ಗುರುವಾರ , ಫೆಬ್ರವರಿ 25, 2021
19 °C
ತೆಲಂಗಾಣ, ರಾಜಸ್ಥಾನ ರಾಜ್ಯಗಳ ವಿಧಾನಸಭೆಗೆ ಶುಕ್ರವಾರ ಮತದಾನ

ವಿಧಾನಸಭೆ ಚುನಾವಣೆ: ಪ್ರಚಾರದ ಬಹಿರಂಗ ಬಿರುಸು ಅಂತ್ಯ; ಡಿ.11ರಂದು ಮತ ಎಣಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌/ಜೈಪುರ: ತೆಲಂಗಾಣ ಮತ್ತು ರಾಜಸ್ಥಾನ ರಾಜ್ಯ ವಿಧಾನಸಭೆಗಳ ಚುನಾವಣೆಗೆ ನಡೆದ ತುರುಸಿನ ಬಹಿರಂಗ ಪ್ರಚಾರ ಬುಧವಾರ ಅಂತ್ಯಗೊಂಡಿದೆ.

ಎರಡೂ ರಾಜ್ಯಗಳಲ್ಲಿ ಶುಕ್ರವಾರ (ಡಿ. 7) ಮತದಾನ ನಡೆಯಲಿದೆ. 

ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ (ಕೆಸಿಆರ್‌) ಅವರು ಅವಧಿಗೆ ಮುಂಚೆಯೇ ಸೆಪ್ಟೆಂಬರ್‌ 6ರಂದು ವಿಧಾನಸಭೆ ವಿಸರ್ಜನೆ ಮಾಡಿದ್ದರು. ಅದೇ ದಿನ 106 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಮೂಲಕ ಚುನಾವಣಾ ಕಣಕ್ಕೆ ಧುಮುಕಿದ್ದರು. ಹಾಗಾಗಿ ತೆಲಂಗಾಣದಲ್ಲಿ ಸರಿ ಸುಮಾರು ಮೂರು ತಿಂಗಳು ಚುನಾವಣಾ ಪ್ರಚಾರ ನಡೆದಿದೆ.

ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್‌ ನೇತೃತ್ವದಲ್ಲಿ ಐದು ಪಕ್ಷಗಳು ಜತೆಯಾಗಿ ‘ಪ್ರಜಾಕೂಟ’ ಎಂಬ ಮೈತ್ರಿಕೂಟ ರಚಿಸಿಕೊಂಡು ಕೆಸಿಆರ್‌ ಅವರಿಗೆ ಪ್ರಬಲ ಸವಾಲು ಒಡ್ಡಿವೆ. 

ಪ್ರಚಾರದ ಕೊನೆಯ ದಿನವಾದ ಬುಧವಾರ ಕೆಸಿಆರ್‌ ಅವರು ತಮ್ಮ ಕ್ಷೇತ್ರ ಗಜ್ವೇಲ್‌ನಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ನಲಗೊಂಡ ಜಿಲ್ಲೆಯಲ್ಲಿ ಈ ಚುನಾವಣೆಯ ಕೊನೆಯ ಬಹಿರಂಗ ಪ್ರಚಾರ ನಡೆಸಿದರು.  ನಕ್ಸಲರ ಹಾವಳಿ ಇರುವ 13 ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರ ಬುಧವಾರ ಸಂಜೆ 4 ಗಂಟೆಗೇ ಕೊನೆಗೊಂಡಿತು. 

ಆಡಳಿತಾರೂಢ ಟಿಆರ್‌ಎಸ್‌ ಬಹಳ ಬೇಗನೆ ಪ್ರಚಾರ ಆರಂಭಿಸಿತ್ತು. ಆರಂಭದಲ್ಲಿ ನಿಧಾನವಾಗಿದ್ದ ಪ್ರಚಾರ ದಿನಕಳೆಯುತ್ತಲೇ ಬಿರುಸು ಪಡೆದುಕೊಂಡಿತು. ಕೆಸಿಆರ್‌ ಅವರು ದಿನಕ್ಕೆ ಐದಾರು ಸಮಾವೇಶಗಳಲ್ಲಿ ಭಾಗವಹಿಸಿದ್ದಾರೆ. ಅವರ ಮಗ ಕೆ. ತಾರಕ ರಾಮರಾವ್, ಮಗಳು ಕೆ. ಕವಿತಾ, ಸೋದರಳಿಯ ಟಿ. ಹರೀಶ್‌ ರಾವ್‌ ರಾಜ್ಯದ ವಿವಿಧ ಭಾಗಗಳಲ್ಲಿ ಜನರ ಮನವೊಲಿಸುವ ಕೆಲಸ ಮಾಡಿದ್ದಾರೆ. 

ಟಿಡಿಪಿ ಮುಖ್ಯಸ್ಥ ನಾಯ್ಡು ಅವರನ್ನೇ ಗುರಿಯಾಗಿಸಿ ಈ ಎಲ್ಲರೂ ಪ್ರಚಾರ ನಡೆಸಿದ್ದಾರೆ. ಹೊಸದಾಗಿ ಉದಯವಾದ ತೆಲಂಗಾಣ ರಾಜ್ಯದ ಮೊದಲ ಶತ್ರು ಅವರು ಎಂದು ಬಿಂಬಿಸಲು ಯತ್ನಿಸಿದ್ದಾರೆ. 

ರಾಹುಲ್‌ ಮತ್ತು ನಾಯ್ಡು ಅವರು ಜತೆಯಾಗಿ ಹಲವು ರೋಡ್‌ಷೋಗಳನ್ನು ನಡೆಸಿದ್ದಾರೆ. ಬಿಜೆಪಿ ಪರವಾಗಿ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಅಧ್ಯಕ್ಷ ಅಮಿತ್‌ ಶಾ, ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌, ನಿತಿನ್‌ ಗಡ್ಕರಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪ್ರಚಾರ ಮಾಡಿದ್ದಾರೆ. 

ರಾಜಸ್ಥಾನದಲ್ಲಿ ಹಿಂದುತ್ವ: ರಾಜಸ್ಥಾನದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ಪ್ರಮುಖ ಎದುರಾಳಿಗಳು. ರೈತರ ಸಮಸ್ಯೆಗಳು, ಭ್ರಷ್ಟಾಚಾರ, ಯುವ ಜನರ ನಿರುದ್ಯೋಗ ಆರಂಭಿಕ ದಿನಗಳ ಪ್ರಚಾರದ ಪ್ರಮುಖ ವಿಷಯಗಳಾಗಿದ್ದವು. ನಂತರದ ಪ್ರಚಾರದಲ್ಲಿ ಹಿಂದುತ್ವವೂ ಸೇರ್ಪಡೆಗೊಂಡಿತು. ಪ್ರಧಾನಿ ಮೋದಿ ಮತ್ತು ರಾಹುಲ್‌ ನಡುವೆ ‘ಭಾರತ ಮಾತಾ ಕಿ ಜೈ’ ವಿಷಯದಲ್ಲಿ ವಾಗ್ವಾದ ನಡೆಯಿತು. ಹನುಮಂತನ ಜಾತಿಯ ಬಗ್ಗೆಯೂ ವಿವಾದ ಸೃಷ್ಟಿಯಾಯಿತು. 

ಯೋಗಿ ಆದಿತ್ಯನಾಥ, ರಾಜನಾಥ್‌ ಸಿಂಗ್‌ ಮತ್ತು ಇತರ ಹಲವು ಕೇಂದ್ರ ಸಚಿವರು ಪ್ರಚಾರ ಮಾಡಿದ್ದಾರೆ. ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ರಾಜ್ಯದಾದ್ಯಂತ ಬಿರುಗಾಳಿ ಪ್ರವಾಸ ನಡೆಸಿದ್ದಾರೆ. 

ಕಾಂಗ್ರೆಸ್ ಪರವಾಗಿ ರಾಹುಲ್‌, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಚಿನ್‌ ಪೈಲಟ್‌ ಮತ್ತು ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು ಪ್ರಚಾರ ಮಾಡಿದ್ದಾರೆ. 

ಬಿಎಸ್‌ಪಿ ಇಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದೆ. ಕಾಂಗ್ರೆಸ್‌ ಜತೆಗೆ ಸೇರಲು ನಿರಾಕರಿಸುವ ಮೂಲಕ ರಾಜ್ಯದಲ್ಲಿ ತ್ರಿಕೋನ ಸ್ಪರ್ಧೆ ಉಂಟಾಗುವಂತೆ ಮಾಡಲು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಪ್ರಯತ್ನಿಸಿದ್ದಾರೆ. ಆದರೆ, 130ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ–ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ ಇದೆ. ಸುಮಾರು 50 ಕ್ಷೇತ್ರಗಳಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ಬಂಡಾಯ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ರಾಜಸ್ಥಾನದ 200 ಕ್ಷೇತ್ರಗಳ ಪೈಕಿ 199 ಕ್ಷೇತ್ರಗಳಿಗಷ್ಟೇ ಮತದಾನ ನಡೆಯಲಿದೆ. ಅಭ್ಯರ್ಥಿಯೊಬ್ಬರು ಮೃತಪಟ್ಟ ಕಾರಣ ಒಂದು ಕ್ಷೇತ್ರದ ಮತದಾನ ಮುಂದೂಡಿಕೆಯಾಗಿದೆ. ತೆಲಂಗಾಣದ ಎಲ್ಲ 119 ಕ್ಷೇತ್ರಗಳಲ್ಲಿಯೂ ಮತದಾನ ಆಗಲಿದೆ.

ರೇವಂತ್‌ ರೆಡ್ಡಿಯನ್ನು ವಶಕ್ಕೆ ಪಡೆದ ಎಸ್‌ಪಿ ಎತ್ತಂಗಡಿ
ಹೈದರಾಬಾದ್‌: ತೆಲಂಗಾಣ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಎ.ರೇವಂತ್‌ ರೆಡ್ಡಿ ಅವರನ್ನು ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್‌ ನಿರ್ದೇಶನದ ಮೇರೆಗೆ ವಿಕಾರಾಬಾದ್‌ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಅನ್ನಪೂರ್ಣಾ ಅವರನ್ನು ಚುನಾವಣಾ ಆಯೋಗ ವರ್ಗಾವಣೆ ಮಾಡಿದೆ.

ಈ ಹುದ್ದೆಗೆ ಅವಿನಾಶ್‌ ಮೊಹಾಂತಿ ಅವರನ್ನು ನೇಮಿಸಲಾಗಿದೆ. ಅನ್ನಪೂರ್ಣಾ ಅವರನ್ನು ಚುನಾವಣಾ ಕರ್ತವ್ಯಗಳಿಂದ ಬಿಡುಗಡೆಗೊಳಿಸಿ ಪೊಲೀಸ್‌ ಮಹಾನಿರ್ದೇಶಕರ (ಡಿಜಿಪಿ) ಕಚೇರಿಗೆ ವರ್ಗಾವಣೆ ಮಾಡಲಾಗಿದೆ.

ರೆಡ್ಡಿ ಅವರ ಕೋಡಂಗಲ್‌ನ ನಿವಾಸಕ್ಕೆ ಪೊಲೀಸರು ಮಂಗಳವಾರ ಬೆಳಿಗ್ಗಿನ ಜಾವ ಮೂರು ಗಂಟೆಗೆ ತೆರಳಿ ಅವರನ್ನು ವಶಕ್ಕೆ ಪಡೆದಿದ್ದರು. ಹೈಕೋರ್ಟ್‌ ಮಧ್ಯಪ್ರವೇಶದ ಬಳಿಕ ರೆಡ್ಡಿ ಅವರ ಬಿಡುಗಡೆ ಆಗಿತ್ತು. ಉಸ್ತುವಾರಿ ಮುಖ್ಯಮಂತ್ರಿಯೂ ಆಗಿರುವ ಕೆ.ಚಂದ್ರಶೇಖರ ರಾವ್‌ ಅವರು ಕೋಡಂಗಲ್‌ನಲ್ಲಿ ರ್‍ಯಾಲಿಗಾಗಿ ಬಂದಾಗ ಪ್ರತಿಭಟನೆ ನಡೆಸಬೇಕು ಎಂದು ರೆಡ್ಡಿ ತಮ್ಮ ಬೆಂಬಲಿಗರಿಗೆ ಕರೆ ಕೊಟ್ಟಿದ್ದರು. ಅದಕ್ಕಾಗಿ ರೆಡ್ಡಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು