು, ಪೂರ್ವಭಾವಿಯಾಗಿ ಇಂದು ಸಂಜೆ ಬಿಜೆಪಿಯು ಎನ್‌ಡಿಎ ಮಿತ್ರಪಕ್ಷಗಳ ಸಭೆ ಕರೆದಿದೆ. ಈ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಬೆಳಿಗ್ಗೆಯೇ ತಿಳಿಸಿದ್ದ ಕುಶ್ವಾಹ ರಾಜೀನಾಮೆ ನೀಡುವ ಸುಳಿವು ನೀಡಿದ್ದರು.

ಸದ್ಯದ ಮಾಹಿತಿ ಪ್ರಕಾರ, 40 ಲೋಕಸಭಾ ಕ್ಷೇತ್ರಗಳಿರುವ ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿ(ಯು) ತಲಾ 17 ಕ್ಷೇತ್ರಗಳಂತೆ ಸ್ಪರ್ಧಿಸುವ ತೀರ್ಮಾನಕ್ಕೆ ಬಂದಿವೆ ಎಂದು ಕೆಲವು ಮೂಲಗಳು ಹೇಳಿವೆ. ಆರ್‌ಎಲ್‌ಎಸ್‌ಪಿಗೆ ಎರಡು ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಇದು ಕುಶ್ವಾಹ ಅವರ ಅಸಮಾಧಾನಕ್ಕೆ ಕಾರಣವಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಆರ್‌ಎಲ್‌ಎಸ್‌ಪಿಗೆ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು. 2014ರಲ್ಲಿ ಬಿಹಾರದಲ್ಲಿ ಆರ್‌ಎಲ್‌ಎಸ್‌ಪಿ ಹಾಗೂ ರಾಂ ವಿಲಾಸ್‌ ಪಾಸ್ವಾನ್‌ ನೇತೃತ್ವದ ಲೋಕ ಜನಶಕ್ತಿ ಪಕ್ಷದೊಂದಿಗೆ(ಎಲ್‌ಜೆಪಿ) ಬಿಜೆಪಿ ಮೈತ್ರಿ ಮಾಡಿಕೊಂಡಿತ್ತು. ಬಿಜೆಪಿ 22, ಎಲ್‌ಜೆಪಿ 6, ಆರ್‌ಎಲ್‌ಎಸ್‌ಪಿ 3 ಸ್ಥಾನಗಳನ್ನು ಪಡೆದಿದ್ದವು.

ಇದೇ ಮೊದಲಲ್ಲ: ಆರ್‌ಎಲ್‌ಎಸ್‌ಪಿಗೆ ಹೆಚ್ಚು ಸ್ಥಾನ ನೀಡಬೇಕು ಎಂದು ಈ ಹಿಂದೆಯೂ ಹಲವು ಬಾರಿ ಕುಶ್ವಾಹ ಒತ್ತಾಯಿಸಿದ್ದಾರೆ. ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಳಿ ನವೆಂಬರ್‌ನಲ್ಲಿ ಮನವಿಯನ್ನೂ ಮಾಡಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಬಿಹಾರದಲ್ಲಿ ಪಕ್ಷಕ್ಕಿರುವ ಮೂಲ ಬೆಂಬಲ ಹೆಚ್ಚಾಗಿದೆ. ಹೀಗಾಗಿ ಹೆಚ್ಚು ಸ್ಥಾನ ನೀಡಬೇಕು. ಬಿಹಾರದಲ್ಲಿ ಎನ್‌ಡಿಎ ನಾಯಕನಾಗಿ ನಿತೀಶ್ ಕುಮಾರ್ ಬದಲಿಗೆ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ಅವರನ್ನು ಬಿಂಬಿಸಬೇಕು ಎಂದು ಆರ್‌ಎಲ್‌ಎಸ್‌ಪಿ ಜುಲೈನಲ್ಲಿ ವಾದಿಸಿತ್ತು.

ಮಹಾಮೈತ್ರಿ ಸೇರುವ ಸಾಧ್ಯತೆ: ಆರ್‌ಎಲ್‌ಎಸ್‌ಪಿಯು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ನೇತೃತ್ವದ ಮಹಾಮೈತ್ರಿಕೂಟವನ್ನು ಸೇರುವ ಸಾಧ್ಯತೆ ಇದೆ. ಈ ಮಧ್ಯೆ, ಕುಶ್ವಾಹ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.

ಇನ್ನಷ್ಟು...

ಬಿಹಾರ: ಎನ್‌ಡಿಎ ಮಿತ್ರ ಪಕ್ಷಗಳಲ್ಲಿ ಸ್ಥಾನ ಹಂಚಿಕೆಗೆ ಪೈಪೋಟಿ

ಎನ್‌ಡಿಎ ಮೈತ್ರಿಯಲ್ಲಿ ಅಪಸ್ವರ: ಹೆಚ್ಚು ಸ್ಥಾನಗಳಿಗೆ ಆರ್‌ಎಲ್‌ಎಸ್‌ಪಿ ಪಟ್ಟು

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !