ಬುಧವಾರ, ಜುಲೈ 28, 2021
26 °C

ಸರ್ಕಾರಿ ಸ್ವಾಮ್ಯದ ಕಂಪನಿಗಳಿಂದ ಎಜಿಆರ್‌ ವಸೂಲಿ ಸರಿಯಲ್ಲ: ಸುಪ್ರೀಂ ಕೋರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Supreme Court

ನವದೆಹಲಿ: ಹೊಂದಾಣಿಕೆ ಮಾಡಿದ ಒಟ್ಟು ವರಮಾನದ (ಎಜಿಆರ್‌) ಆಧಾರದಲ್ಲಿ ₹4 ಲಕ್ಷ ಕೋಟಿ ಪಾವತಿಸಬೇಕು ಎಂದು ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ನೀಡಿರುವ ಆದೇಶವನ್ನು ಮರುಪರಿಶೀಲಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ತರಂಗಾಂತರ ಬಳಕೆ ಶುಲ್ಕವಾಗಿ ಈ ಮೊತ್ತವನ್ನು ನೀಡಬೇಕು ಎಂದು ದೂರ ಸಂಪರ್ಕ ಸಚಿವಾಲಯವು ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಹೇಳಿತ್ತು. 

ದೂರಸಂಪರ್ಕ ಸೇವಾ ಕಂಪನಿಗಳಿಂದ ಎಜಿಆರ್‌ ವಸೂಲಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ 2019ರಲ್ಲಿ ಆದೇಶ ನೀಡಿತ್ತು. ಈ ಆದೇಶವನ್ನು ಬಳಸಿಕೊಂಡು ಸರ್ಕಾರಿ ಸ್ವಾಮ್ಯದ ಕಂಪನಿಗಳಿಂದ ಹಣ ವಸೂಲಿಗೆ ಮುಂದಾಗಿರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಅರುಣ್‌ ಮಿಶ್ರಾ ನೇತೃತ್ವದ ಪೀಠವು ಹೇಳಿದೆ. 

‘ಆದೇಶದ ದುರ್ಬಳಕೆಗೆ ಸ್ಪಷ್ಟ ಉದಾಹರಣೆ ಇದು’ ಎಂದು ಪೀಠ ಹೇಳಿದೆ. 

ಗೇಲ್‌ ಇಂಡಿಯಾ, ಭಾರತೀಯ ವಿದ್ಯುತ್‌ ಗ್ರಿಡ್‌ ನಿಗಮ, ಆಯಿಲ್‌ ಇಂಡಿಯಾ ಲಿ., ದೆಹಲಿ ಮೆಟ್ರೊ ನಿಗಮ, ರೈಲ್‌–ಟೆಲ್‌ ಮುಂತಾದ ಕಂಪನಿಗಳು ಎಜಿಆರ್‌ ರೂಪದಲ್ಲಿ ₹4 ಲಕ್ಷ ಕೋಟಿ ಪಾವತಿಸಬೇಕು ಎಂದು ದೂರಸಂಪರ್ಕ ಇಲಾಖೆ ಸೂಚಿಸಿತ್ತು. ದೂರಸಂಪರ್ಕ ಸೇವೆ ಒದಗಿಸುವ 15 ಕಂಪನಿಗಳು ಎಜಿಆರ್‌ ರೂಪದಲ್ಲಿ ₹1.47 ಲಕ್ಷ ಕೋಟಿ ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್‌ 2019ರಲ್ಲಿ ನೀಡಿದ ಆದೇಶದ ಆಧಾರದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. 

2019ರ ಆದೇಶದ ಬಗ್ಗೆ ಸ್ಪಷ್ಟನೆ ಬೇಕು ಎಂದು ದೂರಸಂಪರ್ಕ  ಇಲಾಖೆಯ ಪರವಾಗಿ ಹಾಜರಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಕೋರಿದರು. ಆದರೆ, ಈ ಅರ್ಜಿಯನ್ನು ಪೀಠವು ವಜಾ ಮಾಡಿತು. 

‘ಸರ್ಕಾರಿ ಸ್ವಾಮ್ಯದ ಕೆಲವು ಉದ್ದಿಮೆಗಳು ಅತ್ಯುತ್ತಮವಾಗಿ ಕೆಲಸ ಮಾಡುತ್ತಿವೆ. ಇವುಗಳು ಸರ್ಕಾರಕ್ಕೆ ಬೇಕಾದ ಕೆಲಸಗಳನ್ನು ಮಾಡುತ್ತಿವೆ. ಅಷ್ಟಲ್ಲದೆ, ದೂರಸಂ‍ಪರ್ಕ ಕಂಪನಿಗಳ ರೀತಿಯಲ್ಲಿ ವಾಣಿಜ್ಯ ಉದ್ದೇಶದಿಂದ ಮೊಬೈಲ್‌ ಸೇವೆಯನ್ನು ಒದಗಿಸುತ್ತಿಲ್ಲ. ಹಾಗಾಗಿ, ಈ ಕಂಪನಿಗಳನ್ನು ದೂರಸಂಪರ್ಕ ವಲಯದ ಖಾಸಗಿ ಕಂಪನಿಗಳ ರೀತಿಯಲ್ಲಿ ನೋಡುವುದು ಸಾಧ್ಯವಿಲ್ಲ’ ಎಂದು ಪೀಠ ವಿವರಿಸಿದೆ. 

ಹಣ ಪಾವತಿಸುವಂತೆ ಈ ಕಂಪನಿಗಳಿಗೆ ನೀಡಿರುವ ಸೂಚನೆಯನ್ನು ತಕ್ಷಣವೇ ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನೂ ಪೀಠ ನೀಡಿದೆ.  

‘ದೂರಸಂಪರ್ಕ ಕಂಪನಿಗಳ ಪಾವತಿ ಹೇಗೆ?’

₹1.47 ಲಕ್ಷ ಕೋಟಿ ಎಜಿಆರ್‌ನಲ್ಲಿ ದೂರಸಂಪರ್ಕ ಕಂಪನಿಗಳು ಪಾವತಿಸಲು ಬಾಕಿ ಇರುವ ಮೊತ್ತವನ್ನು ಹೇಗೆ ಪಾವತಿಸಲಾಗುವುದು ಎಂದು ಪೀಠವು ಪ್ರಶ್ನಿಸಿದೆ. ಯಾವ ಕಂಪನಿಯ ಬಾಕಿ ಎಷ್ಟಿದೆ ಮತ್ತು ಈ ಕಂಪನಿಗಳ ಆರ್ಥಿಕ ಸ್ಥಿತಿ ಹೇಗಿದೆ ಎಂಬ ಮಾಹಿತಿಯನ್ನು ಇದೇ 18ರೊಳಗೆ ಸಲ್ಲಿಸುವಂತೆ ಸೂಚಿಸಲಾಗಿದೆ. 

ಹಣ ಪಾವತಿಸಲು ಖಾಸಗಿ ಕಂಪನಿಗಳಿಗೆ 20 ವರ್ಷದ ಅವಧಿ ನೀಡಬಹುದು ಎಂದು ಸರ್ಕಾರ ಹೇಳಿದೆ. ಆದರೆ, ಇದು ಬಹಳ ದೀರ್ಘವಾದ ಅವಧಿ ಎಂದು ಪೀಠವು ಅಭಿಪ್ರಾಯಪಟ್ಟಿದೆ. 

ಲೆಕ್ಕಾಚಾರ ಪ್ರಕಾರ ಎಷ್ಟು ಪಾವತಿಸಬೇಕಿತ್ತೋ ಅಷ್ಟನ್ನೂ ಪಾವತಿಸಲಾಗಿದೆ ಎಂದು ಏರ್‌ಟೆಲ್‌ ತಿಳಿಸಿದೆ. 

ಸಾವಿರಾರು ಕೋಟಿ ರೂಪಾಯಿ ಕೊಟ್ಟು ಪರವಾನಗಿ ಮತ್ತು ತರಂಗಾಂತರ ಪಡೆದುಕೊಳ್ಳಲಾಗಿದೆ. ಎಜಿಆರ್‌ ಪಾವತಿ ಸಾಧ್ಯವಾಗದಿದ್ದರೆ ಪರವಾನಗಿಯನ್ನೇ ರದ್ದು ಮಾಡಬಹುದು. ನಮ್ಮಲ್ಲಿ ಸಂಬಳ ನೀಡುವುದಕ್ಕೇ ಹಣ ಇಲ್ಲ ಎಂದು ವೊಡಾಫೋನ್ ಪರ ವಕೀಲರು ಹೇಳಿದರು.  

‘ಸರ್ಕಾರಕ್ಕೆ ಹಣ ಬರುವಂತೆ ನಾವು ನೋಡಿಕೊಳ್ಳಲೇಬೇಕು’ ಎಂದು ಪೀಠ ಇದಕ್ಕೆ ಪ್ರತಿಕ್ರಿಯೆ ನೀಡಿದೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು