ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬ್ಬಮ್ಮ ದೇವರ ಸುಗ್ಗಿ ಹಬ್ಬ ಸಂಭ್ರಮ

ತೋಳೂರುಶೆಟ್ಟಳ್ಳಿ; ಹಗಲು ವೇಳೆ ನೆಂಟರಿಷ್ಟರು ಮನೆಗೆ ಬರಲು ನಿರ್ಬಂಧ
Last Updated 28 ಏಪ್ರಿಲ್ 2018, 11:40 IST
ಅಕ್ಷರ ಗಾತ್ರ

ಸೋಮವಾರಪೇಟೆ: ಇಲ್ಲಿಗೆ ಸಮೀಪದ ತೋಳೂರುಶೆಟ್ಟಳ್ಳಿಯಲ್ಲಿ ಶುಕ್ರವಾರ ಸುಗ್ಗಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕೂತಿನಾಡಿಗೆ ಸೇರಿದ 3 ಗ್ರಾಮಸ್ಥರೊಂದಿಗೆ ಅಕ್ಕ ಪಕ್ಕದ ಜಿಲ್ಲೆಗಳ ಸಾವಿರಾರು ಜನರು ಸುಗ್ಗಿ ಉತ್ಸವದಲ್ಲಿ ಭಾಗಿಯಾಗಿದ್ದರು. ಗ್ರಾಮದೇವತೆ ಸಬ್ಬಮ್ಮ ದೇವಿಗೆ ಊರಿನ ಎಲ್ಲರೂ ಸೇರಿ ವರ್ಷಕ್ಕೊಮ್ಮೆ ಪೂಜೆ ಸಲ್ಲಿಸುವ ಆಚರಣೆ ಬಹು ಹಿಂದಿನಿಂದ ನಡೆದುಕೊಂಡು ಬಂದಿದೆ. ಮಳೆಗಾಲ ಪ್ರಾರಂಭವಾಗಿ ಗ್ರಾಮೀಣ ಭಾಗದ ಜನರು ಕೃಷಿ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಸಮಯದಲ್ಲಿ ಯಾವುದೇ ತೊಡಕಾಗಬಾರದು, ಗ್ರಾಮ ಸುಭೀಕ್ಷೆಯಿಂದಿರಬೇಕು
ಎಂದು ಗ್ರಾಮದೇವರಿಗೆ ಹಾಗೂ ಪ್ರಕೃತಿದೇವಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಕಾಗುತ್ತದೆ.

ಸುಗ್ಗಿ ಆಚರಣೆ ಸಂದರ್ಭ ಉತ್ಸವಕ್ಕೆ 15 ದಿನ ಮೊದಲು ಹಸಿ ಮರ ಕಡಿಯದಹಾಗೆ, ಒಣಗಿದ ಗಿಡ ಬಳ್ಳಿಗಳನ್ನು ಮುರಿಯದಂತೆ ಎಚ್ಚರ ವಹಿಸುತ್ತಾರೆ. ಹಗಲು ವೇಳೆ ನೆಂಟರಿಷ್ಟರು ಮನೆ ಸೇರದಂತೆ ನಿರ್ಬಂಧ ವಿಧಿಸುತ್ತಾರೆ. ರಾತ್ರಿ ನಕ್ಷತ್ರಗಳು ಕಂಡ ನಂತರವೇ ಮನೆಯೊಳಕ್ಕೆ ಬರಮಾಡಿಕೊಳ್ಳುತ್ತಾರೆ. ಹಗಲಿನ ವೇಳೆ ಹೊರಗಡೆಯಿಂದ ಆಹಾರ ಸಾಮಗ್ರಿಗಳನ್ನು ಖರೀದಿಸುವಂತಿಲ್ಲ. ಇಂತಹ ಕಟ್ಟುಪಾಡುಗಳು ಗ್ರಾಮೀಣ ಪ್ರದೇಶದಲ್ಲಿ ಸುಗ್ಗಿ ಸಂದರ್ಭ ಚಾಲ್ತಿಯಲ್ಲಿರುತ್ತವೆ.

ಸುಗ್ಗಿ ಉತ್ಸವ ಪ್ರಾರಂಭವಾಗುತ್ತಿದ್ದಂತೆ ಗ್ರಾಮದ ಮನೆಗಳಲ್ಲಿ ಗ್ರಾಮದೇವತೆಗಳ ಪೂಜೆಗಳು ನಡೆಯುತ್ತವೆ. ಗ್ರಾಮದಲ್ಲಿ ರೋಗರುಜೀನಗಳು ಬಾರದಂತೆ, ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆ ನಡೆದು ಸಮೃದ್ಧ ಫಸಲು ಕೈಸೇರುವುದಕ್ಕೆ ಗ್ರಾಮದೇವತೆ ಹರಸಬೇಕೆಂದು ಗ್ರಾಮಸ್ಥರೆಲ್ಲ ಒಟ್ಟಾಗಿ ಸೇರಿ ಪ್ರಾರ್ಥನೆ ಮಾಡುತ್ತಾರೆ.

ಸುಗ್ಗಿಹಬ್ಬ ಗ್ರಾಮೀಣ ಭಾಗದ ಬಹುದೊಡ್ಡ ಉತ್ಸವವಾಗಿದೆ. ಬೀರೇದೇವರ ಬೆಟ್ಟದಲ್ಲಿ ಮಳೆ ಕರೆಯುವುದರಿಂದ ಪ್ರಾರಂಭಗೊಂಡು, ಗುಮ್ಮನ ಮರಿ ಪೂಜೆ, ಸಾಮೂಹಿಕ ಬೋಜನ, ಊರೊಡೆಯನ ಪೂಜೆ, ದೇವರ ಗಂಗಾ ಸ್ನಾನ ಮತ್ತಿತರ ಪೂಜಾ ಕಾರ್ಯಗಳು ನಡೆದವು.

ಸಬ್ಬಮ್ಮ ದೇವಿಯ ಸನ್ನಿಧಿಯಲ್ಲಿ ಹಣ್ಣು ಕಾಯಿ ಹಾಗೂ ಮಡೇ ಉತ್ಸವ ನಡೆಯಿತು. ಗ್ರಾಮಸ್ಥರು ದೇವರಿಗೆ 101 ಎಡೆಯನ್ನಿರಿಸಿ ಪೂಜೆ ಸಲ್ಲಿಸಿದರು. ನಂತರ ಉತ್ಸವ ಮೂರ್ತಿಯನ್ನು ಸುಗ್ಗಿಕಟ್ಟೆಯ ಸುತ್ತಲೂ ಮೂರು ಭಾರಿ ಪ್ರದಕ್ಷಿಣೆ ತರಲಾಯಿತು. ಈ ಸಂದರ್ಭ ಭಕ್ತರು ಸಾವಿರಾರು ಈಡುಗಾಯಿ ಸೇವೆ ಸಲ್ಲಿಸಿದರು.

ಉತ್ಸವದಲ್ಲಿ ಮಾಚಯ್ಯ ಅವರ ನೇತೃತ್ವದ ಸುಗ್ಗಿ ಕುಣಿತ ನೋಡುಗರ ಮನ ಸೆಳೆದರೆ, ಯುವಕ, ಯುವತಿಯರು ಹಾಗೂ ಮಕ್ಕಳು ಕುಣಿತದಲ್ಲಿ ಭಾಗಿಯಾಗಿ ಕುಣಿದು ಕುಪ್ಪಳಿಸಿದರು. ಸುಗ್ಗಿ ಉತ್ಸವದ ನೇತೃತ್ವವನ್ನು ಸಬ್ಬಮ್ಮ ದೇವರ ಸಮಿತಿಯ ಅಧ್ಯಕ್ಷರಾದ ರಾಜಗೋಪಾಲ್‌, ಕಾರ್ಯದರ್ಶಿ ಡಿ.ಎಲ್. ಜಗದೀಶ್, ಖಜಾಂಚಿ ಮನೋಹರ್, ಗ್ರಾಮದ ಹಿರಿಯ ಚಾವಡಿ ಮನೆ ಸುಬ್ಬಯ್ಯ, ಐ.ಎಚ್.ನಿಂಗಪ್ಪ ವಹಿಸಿದ್ದರು.

ಸಮಿತಿಯ ಸದಸ್ಯರು, ತೋಳೂರುಶೆಟ್ಟಳ್ಳಿ, ಚಿಕ್ಕತೋಳೂರು ಮತ್ತು ದೊಡ್ಡತೋಳೂರು ಗ್ರಾಮಸ್ಥರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT