ಭಾನುವಾರ, ಸೆಪ್ಟೆಂಬರ್ 20, 2020
23 °C

ಪಕ್ಷಕ್ಕೆ ದುಡಿಯದವರನ್ನು ನಾನು ಹುಡುಕುತ್ತೇನೆ: ಪ್ರಿಯಾಂಕಾ ಗಾಂಧಿ

ಏಜನ್ಸಿಸ್‌ Updated:

ಅಕ್ಷರ ಗಾತ್ರ : | |

ರಾಯಬರೇಲಿ: ರಾಯಬರೇಲ್ಲಿ ಗುರುವಾರ ಕಾಂಗ್ರೆಸ್‌ ಆಯೋಜಿಸಿದ್ದ ಮತದಾರರಿಗೆ ಕೃತಜ್ಞತೆ ಸಮರ್ಪಣೆ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಗಾಂಧಿ ಅವರು ಪಕ್ಷದ ನಾಯಕರು, ಕಾರ್ಯಕರ್ತರ ವಿರುದ್ಧ ತೀಕ್ಷ್ಣ ಮಾತುಗಳನ್ನಾಡಿದ್ದಾರೆ.

‘ನಾನು ಮಾತನಾಡಬೇಕು ಎಂದು ಕೇಳಿದ್ದೀರಿ. ನನ್ನನ್ನು ಮಾತನಾಡಲು ಬಿಡಿ. ಆದರೆ, ನನ್ನ ಮಾತುಗಳು ಮೃಧುವಾಗಿರುವುದಿಲ್ಲ. ನೇರವಾಗಿರುತ್ತವೆ. ಚುನಾವಣೆಯಲ್ಲಿ ಪಕ್ಷದ ಪರವಾಗಿ ಕೆಲಸ ಮಾಡದವರನ್ನು ನಾನು ಪತ್ತೆ ಮಾಡುತ್ತೇನೆ,’ ಎಂದು ಅವರು ಘೋಷಿಸಿದ್ದಾರೆ. 

 ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ ಕೇವಲ ಒಂದರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಅದೂ ರಾಯಬರೇಲಿ ಕ್ಷೇತ್ರವಷ್ಟೇ. ಕಾಂಗ್ರೆಸ್‌ನ ಮತ್ತೊಂದು ಸಾಂಪ್ರದಾಯಿಕ ಕ್ಷೇತ್ರ ಅಮೇಠಿಯಲ್ಲಿ ಸ್ವತಃ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರೇ ಸೋಲುಂಡಿದ್ದಾರೆ. ಸಂದಿಗ್ಧ ಕಾಲದಲ್ಲೂ ರಾಯಬರೇಲಿಯಲ್ಲಿ ಸೋನಿಯಾ ಗಾಂಧಿ ಅವರನ್ನು ಗೆಲ್ಲಿಸಿದ ಹಿನ್ನೆಲೆಯಲ್ಲಿ ಗುರುವಾರ ಪಕ್ಷದ ವತಿಯಿಂದ ಮತದಾರರಿಗೆ ಕೃತಜ್ಞತೆ ಸಮರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. 

ಕಾರ್ಯಕರ್ತರ ಒತ್ತಾಯದ ಮೇರೆಗೆ ಭಾಷಣ ಆರಂಭಿಸಿದ ಪ್ರಿಯಾಂಕಾ ಗಾಂಧಿ ಅವರು ಕಾರ್ಯಕರ್ತರು ನಾಯಕರ ವಿರುದ್ಧ ಕಟುವಾಗಿ ಮಾತನಾಡಿದರು. ‘ನಾನು ಇಲ್ಲಿ ಏನನ್ನೂ ಮಾತನಾಡದೇ ಇರಲು ನಿರ್ಧರಿಸಿದ್ದೆ. ಆದರೆ, ನನ್ನನ್ನು ಮಾತನಾಡಲು ಕೇಳಲಾಯಿತು. ಹಾಗಿದ್ದರೆ, ನಿಜ ಮಾತನಾಡಲು ಬಿಡಿ. ಆ ಸತ್ಯ ಏನೆಂದರೆ ಈ ಕ್ಷೇತ್ರದಲ್ಲಿ ನಾವು ಈ ಬಾರಿಯ ಚುನಾವಣೆಯಲ್ಲಿ ಗೆದ್ದಿದ್ದು, ಸೋನಿಯಾ ಗಾಂಧಿ ಅವರ ವರ್ಚಸ್ಸು ಮತ್ತು ರಾಯಬರೇಲಿಯ ಜನರಿಂದ ಮಾತ್ರ,’ ಎಂದು ಅವರು ನಿಷ್ಠುರ ನುಡಿಗಳನ್ನಾಡಿದರು.  

‘ಪಕ್ಷಕ್ಕಾಗಿ ಯಾರು ಕೆಲಸ ಮಾಡಿದ್ದೀರಿ ಎಂಬುದು ಅವರ ಆತ್ಮಕ್ಕೆ ಗೊತ್ತಿದೆ. ಯಾರು ಕೆಲಸ ಮಾಡಿಲ್ಲ ಎಂಬುದನ್ನು ನಾನು ಹುಡುಕುತ್ತೇನೆ,’ ಎಂದು ಅವರು ಹೇಳಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು