ಬುಧವಾರ, ಜೂನ್ 3, 2020
27 °C
200 ಕಿಲೋಮೀಟರ್ ಕ್ರಮಿಸಿದ ರಾಯಲ್ ಬೆಂಗಾಳ್ ಟೈಗರ್; ಕ್ಯಾಮೆರಾದಲ್ಲಿ ಪತ್ತೆ

ಮಧ್ಯಪ್ರದೇಶದಿಂದ ಬಿಹಾರಕ್ಕೆ ‘ಹುಲಿ ಹೆಜ್ಜೆ’

ಅಭಯ್‌ ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಪಟ್ನಾ: ದೇಶದಾದ್ಯಂತ ಲಾಕ್‌ಡೌನ್‌ ವಿಧಿಸಿರುವ ಕಾರಣ ವಲಸೆ ಕಾರ್ಮಿಕರು ನೂರಾರು ಕಿಲೋಮೀಟರ್ ಕ್ರಮಿಸಿ ತಮ್ಮ ತಮ್ಮ ಊರುಗಳನ್ನು ಸೇರಲು ಹರಸಾಹಸಪಡುತ್ತಿದ್ದಾರೆ. ಇದೇ ಅವಧಿಯಲ್ಲಿ ಹುಲಿಯೊಂದು ಅರಣ್ಯದಲ್ಲಿ ಕಿಲೋಮೀಟರ್‌ಗಟ್ಟಲೆ ಕ್ರಮಿಸಿ ಗಮನ ಸೆಳೆದಿದೆ. ಮಧ್ಯಪ್ರದೇಶದ ಬಾಂಧವಗಡ ರಾಷ್ಟ್ರೀಯ ಉದ್ಯಾನದಿಂದ ಬಿಹಾರದ ಕೈಮೂರ್ ಅರಣ್ಯ ಪ್ರದೇಶಕ್ಕೆ ಸುಮಾರು 200 ಕಿಲೋಮೀಟರ್ ಪಯಣಿಸಿದೆ. 

ಮಧ್ಯಪ್ರದೇಶದ ಅರಣ್ಯದಿಂದ ಹೊರಟ ಹುಲಿಯ ಚಲನವಲನಗಳು ಬಿಹಾರದ ರಕ್ಷಿತಾರಣ್ಯದ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಹುಲಿಯ ಹೆಜ್ಜೆ ಗುರುತುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದಾರೆ. 989 ಚದರ ಕಿಲೋಮೀಟರ್ ವಿಸ್ತೀರ್ಣದ ಕೈಮೂರ್ ವನ್ಯಜೀವಿ ಅಭಯಾರಣ್ಯ ಸೇರಿದಂತೆ ಕೈಮೂರ್ ಅರಣ್ಯವು ಪಶ್ಚಿಮ ಬಿಹಾರದಲ್ಲಿ 1,130 ಚದರ ಕಿಲೋಮೀಟರ್ ವ್ಯಾಪಿಸಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ಜಾರ್ಖಂಡ್‌ ಜತೆ ಇದು ಗಡಿ ಹಂಚಿಕೊಂಡಿದೆ. 

‘ಹುಲಿಯೊಂದು ಕೈಮೂರ್ ಜಿಲ್ಲೆಯ ಸುತ್ತಲಿನ ವ್ಯಾಪ್ತಿಯಲ್ಲಿ ತಿರುಗಾಡುತ್ತಿದೆ ಎಂಬುದಕ್ಕೆ ದಶಕಗಳ ಬಳಿಕ ಸ್ಪಷ್ಟ ಪುರಾವೆ ಸಿಕ್ಕಿದೆ. ಬಾಂಧವಗಡ ರಾಷ್ಟ್ರೀಯ ಉದ್ಯಾನ ಅಥವಾ ಪನ್ನಾ ಹುಲಿ ಸಂರಕ್ಷಿತ ಅರಣ್ಯದಿಂದ ಅದು ತನ್ನ ದಿಕ್ಕು ಬದಲಿಸಿರಬಹುದು’ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

‘ಹುಲಿ ಮೇಲೆ ಸ್ವಲ್ಪ ಸಮಯದಿಂದ ನಿಗಾ ಇಡಲಾಗಿತ್ತು. ಅದು ಮಾರ್ಚ್ 27ರಂದು ಕೈಮೂರ್ ಅರಣ್ಯದ ಕ್ಯಾಮೆರಾದಲ್ಲಿ ಸೆರೆಸಿಕ್ಕಿದೆ. ಉತ್ತರ ಪ್ರದೇಶದ ಸೋನೆಭದ್ರ, ಬಿಹಾರದ ಕೈಮೂರ್, ಜಾರ್ಖಂಡ್‌ನ ಬೆಟ್ಲಾ, ಮಧ್ಯಪ್ರದೇಶದ ಬಾಂಧವಗಡ ಮತ್ತು ಪನ್ನಾ ಅರಣ್ಯಗಳನ್ನು ‘ಹುಲಿ ಕಾರಿಡಾರ್’ ಒಳಗೊಂಡಿದೆ ಎಂಬುದಕ್ಕೆ ಬಂಗಾಳದ ಹುಲಿಯ ಈ ಸುದೀರ್ಘ ಪ್ರಯಾಣವೇ ಸ್ಪಷ್ಟ ನಿದರ್ಶನ’ ಎಂದು ಅರಣ್ಯ ಮತ್ತು ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ದೀಪಕ್ ಕುಮಾರ್ ಸಿಂಗ್ ಹೇಳಿದ್ದಾರೆ.

ಬಿಹಾರದಲ್ಲಿ ನೇಪಾಳ ಗಡಿಗೆ ಹೊಂದಿಕೊಂಡಂತೆ ವಾಲ್ಮೀಕಿನಗರ ಹುಲಿ ಮೀಸಲು ಅರಣ್ಯವಿದೆ. ಇಲ್ಲಿ 13 ಮರಿಗಳು ಸೇರಿ 44 ಹುಲಿಗಳಿವೆ. ಕೈಮೂರ್‌ ಅರಣ್ಯದಲ್ಲಿ 70 ಹಾಗೂ 80ರ ದಶಕದಲ್ಲಿ ದೊಡ್ಡ ಸಂಖ್ಯೆಯಲ್ಲಿ ಹುಲಿ ಸಂತತಿ ಇತ್ತು. ಕೈಮೂರ್ ಅರಣ್ಯದಲ್ಲಿ ನಿಖರವಾಗಿ ಎಷ್ಟು ಹುಲಿಗಳಿವೆ ಎಂಬುದನ್ನು ತಿಳಿಯಲು ಬರುವ ನವೆಂಬರ್‌ನಲ್ಲಿ ಗಣತಿ ಮಾಡಲು ಸರ್ಕಾರ ನಿರ್ಧರಿಸಿದೆ. 

ಮಧ್ಯಪ್ರದೇಶದ ಜತೆ ಗಡಿ ಹಂಚಿಕೊಂಡಿರುವ ಉತ್ತರ ಪ್ರದೇಶದ ರೇಣುಕೂಟ್ ಅಥವಾ ಚಂದ್ರಪ್ರಭ ವನ್ಯಜೀವಿ ಸಂರಕ್ಷಿತ ಅರಣ್ಯದಿಂದಲೂ ಹುಲಿ ಬಂದಿರುವ ಸಾಧ್ಯತೆಯಿದೆ

- ಎ.ಕೆ. ಪಾಂಡೆ, ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು