ಬಿಜೆಪಿ ರ‍್ಯಾಲಿ ನಡೆದ ಸ್ಥಳವನ್ನು ಗಂಗಾಜಲದಿಂದ ಶುದ್ಧಿಗೊಳಿಸಿದ ಟಿಎಂಸಿ

7

ಬಿಜೆಪಿ ರ‍್ಯಾಲಿ ನಡೆದ ಸ್ಥಳವನ್ನು ಗಂಗಾಜಲದಿಂದ ಶುದ್ಧಿಗೊಳಿಸಿದ ಟಿಎಂಸಿ

Published:
Updated:

ಕೂಚ್ ಬೆಹರ್ (ಪಶ್ಚಿಮ ಬಂಗಾಳ) : ಬಿಜೆಪಿ ರ‍್ಯಾಲಿ ನಡೆದ ಸ್ಥಳವನ್ನು ಟಿಎಂಸಿ ಕಾರ್ಯಕರ್ತರು ಗಂಗಾಜಲ ಮತ್ತು ಸೆಗಣಿ ನೀರಿನಿಂದ ಶುದ್ಧಿಗೊಳಿಸಿದ್ದಾರೆ. ಪಶ್ಚಿಮ ಬಂಗಾಳದ ಕೂಚ್ ಬೆಹರ್ ಎಂಬಲ್ಲಿ ಶನಿವಾರ ಬಿಜೆಪಿ ರ‍್ಯಾಲಿ ನಡೆದಿತ್ತು.

ಬಿಜೆಪಿಯವರು ಇಲ್ಲಿಗೆ ಬಂದು ಧರ್ಮದ ಸಂದೇಶವನ್ನು ನೀಡಿರುವುದರಿಂದ ಈ ಸ್ಥಳವನ್ನು ಶುದ್ಧಿಗೊಳಿಸಿದ್ದೇವೆ ಎಂದು ಸ್ಥಳೀಯ ಟಿಎಂಸಿ ನೇತಾರ ಪಂಕಜ್ ಘೋಷ್ ಹೇಳಿದ್ದಾರೆ.

ಇದು ಮದನ್ ಮೋಹನ್ ದೇವರ ನಾಡು. ಹಾಗಾಗಿ ಹಿಂದೂ ಸಂಪ್ರದಾಯದಂತೆ ನಾವು ಈ ಸ್ಥಳವನ್ನು ಶುದ್ಧ ಮಾಡಿದ್ದೇವೆ. ಇಲ್ಲಿ ಮದನ್ ಮೋಹನ್ ದೇವರ ರಥ ಅಲ್ಲದೆ ಬೇರೆ ಯಾವುದೇ ರಥ ಹಾದುಹೋಗಲು ನಾವು ಅವಕಾಶ ನೀಡುವುದಿಲ್ಲ ಎಂದು ಕೂಚ್ ಬೆಹರ್ ಟಿಎಂಸಿ ಕಾರ್ಯಕರ್ತರು ಹೇಳಿದ್ದಾರೆ.

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಮೂರು ರಥ ಯಾತ್ರೆಗಳು ಡಿಸೆಂಬರ್7,9 ಮತ್ತು  14ರಂದು ಆರಂಭವಾಗಲಿದೆ. ಈ ರಥಯಾತ್ರೆಗಳು ಕ್ರಮವಾಗಿ ಕೂಚ್ ಬೆಹರ್, ದಕ್ಷಿಣ 24 ಪರ್ಗನಾಸ್ ಮತ್ತು ಬಿರ್ಭುಂಮ್ ನಿಂದ ಹೊರಡಲಿವೆ. ಪಶ್ಚಿಮ ಬಂಗಾಳದ 42 ಲೋಕಸಭಾ ಕ್ಷೇತ್ರಗಳಲ್ಲಿ ರಥ ಯಾತ್ರೆ ಸಾಗಲಿದ್ದು, ರಥ ಯಾತ್ರೆಗೆ ಮುನ್ನ ಕೊಲ್ಕತ್ತಾದಲ್ಲಿ ಬೃಹತ್ ರ‍್ಯಾಲಿ ನಡೆಸಲು ಬಿಜೆಪಿ ಚಿಂತನೆ ನಡೆಸಿದೆ. ಈ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗುವ ಸಾಧ್ಯತೆ ಇದೆ.

ಏತನ್ಮಧ್ಯೆ, ಬಿಜೆಪಿಯ ನಿಗದಿತ ರಥ ಯಾತ್ರೆ ಬಗ್ಗೆ ವಿರೋಧ ವ್ಯಕ್ತ  ಪಡಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಅದು ರಥಯಾತ್ರೆ ಅಲ್ಲ ರಾವಣ ಯಾತ್ರೆ. ಇದು ರಾಜಕೀಯ ಗಿಮಿಕ್ ಎಂದು ಆ ಕಾರ್ಯಕ್ರಮವನ್ನು ತಿರಸ್ಕರಿಸಿ ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ರಥ ಯಾತ್ರೆ ಸಾಗಿದ ದಾರಿಯನ್ನು ಶುದ್ಧಗೊಳಿಸಿ ಏಕತಾ ಯಾತ್ರೆಯನ್ನು ಕೈಗೊಳ್ಳುವಂತೆ ನಾನು  ನನ್ನ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದೇನೆ. ಪಂಚ ತಾರಾ ಸೌಲಭ್ಯ ಹೊಂದಿರುವ ರಥ ಯಾತ್ರೆಯಾದರೂ ಎಂಥದ್ದು? ಅದು ರಾವಣ ಯಾತ್ರೆ, ರಥ ಯಾತ್ರೆ ಅಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಮಮತಾ ಮಾತಿಗೆ ಪ್ರತಿಕ್ರಿಯಿಸಿದ ಬಿಜೆಪಿ, ಟಿಎಂಸಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಳ್ಳುವ ಭಯ ಆವರಿಸಿದೆ ಎಂದಿದೆ.
 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !