ಶನಿವಾರ, ಆಗಸ್ಟ್ 15, 2020
26 °C

ನಂಬಿ ನಾರಾಯಣನ್ ವಿರುದ್ಧ ಬೇಹುಗಾರಿಕೆ ಪ್ರಕರಣ:ತೀರ್ಪು ಕಾಯ್ದಿರಿಸಿದ ಸುಪ್ರೀಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಬೇಹುಗಾರಿಕೆ ಆರೋಪ ಪ್ರಕರಣದಲ್ಲಿ ತಮ್ಮ ವಿರುದ್ಧ ತನಿಖೆ ನಡೆಸಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಇಸ್ರೊದ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪ್ರಕರಣದ ತೀರ್ಪನ್ನು ಕಾಯ್ದಿರಿಸಿದೆ.
ಉನ್ನತ ಸ್ಥಾನದಲ್ಲಿದ್ದ ವಿಜ್ಞಾನಿಯನ್ನು ಸಂದೇಹದ ಮೇರೆಗೆ ಬಂಧಿಸಿದ್ದರ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ, ಪರಿಹಾರ ಮೊತ್ತ ಯಾವ ರೀತಿಯಲ್ಲಿ ನೀಡಬೇಕು ಎಂಬುದನ್ನು ಸರ್ಕಾರ ತೀರ್ಮಾನಿಸಬೇಕಿದೆ ಎಂದಿದ್ದಾರೆ.

ಇಸ್ರೊ ಬೇಹುಗಾರಿಕೆ ಪ್ರಕರಣದ ತನಿಖೆ ನಡೆಸಿದ ಮಾಜಿ ಡಿಜಿಪಿ ಸಿಬಿ ಮ್ಯಾಥ್ಯೂಸ್, ನಿವೃತ್ತ ಎಸ್‍ಪಿ ಕೆ,ಕೆ ಜೋಷ್ವಾ, ಎಸ್. ವಿಜಯನ್ ಮೊದಲಾದ ಪೊಲೀಸ್ ಅಧಿಕಾರಿಗಳ ವಿರುದ್ದ ಕ್ರಮ ತೆಗೆದುಕೊಳ್ಳಬೇಕೆಂದು ನಂಬಿ ನಾರಾಯಣನ್ ಒತ್ತಾಯಿಸಿದ್ದರು. ಈ ಮನವಿಯನ್ನು  ಹೈಕೋರ್ಟ್ ಏಕ ಪೀಠ ತಿರಸ್ಕರಿಸಿದ್ದರಿಂದ, ನಂಬಿ ಅವರು ಸುಪ್ರೀಂ ಮೆಟ್ಟಲೇರಿದ್ದರು. ಇದರ ಜತೆಗೆ ಬೇಹುಗಾರಿಕೆ ಆರೋಪದ ಬಗ್ಗೆ ಪ್ರತ್ಯೇಕ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದರು.

ನಷ್ಟ ಪರಿಹಾರ ಮತ್ತು ತನಿಖೆ ಒಟ್ಟಿಗೆ ನಡೆಸಬೇಕೆ? ಎಂಬುದರ ಬಗ್ಗೆ ಚಿಂತಿಸಲಾಗುವುದು ಎಂದು ನ್ಯಾಯಾಧೀಶ ಚಂದ್ರಚೂಡ್ ಹೇಳಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಅಧಿಕಾರಿಗಳಿಂದ ಪ್ರಮಾದವಾಗಿದೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಏತನ್ಮಧ್ಯೆ, ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ತನಿಖೆಗೆ ನಾವು ಸಿದ್ಧ ಎಂದು ಸಿಬಿಐ ನ್ಯಾಯಾಲಯಕ್ಕೆ ಹೇಳಿದೆ. ಸಿಬಿಐಗೆ ಇದ್ಯಾವುದನ್ನೂ ಮರೆಯಲು ಸಾಧ್ಯವಿಲ್ಲ ಎಂದು ಸಿಬಿಐ ಪರವಾಗಿ ವಾದಿಸಿದ ವಕೀಲರು ಹೇಳಿದ್ದಾರೆ.
ಇಸ್ರೊ ಬೇಹುಗಾರಿಕೆ ಪ್ರಕರಣ ತನಿಖೆ ನಡೆಸಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ನಂಬಿ ನಾರಾಯಣನ್ ಸಲ್ಲಿಸಿದ ಅರ್ಜಿ ಪರಿಗಣಿಸಿ ಈ ಹಿಂದೆ ಕೇರಳ ಸರ್ಕಾರ ಮತ್ತು ಪ್ರತಿವಾದಿಗಳಿಗೂ ಸುಪ್ರೀಂಕೋರ್ಟ್ ನೋಟಿಸ್ ನೀಡಿತ್ತು. 

ಏನಿದು ಪ್ರಕರಣ? 
1994ರಲ್ಲಿ ಸ್ವದೇಶಿ ನಿರ್ಮಿತ ಕ್ರಯೋಜೆನಿಕ್ ಎಂಜಿನ್ ಸಿದ್ಧ ಪಡಿಸುತ್ತಿರುವ ಹೊತ್ತಲ್ಲಿ, ಆ ತಂತ್ರಜ್ಞಾನವನ್ನು ನಂಬಿ ನಾರಾಯಣನ್ ಶತ್ರು ದೇಶಗಳಿಗೆ ಮಾರಾಟ ಮಾಡಲು ಷಡ್ಯಂತ್ರ ರೂಪಿಸಿದ್ದಾರೆ ಎಂಬ ಆರೋಪ ಕೇಳಿ ಬಂತು. ಈ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ನಂಬಿ ನಾರಾಯಣನ್ ಮತ್ತು ವಿಜ್ಞಾನಿ ಶಶಿ ಕುಮಾರ್, ಬೆಂಗಳೂರು ಮೂಲದ ಉದ್ಯಮಿಗಳಾದ ಎಸ್.ಕೆ ಶರ್ಮಾ ಮತ್ತು ಚಂದ್ರಶೇಖರ್ ಹೀಗೆ ಒಟ್ಟು 6 ಮಂದಿಯನ್ನು ಬಂಧಿಸಿದ್ದರು. 50 ದಿವಸಗಳ ಕಾಲ ನಂಬಿ ನಾರಾಯಣನ್ ಜೈಲು ಶಿಕ್ಷೆ ಅನುಭವಿಸಿದ್ದು, ಜೈಲಿನಲ್ಲಿ ಅವರಿಗೆ ವಿಪರೀತ ಹಿಂಸೆ ನೀಡಲಾಗಿತ್ತು. ಈ ವೇಳೆ ಇಸ್ರೊದ ಹಲವಾರು ಯೋಜನೆಗಳು ನೆನೆಗುದಿಗೆ ಬಿದ್ದಿದ್ದಲ್ಲದೆ, ಇಸ್ರೊ ವಿಜ್ಞಾನಿಗಳ ನೈತಿಕ ಸ್ಥೈರ್ಯವೇ ಉಡುಗಿ ಹೋಗಿತ್ತು.

ಅನುಮಾನಕ್ಕೆ ಕಾರಣ?
ವೀಸಾ ಅವಧಿ ಮುಗಿದ ಮೇಲೆ ಭಾರತದಲ್ಲೇ ಇದ್ದ ಮಾಲ್ಡೀವ್ಸ್ ನ ಮರಿಯಂ ರಶೀದಾ ಮತ್ತು ಫೌಜಿಯಾ ಅವರ ಬಳಿ ನಂಬಿಯವರ ದೂರವಾಣಿ ಸಂಖ್ಯೆ ಇತ್ತು. ಈ ಕಾರಣದಿಂದ ಪೊಲೀಸರು ನಂಬಿ ನಾರಾಯಣನ್ ಮೇಲೆ ಅನುಮಾನಪಟ್ಟಿದ್ದು, ಕ್ರಯೋಜೆನಿಕ್  ತಂತ್ರಜ್ಞಾನಕ್ಕೆ ಸಂಬಂಧಿಸಿದ ಮಾಹಿತಿಗಳು ಸೋರಿಕೆಯಾಗಿವೆ ಎಂದು ಆರೋಪಿಸಿದ್ದರು.

ಪ್ರಕರಣ ಸಿಬಿಐಗೆ ಹಸ್ತಾಂತರ
 ಹಿರಿಯ ವಿಜ್ಞಾನಿಯ ಮೇಲಿರುವ ಆರೋಪವನ್ನು ಕೇವಲ ಬೇಹುಗಾರಿಕಾ ದಳದ ತನಿಖೆಯಿಂದ ಬಗೆಹರಿಸಲಾಗದು ಎಂದು ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಯಿತು. ಸಿಬಿಐ ತನಿಖೆಯಲ್ಲಿ ನಂಬಿಯವರ ಮೇಲಿನ ಆರೋಪಗಳು ಸಂಪೂರ್ಣ ಕಪೋಲಕಲ್ಪಿತ ಎಂದು ಕಂಡುಬಂತು. ಇದಾದಮೇಲೆ ಈ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿತ್ತು. 1998 ರಲ್ಲಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಪ್ರಕರಣದಲ್ಲಿ ಆಪಾದಿತರೆಂದು ಪರಿಗಣಿಸಲಾಗಿರುವ ನಂಬಿ ನಾರಾಯಣನ್, ಇಸ್ರೊ ವಿಜ್ಞಾನಿ ಡಿ.ಶಶಿಕುಮಾರನ್,  ಉದ್ಯಮಿ ಎಸ್.ಕೆ ಶರ್ಮಾ, ಚಂದ್ರಶೇಖರನ್, ಮಾಜಿ ಐಜಿಪಿ ಶ್ರೀವಾತ್ಸವ, ಮಾಲ್ಡೀವ್ಸ್‌ನ ಮಹಿಳೆಯರಾದ ಮರಿಯಂ ರಶೀದಾ ಮತ್ತು ಫೌಜಿಯಾ ಹಸನ್ ಅವರನ್ನು ಬಿಡುಗಡೆಗೊಳಿಸುವಂತೆ ಆದೇಶಿಸಿತು.

ಇದಾದ ನಂತರ ನಂಬಿ ನಾರಾಯಣನ್ ಅವರ ವೃತ್ತಿ ಜೀವನಕ್ಕೆ ಧಕ್ಕೆ ತಂದಿದ್ದಕ್ಕಾಗಿ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಕೇರಳ ಸರ್ಕಾರಕ್ಕೆ ಛೀಮಾರಿ ಹಾಕಿ ಪರಿಹಾರ ನೀಡುವಂತೆ ಆದೇಶ ನೀಡಿತು. ಕೇರಳ ಸರ್ಕಾರ ನಂಬಿಯವರಿಗೆ ₹10 ಲಕ್ಷ ಪರಿಹಾರ ಕೊಡುವಂತೆ ಕೇರಳ ಹೈಕೋರ್ಟ್ ಇದೇ ಸಂದರ್ಭದಲ್ಲಿ ಸೂಚಿಸಿತು. ಐಬಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆಯೂ ಅದು ಹೇಳಿತ್ತು. ಅಲ್ಲಿಗೆ ನಂಬಿ ನಾರಾಯಣನ್ ನಿರ್ದೋಷಿ ಎಂಬುದು ಸಂಪೂರ್ಣ ಸಾಬೀತಾಗಿತ್ತು. ಈ ಪ್ರಕರಣದಿಂದಾಗಿ ನಂಬಿಯವರ ಜೀವನದ ಅಮೂಲ್ಯ 13 ವರ್ಷ ಹಾಳಾಯಿತು. ಈ ಪ್ರಕರಣವು ಆಗ ಕೇರಳದ ಮುಖ್ಯಮಂತ್ರಿ ಆಗಿದ್ದ ಕೆ.ಕರುಣಾಕರನ್ ಅವರ ಹುದ್ದೆಗೆ ಕುತ್ತು ತಂದಿತ್ತು.

ಇದನ್ನೂ ಓದಿ

ಕ್ರಯೊಜೆನಿಕ್‌ಗೆ ಮುನ್ನುಡಿ ಬರೆದ ನಂಬಿ ನಾರಾಯಣನ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು