ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ದರ ಕಡಿತದ ಬಂಪರ್‌ ಕೊಡುಗೆ

ಆರ್ಥಿಕ ಪ್ರಗತಿ ಕುಸಿತ ತಡೆಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಕ್ರಮ:
Last Updated 20 ಸೆಪ್ಟೆಂಬರ್ 2019, 20:29 IST
ಅಕ್ಷರ ಗಾತ್ರ

ನವದೆಹಲಿ: ಕುಂಟುತ್ತಾ ಸಾಗಿರುವ ಅರ್ಥ ವ್ಯವಸ್ಥೆಗೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರ್ಕಾರವು ಕಾರ್ಪೊರೇಟ್‌ ತೆರಿಗೆ ದರ ಕಡಿತದ ಕೊಡುಗೆಯನ್ನು ಶುಕ್ರವಾರ ಪ್ರಕಟಿಸಿದೆ.ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಪ್ರಗತಿಯು ಆರು ವರ್ಷಗಳ ಕನಿಷ್ಠ ಮಟ್ಟವಾದ ಶೇ 5ಕ್ಕೆ ಇಳಿದ ಕಾರಣ ಸರ್ಕಾರವು ಹಲವು ಉತ್ತೇಜಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದರ ಭಾಗವಾಗಿ ಕಾರ್ಪೊರೇಟ್‌ ತೆರಿಗೆ ದರ ಕಡಿತವನ್ನು ಪ್ರಕಟಿಸಲಾಗಿದೆ.

ಕಂಪನಿಗಳು ಬಂಡವಾಳ ಹೂಡಿಕೆ ಹೆಚ್ಚಿಸಿ, ಗ್ರಾಹಕರಿಗೆ ಸರಕುಗಳು ಕಡಿಮೆ ಬೆಲೆಯಲ್ಲಿ ದೊರೆಯಬೇಕು ಎಂಬ ಉದ್ದೇಶ ಇದರ ಹಿಂದೆ ಇದೆ. ಇದರಿಂದಾಗಿ, ಕುಸಿದಿರುವ ಬೇಡಿಕೆ ಮೇಲಕ್ಕೆ ಏಳಬಹುದು ಎಂಬ ನಿರೀಕ್ಷೆ ಇದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಪಣಜಿಯಲ್ಲಿ ಮಾಡಿದ ಕಾರ್ಪೊರೇಟ್‌ ತೆರಿಗೆ ದರ ಕಡಿತದ ಘೋಷಣೆಯನ್ನು ಷೇರುಪೇಟೆಯು ಅಭೂತಪೂರ್ವವಾಗಿ ಸ್ವಾಗತಿಸಿದೆ.

ಮುಂಬೈ ಷೇರುಪೇಟೆಯು ಶುಕ್ರವಾರದ ವಹಿವಾಟಿನಲ್ಲಿ 1,921.15 ಅಂಶಗಳನ್ನು ಏರಿಕೆ ದಾಖಲಿಸಿದರೆ, ನಿ‌ಫ್ಟಿ ಸೂಚ್ಯಂಕವು 569.40 ಅಂಶಗಳಷ್ಟು ವೃದ್ಧಿ ಕಂಡಿದೆ. ಎರಡೂ ಸೂಚ್ಯಂಕಗಳು ಶೇ 5.32ರಷ್ಟು ಏರಿಕೆಯಾಗಿವೆ. ಇತ್ತೀಚಿನ ದಿನಗಳಲ್ಲಿ ತೀವ್ರ ನಷ್ಟ ಅನುಭವಿಸುತ್ತಿದ್ದ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ ₹6.8 ಲಕ್ಷ ಕೋಟಿ ಹೆಚ್ಚಳವಾಗಿದೆ.

ಜುಲೈ 5ರಂದು ಮಂಡಿಸಿದ್ದ ಬಜೆಟ್‌ನಲ್ಲಿ ಕಾರ್ಪೊರೇಟ್‌ ವಲಯದ ಅತೃಪ್ತಿಗೆ ಕಾರಣವಾಗುವ ಹಲವು ನಿರ್ಧಾರಗಳನ್ನು ನಿರ್ಮಲಾ ಘೋಷಿಸಿದ್ದರು. ಹಾಗಾಗಿ, ಕಾರ್ಪೊರೇಟ್‌ ವಲಯಕ್ಕೆ ಭಾರಿ ನಿರಾಳ ತಂದ ಈ ಘೋಷಣೆಗಳು ಭಾರಿ ಅಚ್ಚರಿಯನ್ನೂ ಹುಟ್ಟಿಸಿತು.

ಪ್ರಗತಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಆದಾಯ ತೆರಿಗೆ ಕಾಯ್ದೆಗೆ ಹೊಸ ಅಂಶವೊಂದನ್ನು ಸೇರಿಸಲಾಗಿದೆ. ಇದು 2019–20ನೇ ಸಾಲಿನಿಂದ ಜಾರಿಗೆ ಬರಲಿದೆ. ಕಂಪೆನಿಗಳು ಶೇ 22ರಷ್ಟು ಆದಾಯ ತೆರಿಗೆ ಪಾವತಿಸಿದರೆ ಸಾಕು. ಆದರೆ, ಉತ್ತೇಜಕಗಳು ಅಥವಾ ವಿನಾಯಿತಿಗಳನ್ನು ಪಡೆದ ಕಂಪನಿಗಳಿಗೆ ಇದು ಅನ್ವಯ ಆಗುವುದಿಲ್ಲ ಎಂದು ನಿರ್ಮಲಾ ಹೇಳಿದರು.

**

ಕಾರ್ಪೊರೇಟ್‌ ತೆರಿಗೆ ದರ ಕಡಿತ ಚಾರಿತ್ರಿಕ. ಖಾಸಗಿ ಕ್ಷೇತ್ರದ ಸ್ಪರ್ಧಾತ್ಮಕತೆ ಹೆಚ್ಚಿಸಲಿದೆ. ಉದ್ಯೋಗ ಸೃಷ್ಟಿ ಹೆಚ್ಚಿ ಭಾರತೀಯರಿಗೆ ಲಾಭದಾಯಕವಾಗಲಿದೆ
- ನರೇಂದ್ರ ಮೋದಿ, ಪ್ರಧಾನಿ

**

ಕಾರ್ಪೊರೇಟ್‌ ತೆರಿಗೆ ದರ ಕಡಿತವು ಆರ್ಥಿಕ ಕೊರತೆಯ ಮೇಲೆ ಉಂಟು ಮಾಡಬಹುದಾದ ಪರಿಣಾಮದ ಅರಿವು ನಮಗೆ ಇದೆ. ಅಂಕಿ ಸಂಖ್ಯೆಗಳ ಮರುಹೊಂದಾಣಿಕೆ ಮಾಡುತ್ತೇವೆ
- ನಿರ್ಮಲಾ ಸೀತಾರಾಮನ್‌, ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT