ಸೋಮವಾರ, ಸೆಪ್ಟೆಂಬರ್ 21, 2020
25 °C

ತೆಲಂಗಾಣ: ಟಿಆರ್‌ಎಸ್‌ಗೆ ಬೆಂಬಲ ಕೊಡುವ ಹಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ಕಾಂಗ್ರೆಸ್‌ ನೇತೃತ್ವದ ಪ್ರಜಾಕೂಟ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಬಾಹ್ಯ ಬೆಂಬಲ ಇಲ್ಲದೆ ತೆಲಂಗಾಣದಲ್ಲಿ ಸರ್ಕಾರ ರಚಿಸುವಷ್ಟು ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿವೆ. ಹಾಗಿದ್ದರೂ ಫಲಿತಾಂಶದ ಮುನ್ನಾದಿನವಾದ ಸೋಮವಾರ ಬೆಂಬಲ ನೀಡಿಕೆಯ ಭರವಸೆಯ ಮಾತುಗಳು ಕೇಳಿ ಬಂದಿವೆ. 

ಯಾವ ಪಕ್ಷಕ್ಕೂ ಸರಳ ಬಹುಮತ ದೊರೆಯದಿದ್ದರೆ ನೆರವಿಗೆ ಸಿದ್ಧ ಎಂಬ ಸ್ನೇಹಹಸ್ತವನ್ನು ಟಿಆರ್‌ಎಸ್‌ನತ್ತ ಬಿಜೆಪಿ ಚಾಚಿದೆ. ರಾಜಕೀಯ ತುರ್ತು ಸಂದರ್ಭದಲ್ಲಿ ಟಿಆರ್‌ಎಸ್‌ ಬೆನ್ನಿಗೆ ನಿಲ್ಲುವುದಾಗಿ ಎಐಎಂಐಎಂ ಕೂಡ ಹೇಳಿದೆ. 

‘ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಅವರು ಟಿಆರ್‌ಎಸ್‌ ಮುಖ್ಯಸ್ಥ ಕೆ. ಚಂದ್ರಶೇಖರ ರಾವ್‌ (ಕೆಸಿಆರ್‌) ಅವರನ್ನು ಭಾನುವಾರ ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಕೆಸಿಆರ್‌ ಅವರ ನಿರೀಕ್ಷೆಗಿಂತ ಹೆಚ್ಚು ಸ್ಥಾನಗಳಲ್ಲಿ ಟಿಆರ್‌ಎಸ್‌ಗೆ ಗೆಲುವು ದೊರೆಯಲಿದೆ ಎಂಬುದು ಈ ಅಭಿನಂದನೆಗೆ ಕಾರಣ. ಟಿಆರ್‌ಎಸ್‌ ಮತ್ತು ಎಐಎಂಐಎಂ ನಡುವೆ ಚುನಾವಣಾ ಪೂರ್ವ ಹೊಂದಾಣಿಕೆ ಇತ್ತು. ಪರಸ್ಪರರು ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಅಭ್ಯರ್ಥಿ ಹಾಕುವುದಿಲ್ಲ ಎಂಬ ನಿರ್ಧಾರಕ್ಕೆ ಎರಡೂ ಪಕ್ಷಗಳು ಬಂದಿದ್ದವು. 

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ 118 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಒಂದು ವೇಳೆ ಟಿಆರ್‌ಎಸ್‌ಗೆ ಸರ್ಕಾರ ರಚಿಸುವಷ್ಟು ಸ್ಥಾನಗಳು ಸಿಗದೇ ಹೋದರೆ ಬಿಜೆಪಿ ಬೆಂಬಲ ನೀಡಲಿದೆ ಎಂದು ಆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಡಾ. ಕೆ. ಲಕ್ಷ್ಮಣ ಹೇಳಿದ್ದಾರೆ. ಆದರೆ, ಎಐಎಂಐಎಂ ಅನ್ನು ದೂರ ಇಟ್ಟರೆ ಮಾತ್ರ ಈ ಬೆಂಬಲ ಎಂದೂ ಅವರು ಷರತ್ತು ಹಾಕಿದ್ದಾರೆ. 

ಈ ಹೇಳಿಕೆ ಪ್ರಕಟವಾದ ನಂತರ ಬಿಜೆಪಿ ಸ್ಪಷ್ಟೀಕರಣ ನೀಡಿದೆ. ಲಕ್ಷ್ಮಣ್‌ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ. ಟಿಆರ್‌ಎಸ್‌ ಜತೆಗೆ ಮೈತ್ರಿಗೆ ಸಂಬಂಧಿಸಿ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಬಿಜೆಪಿ ಹೇಳಿದೆ. 

ಒಂದೆಂದು ಪರಿಗಣಿಸಿ: ತೆಲಂಗಾಣ ರಾಜ್ಯಪಾಲ ಇ.ಎಸ್‌.ಎಲ್‌. ನರಸಿಂಹನ್‌ ಅವರನ್ನು ಪ್ರಜಾಕೂಟದ ಮುಖಂಡರು ಸೋಮವಾರ ಭೇಟಿಯಾಗಿ ಮೈತ್ರಿಕೂಟವನ್ನು ಒಂದು ಘಟಕ ಎಂದು ಪರಿಗಣಿಸುವಂತೆ ಕೋರಿದ್ದಾರೆ. 

‘ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಅಡಿಯಲ್ಲಿ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿದ್ದೇವೆ. ಹಾಗಾಗಿ ನಮ್ಮನ್ನು ಒಂದು ಎಂದು ಪರಿಗಣಿಸಬೇಕು ಎಂದು ರಾಜ್ಯಪಾಲರಿಗೆ ನಿವೇದನೆ ಕೊಟ್ಟಿದ್ದೇವೆ’ ಎಂದು ತೆಲಂಗಾಣ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಕ್ಯಾಪ್ಟನ್‌ ಎನ್‌. ಉತ್ತಮ್‌ ಕುಮಾರ್‌ ರೆಡ್ಡಿ ತಿಳಿಸಿದ್ದಾರೆ. 

ಯೋಗಿ ಜನಪ್ರಿಯತೆಗೆ ಒರೆಗೆ

ಲಖನೌ: ಬಿಜೆಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಳಿಕ ಅತಿ ಹೆಚ್ಚು ಬೇಡಿಕೆ ಇರುವ ನಾಯಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ. ಮಧ್ಯ ಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಛತ್ತೀಸಗಡ ವಿಧಾನಸಭೆ ಚುನಾವಣೆಗಳಲ್ಲಿ 70ಕ್ಕೂ ಹೆಚ್ಚು ಸಮಾವೇಶಗಳಲ್ಲಿ ಯೋಗಿ ಮಾತನಾಡಿದ್ದಾರೆ. ಹಾಗಾಗಿ, ಮಂಗಳವಾರ ಪ್ರಕಟವಾಗುವ ಚುನಾವಣಾ ಫಲಿತಾಂಶ ಯೋಗಿ ಅವರ ಜನಪ್ರಿಯತೆಯನ್ನೂ ಒರೆಗೆ ಹಚ್ಚಲಿದೆ.

ಚುನಾವಣಾ ಪ್ರಚಾರದಲ್ಲಿ ಯೋಗಿ ಅವರು ಮುಖ್ಯವಾಗಿ ಹಿಂದುತ್ವ ಪರವಾದ ವಿಚಾರಗಳನ್ನೇ ಎತ್ತಿದ್ದಾರೆ. ಅವರ ಕೆಲವು ಹೇಳಿಕೆಗಳು ವಿವಾದಗಳಿಗೂ ಕಾರಣವಾಗಿವೆ. 

‘ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸಗಡ ರಾಜ್ಯಗಳ ಫಲಿತಾಂಶ ಯೋಗಿ ಅವರ ನಾಯಕತ್ವಕ್ಕೆ ಪರೀಕ್ಷೆ. ಯಾಕೆಂದರೆ ಈ ರಾಜ್ಯಗಳಲ್ಲಿ ಅವರು ತೀವ್ರವಾಗಿ ಪ್ರಚಾರ ನಡೆಸಿದ್ದಾರೆ. ಈ ರಾಜ್ಯಗಳಲ್ಲಿ ಬಿಜೆಪಿ ಗೆದ್ದರೆ ಆ ಪಕ್ಷದ ಹಿಂದುತ್ವದ ಮುಖವಾಗಿ ಯೋಗಿ ಅವರು ಹೊರಹೊಮ್ಮಲಿದ್ದಾರೆ. ಪಕ್ಷದಲ್ಲಿ ಅವರ ವರ್ಚಸ್ಸು ವೃದ್ಧಿಸಲಿದೆ’ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. 

ಬಿಜೆಪಿಯ ಯಾವುದೇ ಮುಖ್ಯಮಂತ್ರಿಯೂ ತಮ್ಮ ರಾಜ್ಯದ ಹೊರಗೆ ಯೋಗಿ ಅವರಷ್ಟು ಸಮಾವೇಶಗಳಲ್ಲಿ ಭಾಗವಹಿಸಿದ್ದೇ ಇಲ್ಲ ಎಂದೂ ಈ ಮುಖಂಡರು ಹೇಳಿದ್ದಾರೆ.  

ಯೋಗಿ ಅವರು ನಾಥ ಪಂಥಕ್ಕೆ ಸೇರಿದವರು. ರಾಜಸ್ಥಾನದ ಅಲ್ವರ್‌, ಚುರು, ಸಿಕರ್ ಮತ್ತು ಜೈಪುರ ಜಿಲ್ಲೆಗಳಲ್ಲಿ ಈ ಪಂಥದ ಅನುಯಾಯಿಗಳ ಸಂಖ್ಯೆ ಗಣನೀಯವಾಗಿದೆ. ಹಾಗಾಗಿ ರಾಜಸ್ಥಾನದಲ್ಲಿ ಯೋಗಿ ಅವರು 26 ರ್‍ಯಾಲಿಗಳಲ್ಲಿ ಭಾಗವಹಿಸಿದ್ದಾರೆ. 

‘ಅಲಿಯನ್ನು ನೀವೇ ಇಟ್ಟುಕೊಳ್ಳಿ, ಬಜರಂಗ ಬಲಿಯಷ್ಟೇ ನಮಗೆ ಸಾಕು’ ಎಂಬ ಹೇಳಿಕೆ, ಹನುಮಂತ ದಲಿತ ಎಂಬ ಹೋಲಿಕೆ, ಹೈದರಾಬಾದ್‌ನ ಹೆಸರನ್ನು ಭಾಗ್ಯನಗರ ಎಂದು ಬದಲಾಯಿಸುವ ಪ್ರಸ್ತಾವ ವಿವಾದಕ್ಕೆ ಕಾರಣವಾಗಿದ್ದವು. 

ಮತಗಟ್ಟೆ ಸಮೀಕ್ಷೆ ಹೇಳಿದ್ದೇನು?

* ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶದ ಬಗ್ಗೆ ಹಲವು ಸಂಸ್ಥೆಗಳು ಮತಗಟ್ಟೆ ಸಮೀಕ್ಷೆ ನಡೆಸಿವೆ

* ಬೇರೆ ಬೇರೆ ಸಂಸ್ಥೆಗಳ ಮತಗಟ್ಟೆ ಸಮೀಕ್ಷೆಗಳು ಭಿನ್ನವಾಗಿಯೇ ಇದ್ದವು

* ಸಮೀಕ್ಷೆ ಫಲಿತಾಂಶಗಳ ಸರಾಸರಿಗಳು ಈ ಕೆಳಗಿನಂತಿವೆ–

* ತೆಲಂಗಾಣದಲ್ಲಿ ಕೆ.ಚಂದ್ರಶೇಖರ ರಾವ್‌ ನೇತೃತ್ವದ ಟಿಆರ್‌ಎಸ್‌ಗೆ ಸರಳ ಬಹುಮತ

* ರಾಜಸ್ಥಾನದಲ್ಲಿ ಕಾಂಗ್ರೆಸ್‌ಗೆ ಬಹುಮತ

* ಮಧ್ಯ ಪ್ರದೇಶ, ಛತ್ತೀಸಗಡದಲ್ಲಿ ಬಿಜೆಪಿ–ಕಾಂಗ್ರೆಸ್‌ ನಡುವೆ ನಿಕಟ ಹಣಾಹಣಿ, ಕಾಂಗ್ರೆಸ್‌ ಮೇಲುಗೈ ಸಾಧ್ಯತೆ ಹೆಚ್ಚು

* ಮಿಜೋರಾಂನಲ್ಲಿ ಮಿಜೋ ನ್ಯಾಷನಲ್ ಫ್ರಂಟ್‌ಗೆ (ಎಂಎನ್‌ಎಫ್‌) ಮುನ್ನಡೆ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು