ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಜೋತಾ ರೈಲು ಸ್ಫೋಟ ಪ್ರಕರಣ: ಸ್ವಾಮಿ ಅಸೀಮಾನಂದ ಖುಲಾಸೆ

ಇತರ ಮೂವರು ದೋಷ ಮುಕ್ತ
Last Updated 20 ಮಾರ್ಚ್ 2019, 18:58 IST
ಅಕ್ಷರ ಗಾತ್ರ

ಪಂಚಕುಲಾ (ಹರಿಯಾಣ): ಸಂಜೋತಾ ಎಕ್ಸ್‌ಪ್ರೆಸ್‌ ರೈಲು ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸ್ವಾಮಿ ಅಸೀಮಾನಂದ ಮತ್ತು ಇತರ ಮೂವರನ್ನು ಇಲ್ಲಿನ ವಿಶೇಷ ನ್ಯಾಯಾಲಯ ಬುಧವಾರ ಖುಲಾಸೆಗೊಳಿಸಿದೆ.

’ಆರೋಪಿಗಳಾದ ನಬಾ ಕುಮಾರ್ ಸರ್ಕಾರ್‌ ಅಲಿಯಾಸ್‌ ಸ್ವಾಮಿ ಅಸೀಮಾನಂದ, ಲೋಕೇಶ್‌ ಶರ್ಮಾ, ಕಮಲ್‌ ಚೌಹಾಣ್‌ ಹಾಗೂ ರಾಜೇಂದ್ರ ಚೌಧರಿ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ’ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಕೀಲ ರಾಜನ್‌ ಮಲ್ಹೋತ್ರಾ ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಪ್ರತ್ಯಕ್ಷ ಸಾಕ್ಷಿಗಳನ್ನು ಸಹ ವಿಚಾರಣೆಗೆ ಪರಿಗಣಿಸಬೇಕು ಎಂದು ಆ ದೇಶದ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಎನ್ಐಎ ವಿಶೇಷ ನ್ಯಾಯಾಧೀಶ ಜಗದೀಫ್‌ ಸಿಂಗ್‌ ತಿರಸ್ಕರಿಸಿದರು. ಈ ಅರ್ಜಿಯು ವಿಚಾರಣೆಗೆ ಅರ್ಹತೆ ಹೊಂದಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.

ಸ್ಫೋಟದಲ್ಲಿ ಸತ್ತಿದ್ದ ಪಾಕಿಸ್ತಾನದ ಹಫೀಜಾಬಾದ್‌ ಜಿಲ್ಲೆಯ ಧಿಂಗ್ರವಾಲಿ ಗ್ರಾಮದ ಮುಹಮ್ಮದ್‌ ವಕೀಲ್‌ ಅವರ ಪುತ್ರಿ ರಹಿಲಾ ವಕೀಲ್‌ ಇದೇ ಮಾರ್ಚ್‌ 11ರಂದು ಈ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಪಾಕಿಸ್ತಾನದವರಿಗೆ ಸಮರ್ಪಕವಾಗಿ ಸಮನ್ಸ್‌ ನೀಡಿಲ್ಲ ಮತ್ತು ನ್ಯಾಯಾಲಯದ ಮುಂದೆ ಹಾಜರಾಗಲು ವೀಸಾ ನಿರಾಕರಿಸಲಾಯಿತು ಎಂದು ಪ್ರತಿಪಾದಿಸಿದ್ದರು. ಆದರೆ, ಎನ್‌ಐಎ ವಕೀಲರು ಈ ವಾದವನ್ನು ತಿರಸ್ಕರಿಸಿದರು. ಸಮನ್ಸ್‌ ಕಳುಹಿಸಿದ್ದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಿದರು.

ವಿಚಾರಣೆ ಕೊನೆಯಲ್ಲಿ ಏಕೆ ಅರ್ಜಿ ಸಲ್ಲಿಸಲಾಗಿದೆ ಎಂದು ನ್ಯಾಯಾಧೀಶರು ಸಹ ಪ್ರಶ್ನಿಸಿದರು. ಈ ಅರ್ಜಿ ತಿರಸ್ಕರಿಸಿದ ಬಳಿಕ ನ್ಯಾಯಾಧೀಶರು ತೀರ್ಪು ಪ್ರಕಟಿಸಿದರು.

ಮೂರು ಆರೋಪಗಳಿಂದ ಮುಕ್ತ: ಎರಡು ವರ್ಷಗಳ ಅವಧಿಯಲ್ಲಿ ಮೂರು ಮಹತ್ವದ ಪ್ರಕರಣಗಳಲ್ಲಿ ಅಸೀಮಾ
ನಂದ ದೋಷಮುಕ್ತರಾಗಿದ್ದಾರೆ.

2007ರ ಮೇ 18ರಂದು ಹೈದರಾಬಾದ್‌ನ ಮೆಕ್ಕಾ ಮಸೀದಿಯಲ್ಲಿ ಸಂಭವಿಸಿದ್ದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಏಪ್ರಿಲ್‌ನಲ್ಲಿ ಬಿಡುಗಡೆಯಾಗಿದ್ದರು. ಈ ಸ್ಫೋಟದಲ್ಲಿ ಒಂಬತ್ತು ಮಂದಿ ಸಾವಿಗೀಡಾಗಿದ್ದರು.

2007ರ ಅಕ್ಟೋಬರ್‌ನಲ್ಲಿ ಅಜ್ಮೇರ್‌ದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೂವರು ಸಾವಿಗೀಡಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2017ರ ಮಾರ್ಚ್‌ನಲ್ಲಿ ಅಸೀಮಾನಂದ ದೋಷಮುಕ್ತರಾಗಿದ್ದರು.

ಈಗ ಒಂದು ವರ್ಷದ ಬಳಿಕ ಸಂಜೋತಾ ರೈಲು ಸ್ಫೋಟ ಪ್ರಕರಣದಲ್ಲಿ ಅವರು ಬಿಡುಗಡೆಯಾಗಿದ್ದಾರೆ.

1971ರಲ್ಲಿ ವಿಜ್ಞಾನ ಪದವಿ ಪೂರೈಸಿದ್ದ ಅಸೀಮಾನಂದ ಬಲಪಂಥೀಯ ಸಂಘಟನೆಗಳ ಜತೆ ಗುರುತಿಸಿಕೊಂಡಿದ್ದರು. ಅಲ್ಪಸಂಖ್ಯಾತರ ವಿರೋಧಿ ಭಾಷಣಗಳ ಮೂಲಕ ಗಮನಸೆಳೆದಿದ್ದರು.

ಪ್ರಮುಖ ಘಟನಾವಳಿಗಳು

* 2007ರ ಫೆಬ್ರುವರಿ 18ರಂದು ಹರಿಯಾಣದ ಪಾಣಿಪತ್‌ನಲ್ಲಿ ನಡೆದ ಸ್ಫೋಟದಲ್ಲಿ 68 ಮಂದಿ ಸಾವಿಗೀಡಾಗಿದ್ದರು. ಇವರಲ್ಲಿ ಬಹುತೇಕರು ಪಾಕಿಸ್ತಾನದವರು. ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಪರ್ಕದ ಕೊಂಡಿಯಾಗಿದ್ದ ಸಂಜೋತಾ ಎಕ್ಸ್‌ಪ್ರೆಸ್‌ ರೈಲು ಅಮೃತಸರದ ಅತ್ತಾರಿಗೆ ತೆರಳುವಾಗ ಸ್ಫೋಟ ಸಂಭವಿಸಿತ್ತು.

* 2010ರ ಜುಲೈನಲ್ಲಿ ತನಿಖೆಯನ್ನು ಎನ್‌ಐಎಗೆ ವಹಿಸಲಾಯಿತು.

* ಸ್ಫೋಟ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಎಂಟು ಮಂದಿ ವಿರುದ್ಧ 2011ರಲ್ಲಿ ಎನ್‌ಐಎ ಆರೋಪಪಟ್ಟಿ ಸಲ್ಲಿಸಿತು. ಇವರಲ್ಲಿ ಸ್ವಾಮಿ ಅಸೀಮಾನಂದ, ಲೋಕೇಶ್‌ ಶರ್ಮಾ, ಕಮಲ್‌ ಚೌಹಾಣ್‌ ಮತ್ತು ರಾಜೇಂದ್ರ ಚೌಧರಿ ನ್ಯಾಯಾಲಯದ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದರು.

* ದಾಳಿಯ ಸಂಚು ರೂಪಿಸಿದ್ದ ಎನ್ನಲಾದ ಸುನೀಲ್‌ ಜೋಶಿ ಅವರನ್ನು ಮಧ್ಯಪ್ರದೇಶ ದೇವಾಸ್‌ ಜಿಲ್ಲೆಯ ಅವರ ಮನೆ ಬಳಿ 2007ರ ಡಿಸೆಂಬರ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

* ಇತರ ಮೂವರು ಆರೋಪಿಗಳಾದ ರಾಮಚಂದ್ರ ಕಲ್ಸಂಗ್ರಾ, ಸಂದೀಪ್‌ ಡಾಂಗೆ ಮತ್ತು ಅಮಿತ್‌ ಅವರನ್ನು ಬಂಧಿಸಲು ಸಾಧ್ಯವಾಗಲಿಲ್ಲ. ಇವರನ್ನು ಘೋಷಿತ ಅಪರಾಧಿಗಳು ಎಂದು ಪ್ರಕಟಿಸಲಾಯಿತು.

* ಅಸೀಮಾನಂದ ಜಾಮೀನು ಮೇಲೆ ಹೊರಗೆ ಇದ್ದರು. ಉಳಿದ ಮೂವರು ನ್ಯಾಯಾಂಗ ವಶದಲ್ಲಿದ್ದರು.

* ಆರೋಪಿಗಳ ವಿರುದ್ಧ ಎನ್‌ಐಎ ಹತ್ಯೆ ಮತ್ತು ಕ್ರಿಮಿನಲ್‌ ಸಂಚು ರೂಪಿಸಿದ್ದ ಆರೋಪ ದಾಖಲಿಸಿತ್ತು.

* ಆರೋಪಿಗಳು ಗುಜರಾತ್‌ನ ಅಕ್ಷರಧಾಮ, ಜಮ್ಮುವಿನ ರಘುನಾಥ ಮಂದಿರ ಮತ್ತು ವಾರಾಣಸಿಯ ಸಂಕಟ ಮೋಚನ್‌ ಮಂದಿರ ಮೇಲೆ ನಡೆದ ಭಯೋತ್ಪಾದನಾ ದಾಳಿಯಿಂದ ಆಕ್ರೋಶಗೊಂಡಿದ್ದರು ಎಂದು ತನಿಖೆ ನಡೆಸಿದ್ದ ಎನ್‌ಐಎ ಅಭಿಪ್ರಾಯಪಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT