ಭಾನುವಾರ, ಮಾರ್ಚ್ 7, 2021
19 °C
ಸಲಿಂಗ ಮದುವೆ, ಮಕ್ಕಳನ್ನು ದತ್ತು ಪಡೆಯುವ ಹಕ್ಕುಗಳಿಗಾಗಿ ಹೋರಾಟಕ್ಕೆ ನಿರ್ಧಾರ

ಸಲಿಂಗಕಾಮ ಅಪರಾಧಮುಕ್ತ: ಅವಿತಿದ್ದ ಆಕಾಂಕ್ಷೆಗೆ ಮಳೆಬಿಲ್ಲಿನ ತೋರಣ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ನವದೆಹಲಿ: ಅದು ಸಕಲ ಸಂಕೋಲೆಗಳನ್ನೂ ಮೀರಿದ ಸಂಭ್ರಮದ ಕ್ಷಣಗಳು. ದೇಶದ ಎಲ್ಲೆಡೆ, ರಸ್ತೆಗಳಲ್ಲಿ, ಹೋಟೆಲುಗಳಲ್ಲಿ ಮತ್ತು ಎಲ್ಲೆಲ್ಲಿಯೂ ಎಲ್‌ಜಿಬಿಟಿಕ್ಯು ಸಮುದಾಯದ ಜನರು ಪರಸ್ಪರರನ್ನು ಅಪ್ಪಿಕೊಂಡರು, ಕಣ್ಣೀರು ಚಿಮ್ಮುವಷ್ಟು ಸಂತಸಪಟ್ಟರು ಮತ್ತು ಕುಣಿದು ಕುಪ್ಪಳಿಸಿದರು. ಸಲಿಂಗಕಾಮವನ್ನು ಅಪರಾಧಮುಕ್ತಗೊಳಿಸಿದ ಸುಪ್ರೀಂ ಕೋರ್ಟ್‌ನ ತೀರ್ಪಿಗೆ ಈ ಸಮುದಾಯ ಕೊಟ್ಟ ಪ್ರತಿಕ್ರಿಯೆ ಊಹೆಗೂ ನಿಲುಕದ್ದಾಗಿತ್ತು.

ಬಾಲಿವುಡ್‌ ತಾರೆಯರು, ಲೇಖಕರು, ವಕೀಲರು, ಶಿಕ್ಷಕರು, ರಾಜಕಾರಣಿಗಳು ಮತ್ತು ಎಲ್ಲ ವರ್ಗಗಳ ಜನರು ಈ ಸಮುದಾಯದ ಸಂಭ್ರಮದಲ್ಲಿ ಪಾಲುದಾರರಾದರು. ಮೂಲಭೂತ ಮಾನವ ಹಕ್ಕುಗಳಿಗಾಗಿ ನಡೆಸಿದ ಹೋರಾಟದಲ್ಲಿ ಸಿಕ್ಕ ಗೆಲುವಿಗೆ ಎಲ್ಲೆಡೆ ಅಭಿನಂದನೆಗಳ ಸುರಿಮಳೆ
ಯಾಗುತ್ತಿತ್ತು.

ಈ ಎಲ್ಲ ಸಂಭ್ರಮಗಳ ನಡುವೆಯೇ, ಸಂಪೂರ್ಣ ಸಮಾನತೆ ದೂರದಲ್ಲಿಯೇ ಇದೆ ಎಂಬ ಎಚ್ಚರ ಬಹಳಷ್ಟು ಜನರಲ್ಲಿ ಇತ್ತು. ದತ್ತು ಪಡೆದುಕೊಳ್ಳುವ ಹಕ್ಕು ಮತ್ತು ಸಲಿಂಗ ಮದುವೆಯ ಹಕ್ಕು ಸಿಕ್ಕಿಲ್ಲ. ಅದಕ್ಕಾಗಿ ಇನ್ನಷ್ಟು ಹೋರಾಟದ ಅಗತ್ಯ ಇದೆ ಎಂಬ ಅರಿವು ಅವರಲ್ಲಿ ಇತ್ತು. ಅದರ ಜತೆಗೆ, ಪೊಲೀಸರು ಮತ್ತು ಗುಂಪು ಹಲ್ಲೆಯ ಭೀತಿಯೂ ಮನೆಮಾಡಿತ್ತು.

ಸಲಿಂಗಾಸಕ್ತರ ಘನತೆಗಾಗಿ ನಡೆದ ಹೋರಾಟದ ಸಂದರ್ಭದಲ್ಲಿ ಬಳಕೆಯಾಗುತ್ತಿದ್ದ ಕಾಮನಬಿಲ್ಲು ಬಣ್ಣದ ಧ್ವಜ ಗುರುವಾರ ಎಲ್ಲೆಡೆ ನಿರ್ಭಯವಾಗಿ ರಾರಾಜಿಸಿತು. ಈ ಸಮುದಾಯದ ವೈವಿಧ್ಯವನ್ನು ಪ್ರತಿನಿಧಿಸುವಂತೆ ವಿವಿಧ ಬಣ್ಣಗಳನ್ನು ಸೇರಿಸಿ ಧ್ವಜ ಸಿದ್ಧಪಡಿಸಲಾಗಿದೆ.

ಸುಪ್ರೀಂ ಕೋರ್ಟ್‌ನ ಈ ತೀರ್ಪು ಇದಕ್ಕೂ ಮುಖ್ಯವಾದ ಇನ್ನಷ್ಟು ತೀರ್ಪುಗಳಿಗೆ ನಾಂದಿಯಾಗಲಿದೆ ಎಂದು ಎಲ್‌ಜಿಬಿಟಿಕ್ಯು ಹೋರಾಟಗಾರ್ತಿ ಅಂಜಲಿ ನಾಜಿಯಾ ಹೇಳಿದ್ದಾರೆ. ‘ನಮಗಿಂದು ಮೂಲಭೂತ ಮಾನವ ಹಕ್ಕು ದೊರಕಿದೆ. ನಾವು ಎಷ್ಟು ಸಂತಸದಿಂದ ಇದ್ದೇವೆ ಎಂಬುದನ್ನು ಮಾತಿನಲ್ಲಿ ಹೇಳಲಾಗದು’ ಎಂದು ಅವರು ಅಭಿಪ್ರಾಯಪಟ್ಟರು.

‘ಈ ಸಮುದಾಯಕ್ಕೆ ಸೇರಿದವರು ಅಪರಾಧಿಗಳಲ್ಲ ಎಂದು ನ್ಯಾಯಾಲಯ ಕೊನೆಗೂ ಹೇಳಿದೆ. ಈ ಅತಿಸಣ್ಣ ಸಮುದಾಯಕ್ಕೆ ಈಗ ಒಂದು ಅಸ್ತಿತ್ವ ದಕ್ಕಿತು’ ಎಂದು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಪರ ಹೋರಾಟಗಾರ್ತಿ ಅರ್ಪಿತಾ ಭಲ್ಲಾ ಹೇಳಿದ್ದಾರೆ.

**

ಕಾನೂನುಬದ್ಧಗೊಳಿಸಿದ 26ನೇ ದೇಶ

ಸಲಿಂಗಕಾಮವು ಕಾನೂನುಬದ್ಧವಾಗಿರುವ ಜಗತ್ತಿನ 25 ದೇಶಗಳ ಸಾಲಿಗೆ ಭಾರತವೂ ಗುರುವಾರ ಸೇರಿತು. ಜಗತ್ತಿನ 72 ದೇಶಗಳು ಸಲಿಂಗ ಸಂಬಂಧ ಅಪರಾಧ ಎಂದೇ ಪರಿಗಣಿಸಿವೆ. ಅಮೆರಿಕ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಸ್ಪೇನ್‌ ಸೇರಿದಂತೆ 25 ದೇಶಗಳಲ್ಲಿ ಸಲಿಂಗಕಾಮವು ಕಾನೂನು ಬದ್ಧವಾಗಿದೆ.

**

‘ಸುಪ್ರೀಂ’ ತೀರ್ಪು:  ವಿಶ್ವಸಂಸ್ಥೆ ಸ್ವಾಗತ

ಸಮ್ಮತಿಯ ಸಲಿಂಗಕಾಮಕ್ಕೆ ಕಾನೂನಿನ ಒಪ್ಪಿಗೆ ನೀಡಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಸ್ವಾಗತಾರ್ಹ. ಇದರಿಂದ ಸಲಿಂಗಕಾಮಿಗಳ ಬಗ್ಗೆ ಇರುವ ಕಳಂಕ ಹಾಗೂ ತಾರತಮ್ಯವನ್ನು ಹೋಗಲಾಡಿಸಬಹುದು ಎಂದು ವಿಶ್ವಸಂಸ್ಥೆ ಹೇಳಿದೆ.

ಸಲಿಂಗಕಾಮ ಸಮುದಾಯಕ್ಕೆ ಮೂಲಭೂತ ಹಕ್ಕುಗಳನ್ನು ಪೂರ್ಣ ಪ್ರಮಾಣದಲ್ಲಿ ಒದಗಿಸುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆಯಾಗಲಿದೆ. ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಲಿಂಗಕಾಮಿಗಳ ಬಗ್ಗೆ ಇರುವ ಕಳಂಕ ಹಾಗೂ ತಾರತಮ್ಯವನ್ನು ಹೋಗಲಾಡಿಸಲು ಈ ತೀರ್ಪು ಸಹಕಾರಿಯಾಗಿದೆ. ಒಳಗೊಳ್ಳುವಿಕೆಯ ಸಮಾಜ ನಿರ್ಮಾಣವಾಗಲಿದೆ ಎಂದು ವಿಶ್ವಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

**

ಸಲಿಂಗ ಮದುವೆಗೆ ಬೆಂಬಲವಿಲ್ಲ: ಆರ್‌ಎಸ್‌ಎಸ್‌

‘ಸಲಿಂಗಕಾಮ ಅಪರಾಧವಲ್ಲ. ಆದರೆ, ಅಸ್ವಾಭಾವಿಕವಾದ ಸಲಿಂಗ ಮದುವೆಗೆ ನಮ್ಮ ಬೆಂಬಲವಿಲ್ಲ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಗುರುವಾರ ಹೇಳಿದೆ.

ಸಮ್ಮತಿಯ ಸಲಿಂಗಕಾಮಕ್ಕೆ ಕಾನೂನಿನ ಸಮ್ಮತಿ ನೀಡುವ ಮೂಲಕ ಸುಪ್ರೀಂ ಕೋರ್ಟ್‌ ಗುರುವಾರ ತೀರ್ಪು ಪ್ರಕಟಿಸಿದ ಬೆನ್ನಲ್ಲೇ ಆರ್‌ಎಸ್‌ಎಸ್‌ ಈ ಹೇಳಿಕೆ ನೀಡಿದೆ.

‘ನಾವು ಸಲಿಂಗಕಾಮವನ್ನು ಅಪರಾಧ ಎಂದು ಪರಿಗಣಿಸಿಲ್ಲ. ಆದರೆ, ಸಲಿಂಗ ಮದುವೆಯು ಪ್ರಕೃತಿಗೆ ವಿರುದ್ಧವಾಗಿದ್ದು, ಇದನ್ನು ಬೆಂಬಲಿಸುವುದಿಲ್ಲ. ಇಂತಹ ಸಂಬಂಧಗಳನ್ನು ಭಾರತೀಯ ಸಂಪ್ರದಾಯ ಒಪ್ಪುವುದಿಲ್ಲ. ಸಾಮಾಜಿಕ ಹಾಗೂ ಮಾನಸಿಕ ಮಟ್ಟನ್ನು ನಿರ್ವಹಿಸುವ ನಿಟ್ಟಿನಲ್ಲಿ ಈ ವಿಷಯ ಕುರಿತು ಚರ್ಚಿಸುವ ಅಗತ್ಯವಿದೆ’ ಎಂದು ಆರ್‌ಎಸ್‌ಎಸ್‌ ಪ್ರಚಾರ ಪ್ರಮುಖ ಅರುಣ್‌ ಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

**

ಸಹಿಷ್ಣತೆಯ ಸಮಾಜದ ಕಡೆಗೆ ಪ್ರಮುಖ ಹೆಜ್ಜೆ: ಕಾಂಗ್ರೆಸ್‌

ಸಮ್ಮತಿಯ ಸಲಿಂಗಕಾಮಕ್ಕೆ ಕಾನೂನಿನ ಒಪ್ಪಿಗೆ ನೀಡಿ ಸುಪ್ರೀಂ ಕೋರ್ಟ್‌ ಗುರುವಾರ ಪ್ರಕಟಿಸಿದ ತೀರ್ಪು ಮಹತ್ವದ್ದಾಗಿದೆ. ಉದಾರ ಹಾಗೂ ಸಹಿಷ್ಣುತೆಯ ಸಮಾಜದ ಕಡೆಗೆ ಪ್ರಮಖ ಹೆಜ್ಜೆ ಇಟ್ಟಂತಾಗಿದೆ ಎಂದು ಕಾಂಗ್ರೆಸ್‌ ಹೇಳಿದೆ.

‘ಬ್ರಿಟಿಷ್‌ ವಸಾಹತು ಕಾನೂನು ಇಂದಿನ ಆಧುನಿಕ ಕಾಲಕ್ಕೆ ಹೊಂದುವುದಿಲ್ಲ. ಈಗ ಬಂದಿರುವ ತೀರ್ಪು ಮೂಲಭೂತ ಹಕ್ಕುಗಳನ್ನು ಮರು ಸ್ಥಾಪಿಸುತ್ತದೆ. ಲೈಂಗಿಕ ದೃಷ್ಟಿಕೋನದ ತಾರತಮ್ಯವನ್ನು ಹೋಗಲಾಡಿಸುತ್ತದೆ’ ಎಂದು ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ ಟ್ವೀಟ್‌ ಮಾಡಿದ್ದಾರೆ.

‘ಸುಪ್ರೀಂ ಕೋರ್ಟ್‌ನಿಂದ ಪ್ರಗತಿಶೀಲ ಮತ್ತು ನಿರ್ಣಾಯಕ ತೀರ್ಪು ಬಂದಿದ್ದು, ಇದನ್ನು ಸ್ವಾಗತಿಸುತ್ತೇವೆ. ಇದು ಸಮಾನ ಮತ್ತು ಒಳಗೊಳ್ಳುವಿಕೆಯ ಸಮಾಜದ ಆರಂಭವೆಂದು ಭಾವಿಸುತ್ತೇವೆ. ಈ ತೀರ್ಪಿನ ಸಂಭ್ರಮದಲ್ಲಿ ಭಾರತೀಯರು ಹಾಗೂ ಸಲಿಂಗಕಾಮ ಸಮುದಾಯದವರ ಜೊತೆಗೆ ಇರುತ್ತೇವೆ’ ಎಂದು ಅವರು ಹೇಳಿದ್ದಾರೆ.

**

ಯಾರು ಎನಂದರು?

ಈ ತೀರ್ಪು ಸಮಾಜ ಮತ್ತು ದೇಶದ ಹಿತಾಸಕ್ತಿಗೆ ಖಂಡಿತವಾಗಿಯೂ ಪೂರಕವಲ್ಲ. ಇದು ಸಮಾಜದಲ್ಲಿ ಅರಾಜಕತೆಯನ್ನು ಬಲಪಡಿಸಲಿದೆ ಮತ್ತು ಸಮಾಜದ ನೈತಿಕತೆಯನ್ನು ಕುಗ್ಗಿಸಲಿದೆ. ದೇಶದ ಯುವ ಸಮುದಾಯ ಹಾಳಾಗಲಿದೆ, ಅಪರಾಧಗಳು ಹೆಚ್ಚಲಿವೆ.

–ಅಖಿಲ ಭಾರತ ಹಿಂದೂ ಮಹಾಸಭಾ

**

ಗಂಡು–ಗಂಡು, ಹೆಣ್ಣು–ಹೆಣ್ಣು ನಡುವಣ ಲೈಂಗಿಕ ಸಂಬಂಧಕ್ಕೆ ಅವಕಾಶ ಕೊಟ್ಟಿರುವುದು ಮದುವೆ ಮತ್ತು ಕುಟುಂಬ ವ್ಯವಸ್ಥೆಯನ್ನು ನಾಶ ಮಾಡಲಿದೆ. ಮಾನವ ಕುಲದ ನೈಸರ್ಗಿಕ ವಿಕಾಸ ಹಾಗೂ ಪ್ರಗತಿಗೆ ತಡೆಯಾಗಲಿದೆ. ವಿವಿಧ ಧರ್ಮಗಳ ವೈಯಕ್ತಿಕ ಕಾನೂನುಗಳ ಮೇಲೆಯೂ ಇದು ಪರಿಣಾಮ ಬೀರಲಿದೆ.

–ಜಮಾತ್‌–ಎ–ಇಸ್ಲಾಂ ಹಿಂದ್‌

**

ಇದು ಮಹತ್ವದ ತೀರ್ಪು. ಎಲ್‌ಬಿಜಿಟಿ ಹಕ್ಕುಗಳು ಮತ್ತು ಅವರ ನೋವನ್ನು ನ್ಯಾಯಾಲಯ ಅರ್ಥ ಮಾಡಿಕೊಂಡಿದೆ. ಸಮಾಜದಲ್ಲಿ ಅವರಿಗೊಂದು ಸ್ಥಾನ ಕೊಟ್ಟಿದೆ. ಬಹಳ ಮುಖ್ಯ ವಿಚಾರವೆಂದರೆ, ಇದು ಇತರರ ಹಾಗೆಯೇ ಅವರಿಗೂ ಸಮಾನ ಹಕ್ಕುಗಳನ್ನು ನೀಡಿದೆ.

–ಮುಕುಲ್‌ ರೋಹಟಗಿ, ಮಾಜಿ ಅಟಾರ್ನಿ ಜನರಲ್‌

**

ಸೆಕ್ಷನ್‌ 377 ಅನ್ನು ರದ್ದುಪಡಿಸಿದ ಸುಪ್ರೀಂ ಕೋರ್ಟ್‌ಗೆ ನಮ್ಮ ಕೃತಜ್ಞತೆ. ಎಲ್ಲರಿಗೂ ಸಮಾನ ಹಕ್ಕುಗಳಿರಬೇಕು ಎಂದು ನಂಬಿರುವವರಿಗೆ ಇದೊಂದು ಚಾರಿತ್ರಿಕ ದಿನ. ನ್ಯಾಯಾಂಗವು ತನ್ನ ಕರ್ತವ್ಯ ನಿರ್ವಹಿಸಿದೆ. ಈಗ ನಾವು ನಮ್ಮ ಕರ್ತವ್ಯವನ್ನು ನಿರ್ವಹಿಸಲೇಬೇಕು.

–ಅಮೀರ್ ಖಾನ್‌, ಬಾಲಿವುಡ್‌ ನಟ

**

ಚಾರಿತ್ರಿಕ ತೀರ್ಪು! ಬಹಳ ಹೆಮ್ಮೆಯ ದಿನ. ಸಲಿಂಗಕಾಮವನ್ನು ಅಪರಾಧ ಮುಕ್ತಗೊಳಿಸಿರುವುದು ಮಾನವೀಯತೆ ಮತ್ತು ಸಮಾನ ಹಕ್ಕುಗಳಿಗೆ ಕೊಟ್ಟ ದೊಡ್ಡ ಗೌರವ. ದೇಶಕ್ಕೆ ಮತ್ತೆ ಉಸಿರು ಸಿಕ್ಕಿದಂತೆ ಆಯಿತು.

–ಕರಣ್‌ ಜೋಹರ್‌, ನಿರ್ದೇಶಕ

**

 

ಸಂಬಂಧಪಟ್ಟ ಲೇಖನಗಳು

‘ಲಿಂಗತ್ವ ಅಲ್ಪಸಂಖ್ಯಾತರಿಗೆ ನೈಜ ಸ್ವಾತಂತ್ರ್ಯ’ 

ಸುಪ್ರೀಂ ಕೋರ್ಟ್‌: ಸಾಲುಗಟ್ಟಿವೆ ಮಹತ್ವದ ತೀರ್ಪುಗಳು

ಸಮ್ಮತಿಯ ಸಲಿಂಗಕಾಮ ಅಪರಾಧವಲ್ಲ

‘ಸಮಾನತೆಯ ಲೈಂಗಿಕ ಹಕ್ಕು ಸಿಕ್ಕಿದೆ’ 

‘ನಿರಾಪರಾಧಿಯಾಗಲು ಒಂದೂವರೆ ಶತಮಾನ ಬೇಕಾಯಿತು’

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.