ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳ: 2021ರ ಹಣಾಹಣಿಗೆ ಸಜ್ಜಾಗುತ್ತಿರುವ ಟಿಎಂಸಿ, ಬಿಜೆಪಿ

ಪಶ್ಚಿಮ ಬಂಗಾಳದಲ್ಲಿ ಚುನಾವಣೆಗೆ ಇನ್ನು ವರ್ಷವಷ್ಟೇ ಬಾಕಿ
Last Updated 8 ಜೂನ್ 2020, 10:27 IST
ಅಕ್ಷರ ಗಾತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಒಂದುವರ್ಷವಷ್ಟೇ ಉಳಿದಿರುವಂತೆ ಆಡಳಿತಾರೂಢ ಟಿಎಂಸಿ ಮತ್ತು ತೀವ್ರ ಸ್ಪರ್ಧೆ ಒಡ್ಡುತ್ತಿರುವ ಬಿಜೆಪಿ ಚುನಾವಣೆಗೆ ಸಿದ್ಧತೆಗಳನ್ನು ಆರಂಭಿಸಿವೆ. ಲಾಕ್‌ಡೌನ್ ಅವಧಿಯಲ್ಲಿ ಮತದಾರರನ್ನು ಸೆಳೆಯಲು ಡಿಜಿಟಲ್ ಮಾಧ್ಯಮಗಳ ಮೊರೆ ಹೋಗಿವೆ.

ಕೊರೊನಾ ಪ್ರಕರಣಗಳು ತೀವ್ರವಾಗಿ ಏರಿಕೆ ಆಗುತ್ತಿರುವಂತೆ, ಬದಲಾದ ಪರಿಸ್ಥಿತಿಯಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳುವಿಕೆ, ಕನಿಷ್ಠ ಸಂಪರ್ಕಕ್ಕೆ ಬರುವುದು ಅನಿವಾರ್ಯವಾಗಿದೆ. ಇದರಿಂದ ರಾಜ್ಯ ರಾಜಕಾರಣದಲ್ಲಿ ಬದ್ಧ ವೈರಿಗಳಾದ ಎರಡು ಪಕ್ಷಗಳು ಮತದಾರರ ಬೆಂಬಲ ಗಳಿಸಲು ಸಾಮಾಜಿಕ ಮಾಧ್ಯಮಕ್ಕೆ ಒತ್ತು ನೀಡಿವೆ.

ಬಿಜೆಪಿ ಮತ್ತು ಟಿಎಂಸಿ ಸದ್ಯ ಕೋವಿಡ್-19 ಪರಿಸ್ಥಿತಿ ನಿರ್ವಹಣೆ, ವಲಸೆ ಕಾರ್ಮಿಕರ ಸ್ಥಿತಿಗತಿ ಹಾಗೂ ಅಂಪನ್ ಚಂಡಮಾರುತದ ಪರಿಣಾಮಗಳ ನಿರ್ವಹಣೆ ಕುರಿತು ಪರಸ್ಪರ ಆರೋಪ– ಪ್ರತ್ಯಾರೋಪಗಳಲ್ಲಿ ತೊಡಗಿವೆ.

ಸಾಮಾಜಿಕ ಮಾಧ್ಯಮ ಬಳಕೆಗೆ ಮೊದಲು ಚಾಲನೆ ನೀಡಿದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಜೂನ್ 5ರಂದು ಪಕ್ಷದ ಜನಪ್ರತಿನಿಧಿಗಳ ಜೊತೆಗೆ ವಿಡಿಯೊ ಸಂವಾದ ನಡೆಸಿದ್ದರು. ಜೂನ್ 9ರಂದು ಬಿಜೆಪಿ ನಾಯಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಕ್ಷದ ಪದಾಧಿಕಾರಿಗಳು, ಮುಖಂಡರ ಜೊತೆ ಚರ್ಚಿಸುವರು.

ಟಿಎಂಸಿ ಸರ್ಕಾರದ ಆಡಳಿತ ವೈಫಲ್ಯವನ್ನು ಜನರಿಗೆ ತಿಳಿಸಲು ಕಾರ್ಯತಂತ್ರ ರೂಪಿಸುವುದು ಮುಖ್ಯ. ಜೊತೆಗೆ ನಾವು ಅಂತರ್ಜಾಲ ಬಳಕೆದಾರರನ್ನೂ ತಲುಪಬೇಕಾಗಿದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಮತ್ತು ಸಂಸದ ದಿಲೀಪ್‌ ಘೋಷ್‌ ಹೇಳುತ್ತಾರೆ.

‘ಅಮಿತ್ ಶಾ ಅವರು ಪಕ್ಷದ ಸಾಮಾಜಿಕ ಮಾಧ್ಯಮ ಪ್ರಚಾರಕ್ಕೆ ಚಾಲನೆ ನೀಡುವರು. ಕೋವಿಡ್ ಹಿನ್ನೆಲೆಯಲ್ಲಿ ಜಾಥಾಗಳನ್ನು ಸಂಘಟಿಸುವುದು ಕಷ್ಟ. ಹೀಗಾಗಿ, ಬಹುತೇಕ ಸಾಮಾಜಿಕ ಮಾಧ್ಯಮ ಪ್ರಚಾರಕ್ಕೆ ನಾವು ಒತ್ತು ನೀಡುತ್ತಿದ್ದೇವೆ. ಮುಂದಿನ ಚುನಾವಣೆಯಲ್ಲಿ ಕೋವಿಡ್ ಮತ್ತು ಅಂಪನ್ ಚಂಡಮಾರುತ ಪ್ರಮುಖ ಚುನಾವಣಾ ವಿಷಯಗಳಾಗಲಿವೆ’ ಎನ್ನುತ್ತಾರೆ ಘೋಷ್‌.

ಬಿಜೆಪಿ ಕಳೆದ ವಾರವಷ್ಟೇ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ 9 ಅಂಶಗಳ ‘ಆರೋಪ ಪಟ್ಟಿ’ಯನ್ನು ಬಿಡುಗಡೆ ಮಾಡಿತ್ತು. ಅಲ್ಲದೆ, ಸಾಮಾಜಿಕ ಮಾಧ್ಯಮಗಳಲ್ಲಿ ಆರ್ ನೊಯ್‌ ಮಮತಾ (ಮಮತಾ ಆಡಳಿತ ಹೆಚ್ಚು ಕಾಲ ಉಳಿಯದು) ಎಂಬ ಅಭಿಯಾನವನ್ನು ಆರಂಭಿಸಿದೆ.

ರಾಜ್ಯದಲ್ಲಿ 1000ಕ್ಕೂ ಅಧಿಕ ವಿಡಿಯೊ ಜಾಥಾಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಈ ಮೂಲಕ ರಾಜ್ಯದ ಪ್ರತಿಯೊಂದು ಮೂಲೆ ತಲುಪುವ ಗುರಿಯನ್ನು ಹೊಂದಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

‘ಎಲ್ಲ ಪದಾಧಿಕಾರಿಗಳು ಸುಮಾರು ಎರಡು ತಿಂಗಳಿನಿಂದ ಮನೆಯಲ್ಲೇ ಕುಳಿತಿದ್ದಾರೆ. ಈ ಸಂವಾದಗಳು ಅವರಿಗೆ ನೈತಿಕ ಸ್ಥೈರ್ಯ ನೀಡಲಿವೆ. ನಾವು ಇಂಥ ಸಂವಾದಗಳನ್ನು ರಾಜ್ಯ ಪ್ರತಿ ಜಿಲ್ಲೆಯ ಮುಖಂಡರನ್ನು ಉದ್ದೇಶಿಸಿ ನಡೆಸಲಿದ್ದೇವೆ. ಪದಾಧಿಕಾರಿಗಳು ವಾಟ್ಸ್ ಆ್ಯಪ್ ಮೂಲಕ ವಿಡಿಯೊ, ಸಂದೇಶಗಳನ್ನು ರವಾನಿಸಲಿದ್ದಾರೆ’ ಎಂದರು.

ಟಿಎಂಸಿ ಸರ್ಕಾರದ ವಿರುದ್ಧ ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಮತ್ತು ಅಂಪನ್ ಚಂಡಮಾರುತ ಸಂತ್ರಸ್ತರಿಗೆ ಪುನರ್ವಸತಿ ಕೆಲಸವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ಎಡವಿರುವ ಆರೋಪಗಳಿವೆ. ಜಿಲ್ಲಾ ಹಂತದಲ್ಲಿ ಇದರ ವಿರುದ್ಧ ಬಿಜೆಪಿ ಪ್ರಚಾರ ನಡೆಸಿತ್ತು.

ಹಿರಿಯ ಸಚಿವ ಮತ್ತು ಟಿಎಂಸಿ ನಾಯಕ ಫಿರಾದ್ ಹಕೀಂ ಅವರು, ‘ಪಕ್ಷ ಬಿಜೆಪಿಯ ಅಪಪ್ರಚಾರವನ್ನು ಪರಿಣಾಮಕಾರಿಯಾಗಿ ಎದುರಿಸಲಿದೆ. ಸರ್ಕಾರ ಕಳೆದ 9 ವರ್ಷಗಳಲ್ಲಿ ಮಾಡಿರುವ ಸಾಧನೆಗಳನ್ನು ಜನರ ಮುಂದಿಡಲಿದೆ’ ಎಂದು ತಿಳಿಸಿದ್ದಾರೆ.

‘ಮಮತಾ ಬ್ಯಾನರ್ಜಿ ಅವರು, 2022ರ ಚುನಾವಣೆಗೆ ಸಜ್ಜಾಗಲು ಸೂಚಿಸಿದ್ದಾರೆ. ನಾವು ನಮ್ಮ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ಒತ್ತು ನೀಡಿದ್ದೇವೆ. ಜೊತೆಗೆ ಕೋವಿಡ್-19 ನಿರ್ವಹಣೆ ಕುರಿತ ಕೇಂದ್ರದ ವೈಫಲ್ಯವನ್ನು ಜನರ ಮುಂದಿಡುತ್ತೇವೆ. ಜೊತೆಗೆ ವಲಸೆ ಕಾರ್ಮಿಕರು ಎದುರಿಸಿದ ಸಂಕಷ್ಟಗಳ ಕುರಿತು ಗಮನಸೆಳೆಯಲಿದ್ದೇವೆ’ ಎಂದರು.

ಅಂಪನ್ ಚಂಡಮಾರುತದ ಪರಿಣಾಮಕ್ಕೆ ತುತ್ತಾದ ಸುಮಾರು ಐದು ಲಕ್ಷ ಕುಟುಂಬಗಳ ಖಾತೆಗೆ ತಲಾ ₹ 20,000 ನೆರವು ಜಮೆ ಮಾಡಿದ್ದನ್ನು ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚುವರಿ ₹ 28 ಸಾವಿರ ನೆರವು ನೀಡುವ ಭರವಸೆ ಕುರಿತು ಜನರ ಗಮನಸೆಳೆಯಲಿದ್ದೇವೆ ಎಂದರು.

ಟಿಎಂಸಿ ಪಕ್ಷದ ಆನ್‌ಲೈನ್ ತಂಡವು ಮಧ್ಯಪ್ರದೇಶ ಮತ್ತು ಗುಜರಾತಿನಲ್ಲಿ ಕೋವಿಡ್‌ ಪರಿಸ್ಥಿತಿ ನಿರ್ವಹಿಸುವಲ್ಲಿ ಬಿಜೆಪಿ ಸರ್ಕಾರದ ವೈಫಲ್ಯ ಕುರಿತ ವಿಡಿಯೊ ಮತ್ತು ಚಿತ್ರಗಳನ್ನು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದೆ.

ಮಮತಾ ಅವರು ಮನೆ ಮನೆ ಪ್ರಚಾರ ಆರಂಭಿಸುವಂತೆ ಜಿಲ್ಲಾ ಹಂತದ ನಾಯಕರಿಗೆ ಸೂಚಿಸಿದ್ದಾರೆ. ಕೆಳಹಂತದಲ್ಲಿ ಪಾರದರ್ಶಕತೆಗೆ ಒತ್ತು ನೀಡಬೇಕು ಎಂದು ಸಲಹೆ ಮಾಡಿದ್ದಾರೆ ಎಂದು ಟಿಎಂಸಿ ಮೂಲಗಳು ತಿಳಿಸಿವೆ.

ಕೋವಿಡ್ ನಂತರದ ದಿನಗಳಲ್ಲಿ ಪ್ರಚಾರದ ಶೈಲಿಯೂ ಭಿನ್ನವಾಗಿರುತ್ತದೆ. ಆನ್ ಲೈನ್ ಪ್ರಚಾರ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲಿದೆ ಎಂದು ಟಿಎಂಸಿ ಮುಖಂಡರು ಹೇಳುತ್ತಾರೆ.

ಸಿಪಿಎಂ, ಕಾಂಗ್ರೆಸ್ ಪಕ್ಷಗಳು ಇನ್ನೊಂದೆಡೆ ಈ ಎರಡೂ ಪಕ್ಷಗಳ ವಿರುದ್ಧ ಆರೋಪ ಮಾಡುತ್ತಿದ್ದು, ಭಿನ್ನ ಬಿಕ್ಕಟ್ಟುಗಳ ನಡುವೆಯೂ ಚುನಾವಣಾ ಪ್ರಚಾರಕ್ಕೆ ಒತ್ತು ನೀಡಲಾಗಿದೆ ಎಂದು ತರಾಟೆಗೆ ತೆಗೆದುಕೊಂಡಿವೆ.

ಸಾವಿರಾರು ಜನರು ಪರಿಹಾರ ಕಾರ್ಯಕ್ರಮಗಳ ನಿರೀಕ್ಷೆಯಲ್ಲಿ ಇರುವಾಗ ಈ ಎರಡೂ ಪಕ್ಷಗಳು ಹೇಗೆ ಚುನಾವಣಾ ಪ್ರಚಾರ ನಡೆಸುವುದು ಹೇಗೆ ಸಾಧ್ಯ ಎಂದು ಸಿಪಿಎಂ ನಾಯಕರೊಬ್ಬರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT