ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನನ್ನನ್ನು ಆರು ಬಾರಿ ಸಾಯಿಸಿದ್ದಾರೆ’: ಖ್ಯಾತ ಗಾಯಕಿ ಎಸ್‌.ಜಾನಕಿ ಬೇಸರ

ಗಾಸಿಪ್ ಸುದ್ದಿಗೆ ಪ್ರತಿಕ್ರಿಯೆ
Last Updated 1 ಜುಲೈ 2020, 9:48 IST
ಅಕ್ಷರ ಗಾತ್ರ

ಇಲ್ಲಿಯವರೆಗೆನನ್ನನ್ನು ಒಟ್ಟು ಆರು ಸಾರಿ ಸಾಯಿಸಿದ್ದಾರೆ.. !

ಇದು ಗಾನಕೋಗಿಲೆ, ಖ್ಯಾತ ಗಾಯಕಿ ಎಸ್‌.ಜಾನಕಿಯವರ ತಮಾಷೆ ಮಿಶ್ರಿತ ಬೇಸರದ ನುಡಿ.ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ತೆಲುಗು ಮಾಧ್ಯಮವೊಂದಕ್ಕೆ ಹೀಗೆ ಪ್ರತಿಕ್ರಿಯಿಸಿದ್ದಾರೆ.

‘ಯಾರೋ ಕೆಲಸವಿಲ್ಲದವರು ನನ್ನ ಸಾವಿನ ಬಗ್ಗೆ ಇಂಥ ಗಾಸಿಪ್‌ ಸುದ್ದಿಗಳನ್ನು ಹರಡುತ್ತಿದ್ದಾರೆ. ಈ ವಿಷಯ ಕೇಳಿದಾಗಿನಿಂದ ನನ್ನ ಅಭಿಮಾನಿಗಳು ಫೋನ್‌ ಮೇಲೆ ಫೋನ್ ಮಾಡಿ ಆರೋಗ್ಯ ವಿಚಾರಿಸುತ್ತಾ, ಆತಂಕಪಡುತ್ತಿದ್ದಾರೆ. ಅವರನ್ನೆಲ್ಲ ಸಂತೈಸುವ ಹೊತ್ತಿಗೆ ಸಾಕು ಸಾಕಾಯಿತು. ಇದು ಸೇರಿ ಆರನೇ ಬಾರಿ ಗಾಸಿಪ್ ಸುದ್ದಿ ಹಬ್ಬಿಸುವವರು ನನ್ನನ್ನು ಹೀಗೆ ಸಾಯಿಸುತ್ತಿರುವುದು‘ ಎಂದು ಹೇಳಿದ್ದಾರೆ.

ಇಂಥ ಗಾಳಿಸುದ್ದಿಗಳನ್ನು ಕೇಳಿದಾಗ, ಆ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ನಂತರ ಹಂಚಿಕೊಳ್ಳಿ ಎಂದು ಕಿವಿಮಾತು ಹೇಳಿರುವ 82 ವರ್ಷದ ಹಿರಿಯ ಗಾಯಕಿ, ‘ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಈ ಸಂದರ್ಭದಲ್ಲಿ ಎಲ್ಲರೂ ಸುರಕ್ಷಿತವಾಗಿರಿ‘ ಎಂದು ಹಾರೈಸಿದ್ದಾರೆ.

ಕಳೆದ ಭಾನುವಾರದಂದು‘ಖ್ಯಾತ ಗಾಯಕಿ ಎಸ್‌‌.ಜಾನಕಿ ಇನ್ನಿಲ್ಲ‘ ಎಂಬ ಸುಳ್ಳು ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದರಿಂದ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು.

ಈ ಸುದ್ದಿ ಕೇಳಿ ಬೇಸರಗೊಂಡಿದ್ದ ಖ್ಯಾತ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ, ಜಾನಕಿ ಅವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದರು. ನಂತರ ವಿಡಿಯೊ ತುಣುಕೊಂದನ್ನು ಬಿಡುಗಡೆ ಮಾಡಿ, ಅದರಲ್ಲಿ ‘ಜಾನಕಿಯವರು ಆರೋಗ್ಯವಾಗಿದ್ದಾರೆ. ದಯವಿಟ್ಟು ಇಂಥ ಸುಳ್ಳು ಸುದ್ದಿ ಹಬ್ಬಿಸಬೇಡಿ. ಸಾಮಾಜಿಕ ಜಾಲತಾಣಗಳನ್ನು ಸಕಾರಾತ್ಮಕ ಸುದ್ದಿಗಳನ್ನು ಹಂಚಲು ಬಳಸಿ‘ ಎಂದು ಮನವಿ ಮಾಡಿದ್ದರು.

ಇದಕ್ಕೂ ಮುನ್ನ ಜಾನಕಿಯವರ ಮಗ ಮುರುಳಿ ಕೃಷ್ಣ ಅವರು ವೆಬ್‌ಪೋರ್ಟ್‌ಲ್‌ವೊಂದಕ್ಕೆ ಮಾತನಾಡಿ, ‘ತಮ್ಮ ತಾಯಿ ಆರೋಗ್ಯವಾಗಿದ್ದಾರೆ. ಅಭಿಮಾನಿಗಳು ಆತಂಕಪಡುವ ಅಗತ್ಯವಿಲ್ಲ‘ ಎಂದು ತಿಳಿಸಿದ್ದರು.

ಜಾನಕಿಯವರ ಸಾವಿನ ಬಗ್ಗೆ ಸುಳ್ಳು ಸುದ್ದಿ ಹರಿದಾಡುತ್ತಿರುವುದು ಇದೇ ಮೊದಲೇನಲ್ಲ. ಹಿಂದೆ 2016 ಮತ್ತು 2017ರಲ್ಲಿ ಇಂಥದ್ದೇ ಸುದ್ದಿ ಹರಿದಾಡಿತ್ತು. ಆ ಸಮಯದಲ್ಲೂ ಎಸ್‌ಬಿಪಿ ಸೇರಿದಂತೆ ಅನೇಕ ಗಣ್ಯರು, ಅವರ ಕುಟುಂಬದವರು ಸ್ಪಷ್ಟನೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT