ಬುಧವಾರ, ಜನವರಿ 22, 2020
19 °C

ನಿರ್ಭಯ ಪ್ರಕರಣದ ದೋಷಿಗಳನ್ನು ನೇಣಿಗೇರಿಸಲು ಮುಂದೆ ಬಂದರು 15 ಮಂದಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ‘ನಿರ್ಭಯ ಪ್ರಕರಣ’ ಎಂದೇ ಜನಜನಿತವಾದ ಡಿ.16ರ ದೆಹಲಿ ಅತ್ಯಾಚಾರ ಪ್ರಕರಣದ ನಾಲ್ವರು ದೋಷಿಗಳನ್ನು ನೇಣಿಗೇರಿಸಲು ನಾವು ನೆರವಾಗುತ್ತೇವೆ ಎಂದು 15 ಮಂದಿ ತಿಹಾರ್‌ ಜೈಲು ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ದೆಹಲಿಯಲ್ಲಿ 2012ರ ಡಿಸೆಂಬರ್ 16ರಂದು 23ರ ಹರೆಯದ ಫಿಸಿಯೊಥೆರಪಿ ವಿದ್ಯಾರ್ಥಿನಿ ಮೇಲೆ ಚಲಿಸುವ ಬಸ್‌ನಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಚಿತ್ರಹಿಂಸೆ ಅನುಭವಿಸಿದ ಆ ಯುವತಿ ನಂತರದ ದಿನಗಳಲ್ಲಿ ಮೃತಪಟ್ಟಿದ್ದರು. ಇನ್ನು ನಾಲ್ಕು ದಿನ ಕಳೆದರೆ ಈ ಘಟನೆಗೆ ಏಳು ವರ್ಷಗಳಾಗುತ್ತವೆ. ಹೈದರಾಬಾದ್‌ನಲ್ಲಿ ಪಶುವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್‌ ಮಾಡಿ ಕೊಂದ ನಂತರ ನಿರ್ಭಯ ಆರೋಪಿಗಳನ್ನು ಶೀಘ್ರ ಗಲ್ಲಿಗೇರಿಸಬೇಕು ಎನ್ನುವ ಒತ್ತಾಯ ದೇಶದಲ್ಲಿ ಪ್ರಬಲವಾಗಿ ಕೇಳಿ ಬರುತ್ತಿದೆ.

ಈ ಹಿನ್ನೆಲೆಯಲ್ಲಿ ದೋಷಿಗಳನ್ನು ನೇಣಿಗೇರಿಸಲು ನಾವು ನೆರವಾಗುತ್ತೇವೆ ಎಂದು ಒಟ್ಟು 15 ಮಂದಿ ಆಸಕ್ತಿ ತೋರಿ ತಿಹಾರ್ ಜೈಲು ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ‘ದೆಹಲಿ, ಗುರುಗ್ರಾಮ, ಮುಂಬೈ, ಛತ್ತೀಸಗಡ, ಕೇರಳ ಮತ್ತು ತಮಿಳುನಾಡು ರಾಜ್ಯಗಳಿಂದ ನಮಗೆ ಪತ್ರಗಳು ಬಂದಿವೆ. ಬ್ರಿಟನ್ ಮತ್ತು ಅಮೆರಿಕ ವಾಸಿಗಳೂ ಪತ್ರ ಬರೆದಿದ್ದಾರೆ. ಈ ಪೈಕಿ ಓರ್ವ ಹಿರಿಯ ನಾಗರಿಕ, ಓರ್ವ ವಕೀಲ, ಮತ್ತೋರ್ವ ಚಾರ್ಟೆಡ್ ಅಕೌಂಟೆಂಟ್‌ ಇದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ತಿಹಾರ್ ಜೈಲು ಅಧಿಕಾರಿಗಳನ್ನು ಉಲ್ಲೇಖಿಸಿ ‘ಹಿಂದೂಸ್ತಾನ್ ಟೈಮ್ಸ್‌’ ವರದಿ ಮಾಡಿದೆ.

ಇದನ್ನೂ ಓದಿ: ನಿರ್ಭಯಾ ಅತ್ಯಾಚಾರಿಗಳಿಗೆ ಶೀಘ್ರವೇ ಶಿಕ್ಷೆ ಜಾರಿ? ನೇಣು ಹಗ್ಗ ತಯಾರಿಸಲು ಸೂಚನೆ

‘ಅಪರಾಧಿಗಳನ್ನು ನೇಣಿಗೆ ಹಾಕಲು ನಮಗೆ ಸ್ವಯಂಸೇವಕರ ನೆರವು ಬೇಕಾಗುವುದಿಲ್ಲ. ಅನಿವಾರ್ಯ ಪರಿಸ್ಥಿತಿಯಲ್ಲಿ ಜೈಲು ಸಿಬ್ಬಂದಿಯೇ ನೇಣಿಗೇರಿಸುವ ಕೆಲಸವನ್ನೂ ನಿರ್ವಹಿಸಬಲ್ಲರು. ಈ ಹಿಂದೆ ಅಫ್ಜಲ್ ಗುರು ಪ್ರಕರಣದಲ್ಲಿ ಹಾಗೆಯೇ ಮಾಡಲಾಗಿತ್ತು’ ಎಂದು ಆ ಅಧಿಕಾರಿ ಹೇಳಿದ್ದಾರೆ.

ನಿರ್ಭಯ ಪ್ರಕರಣದ ದೋಷಿಗಳಾದ ಪವನ್ ಗುಪ್ತ, ಅಕ್ಷಯ್ ಠಾಕೂರ್, ವಿನಯ್ ಶರ್ಮಾ ಮತ್ತು ಮುಕೇಶ್‌ ಸಿಂಗ್ ಸೇರಿ ಒಟ್ಟು 12 ಅಪರಾಧಿಗಳು ನೇಣುಕಂಬವನ್ನು ಎದುರು ನೋಡುತ್ತಿದ್ದಾರೆ. ಅಪರಾಧಿಗಳನ್ನು ನೇಣಿಗೇರಿಸುವ ‘ಫಾಸಿ ಕೊಥಾ’ ಎನ್ನುವ ಜೈಲ್ ನಂಬರ್‌ 3ರಲ್ಲಿ ಸ್ಥಳದಲ್ಲಿಯೇ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಮಕ್ಬೂಲ್ ಭಟ್ ಮತ್ತು ಸಂಸತ್ ಮೇಲಿನ ದಾಳಿಯ ದೋಷಿ ಅಫ್ಜಲ್ ಗುರು ಅವರ ಪಾರ್ಥಿವ ಶರೀರಗಳನ್ನು ಸಮಾಧಿ ಮಾಡಲಾಗಿದೆ ಎಂದು ಹಲವು ಜೈಲು ಅಧಿಕಾರಿಗಳು ಹೇಳುತ್ತಾರೆ.

ಈ ಪ್ರದೇಶಕ್ಕೆ ತಮಿಳುನಾಡು ಪೊಲೀಸರು ಭದ್ರತೆ ಒದಗಿಸುತ್ತಾರೆ. ದೋಷಿಗಳಿಗೆ ಆಹಾರ ತರುವ ಜೈಲು ಸಿಬ್ಬಂದಿ ಹೊರತುಪಡಿಸಿ ಇಲ್ಲಿಗೆ ಬೇರೆ ಯಾರಿಗೂ ಪ್ರವೇಶ ಇರುವುದಿಲ್ಲ.

ಜೈಲಿನಲ್ಲಿರುವ ನಾಲ್ವರು ಅತ್ಯಾಚಾರ ಅಪರಾಧಿಗಳ ಮೇಲೆ ಹಗಲಿರುಳು ನಿಗಾ ಇರಿಸಲಾಗಿದೆ. ಅವರ ಆರೋಗ್ಯ ಮತ್ತು ವರ್ತನೆ ಸಹಜವಾಗಿದೆ. ಅವರನ್ನು ಏಕಾಂತವಾಸದಲ್ಲಿ ಇರಿಸಿಲ್ಲ. ನೇಣುಗಂಬಕ್ಕೆ ಏರಿಸುವ ದಿನ ಅವರ ಆರೋಗ್ಯವನ್ನು ವೈದ್ಯರು ತಪಾಸಣೆ ನಡೆಸಲಿದ್ದಾರೆ. 

ಇದನ್ನೂ ಓದಿ: ನೇಣಿಗೇರಿಸುವ ವ್ಯಕ್ತಿಗಾಗಿ ಹುಡುಕಾಟ

ರಾಷ್ಟ್ರಪತಿಗಳು ದೋಷಿಗಳ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ ನಂತರ ಜೈಲು ಅಧಿಕಾರಿಗಳು ಈ ವಿಷಯವನ್ನು ದೋಷಿಗಳಿಗೆ ತಿಳಿಸಬೇಕು. ದೋಷಿಗಳ ಪೈಕಿ ಅಕ್ಷಯ್ ಠಾಕೂರ್ ಮಾತ್ರ ಈವರೆಗೆ ರಾಷ್ಟ್ರಪತಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾನೆ. ಉಳಿದವರು ಇನ್ನೂ ಅರ್ಜಿ ಸಲ್ಲಿಸಬೇಕಿದೆ. ಅ.27ರಂದು ‘ಜೀವ ಉಳಿಸಿಕೊಳ್ಳಲು ನಿಮಗಿರುವ ಎಲ್ಲ ಕಾನೂನಾತ್ಮಕ ಆಯ್ಕೆಗಳು ಮುಗಿದಿವೆ. ನೀವು ರಾಷ್ಟ್ರಪತಿ ಬಳಿ ಕ್ಷಮಾದಾನಕ್ಕೆ ಮನವಿ ಸಲ್ಲಿಸಬಹುದಾಗಿದೆ. ನೀವು ಅರ್ಜಿ ಸಲ್ಲಿಸದಿದ್ದರೆ ನೇಣಿಗೇರಿಸುವ ಪ್ರಕ್ರಿಯೆ ಆರಂಭಿಸಲಾಗುವುದು‘ ಈ ದೋಷಿಗಳಿಗೆ ಜೈಲು ಅಧಿಕಾರಿಗಳು ಜ್ಞಾಪನಾಪತ್ರ ನೀಡಿದ್ದರು.

ಈ ಪ್ರಕರಣದ ಮತ್ತೋರ್ವ ಆರೋಪಿ ರಾಮ್‌ ಸಿಂಗ್ ಮಾರ್ಚ್ 2013ರಲ್ಲಿ ನ್ಯಾಯಾಲಯ ತೀರ್ಪು ಪ್ರಕಟಿಸುವ ಮೊದಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು