ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರುವಲಸೆ ಬಿಕ್ಕಟ್ಟು: ಸುಪ್ರೀಂ ತರಾಟೆ

ವಲಸೆ ಕಾರ್ಮಿಕರ ಪ್ರಯಾಣ, ಆಹಾರ: ಲೋಪ ಸರಿಪಡಿಸಲು ಸರ್ಕಾರಗಳಿಗೆ ನಿರ್ದೇಶನ
Last Updated 28 ಮೇ 2020, 20:27 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿರುವ ವಲಸೆ ಕಾರ್ಮಿಕರ ಮರುವಲಸೆಯ ಸಮಸ್ಯೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಕೆಲವು ಮಹತ್ವದ ನಿರ್ದೇಶನಗಳನ್ನು ಗುರುವಾರನೀಡಿದೆ.

ಕೋವಿಡ್‌ 19 ಪಸರಿಸುವಿಕೆ ತಡೆಗಾಗಿ ಹೇರಲಾದ ಲಾಕ್‌ಡೌನ್‌ನಿಂದಾಗಿ ವಲಸೆ ಕಾರ್ಮಿಕರು ದೇಶದ ವಿವಿಧ ಭಾಗಗಳಲ್ಲಿ ಸಿಲುಕಿಕೊಂಡಿದ್ದಾರೆ. ಊರಿಗೆ ಮರಳುವ ರೈಲು ಅಥವಾ ಬಸ್‌ ವೆಚ್ಚವನ್ನು ಅವರಿಂದ ವಸೂಲು ಮಾಡಬಾರದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಊರಿಗೆ ಮರಳಲು ಇಚ್ಛಿಸುವ ವಲಸೆ ಕಾರ್ಮಿಕರ ನೋಂದಣಿಯನ್ನು ಆಯಾ ರಾಜ್ಯಗಳು ಮಾಡಿಕೊಳ್ಳಬೇಕು. ಈ ಎಲ್ಲರೂ ಆದಷ್ಟು ಬೇಗನೆ ತಮ್ಮೂರಿಗೆ ಹೋಗುವ ಬಸ್‌ ಅಥವಾ ರೈಲು ಏರುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ಅವರ ನೇತೃತ್ವದ ಪೀಠವು ಹೇಳಿದೆ. ನ್ಯಾಯಮೂರ್ತಿಗಳಾದ ಎಸ್‌.ಕೆ.ಕೌಲ್‌ ಮತ್ತು ಎಂ.ಆರ್‌. ಶಾ ಅವರೂ ಈ ಪೀಠದಲ್ಲಿದ್ದರು.

ಪ್ರಕರಣದ ವಿಚಾರಣೆಯು ವಿಡಿಯೊ ಕಾನ್ಫರೆನ್ಸ್‌ ಮೂಲಕ ಸುಮಾರು ಎರಡೂವರೆ ತಾಸು ನಡೆಯಿತು.

‘ಸಂಬಂಧಪಟ್ಟ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳು ವಲಸಿಗರ ಸಮಸ್ಯೆ ಪರಿಹಾರಕ್ಕೆ ಕ್ರಮಗಳನ್ನು ಕೈಗೊಂಡಿವೆ ಎಂಬುದರಲ್ಲಿ ಅನುಮಾನ ಇಲ್ಲ. ಹಾಗಿದ್ದರೂ, ವಲಸೆ ಕಾರ್ಮಿಕರ ನೋಂದಣಿ,‍ಪ್ರಯಾಣ, ಅವರಿಗೆ ಆಹಾರ ಮತ್ತು ಆಶ್ರಯ ನೀಡಿಕೆ ವಿಚಾರದಲ್ಲಿ ಹಲವು ಲೋಪಗಳು ಆಗಿವೆ’ ಎಂದು ಪೀಠ ಹೇಳಿದೆ.

ವಲಸೆ ಕಾರ್ಮಿಕರೆಲ್ಲರನ್ನು ಮರಳಿ ಊರಿಗೆ ಕಳುಹಿಸಲು ಎಷ್ಟು ಸಮಯ ಬೇಕು ಎಂದು ಪ್ರಶ್ನಿಸುವ ಮೂಲಕ ರಾಜ್ಯ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿದೆ. ಒಂದು ರಾಜ್ಯವು ಕಾರ್ಮಿಕರನ್ನು ಕಳುಹಿಸಿದಾಗ, ಇನ್ನೊಂದು ರಾಜ್ಯವು ಅವರನ್ನು ಗಡಿಯಲ್ಲಿ ತಡೆದು ನಿಲ್ಲಿಸಿದೆ. ವಲಸಿಗರ ಹಿಂದಿರುಗುವಿಕೆ ಬಗ್ಗೆ ಒಂದು ನೀತಿ ಇಲ್ಲದಿರುವುದು ಇದಕ್ಕೆ ಕಾರಣ ಎಂದು ಪೀಠವು ಅಸಮಾಧಾನ ವ್ಯಕ್ತಪಡಿಸಿದೆ.

ಈ ಸಂಕಷ್ಟ ನಿವಾರಣೆಯಲ್ಲಿ ಏನೇನು ಕ್ರಮ ಕೈಗೊಳ್ಳಲಾಗಿದೆ ಎಂಬ ವಿವರವಾದ ಮಾಹಿತಿಯನ್ನು ಶುಕ್ರವಾರದೊಳಗೆ ಪೀಠಕ್ಕೆ ಸಲ್ಲಿಸಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಪೀಠಕ್ಕೆ ಮನವರಿಕೆ ಮಾಡಿಕೊಡಲು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಪ್ರಯತ್ನಿಸಿದರು. ಆದರೆ, ಕಾರ್ಮಿಕರ ಸಂಕಷ್ಟಕ್ಕೆ ಮಾತ್ರ ಗಮನ ಕೇಂದ್ರೀಕರಿಸಲು ಪೀಠವು ನಿರ್ಧರಿಸಿತು.

ಈಗಾಲೂ ವಲಸೆ ಕಾರ್ಮಿಕರು ಬಹುದೊಡ್ಡ ಸಂಖ್ಯೆಯಲ್ಲಿ ನಡೆದು ಊರುಗಳಿಗೆ ಹೋಗುತ್ತಿದ್ದಾರೆ. ನೋಂದಣಿ ಮಾಡಿಕೊಂಡ ಬಳಿಕ ಅವರು ಬಸ್‌ ಅಥವಾ ರೈಲಿಗಾಗಿ ಕಾಯಬೇಕಾದ ಸ್ಥಿತಿ ಇದೆ ಎಂದು ಪೀಠ ಹೇಳಿತು.

ನಿರ್ದೇಶನಗಳೇನು?

* ವಲಸೆ ಕಾರ್ಮಿಕರು ಎಲ್ಲಿಂದ ಹೊರಡುತ್ತಾರೆಯೋ ಅಲ್ಲಿನ ರಾಜ್ಯ ಸರ್ಕಾರವು ನಿಲ್ದಾಣದಲ್ಲಿ ಆಹಾರ, ನೀರು ಪೂರೈಸಬೇಕು

* ಪ್ರಯಾಣದ ವೇಳೆಯಲ್ಲಿ ಅವರಿಗೆ ಆಹಾರ, ನೀರು ಒದಗಿಸುವುದು ರೈಲ್ವೆ ಇಲಾಖೆಯ ಹೊಣೆ

* ಬಸ್‌ನಲ್ಲಿ ಪ್ರಯಾಣಿಸುವ ವಲಸೆ ಕಾರ್ಮಿಕರಿಗೂ ಆಹಾರ, ನೀರು ಒದಗಿಸಬೇಕು

* ವಲಸೆ ಕಾರ್ಮಿಕರು ಹಿಂದಿರುಗಲು ವಾಹನ ಏರುವವರೆಗೆ ಅವರಿಗೆ ಆಯಾ ರಾಜ್ಯಗಳು ಆಹಾರ ಒದಗಿಸಬೇಕು

* ನಡೆದು ಹೋಗುತ್ತಿರುವ ಕಾರ್ಮಿಕರನ್ನು ಆಶ್ರಯತಾಣಗಳಿಗೆ ಸೇರಿಸಿ, ಅವರಿಗೆ ಆಹಾರ ಮತ್ತು ಇತರ ಸೌಲಭ್ಯ ಒದಗಿಸಬೇಕು

* ಈ ಎಲ್ಲ ಮಾಹಿತಿ ವಲಸೆ ಕಾರ್ಮಿಕರಿಗೆ ತಿಳಿಯುವ ರೀತಿಯಲ್ಲಿ ಪ್ರಚಾರ ಕೊಡಬೇಕು.

ವಕೀಲರ ಪತ್ರ

ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ನಿಲುವನ್ನು ಪ್ರಶ್ನಿಸಿ ಹಿರಿಯ ವಕೀಲರ ಗುಂಪು ಪತ್ರ ಬರೆದಿತ್ತು. ‘ಮಾನವೀಯ ಬಿಕ್ಕಟ್ಟಿಗೆ ಅಸಡ್ಡೆ ತೋರಲಾಗಿದೆ ಮತ್ತು ಬಡವರಾದ ಲಕ್ಷಾಂತರ ವಲಸಿಗರ ಬಗ್ಗೆ ಇರುವ ಸಾಂವಿಧಾನಿಕ ಪಾತ್ರ ಮತ್ತು ಕರ್ತವ್ಯವನ್ನು ಸುಪ್ರೀಂ ಕೋರ್ಟ್‌ ಕಡೆಗಣಿಸಿದೆ’ ಎಂದು ಪತ್ರದಲ್ಲಿ ಹೇಳಲಾಗಿತ್ತು. ಅದಾದ ಬಳಿ, ಇದೇ 26ರಂದು ಸುಪ್ರೀಂ ಕೋರ್ಟ್‌ ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಲು ನಿರ್ಧರಿಸಿತ್ತು.

ಕೆಡುಕಿನ ಪ್ರತಿಪಾದಕರು: ಮೆಹತಾ

ದೇಶದಲ್ಲಿ ‘ಆರಾಮ ಕುರ್ಚಿ ಚಿಂತಕ’ರಿದ್ದಾರೆ. ಇವರು ಸದಾ ‘ಕೆಡುಕಿನ ಪ್ರತಿಪಾದಕರು’ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೇಳಿದ್ದಾರೆ. ಇವರು ನಕಾರಾತ್ಮಕತೆಯನ್ನು ಪಸರಿಸುತ್ತಾರೆ ಮತ್ತು ವಲಸೆ ಕಾರ್ಮಿಕರ ಸಂಕಷ್ಟ ನಿವಾರಣೆಗೆ ಕೈಗೊಂಡಿರುವ ಭಾರಿ ಕೆಲಸವನ್ನು ಗುರುತಿಸುವುದೇ ಇಲ್ಲ ಎಂದು ಅವರು ಟೀಕಿಸಿದ್ದಾರೆ. ಕೆಲವು ಮಾಧ್ಯಮ ವರದಿಗಳನ್ನು ಮುಂದಿಟ್ಟುಕೊಂಡು ಇವರು ಬಿಕ್ಕಟ್ಟಿನ ಸಂದರ್ಭದಲ್ಲಿ ನಕಾರಾತ್ಮಕತೆ ಹರಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಸಿಬಲ್‌ ಟ್ವೀಟ್‌

ವಲಸಿಗರು ನಮ್ಮ ಹೊಣೆ ಅಲ್ಲವೇ? ಮೃತ ತಾಯಿಯನ್ನು ಎಬ್ಬಿಸಲು ಯತ್ನಿಸುವ ಮಗು, ಹಸಿವು, ಬಾಯಾರಿಕೆಯಿಂದ ಮಕ್ಕಳನ್ನು ಕಳೆದುಕೊಂಡ ತಾಯಿ, ಆಹಾರ, ನೀರು ಇಲ್ಲದ ಶ್ರಮಿಕ ವಿಶೇಷ ರೈಲುಗಳು, ಕೊಳಕು ಶೌಚಾಲಯಗಳು, ಜನ ತುಂಬಿ ತುಳುಕುವ ಬೋಗಿಗಳನ್ನು ನೋಡಿ ನಾವು ನಾಚಿಕೆಯಿಂದ ತಲೆ ತಗ್ಗಿಸಬೇಕು ಎಂದು ಕಾಂಗ್ರೆಸ್ ಮುಖಂಡಕಪಿಲ್‌ ಸಿಬಲ್ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT