ಟಿಪ್ಪು ಜಯಂತಿ: ವಾಕ್ಸಮರ

7

ಟಿಪ್ಪು ಜಯಂತಿ: ವಾಕ್ಸಮರ

Published:
Updated:

ಬೆಂಗಳೂರು: ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ಸಂಬಂಧ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರ ನಡುವಿನ ವಾಕ್ಸಮರ ತಾರಕಕ್ಕೇರಿದೆ.

‘ಇದೇ 10ರಂದು ಜಯಂತಿ ಆಚರಿಸಿಯೇ ಸಿದ್ಧ’ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟಗಳಲ್ಲಿ 10ರಂದೇ ಜಯಂತಿ ಆಚರಣೆಗೆ ಪೂರ್ವಸಿದ್ಧತೆ ಮಾಡಿಕೊಳ್ಳುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಜಿಲ್ಲಾಧಿಕಾರಿಗಳಿಗೆ ಶನಿವಾರ ಪತ್ರ ಬರೆದಿದ್ದಾರೆ.

‘ಟಿಪ್ಪು ಜಯಂತಿ ಮಾಡಬೇಕೆನ್ನುವುದು ಸರ್ಕಾರದ ನಿರ್ಧಾರ. ಹೀಗಾಗಿ ಆಚರಣೆ ಮಾಡುವುದು ಅನಿವಾರ್ಯ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ ಸಮರ್ಥಿಸಿಕೊಂಡರು.

ಹಾಸನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಚರಿತ್ರೆಯಲ್ಲಿರುವ ವ್ಯಕ್ತಿಗಳ ಜಯಂತಿ ಆಚರಿಸುವಾಗ ವಿರೋಧ ಸಹಜ. ಟಿಪ್ಪು ಜಯಂತಿ ಇಷ್ಟೊಂದು ವಿವಾದಕ್ಕೆ ಕಾರಣವಾಗಿರುವುದು ಏಕೆ ಎಂಬುದು ಗೊತ್ತಿಲ್ಲ. ಇತಿಹಾಸಕಾರರು ತಮಗೆ ತಿಳಿದಿದ್ದನ್ನು ದಾಖಲಿಸಿದ್ದಾರೆ. ನಿಜವಾದ ಚರಿತ್ರೆಯನ್ನು ಜನರಿಗೆ ತಿಳಿಸಬೇಕು’ ಎಂದು ಮನವಿ ಮಾಡಿದರು.

‘ಹಳೆಯ ಮಾದರಿಯಲ್ಲೇ ಈ ವರ್ಷವೂ ಆಚರಣೆ ಮುಂದುವರಿಯಲಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಕುಳಿತು ಜಯಂತಿ ಮುಂದುವರಿಸುವ ಬಗ್ಗೆ ನಿರ್ಧಾರ ಕೈಗೊಂಡಿದ್ದೇವೆ’ ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಅವರು ಹುಬ್ಬಳ್ಳಿಯಲ್ಲಿ ಹೇಳಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಬಿಜೆಪಿ ಶಾಸಕ ಜಗದೀಶ ಶೆಟ್ಟರ್, ‘ಟಿಪ್ಪು ಜಯಂತಿಯನ್ನು ಸರ್ಕಾರಿ ಕಾರ್ಯ
ಕ್ರಮವಾಗಿ ಆಚರಿಸುವುದು ಬೇಡ.

ಕುಮಾರಸ್ವಾಮಿ ಈ ಹಿಂದೆ ಜಯಂತಿಯನ್ನು ವಿರೋಧಿಸಿದ್ದರು. ಆದರೆ, ಈಗ ಅವರೇ ಆಚರಣೆಗೆ ಮುಂದಾಗಿದ್ದಾರೆ’ ಎಂದು ಟೀಕಿಸಿದರು. ಸರ್ಕಾರ ದೇಶದ್ರೋಹಿ, ಅತ್ಯಾಚಾರಿ ಟಿಪ್ಪು ಜಯಂತಿ ಯಾಕೆ ಆಚರಿಸಬೇಕು ಎಂದರು.

**

ಕಾನೂನು ಉಲ್ಲಂಘಿಸಿದರೆ ಕ್ರಮ: ಪರಮೇಶ್ವರ ಎಚ್ಚರಿಕೆ

ಬೆಂಗಳೂರು: ‘ಜಯಂತಿ ವೇಳೆ ಕಾನೂನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳುತ್ತೇವೆ. ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಸಂಬಂಧ ಸೋಮವಾರ ಪೊಲೀಸ್ ವರಿಷ್ಠರ ಜೊತೆ ಸಭೆ ನಡೆಸಲಿದ್ದೇನೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಎಚ್ಚರಿಸಿದರು.

ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ‘ಚಿದಾನಂದ ಮೂರ್ತಿ ಬಗ್ಗೆ ಅಪಾರ ಗೌರವವಿದೆ. ಪ್ರತಿಯೊಬ್ಬರಿಗೂ ವಾಕ್‌ ಸ್ವಾತಂತ್ರ್ಯವಿದ್ದು, ಅದರಂತೆ ಅವರು ತಮ್ಮ‌ ವಿರೋಧ ವ್ಯಕ್ತಪಡಿಸಿದ್ದಾರೆ’ ಎಂದರು.

**

ಆಹ್ವಾನಪತ್ರಿಕೆಯಲ್ಲಿ ಹೆಸರು ಬೇಡ: ಸಚಿವ ಹೆಗಡೆ ಪತ್ರ

ಶಿರಸಿ: ಟಿಪ್ಪು ಜಯಂತಿಯ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರು ಮುದ್ರಿಸಬಾರದು ಎಂದು ಕೋರಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

‘ಟಿಪ್ಪು ಜಯಂತಿಗೆ ಆರಂಭದಿಂದಲೂ ಸಾರ್ವಜನಿಕರು ಹಾಗೂ ವಿಚಾರವಾದಿಗಳು ದೊಡ್ಡ ಪ್ರಮಾಣದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಟಿಪ್ಪು ಕನ್ನಡ ವಿರೋಧಿ ಮತ್ತು ಹಿಂದೂ ವಿರೋಧಿಯಾಗಿರುವುದು ಇತಿಹಾಸದಿಂದ ತಿಳಿಯುತ್ತದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಜಯಂತಿ ಆಚರಣೆಗೆ ವಿರೋಧ ಹಾಗೂ ಪ್ರತಿಭಟನೆ ನಡೆದು, ಹಿಂಸಾಚಾರಕ್ಕೆ ಕಾರಣವಾಗಿದೆ’ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !