ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಪಿಗಳ ಚಿತ್ರ: ಸಮರ್ಥನೆಗಿಲ್ಲ ಕಾನೂನು

ಬ್ಯಾನರ್‌ ತೆಗೆಯುವ ನಿರ್ದೇಶನಕ್ಕೆ ತಡೆ ನೀಡಲು ‘ಸುಪ್ರೀಂ’ ನಿರಾಕರಣೆ
Last Updated 12 ಮಾರ್ಚ್ 2020, 19:40 IST
ಅಕ್ಷರ ಗಾತ್ರ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪ್ರತಿಭಟನೆ ಸಂದರ್ಭದಲ್ಲಿ ಗಲಭೆ ನಡೆಸಿದ್ದಾರೆ ಎಂಬ ಆರೋಪ ಹೊರಿಸಲಾಗಿರುವ ವ್ಯಕ್ತಿಗಳ ಫೋಟೊ ಮತ್ತು ವಿವರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದನ್ನು ಸಮರ್ಥಿಸುವ ಯಾವುದೇ ಕಾನೂನು ಇಲ್ಲ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ.

ಆರೋಪಿಗಳ ಹೆಸರು ಮತ್ತು ವಿವರಗಳಿರುವ ಫಲಕಗಳನ್ನು ಉತ್ತರ ಪ್ರದೇಶ ಸರ್ಕಾರವು ಲಖನೌನ ವಿವಿಧ ಸ್ಥಳಗಳಲ್ಲಿ ಪ್ರದರ್ಶಿಸಿದೆ. ಈ ಎಲ್ಲ ಫಲಕಗಳನ್ನು ತೆಗೆಯುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಅಲಹಾಬಾದ್‌ ಹೈಕೋರ್ಟ್ ನಿರ್ದೇಶನ ನೀಡಿತ್ತು. ಅದನ್ನು ಪ್ರಶ್ನಿಸಿ, ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ನ್ಯಾಯಮೂರ್ತಿಗಳಾದ ಯು.ಯು.ಲಲಿತ್‌ ಮತ್ತು ಅನಿರುದ್ಧ ಬೋಸ್‌ ಅವರ ದ್ವಿಸದಸ್ಯ ಪೀಠವು, ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಲು ನಿರಾಕರಿಸಿತು. ಆದರೆ, ಈ ವಿಚಾರದಲ್ಲಿ ಇನ್ನಷ್ಟು ವಿಸ್ತೃತ ವಿಚಾರಣೆ ಅಗತ್ಯವಿದೆ. ಹಾಗಾಗಿ, ವಿಸ್ತೃತ ಪೀಠದಿಂದ ವಿಚಾರಣೆ ನಡೆಯಬೇಕು ಎಂದು ಶಿಫಾರಸು ಮಾಡಿತು.

ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ಅವರ ಗಮನಕ್ಕೆ ತರುವಂತೆ ಮತ್ತು ಮುಂದಿನ ವಾರವೇ ವಿಚಾರಣೆ ನಡೆಯುವಂತೆ ನೋಡಿಕೊಳ್ಳುವಂತೆ ರಿಜಿಸ್ಟ್ರಿಗೆ ಪೀಠವು ಸೂಚಿಸಿತು.

ಉತ್ತರ ಪ್ರದೇಶ ಸರ್ಕಾರದ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹಾಜರಾಗಿದ್ದರು. ಈ ವಿಚಾರವು ಅತ್ಯಂತ ಮಹತ್ವದ್ದು ಎಂದು ಮೆಹ್ತಾ ಅವರಿಗೆ ಪೀಠವು ಹೇಳಿತು. ಇಂತಹ ಫಲಕ ಅಳವಡಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆಯೇ ಎಂದೂ ಅವರನ್ನು ಪ್ರಶ್ನಿಸಿತು. ಗಲಭೆಕೋರರ ವಿರುದ್ಧ ಕ್ರಮ ಕೈಗೊಳ್ಳಬೇಕು, ಅವರಿಗೆ ತಕ್ಕ ಶಿಕ್ಷೆ ಆಗಬೇಕು ಎಂಬ ವಿಚಾರದಲ್ಲಿ ಯಾವು ಅನುಮಾನವೂ ಇಲ್ಲ ಎಂದೂ ಪೀಠವು ಸ್ಪಷ್ಟಪಡಿಸಿತು.

ನಿವೃತ್ತ ಐಪಿಎಸ್‌ ಅಧಿಕಾರಿ ಎಸ್‌.ಆರ್‌. ದಾರಾಪುರಿ ಪರವಾಗಿ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಹಾಜರಾಗಿದ್ದರು. ಉತ್ತರ ಪ್ರದೇಶ ಸರ್ಕಾರ ಅಳವಡಿಸಿರುವ ಫಲಕದಲ್ಲಿದಾರಾಪುರಿ ಅವರ ಫೋಟೊ ಕೂಡ ಇದೆ. ಹೀಗೆ ಫಲಕ ಪ್ರದರ್ಶಿಸಲು ಇರುವ ಕಾನೂನು ಯಾವುದು ಎಂಬುದನ್ನು ನ್ಯಾಯಾಲಯದ ಮುಂದೆ ಹೇಳುವುದು ಸರ್ಕಾರದ ಕರ್ತವ್ಯ ಎಂದು ಸಿಂಘ್ವಿ ಅವರು ವಾದಿಸಿದರು.

ಕಾನೂನು ಅನ್ವಯ ವಿಚಾರಣೆ ಪೂರ್ಣಗೊಳ್ಳುವ ಮೊದಲೇ ಇಂತಹ ಫಲಕ ಪ್ರದರ್ಶಿಸುವುದು ಆರೋಪಿಗಳನ್ನು ಅವಮಾನಿಸುವ ಕ್ರಮ. ಫಲಕದಲ್ಲಿ ಆರೋಪಿಗಳ ಫೋಟೊ ಮತ್ತು ವಿಳಾಸವನ್ನೂ ನೀಡಲಾಗಿದೆ. ಜನರ ಗಂಪುಗಳು ಅವರ ಮೇಲೆ ಹಲ್ಲೆ ನಡೆಸಲಿ ಎಂದು ಕುಮ್ಮಕ್ಕು ನೀಡುವುದೇ ಇದರ ಉದ್ದೇಶ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT